ಹೊಸಪೇಟೆ: ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸ್ ಸಿಬ್ಬಂದಿ ಸದಾ ದೈಹಿಕವಾಗಿ, ಮಾನಸಿಕವಾಗಿ ಸದೃಢರಾಗಿರಬೇಕು. ಬೊಜ್ಜು ಬೆಳೆಸಿಕೊಳ್ಳಬಾರದು. ಶೀಘ್ರದಲ್ಲೇ ಬಿಎಂಐ ಯಂತ್ರದ ಮೂಲಕ ಬೊಜ್ಜು ಪರೀಕ್ಷೆ ಕಡ್ಡಾಯಗೊಳಿಸಲಾಗುವುದು ಎಂದು ಎಸ್ಪಿ ಎಸ್.ಜಾಹ್ನವಿ ಹೇಳಿದರು.
ಯೋಗ, ಪ್ರಾಣಾಯಾಮಗಳಿಂದ ದೇಹದ ಬೊಜ್ಜು ಕರಗಿಸುವುದು ಮಾತ್ರವಲ್ಲ, ಮಾನಸಿಕ ಸದೃಢತೆ ಸಾಧಿಸಬಹುದು. ಫ್ಯಾಟ್ ಪರೀಕ್ಷೆ ಮುಂದಿನ ದಿನಗಳಲ್ಲಿ ಆಗಾಗ ನಡೆಯುತ್ತಲೇ ಇರಲಿದೆ. ಶಿಬಿರದಲ್ಲಿ ಮಾತ್ರವಲ್ಲ, ಮುಗಿದ ಮೇಲೂ ತಮ್ಮ ಮನೆಗಳಲ್ಲಿ ನಿತ್ಯ ಯೋಗ, ಪ್ರಾಣಾಯಾಮ ಮೂಲಕ ದೈಹಿಕ, ಮಾನಸಿಕ ದೃಢತೆ ಕಾಪಾಡಿಕೊಳ್ಳಬೇಕು ಎಂದು ಅವರು ಸೂಚನೆ ನೀಡಿದರು.
ಯೋಗ ಒಂದು ಜೀವನ ಪದ್ಧತಿ ಆಗಬೇಕು. ನಾವೆಲ್ಲರೂ ಒತ್ತಡದಲ್ಲೇ ಕೆಲಸ ಮಾಡುವವರು, ಆದರೆ ನಮ್ಮ ಆಂತರಿಕ ಒತ್ತಡ ನಿವಾರಿಸಲು ಯೋಗ ಪರಿಣಾಮಕಾರಿ. ಹೀಗಾಗಿ ಒತ್ತಾಯಕ್ಕಾಗಿ ಯೋಗ ತರಬೇತಿ ಮಾಡುತ್ತಿದ್ದೇವೆ ಎಂಬ ಭಾವನೆ ಯಾರಿಗೂ ಬೇಡ. ಕೇವಲ ಜಿಲ್ಲಾ ಕೇಂದ್ರದಲ್ಲಿ ಈ ತರಬೇತಿ ನೀಡುತ್ತಿಲ್ಲ, ಇತರ ಎರಡೂ ಉಪವಿಭಾಗಗಳಲ್ಲೂ ಈ ತರಬೇತಿ ಶಿಬಿರ ನಡೆಯಲಿದೆ. ಹೊಸಪೇಟೆಯಲ್ಲಿ ಪಾಲ್ಗೊಳ್ಳದವರಿಗಾಗಿ ಇನ್ನೊಂದು ತಂಡದಲ್ಲಿ ಯೋಗ ತರಬೇತಿ ನಡೆಯಲಿದೆ. ನಮ್ಮ ಕೋರಿಕೆ ಮನ್ನಿಸಿ, ಮೂರೂ ಉಪವಿಭಾಗಗಳಲ್ಲಿ ಯೋಗ ತರಬೇತಿ ನಡೆಸಲು ಸಮ್ಮತಿ ಸೂಚಿಸಿದ ಪತಂಜಲಿ ಯೋಗ ಸಮಿತಿಗೆ ಕೃತಜ್ಞರಾಗಿರುತ್ತೇವೆ ಎಂದು ಅವರು ಹೇಳಿದರು.ಎಎಸ್‌ಪಿ ಜಿ. ಮಂಜುನಾಥ್ ಮಾತನಾಡಿ, ಯೋಗದಿಂದ ದೇಹದ ಪ್ರತಿಯೊಂದು ಅಂಗವೂ ಸಚೇತನಗೊಳ್ಳುತ್ತದೆ ಎಂದರು. ಡಿವೈಎಸ್‌ಪಿ ಡಾ. ಟಿ. ಮಂಜುನಾಥ್, ಯೋಗ ಸಾಧಕರಾದ ಉಮಾ ವಿಶ್ವನಾಥ್, ನೂರ್‌ಜಾನ್, ಯೋಗ ಶಿಕ್ಷಕಿ ದಾಕ್ಷಾಯಿಣಿ ಶಿವಕುಮಾರ್ ಮಾತನಾಡಿದರು. ಜಿಲ್ಲಾ ಯೋಗ ಸಮಿತಿಯ ಪ್ರಮುಖರಾದ ಅನಂತ ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಆರಂಭದಲ್ಲಿ ದಾಕ್ಷಾಯಿಣಿ ಶಿವಕುಮಾರ್ ಪಾಲ್ಗೊಂಡ 200ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗೆ ಯೋಗ, ಪ್ರಾಣಾಯಾಮದ ಮಹತ್ವ ತಿಳಿಸಿ, ಸುಮಾರು ಒಂದು ಗಂಟೆ ತರಬೇತಿ ನೀಡಿದರು.
ಇನ್ನು 14 ದಿನಗಳ ಕಾಲ ಪ್ರತಿದಿನ ಬೆಳಿಗ್ಗೆ 6.30ರಿಂದ 7.30ರವರೆಗೆ ಪೊಲೀಸ್ ಸಿಬ್ಬಂದಿಗೆ ಯೋಗ ತರಬೇತಿ ಶಿಬಿರ ಪರೇಡ್ ಮೈದಾನದಲ್ಲಿ ನಡೆಯಲಿದೆ. ಪತಂಜಲಿ ಯೋಗ ಸಮಿತಿಯ ಪೂಜಾ ಐಲಿ, ಕವಿತಾ ಭಾಸ್ಕರ್, ಗೀತಾ ಮಹಾರಾಜ್, ರಾಜಭಕ್ಷಿ, ಎಂ. ಜಿ. ಬಾಲಕೃಷ್ಣ, ರಾಮು ಉಪಸ್ಥಿತರಿದ್ದರು.