ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯ
ಚಂಚಲ ಚಿತ್ತವನ್ನು ನೈರ್ಮಲ್ಯಗೊಳಿಸಲು ಭಗವಂತನ ಆರಾಧನೆ ಪ್ರಧಾನವಾದುದು. ತಿಳುವಳಿಕೆ ಅನ್ನುವ ಜ್ಞಾನವು ನಮ್ಮ ಬದುಕಿಗೆ ಅತ್ಯಗತ್ಯ. ಕಣ್ಣು ಉತ್ತಮವಾದುದನ್ನು ನೋಡಲು ಹಾತೊರೆಯಬೇಕು. ಒಳ್ಳೆಯದನ್ನು ಕೇಳಲು ಕಿವಿ ಸದಾ ಆಶಿಸಬೇಕು. ಹೃದಯವು ಉತ್ತಮ ಮಾನವೀಯ ಗುಣಗಳನ್ನು ಒಳಗೊಂಡಿರಬೇಕು. ಇಂತಹ ಉತ್ತಮ ಗುಣಗಳು ಭಗವಂತನಿಗೆ ಪ್ರಿಯವಾದುದು. ಆಂತರಿಕವಾಗಿ ದೊರಕುವ ಸುಖದತ್ತ ಮನಸು ಮಾಡುವುದು ಇಂದಿನ ಅತ್ಯಗತ್ಯ ಎಂದು ಮಂಗಳೂರು ಆದಿಚುಂಚನಗಿರಿ ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಹೇಳಿದರು.ಋಷಿ ಸಂಸ್ಕೃತಿ ವಿದ್ಯಾಕೇಂದ್ರ ಟ್ರಸ್ಟ್ ಬೆಂಗಳೂರು ಇದರ ಆಶ್ರಯದಲ್ಲಿ ಕುಕ್ಕೆ ಸುಬ್ರಹ್ಮಣ್ಯದ ವಲ್ಲೀಶ ಸಭಾಭವನದಲ್ಲಿ ನಡೆಯುತ್ತಿರುವ ಮೂರು ದಿನಗಳ ವಿಶ್ವ ಹೃದಯ ಸಮ್ಮೇಳನದ ಎರಡನೇ ದಿನವಾದ ಶನಿವಾರ ಶ್ರೀಗಳು ಆಶೀರ್ವಚನ ನೀಡಿದರು.
ಆಧ್ಯಾತ್ಮಿಕತೆಯಿಂದ ಪಾವನತೆ: ವಾಸ್ತವಿಕವಾದ ಸತ್ಯವು ಸದಾ ಬದುಕಿನ ಜೀವನ ಅಗತ್ಯ. ದೇವತಾರಾಧನೆಯಿಂದ ಮಾನಸಿಕ ನೆಮ್ಮದಿ ದೊರಕುತ್ತದೆ. ಮನಸನ್ನು ನಿಗ್ರಹಿಸಿಕೊಂಡು ಬದುಕು ಕಟ್ಟಿಕೊಳ್ಳಲು ಆಧ್ಯಾತ್ಮಿಕ ಮತ್ತು ಧಾರ್ಮಿಕ ಜ್ಞಾನ ಅತ್ಯವಶ್ಯಕ. ಆಧ್ಯಾತ್ಮಿಕ ಸಂಸ್ಕಾರವನ್ನು ನೀಡಿ ಮನುಷ್ಯನ ಬದುಕನ್ನು ಪಾವನಗೊಳಿಸುವ ಕಾರ್ಯವನ್ನು ಋಷಿ ಸಂಸ್ಕೃತಿ ವಿದ್ಯಾಕೇಂದ್ರ ಮಾಡುತ್ತಿದೆ ಎಂದು ಶ್ರೀ ಧರ್ಮಪಾಲನಾಥ ಸ್ವಾಮೀಜಿ ಹೇಳಿದರು.ಬೆಂಗಳೂರಿನ ಶ್ರೀ ಲಲಿತ ವಿದ್ಯಾಮಂದಿರದ ಶ್ರೀ ಶ್ರೀಕಂಠೇಶ್ವರ ಗುರೂಜಿ, ಶ್ರೀ ಪ್ರವೀಣ್ ಗುರೂಜಿ ಹಾಸನ ಆಶೀರ್ವಚನ ನೀಡಿದರು. ಚಲನಚಿತ್ರ ನಟ ಡಾ.ಶ್ರೀಧರ್, ಸುಬ್ರಹ್ಮಣ್ಯ ಗ್ರಾ.ಪಂ. ಅಧ್ಯಕ್ಷೆ ಸುಜಾತಾ ಕಲ್ಲಾಜೆ, ಅನುಗ್ರಹ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಗಣೇಶ್ ಪ್ರಸಾದ್ ಎನ್. ಮುಖ್ಯ ಅತಿಥಿಗಳಾಗಿದ್ದರು. ಋಷಿ ಸಂಸ್ಕೃತಿ ವಿದ್ಯಾಕೇಂದ್ರ ಟ್ರಸ್ಟ್‌ನ ಕಾರ್ಯದರ್ಶಿ ಸತೀಶ್ ವೇದಿಕೆಯಲ್ಲಿದ್ದರು.
ಋಷಿ ಸಂಸ್ಕೃತಿ ವಿದ್ಯಾಕೇಂದ್ರದ ಕೇಶವಮೂರ್ತಿ ಸ್ವಾಗತಿಸಿದರು. ರಾಘವೇಂದ್ರ ಪ್ರಸ್ತಾಪಿಸಿದರು. ಬೆಂಗಳೂರಿನ ಶ್ರೀ ಲಲಿತ ವಿದ್ಯಾಮಂದಿರದ ಶ್ರೀ ಶ್ರೀಕಂಠೇಶ್ವರ ಗುರೂಜಿ ಅವರಿಂದ ಅನುಗ್ರಹ ಸಂದೇಶ ನೆರವೇರಿತು. ಈ ಮೊದಲು ಅನ್ನಪೂರ್ಣೇಶ್ವರಿ ಆರತಿ ಮತ್ತು ವಿಷ್ಣು ಸಹಸ್ರನಾಮ ಪಾರಾಯಣ ನೆರವೇರಿತು. ಸಂಜೆ ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿಗಳಿಂದ ರಾಧಾಕೃಷ್ಣ ನೃತ್ಯ ಮತ್ತು ಯಕ್ಷಗಾನ ಪ್ರದರ್ಶನಗೊಂಡಿತು.