ಪಿ.ಎಸ್. ಪಾಟೀಲ
ತಾಲೂಕಿನ ಮೆಣಸಗಿ ಆಸರೆ ನವಗ್ರಾಮ ಮನೆ ಹಂಚಿಕೆ, ಹಕ್ಕುಪತ್ರ ವಿತರಣೆ ತಾರತಮ್ಮ, ನೀರು, ರಸ್ತೆ, ಶೌಚಾಲಯ, ಬೀದಿ ದೀಪ, ಸಾರಿಗೆ ಸೇರಿದಂತೆ ಮೂಲ ಸೌಕರ್ಯಕ್ಕಾಗಿ ಸಂತ್ರಸ್ತರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ಈ ಭಾಗದಲ್ಲಿ ಸ್ಥಳಾಂತರಗೊಂಡ 11 ಗ್ರಾಮಗಳ ಪೈಕಿ ಮೆಣಸಗಿ ಅತ್ಯಂತ ದೊಡ್ಡ ಗ್ರಾಮವಾಗಿದೆ.ಇಲ್ಲಿ ಒಟ್ಟು 1313 ಮನೆಗಳ ನಿರ್ಮಿಸುವ ಗುರಿ ಜಿಲ್ಲಾಡಳಿತ ಹೊಂದಿತ್ತು. ಆದರೆ ಇದರ ಗುತ್ತಿಗೆ ಪಡೆದ ಬೆಂಗಳೂರು ನಿರ್ಮಿತಿ ಕೇಂದ್ರ 211 ಮನೆಗಳ ನಿರ್ಮಾಣ ಕೈಬಿಟ್ಟು (ಅಡಿಪಾಯ ಹಾಕಲಾಗಿದೆ.) ಒಟ್ಟು 1102 ಮನೆಗಳನ್ನು ನಿರ್ಮಿಸಿ ಸರ್ಕಾರಕ್ಕೆ ಹಸ್ತಾಂತರಿಸಿತು.
ಸರ್ಕಾರ 43 ಎಕರೆ, ರೈತರಿಂದ ಒಟ್ಟು 127 ಎಕರೆ ಜಮೀನು (ಎಕರೆಗೆ ₹ 22.5 ಲಕ್ಷದಿಂದ ₹42.80 ಲಕ್ಷದವರೆಗೆ) ಖರೀದಿಸಿ, ಈ ಪ್ರದೇಶದಲ್ಲಿ 1313 ಮನೆಗಳು ಸೇರಿ ರಸ್ತೆ, ಉದ್ಯಾನವನ, ಶಾಲೆ, ಅಂಗನವಾಡಿ, ಆಸ್ಪತ್ರೆ, ಬಸ್ ನಿಲ್ದಾಣ, ಮಾರುಕಟ್ಟೆ, ದೇವಸ್ಥಾನ ಸೇರಿದಂತೆ ಅಗತ್ಯ ನಾಗರಿಕ ಸೌಲಭ್ಯ ಕಲ್ಪಿಸುವಲ್ಲಿ ಯೋಜನೆ ಹಾಕಿಕೊಂಡಿತು. ಆದರೆ ಇಲ್ಲಿ ಅದ್ಯಾವುದು ಸಮರ್ಪಕವಾಗಿಲ್ಲ. ಮೂಲಗ್ರಾಮದಲ್ಲಿನ ಕುಟುಂಬಗಳಿಗಿಂತ ಹೆಚ್ಚುವರಿ ಮನೆಗಳನ್ನು ಇಲ್ಲಿ ನಿರ್ಮಿಸಲಾಗಿದೆ.
2007 ಮತ್ತು 2009ರಿಂದ 2019ರ ವರೆಗೆ ಕೇವಲ 40 ಕುಟುಂಬಗಳು ಇಲ್ಲಿ ವಾಸವಿದ್ದರು. ಆದರೆ 2019ರಲ್ಲಿನ ನದಿ ಪ್ರವಾಹದಿಂದ ಮತ್ತೆ ತೊಂದರೆ ಅನುಭವಿಸಿದ ಮೂಲ ಗ್ರಾಮದ ಜನತೆ ನವಗ್ರಾಮದತ್ತ ಮುಖ ಮಾಡಿದರು. ಸದ್ಯ ನವಗ್ರಾಮದಲ್ಲಿ ಶೇ.70ರಷ್ಟು ಕುಟುಂಬಗಳು ವಾಸವಾಗಿದ್ದು, ಇನ್ನೂ ಶೇ. 30ರಷ್ಟು ಕುಟುಂಬಗಳು ಮೂಲ ಗ್ರಾಮದಲ್ಲಿದ್ದಾರೆ.
