ಧಾರ್ಮಿಕ ನಂಬಿಕೆಯಿಂದ ಮಾನಸಿಕ ನೆಮ್ಮದಿ: ಸಂಸದ ಬಿ.ವೈ.ರಾಘವೇಂದ್ರ

KannadaprabhaNewsNetwork |  
Published : May 15, 2024, 01:35 AM IST
ಶಿವಮೊಗ್ಗ ನಗರದ ಇಲ್ಲಿನ ಶರಾವತಿ ನಗರದ 60 ಅಡಿ ಮುಖ್ಯ ರಸ್ತೆಯ ಹಿಂದು ರುದ್ರಭೂಮಿ ಪಕ್ಕದಲ್ಲಿರುವ ಶ್ರೀ ಮರದ ಚೌಡೇಶ್ವರಿ ದೇವಿ ಮತ್ತು ಭೂತಪ್ಪ ಸ್ವಾಮಿಯ 13 ನೇ ವರ್ಷದ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡ ಸಂಸದ ಬಿ. ವೈ. ರಾಘವೇಂದ್ರ ಅವರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಹಿರಿಯರು ಮಕ್ಕಳಿಗೆ ಶಿಕ್ಷಣದ ಜೊತೆ ಸಂಸ್ಕೃತಿ- ಸಂಸ್ಕಾರ, ಧಾರ್ಮಿಕ ಶ್ರದ್ಧೆ, ನಂಬಿಕೆ ಕಲಿಸಬೇಕೆಂದು ಹೇಳಿದರು. ದೇವಸ್ಥಾನಗಳ ಸ್ಥಾಪನೆ, ವಾರ್ಷಿಕೋತ್ಸವದ ಆಚರಣೆ, ದೇಗುಲಗಳ ಜೀರ್ಣೋದ್ಧಾರ, ಗುಡಿ-ಗುಂಡಾರಗಳ ಅಭಿವೃದ್ಧಿಯಿಂದ ನಮ್ಮ ಸಂಸ್ಕೃತಿ ಬೆಳೆಯುತ್ತದೆ. ಧಾರ್ಮಿಕ ನಂಬಿಕೆಯುಳ್ಳ ವ್ಯಕ್ತಿಯಲ್ಲಿ ಸಂಸ್ಕಾರ ಬೆಳೆಯುತ್ತದೆ.

ಕನ್ನಡಪ್ರಭ ಶಿವಮೊಗ್ಗ

ಭಾರತ ಹಿಂದೂ ಧರ್ಮದ ನೆಲೆ ಬೀಡಾಗಿದ್ದು, ಮನುಷ್ಯ ಧಾರ್ಮಿಕ ನಂಬಿಕೆಯನ್ನು ಮೈಗೂಡಿಸಿಕೊಂಡಲ್ಲಿ ಮಾನಸಿಕ ನೆಮ್ಮದಿ ನೆಲೆಸುತ್ತದೆ ಎಂದು ಸಂಸದ ಬಿ. ವೈ.ರಾಘವೇಂದ್ರ ಹೇಳಿದರು.

ನಗರದ ಇಲ್ಲಿನ ಶರಾವತಿ ನಗರದ 60 ಅಡಿ ಮುಖ್ಯ ರಸ್ತೆಯ ಹಿಂದೂ ರುದ್ರಭೂಮಿ ಪಕ್ಕದಲ್ಲಿರುವ ಶ್ರೀ ಮರದ ಚೌಡೇಶ್ವರಿ ದೇವಿ ಮತ್ತು ಭೂತಪ್ಪ ಸ್ವಾಮಿಯ 13 ನೇ ವರ್ಷದ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು. ಹಿರಿಯರು ಮಕ್ಕಳಿಗೆ ಶಿಕ್ಷಣದ ಜೊತೆ ಸಂಸ್ಕೃತಿ- ಸಂಸ್ಕಾರ, ಧಾರ್ಮಿಕ ಶ್ರದ್ಧೆ, ನಂಬಿಕೆ ಕಲಿಸಬೇಕೆಂದು ಹೇಳಿದರು. ದೇವಸ್ಥಾನಗಳ ಸ್ಥಾಪನೆ, ವಾರ್ಷಿಕೋತ್ಸವದ ಆಚರಣೆ, ದೇಗುಲಗಳ ಜೀರ್ಣೋದ್ಧಾರ, ಗುಡಿ-ಗುಂಡಾರಗಳ ಅಭಿವೃದ್ಧಿಯಿಂದ ನಮ್ಮ ಸಂಸ್ಕೃತಿ ಬೆಳೆಯುತ್ತದೆ. ಧಾರ್ಮಿಕ ನಂಬಿಕೆಯುಳ್ಳ ವ್ಯಕ್ತಿಯಲ್ಲಿ ಸಂಸ್ಕಾರ ಬೆಳೆಯುತ್ತದೆ ಎಂದರು.

