ಮೈಸೂರು ವಿವಿ ಜೊತೆಗೆ ಮಂಡ್ಯ ವಿವಿ ವಿಲೀನ ಒಳ್ಳೆಯದು: ಮರಿತಿಬ್ಬೇಗೌಡ

KannadaprabhaNewsNetwork | Published : Mar 11, 2025 12:46 AM

ಸಾರಾಂಶ

ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡುವುದು ಪ್ರತಿಯೊಬ್ಬರ ಕರ್ತವ್ಯ. ಗುಣಾತ್ಮಕ ಶಿಕ್ಷಣದ ದೃಷ್ಟಿಯಿಂದ ಅಧ್ಯಯನ, ಉತ್ತಮ ಬೋಧನೆ, ಗುಣಮಟ್ಟದ ಸಂಶೋಧನೆ ವಿಶ್ವವಿದ್ಯಾಲಯಗಳಲ್ಲಿ ಬಹಳ ಮುಖ್ಯ. ಮೈಸೂರು ವಿಶ್ವವಿದ್ಯಾಲಯ ಗುಣಾತ್ಮಕ ಶಿಕ್ಷಣಕ್ಕೆ ಬೇಕಾದ ಎಲ್ಲಾ ಅಂಶಗಳನ್ನು ಒಳಗೊಂಡಿದ್ದು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಅವಕಾಶಗಳ ಮಹಾಪೂರವೇ ಇಲ್ಲಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ವಿಶ್ವ ವಿದ್ಯಾಲಯವನ್ನು ಮೈಸೂರು ವಿಶ್ವ ವಿದ್ಯಾಲಯದೊಂದಿಗೆ ವಿಲೀನಗೊಳಿಸುವ ರಾಜ್ಯ ಸರ್ಕಾರದ ನಿರ್ಧಾರ ಉತ್ತಮವಾಗಿದೆ ಎಂದು ವಿಧಾನ ಪರಿಷತ್ ಮಾಜಿ ಉಪಸಭಾಪತಿ ಮರಿತಿಬ್ಬೇಗೌಡ ಹೇಳಿದರು.

ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡುವುದು ಪ್ರತಿಯೊಬ್ಬರ ಕರ್ತವ್ಯ. ಗುಣಾತ್ಮಕ ಶಿಕ್ಷಣದ ದೃಷ್ಟಿಯಿಂದ ಅಧ್ಯಯನ, ಉತ್ತಮ ಬೋಧನೆ, ಗುಣಮಟ್ಟದ ಸಂಶೋಧನೆ ವಿಶ್ವವಿದ್ಯಾಲಯಗಳಲ್ಲಿ ಬಹಳ ಮುಖ್ಯ. ಮೈಸೂರು ವಿಶ್ವವಿದ್ಯಾಲಯ ಗುಣಾತ್ಮಕ ಶಿಕ್ಷಣಕ್ಕೆ ಬೇಕಾದ ಎಲ್ಲಾ ಅಂಶಗಳನ್ನು ಒಳಗೊಂಡಿದ್ದು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಅವಕಾಶಗಳ ಮಹಾಪೂರವೇ ಇಲ್ಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಿಶ್ವವಿದ್ಯಾಲಯಗಳ ಬಗ್ಗೆ ಸರಿಯಾಗಿ ಅಧ್ಯಯನ ಮಾಡದ ಸರ್ಕಾರಗಳು ಮಂಡ್ಯ, ಚಾಮರಾಜನಗರ, ಹಾಸನ ಇಲ್ಲಿ ಮೈಸೂರು ವಿಶ್ವವಿದ್ಯಾಲಯದ ಅಧೀನದಲ್ಲಿ ನಡೆಯುವ ಸ್ನಾತಕೋತ್ತರ ಅಧ್ಯಯನ ಕೇಂದ್ರಗಳು ೨೫ ವರ್ಷಗಳ ಹಿಂದೆ ಆರಂಭವಾಗಿದ್ದರೂ ವಿಶ್ವ ವಿದ್ಯಾಲಯಕ್ಕೆ ಬೇಕಾದ ಮೂಲಸೌಲಭ್ಯಗಳನ್ನು ಗಮನಿಸಿಲ್ಲ. ಯಾವುದೇ ತಜ್ಞರ ಸಮಿತಿಯ ವರದಿಯನ್ನು ಪಡೆಯದೆ ಸ್ವಇಚ್ಛೆಯಿಂದ ವಿಶ್ವವಿದ್ಯಾಲಯಗಳನ್ನಾಗಿ ಪರಿವರ್ತಿಸಿರುವುದರಿಂದ ಈ ಭಾಗದ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ವಿಷಯದಲ್ಲಿ ತೊಂದರೆಯಾಗಿದೆ ಎಂದರು.

ಯುಜಿಸಿ ಮತ್ತು ನ್ಯಾಕ್‌ನಲ್ಲಿ ಸಾಮರ್ಥ್ಯ ಪಡೆಯದೇ ಅಲ್ಲಿ ಬೋಧಕರನ್ನು ನೇಮಕ ಮಾಡದೆ, ಉತ್ತಮ ಪ್ರಯೋಗಾಲಯ ಹಾಗೂ ಗ್ರಂಥಾಲಯಗಳನ್ನು ಹೊಂದಿರದಂತಹ ವಿಶ್ವವಿದ್ಯಾಲಯಗಳಿಂದ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ದೊರಕಲು ಹೇಗೆ ಸಾಧ್ಯ. ಹೊಸದಾಗಿ ಸ್ಥಾಪನೆಗೊಂಡಿರುವ ವಿಶ್ವವಿದ್ಯಾಲಯಗಳು ಹಳೆಯ ವಿಶ್ವವಿದ್ಯಾಲಯಗಳಗಿಂತ ಹೆಚ್ಚು ಶುಲ್ಕವನ್ನು ಪದವಿ ವಿದ್ಯಾರ್ಥಿಗಳಿಂದ ವಸೂಲಿ ಮಾಡಿ ವಿಶ್ವವಿದ್ಯಾಲಯಗಳನ್ನು ನಡೆಸಲಾಗುತ್ತಿದೆ. ಇದರಿಂದ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಹೊರೆ ಉಂಟಾಗುತ್ತಿದೆ ಎಂದರು.

ಹೊಸ ವಿಶ್ವವಿದ್ಯಾಲಯ ಸ್ಥಾಪಿತವಾದ ನಾಲ್ಕು ವರ್ಷದ ಬಳಿಕ ಆ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ವಿದ್ಯಾರ್ಥಿ ಬೇರೊಂದು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಬಯಸಿದರೆ ಮುಕ್ತ ಅವಕಾಶವಿಲ್ಲ. ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ಕೊಡುವ ಸಾಮರ್ಥ್ಯವಿರದ ವಿಶ್ವವಿದ್ಯಾಲಯಗಳನ್ನು ಸಾಮರ್ಥ್ಯವಿರುವ ವಿಶ್ವವಿದ್ಯಾಲಯಗಳಲ್ಲಿ ವಿಲೀನಗೊಳಿಸುವುದರಿಂದ ಗ್ರಾಮೀಣ, ಬಡ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಗೋಷ್ಠಿಯಲ್ಲಿ ಡಾ.ಎಂ.ರಾಮೇಗೌಡ, ಪ್ರೊ.ಎಸ್.ರಾಮು, ಪ್ರೊ.ನಾಗಾನಂದ್, ಪ್ರೊ.ಶಂಕರೇಗೌಡ ಇದ್ದರು.

Share this article