- ಋತುಚಕ್ರ ಶುಚಿತ್ವ ನಿರ್ವಹಣೆ - ಆರೋಗ್ಯ, ಮಕ್ಕಳ ಜೀವನ ಶೈಲಿಯ ಬಗ್ಗೆ ಅರಿವು ಕಾರ್ಯಕ್ರಮ
ಋತುಸ್ರಾವ ಒಂದು ನೈಸರ್ಗಿಕ ಪ್ರಕ್ರಿಯೆ ಎಂದು ಪಟ್ಟಣದ ದುರ್ಗಾ ಕ್ಲಿನಿಕ್ ನ ಸಂಪನ್ಮೂಲ ವ್ಯಕ್ತಿ ಡಾ.ಅಂಜನಾ ಆಚಾರ್ಯ ಹೇಳಿದ್ದಾರೆ. ನಂದಿಬಟ್ಟಲುನಲ್ಲಿ ಮೊರಾರ್ಜಿ ವಸತಿ ಶಾಲೆ, ರೋಟರಿ ಸಂಸ್ಥೆ, ದುರ್ಗಾಕ್ಲಿನಿಕ್ ತರೀಕೆರೆ ಸಹಯೋಗದಲ್ಲಿ ವಸತಿ ಶಾಲೆಯ ಮಕ್ಕಳಿಗೆ ನಡೆದ ಋತುಚಕ್ರ ಶುಚಿತ್ವ ನಿರ್ವಹಣೆ ಮತ್ತು ಆರೋಗ್ಯ, ಮಕ್ಕಳ ಜೀವನ ಶೈಲಿ ಬಗ್ಗೆ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರೌಢಾವಸ್ಥೆಗೆ ಕಾಲಿಡುವ ಸಂದರ್ಭದಲ್ಲಿ ಋತುಮತಿಯಾಗುವ ಹೆಣ್ಣುಮಕ್ಕಳಿಗೆ ಋತುಸ್ರಾವದ ಸಮಸ್ಯೆಗಳು, ಸ್ವಚ್ಛತೆ, ಮುಟ್ಟಿನ ಆರೋಗ್ಯದ ಮಹತ್ವ, ಮುಟ್ಟಿನ ಉತ್ಪನ್ನಗಳ ಸೂಕ್ತ ಬಳಕೆ, ಮುಟ್ಟಿನ ಸಮಯದಲ್ಲಿನ ಆಹಾರ ಕ್ರಮ, ಋತುಚಕ್ರ ಮತ್ತು ಜೀವನದ ಗುಣಮಟ್ಟ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹೆಣ್ಣು ಮಕ್ಕಳಿಗೆ ನೀಡಿದರೆ ಉತ್ತಮ ಎಂದರು.
ಸಂಪನ್ಮೂಲ ವ್ಯಕ್ತಿ ದುರ್ಗಾ ಕ್ಲಿನಿಕ್ ನ ಡಾ. ಎಸ್. ಏನ್. ಆಚಾರ್ಯ ಮಾತನಾಡಿ, ಮಕ್ಕಳ ಜೀವನ ಶೈಲಿ, ಆಹಾರ ಕ್ರಮ, ಜಂಕ್ ಆಹಾರಗಳಿಂದ ಆಗುವ ದುಷ್ಪರಿಣಾಮಗಳು, ನಿದ್ರಾಕ್ರಮ, ಮಕ್ಕಳಲ್ಲಿ ದೈಹಿಕ ಚಟುವಟಿಕೆ, ಹಾರ್ಮೋನ್ ಗಳ ಮಹತ್ವ, ಏರಿಳಿತಗಳಿಂದ ಆಗುವ ಸಮಸ್ಯೆಗಳು ಮತ್ತು ಚಿಕಿತ್ಸೆ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.ಮೊರಾರ್ಜಿ ವಸತಿ ಶಾಲೆ ಪ್ರಾಂಶುಪಾಲ ಬಸವರಾಜ್ ತೆಗ್ಗಿ, ರೋಟರಿ ಕ್ಲಬ್ ಅಧ್ಯಕ್ಷ ಬಿ.ಪಿ.ರವಿ ಕುಮಾರ್, ಕಾರ್ಯದರ್ಶಿ ಪ್ರವೀಣ್ ಪಿ, ಕಸಾಪ ಮಹಿಳಾ ಘಟಕದ ಅಧ್ಯಕ್ಷರಾದ ಸುನಿತಾ ಕಿರಣ್, ಸಹ ಶಿಕ್ಷಕ ಹರೀಶ್, ಮಕ್ಕಳು ಭಾಗವಹಿಸಿದ್ದರು. -
ತರೀಕೆರೆ ಸಮೀಪದ ನಂದಿಬಟ್ಟಲುನಲ್ಲಿ ನಡೆದ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಬಿ.ಪಿ.ರವಿ ಕುಮಾರ್, ದುರ್ಗಾ ಕ್ಲಿನಿಕ್ ನ ಸಂಪನ್ಮೂಲ ವ್ಯಕ್ತಿ ಡಾ.ಅಂಜನಾ ಆಚಾರ್ಯ ಮತ್ತಿತರರು ಭಾಗವಹಿಸಿದ್ದರು.