ಮೂಢನಂಬಿಕೆ, ಧಾರ್ಮಿಕ ನಂಬಿಕೆ ಹಾಗೂ ಅಂಧಶ್ರದ್ಧೆಗಳು ಮಾನವ ಜನಜೀವನದಲ್ಲಿ ಹಾಸುಹೊಕ್ಕಾಗಿವೆ. ಆದರೆ ಇವುಗಳ ನಡುವಿನ ವ್ಯತ್ಯಾಸಗಳನ್ನು ಅರಿತುಕೊಂಡು ಸನ್ಮಾರ್ಗದಲ್ಲಿ ನಡೆಯಬೇಕೆಂದು ಆಶಿಸಿದರು.

ಧಾರ್ಮಿಕ ನಂಬಿಕೆ ಬೆಳೆಸುವುದರೊಂದಿಗೆ ವೈಚಾರಿಕತೆಯನ್ನೂ ಮೈಗೂಡಿಸಿಕೊಳ್ಳುವ ನಿಟ್ಟಿನಲ್ಲಿ ಶ್ರೀ ಮರದ ಚೌಡೇಶ್ವರಿ ಸೇವಾ ಸಮಿತಿಯು ಸ್ಮಶಾನದ ಪಕ್ಕದಲ್ಲೇ ದೇಗುಲ ನಿರ್ಮಿಸಿ ವಿಜೃಂಭಣೆಯಿಂದ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವುದು ಶ್ಲಾಘನೀಯ. ದೇವಿಯ ಕೃಪೆಯಿಂದ ಉತ್ತಮ ಮಳೆ-ಬೆಳೆಯಾಗಿ ನಾಡು ಸಮೃದ್ಧಿಯಾಗಲಿ ಎಂದು ಆಶಿಸಿದರು.

ಧರ್ಮವೆಂದರೆ ಕರ್ತವ್ಯ, ಒಳ್ಳೆಯತನ, ನೈತಿಕತೆ. ಧರ್ಮ ಒಂದು ಬ್ರಹ್ಮಾಂಡ. ಇದು ಸಮಾಜವನ್ನು ಎತ್ತಿ ಹಿಡಿಯುವ ಶಕ್ತಿಯನ್ನು ಸೂಚಿಸುತ್ತದೆ. ಧರ್ಮವು ಸಮಾಜವನ್ನು ನಿರ್ವಹಿಸುವ ಶಕ್ತಿಯನ್ನು ಹೊಂದಿದೆ ಎಂದು ವಿಶ್ಲೇಷಿಸಿದರು.

ಶ್ರೀ ಮರದ ಚೌಡೇಶ್ವರಿ ಸೇವಾ ಸಮಿತಿ ಗೌರವಾಧ್ಯಕ್ಷ ಶಿವಮೂರ್ತಿ, ಅಧ್ಯಕ್ಷ ವಿ. ನಾಗರಾಜ್, ಉಪಾಧ್ಯಕ್ಷ ವಿಜಯ ಕುಮಾರ್, ಪ್ರಧಾನ ಕಾರ್ಯದರ್ಶಿ ದೇವೇಂದ್ರ ಕುಮಾರ್, ಖಜಾಂಚಿ ಸೋಮಶೇಖರ್, ಉಪ ಕಾರ್ಯದರ್ಶಿ ಎನ್. ಮುನಿಸ್ವಾಮಿ, ಅರ್ಚಕ ಆರ್. ರಾಮು, ಸಮಿತಿಯ ವಿವಿಧ ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ಮತ್ತಿತರರಿದ್ದರು.

---------------

PREV

Recommended Stories

ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ
ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