ಆಗಾಗ್ಗೆ ನೀರಿನ ಸಮಸ್ಯೆ: ₹1.91 ಕೋಟಿ ವೆಚ್ಚದಲ್ಲಿ 1 ಲಕ್ಷ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್, 15 ಸಾವಿರ ಲೀಟರ್ ಸಾಮರ್ಥ್ಯದ ಶುದ್ಧನೀರಿನ ಘಟಕವಿದೆ. ಬಹುಗ್ರಾಮ ಕುಡಿವ ನೀರಿನ ಯೋಜನೆಯಡಿ ಪ್ರತಿ ಮನೆಗೂ ನಳ ಮೂಲಕ ನೀರು ಪೂರೈಸಲು 15250 ಮೀಟರ್ ಪೈಪ್ ಲೈನ್ ಆಳವಡಿಸಲಾಗಿದೆ. ಅಲ್ಲದೇ 2021-22ನೇ ಸಾಲಿನ 2215 ಜಲಜೀವನ ಮಷಿನ್ ಯೋಜನೆಯಡಿ ₹ 99.81 ಲಕ್ಷ ವೆಚ್ಚದಲ್ಲಿ 670 ಮನೆಗಳಿಗೆ ನಳ ಸಂಪರ್ಕ ಕಲ್ಪಿಸಲಾಗಿದೆ. ಆದರೆ ಈ ವರೆಗೂ ಜೆಜೆಎಂ ನಳ ಮೂಲಕ ನೀರು ಪೂರೈಕೆ ಮಾಡಿಲ್ಲ. ಜೆಜೆಎಂ ಬಹುತೇಕ ನಳಗಳು, ಮೀಟರ್‌ಗಳು ಕಿತ್ತೊಗಿವೆ. ಬಹುಗ್ರಾಮ ನೀರಿನ ಯೋಜನೆಯಡಿ ನೀರು ಪೂರೈಸುತ್ತಿದ್ದು, ವಾರದಲ್ಲಿ 2 ಸಾರಿ ಕುಡಿವ ನೀರು ಪೂರೈಸಲಾಗುತ್ತಿದೆ. ಬಳಕೆಗೆ ಕಾಟಾಚಾರಕ್ಕೆ ಎಂಬಂತೆ ನಿತ್ಯ ನೀರು ಪೂರೈಸಲಾಗುತ್ತಿದೆ. ಆದರೆ ನೀರು ಸಾಲುತ್ತಿಲ್ಲ. ಬಳಕೆ ಪೂರೈಸುವ ನೀರನ್ನು ಜಾನುವಾರುಗಳು ಕುಡಿಯುತ್ತಿಲ್ಲವಂತೆ. ಶುದ್ಧ ನೀರಿನ ಘಟಕ 4 ವರ್ಣದಿಂದ ಕೆಟ್ಟಿದ್ದು, ಈವರೆಗೂ ರಿಪೇರಿ ಮಾಡಿಸಿಲ್ಲ. ಶುದ್ಧ ಕುಡಿವ ನೀರು ತರಲು ಇಲ್ಲಿನ ಜನ ಅಪಾಯಕಾರಿ ಮಾರ್ಗ ಅನುಸರಿಸುತ್ತಿದ್ದು, ಮೇಲ್ಮಟ್ಟ ನೀರು ಸಂಗ್ರಹ ಜಲಗಾರದ ಮೇಲೆ ಹತ್ತಿ (40 ಅಡಿ ಎತ್ತರ) ಟ್ಯಾಂಕನೊಳಗೆ ಹಗ್ಗ ಬಿಟ್ಟು ನೀರು ತರುತ್ತಿದ್ದಾರೆ. ಕಳೆದ 6 ತಿಂಗಳ ಹಿಂದೆ ನಿಂಗಪ್ಪ ಈರಪ್ಪ ತೋಟರ ಎಂಬುವರು ಟ್ಯಾಂಕ್ ಮೇಲೆ ಹತ್ತಿ ನೀರು ತರುವ ವೇಳೆ ಆಯಾ ತಪ್ಪಿ 40 ಅಡಿ ಎತ್ತರದಿಂದ ಕೆಳಗೆ ಬಿದ್ದು ತನ್ನ ಎರಡು ಕಾಲಿನ ಚಪ್ಪೆಯನ್ನು ಮುರಿದುಕೊಂಡಿದ್ದು, ಈಗಲೂ ಈ ವ್ಯಕ್ತಿ ಹಾಸಿಗೆ ಹಿಡಿದಿದ್ದಾನೆ. ಇಷ್ಟಾದರೂ ಇಲ್ಲಿನ ಜನ ನೀರಿಗಾಗಿ ಇಂತಹ ಸಾಹಸ ಮಾಡುತ್ತಲೇ ಇದ್ದಾರೆ. ಈಗಲಾದರೂ ಗ್ರಾಪಂ, ತಾಪಂ, ಜಿಪಂ ಎಚ್ಚೆತ್ತುಕೊಂಡು ನವಗ್ರಾಮಕ್ಕೆ ಶುದ್ಧ ಕುಡಿವ ನೀರು ಪೂರೈಕೆಗೆ ಮುಂದಾಗಬೇಕು. ನಮ್ಮ ಸಮಸ್ಯೆ ಕೇಳಾಕ ಗ್ರಾಪಂ ಪಿಡಿಒ ನವಗ್ರಾಮಕ್ಕೆ ಬರುವುದೇ ಇಲ್ಲ. ಹಿಂಗಾದ್ರೆ ನಮ್ಮ ಸಮಸ್ಯೆ ಯಾರ ಹತ್ರ ಹೇಳಿಕೊಳ್ಳಬೇಕ್ರಿ ಎನ್ನುತ್ತಾರೆ ಬಸಲಿಂಗಯ್ಯ ಸಾಲಿಮಠ, ಯಲ್ಲಪ್ಪ ಮಾದರ.
ಹಕ್ಕುಪತ್ರ ಸರಿಯಾಗಿ ಹಂಚಿಲ್ಲ. ನವಗ್ರಾಮದಲ್ಲಿ ಸಾಕಷ್ಡು ಸಮಸ್ಯೆಗಳಿದ್ದು, ಅನೇಕ ವರ್ಷದಿಂದ ನಡುಗಡ್ಡೆಯಲ್ಲಿರುವಂತೆ ಜೀವನ ಸಾಗಿಸುತ್ತಿದ್ದೇವೆ ಎಂದು ನವಗ್ರಾಮ ನಿವಾಸಿ ವೀರಣ್ಣ ಪಟ್ಟಣಶೆಟ್ಟಿ, ವೀರಣ್ಣ ಓಜಗನವರ ಹೇಳಿದರು.