ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಲು ಸಾಧ್ಯವಿದೆ ಎಂದು ಸರ್ಕಾರಿ ನಂದಿ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಹಾಗೂ ಡೀನ್ ಡಾ.ಎಂ.ಎಲ್.ಮಂಜುನಾಥ್ ತಿಳಿಸಿದರು.ನಗರ ಹೊರವಲಯದ ಎಸ್‌ಜೆಸಿಐಟಿ ಇಂಜನಿಯರಿಂಗ್ ಕಾಲೇಜಿನ ಬಿಜಿಎಸ್ ಕ್ರೀಡಾಂಗಣದಲ್ಲಿ ಬುಧವಾರ ಸರ್ಕಾರಿ ನಂದಿ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಆಯೋಜಿಸಿದ್ದ ಎರಡು ದಿನಗಳ ವೈದ್ಯಕೀಯ ವಿದ್ಯಾರ್ಥಿಗಳ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ,ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳಲ್ಲಿ ದೈಹಿಕ ಮತ್ತು ಮಾನಸಿಕ ಶಕ್ತಿ ಬೆಳೆಸುವ ಕೆಲಸ ನಡೆದಾಗ ಮಾತ್ರ ಸದೃಢ ರಾಷ್ಟ್ರ ಕಟ್ಟಲು ಸಾಧ್ಯವಾಗುತ್ತದೆ. ಆರೋಗ್ಯ ಪೂರ್ಣ ಸಮಾಜ ನಿರ್ಮಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದ್ದು, ಮಕ್ಕಳಿಗೆ ನೈತಿಕ ಶಿಕ್ಷಣ ಬೋಧಿಸುವುದರ ಜತೆಗೆ ಅವರಲ್ಲಿನ ರಾಷ್ಟ್ರೀಯತೆಯ ಭಾವನೆ ಜಾಗೃತಗೊಳಿಸುವ ಕೆಲಸ ಮಾಡಬೇಕು ಎಂದು ಹೇಳಿದರು.ಕ್ರೀಡಾಪಟುಗಳು ಕ್ರೀಡಾ ಮನೋಭಾವದಿಂದ, ಕ್ರೀಡಾಕೂಟಗಳಲ್ಲಿ ಪಾಲ್ಗೊಂಡು ಕ್ರೀಡಾ ಪ್ರೇಮವನ್ನು ತೋರುವ ಜೊತೆಗೆ,ತಮ್ಮಲ್ಲಿ ಇರುವಂತಹ ಕ್ರೀಡಾ ಕಲೆಯನ್ನು ಪ್ರದರ್ಶಿಸಲು ಆಯೋಜಿಸಿರುವ ಈ ವಾರ್ಷಿಕ ಕ್ರೀಡಾಕೂಟವನ್ನು ಸದುಪಯೋಗಪಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಶಿಕ್ಷಣದ ನಿಮಿತ್ತ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಪಾಠ ಪ್ರವಚನಗಳೆಂದು ಒಂದೇ ಕಡೆ ತರಗತಿಯಲ್ಲಿ ಕುಳಿತಿರುತ್ತೀರಿ. ತರಗತಿಯಿಂದ ಹೊರ ಬಂದ ನಂತರ ಕ್ರೀಡೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದಾಗ ಮನಸು ಮತ್ತು ದೇಹದಲ್ಲಿ ನವಚೇತನ ಮೂಡುತ್ತದೆ ಎಂದರು.
ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಜೀವನದ ಉನ್ನತಿಗೆ ಶಿಕ್ಷಣವೇ ಅಂತಿಮವಾಗಿರುವ ಕಾರಣ ಶಿಕ್ಷಣದ ಕಡೆಗೆ ಒಲವು ಮೂಡಿಸಬೇಕು. ಎಲ್ಲರೂ ಸೋಲು ಗೆಲುವುವನ್ನು ಸಮಾನವಾಗಿ ಸ್ವೀಕರಿಸಬೇಕು. ತೀರ್ಪುಗಾರರ ತೀರ್ಮಾನವನ್ನ ಗೌರವಿಸಬೇಕು, ಕ್ರೀಡಾ ಭಾಗವಹಿಸುವಿಕೆ ಮಾತ್ರವೇ ಮುಖ್ಯವಾಗಿರುತ್ತದೆ ಎಂದು ಹೇಳಿದರು.ಮೆಡಿಸನ್ ವಿಭಾಗದ ಮುಖ್ಯಸ್ಥ ಡಾ.ಕೆ.ಎನ್.ರಮೇಶ್ ಮಾತನಾಡಿ, ವಿದ್ಯಾರ್ಥಿಗಳು ಶಾಲಾ ಕಾಲೇಜು ದಿನಗಳಲ್ಲಿಯೇ ನಿರ್ದಿಷ್ಟ ಗುರಿಯಿಟ್ಟುಕೊಂಡು ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವ ಜೊತೆಗೆ, ಸಾಧನೆಯ ಹಾದಿಗೆ ಪ್ರೋತ್ಸಾಹ ನೀಡಿ ಪೋಷಕರೂ ಕೂಡ ಬೆಂಬಲವಾಗಿ ನಿಂತಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೆ ವಿಫುಲ ಅವಕಾಶಗಳಿವೆ. ಎವರೆಸ್ಟ್ ಶಿಖರವನ್ನೇರಿದ ತೇನ್‌ಸಿಂಗ್ ಶೇರ್ಫಾ ತಾಯಿಯ ಮಾತುಗಳಿಂದ ಪ್ರೇರಣೆಗೊಂಡೇ ಶಿಖರಾರೋಹಣದ ಸಾಧನೆ ಮಾಡಿದ್ದು ಇಂದಿಗೂ ಇತಿಹಾಸ. ಹಾರ್‌ಮೋನಲ್ ಡಿಫಿಸಿಯೆನ್ಸಿ ಸಿಂಡ್ರೋಮ್ ಖಾಯಿಲೆಯಿಂದ ನರಳುತ್ತಿದ್ದರೂ, ಇಂಜೆಕ್ಷನ್ ತೆಗೆದುಕೊಂಡು ನೊಂದಿದ್ದರೂ ಎದೆಗುಂದದೆ ಕ್ರೀಡಾಪಟುವಾಗಲೇ ಬೇಕು ಎಂದು ಮುನ್ನುಗ್ಗಿದ್ದರಿಂದಲೇ ಲಿಯೋನೆಲ್ ಮೆಸ್ಸಿ ಅಪ್ರತಿಮ ಸಾಧನೆ ಮಾಡಲಾಯಿತು. ಇವರ ಬದುಕು ನಿಮಗೆ ಮಾದರಿಯಾಗಬೇಕಿದೆ. ಉತ್ತಮ ಆರೋಗ್ಯಕ್ಕೆ ಕ್ರೀಡೆಗಳು ಪೂರಕವಾಗಿವೆ. ಮಕ್ಕಳಲ್ಲಿ ಕ್ರೀಡಾಮನೋಭಾವನೆ ಬೆಳೆಸಬೇಕು ಎಂದರು.
ಕ್ರೀಡಾ ಕೂಟದಲ್ಲಿ ಸರ್ಕಾರಿ ನಂದಿ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ಪ್ರಾಧ್ಯಾಪಕರಾದ ಡಾ.ಎಂ.ಆರ್.ಅನಿತ, ಡಾ.ಸುರೇಶ್ ನಾಯಕ್, ಡಾ.ಸಿ.ಎಸ್.ನಾಗಲಕ್ಷ್ಮಿ, ಡಾ.ಪುಷ್ಪ, ಡಾ.ಮಂಜುಳ, ಚೈತ್ರರಾವ್, ಡಾ.ಅರ್ಜುನ್ ಬಹದ್ದೂರ್, ಡಾ.ಗೀತಾ, ಡಾ.ಅನಿತಾಲಕ್ಷ್ಮಿ, ಡಾ.ಭಾರ್ಗವಿ, ಡಾ.ಜ್ಯೋತಿ, ಡಾ.ಸಂದೀಪ್ ಇದ್ದರು.ಸಿಕೆಬಿ-1 ಎಸ್‌ಜೆಸಿಐಟಿ ಕಾಲೇಜಿನ ಬಿಜಿಎಸ್ ಕ್ರೀಡಾಂಗಣದಲ್ಲಿ ನಡೆದ ಸರ್ಕಾರಿ ನಂದಿ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ವಾರ್ಷಿಕ ಕ್ರೀಡಾ ಕೂಟದಲ್ಲಿ ಗುಂಡು ಎಸೆತದಲ್ಲಿ ಭಾಗಿಯಾಗಿರುವ ವಿದ್ಯಾರ್ಥಿಗಳು