ಹೊಗರೇಹಳ್ಳಿ ಭಾಗದ ವಿದ್ಯುತ್ ವಿತರಣಾ ಕೇಂದ್ರಕ್ಕೆ ಜಾಗದ ಕೊರತೆ: ಮಂಜುನಾಥ್
ಕನ್ನಡಪ್ರಭ ವಾರ್ತೆ,ಬೀರೂರುಕಳೆದ ಹಲವಾರು ಜನಸಂಪರ್ಕ ಸಭೆಯಲ್ಲಿ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದರೂ ಯಾವ ಸಮಸ್ಯೆಗೂ ಮುಕ್ತಿ ನೀಡದ ಇಂತಹ ಸಭೆಗಳನ್ನು ನಡೆಸಬಾರದು ಎಂದು ರೈತರು ಮೆಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಶನಿವಾರ ಬೀರೂರು ಮೆಸ್ಕಾಂ ಕಚೇರಿಯಲ್ಲಿ ಉಪವಿಭಾಗ ವ್ಯಾಪ್ತಿಯ ಜನಸಂಪರ್ಕ ಸಭೆಯಲ್ಲಿ ಮಾತ ನಾಡಿದ ಹೊಗರೇಹಳ್ಳಿ ರೈತ ಮನು ಕಳೆದ ಸಭೆಗಳಲ್ಲಿ ಹೊಗರೇಹಳ್ಳಿ ಮತ್ತಿತರ ಭಾಗದ ಗ್ರಾಮ ಗಳಿಗೆ ನಿರಂತರ ಜ್ಯೋತಿಯಡಿ ನೀಡುವ ವಿದ್ಯುತ್ ಸರಿಯಾಗಿ ನೀಡುತ್ತಿಲ್ಲ. ಈ ಭಾಗದಲ್ಲಿ ವಿದ್ಯುತ್ ಪೂರೈಕೆ ಯಾಗುವ 3 ಫೀಡರ್ ಗಳಲ್ಲಿ ಒಂದು ಕೆಟ್ಟರು ಅದನ್ನು ಸರಿಪಡಿಸಲು 3ಫೀಡರ್ ಗಳನ್ನು ತೆಗೆಯುತ್ತಾರೆ. ಇದರಿಂದ ಗ್ರಾಮದಲ್ಲಿ ಕುಡಿಯುವ ನೀರು ಸೇರಿದಂತೆ ಮತ್ತಿತರ ಸಮಸ್ಯೆ ಉದ್ಭವಿಸುತ್ತಿರುವ ಬಗ್ಗೆ ಸಭೆ ಯಲ್ಲಿ ದೂರು ನೀಡಿದರು. ಯಾವ ಪ್ರಯೋಜನವಿಲ್ಲದ ಮೇಲೆ ಇಂತಹ ಜನಸಂಪರ್ಕ ಸಭೆಗಳು ರೈತರಿಗೆ ಅವಶ್ಯವಿಲ್ಲ. ರೈತರು ಸಿಡಿದೆದ್ದರೆ ಏನಾಗುತ್ತದೆ ಎಂದು ಮೊದಲು ಅರಿಯಲಿ ಎಂದರು.ಕಳೆದ ಸಭೆಯಲ್ಲಿ ನೀಡಿದ ಎಷ್ಟು ದೂರುಗಳನ್ನು ನೀವು ಸರಿಪಡಿಸಿದ್ದೀರಾ, ಸಮಸ್ಯೆಗಳ ಬಗ್ಗೆ ಜಿಲ್ಲಾ ಮೆಸ್ಕಾಂ ಅಧೀಕ್ಷಕ ಇಂಜಿನಿಯರ್ ಯವರಿಗೆ ಕರೆ ಮಾಡಿದರೆ, ತೆಗೆಯದೆ, ನನ್ನ ಮೊಬೈಲ್ ನಂಬರನ್ನು ಬ್ಲಾಕ್ ಲಿಸ್ಟ್ ಗೆ ಹಾಕಿದ್ದಾರೆ. ನಾನೇನು ನನ್ನ ಮನೆಗೆ ವಿದ್ಯುತ್ ನೀಡಿ ಎಂದವನಲ್ಲ. ಗ್ರಾಮದ ರೈತರ ಪರವಾಗಿ ನಿಮಗೆ ತಿಳಿಸಲು ಕರೆ ಮಾಡಿದ್ದೆ. ಸರ್ಕಾರ ಮತ್ತು ಮೆಸ್ಕಾಂ ಕಂಪನಿ ನೀಡಿದರೂ ನೀವು ಯಾಕೆ ರೈತರ ಸಮಸ್ಯೆ ಗಳಿಗೆ ಸ್ಪಂದಿಸುವುದಿಲ್ಲ ಎಂದು ಪ್ರಶ್ನಿಸಿದರು. ಜಿಲ್ಲಾ ಮೆಸ್ಕಾಂ ಅಧೀಕ್ಷಕ ಇಂಜಿನಿಯರ್ ಮಂಜುನಾಥ್ ಉತ್ತರಿಸಿ ಅದಕ್ಕೆ ನಿಮಗೆ ಸಂಬಂಧ ಪಟ್ಟ ಅಧಿಕಾರಿಗಳು ಉತ್ತರ ನೀಡಬೇಕು. ನಾನು ರೈತ ಕುಟುಂಬದ ಹಿನ್ನಲೆಯಲ್ಲಿ ಬಂದವನೆ, ನಿಮ್ಮ ಸಮಸ್ಯೆ ಬಗ್ಗೆ ನನಗೂ ಕಾಳಜಿ ಇದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆ ನಡೆಯದಂತೆ ಎಚ್ಚರ ವಹಿಸುತ್ತೇನೆ ಎಂದರು.ಹೋಗರೆಹಳ್ಳಿ ಮತ್ತು ಸುತ್ತಮುತ್ತಲ ಗ್ರಾಮಗಳ ವಿದ್ಯುತ್ ಸಮಸ್ಯೆ ಬಗ್ಗೆ ಬೀರೂರು ಮೆಸ್ಕಾಂ ಎಇಇ ಕೆ.ಎಸ್. ವೀಣಾರಿಂದ ಮಾಹಿತಿ ಪಡೆದು ಈ ಗ್ರಾಮಗಳಿಗೆ 3 ಫೀಡರ್ ಗಳಿಂದ ವಿದ್ಯುತ್ ನೀಡು ವಾಗ ಎನಾದರೂ ಸಮಸ್ಯೆಯಾದರೆ ವಿದ್ಯುತ್ ತೆಗೆಯುವ ಪರಿಸ್ಥಿತಿ ಇದೆ. ಇದನ್ನು ಶಾಶ್ವತವಾಗಿ ನಿಲ್ಲಿಸ ಬೇಕಾದರೇ ಹೋಗರೇಹಳ್ಳಿ ಭಾಗಕ್ಕೆ ನೂತನ ವಿತರಣಾ ಕೇಂದ್ರದ ಅವಶ್ಯಕತೆ ಇದೆ. ಅಧಿಕಾರಿಗಳು ಘಟಕ ನಿರ್ಮಾಣಕ್ಕೆ ಜಾಗ ಹುಡುಕುತ್ತಿದ್ದಾರೆ. ಇದನ್ನು ಶಾಸಕರ ಗಮನಕ್ಕೂ ತರಲಾಗಿದೆ. ಗ್ರಾಪಂನವರು ಜಾಗ ನೀಡಿದರೇ ಶೀಘ್ರ ವಿದ್ಯುತ್ ವಿತರಣಾ ಕೇಂದ್ರ ಪ್ರಾರಂಭಿಸಲು ಶ್ರಮವಹಿಸುವುದಾಗಿ ತಿಳಿಸಿದರು.ಜಿಲ್ಲೆಯ ವಿಭಾಗೀಯ ಇಂಜಿನಿಯರ್ ಆದ ನಾನು ಎಲ್ಲ ಸಮಸ್ಯೆ ಪರಿಹರಿಸಲು ಸಾಧ್ಯವಿಲ್ಲ, ಸಂಸ್ಥೆ ಮೇಲಾಧಿ ಕಾರಿಗಳ ಗಮನಕ್ಕೆ ತಂದು ಹಂತ ಹಂತವಾಗಿ ಪರಿಹಾರ ಮಾಡಲಾಗುವುದು ಎಂದರು. ಮೆಸ್ಕಾಂ ಎಇಇ ಕೆ.ಎಸ್. ವೀಣಾ ಮಾತನಾಡಿ ನಮ್ಮ ಉಪವಿಭಾಗಕ್ಕೆ ಇಂತಿಷ್ಟು ವಿದ್ಯುತ್ ಬೇಡಿಕೆ ಗುರಿ ಇರುತ್ತದೆ. ಆದರೆ ಕೆಲವರು ಅನಧಿಕೃತ ವಿದ್ಯುತ್ ಬಳಕೆದಾರ ಪರಿಣಾಮ ಓವರ್ ಲೋಡ್ ಸಮಸ್ಯೆಯಿಂದ ಸಕ್ರಮ ರೈತರಿಗೆ ಸಮರ್ಪಕ ವಿದ್ಯುತ್ ನೀಡಲು ಸಾಧ್ಯವಾಗುತ್ತಿಲ್ಲ. ಸದ್ಯ ಉಪವಿಭಾಗ ವ್ಯಾಪ್ತಿಯ ಅಧಿಕೃತ ಆರ್.ಆರ್ ನಂ ಪಡೆದವರು 3533 ರೈತರಿದ್ದರೆ, ಅಕ್ರಮವನ್ನು ಸಕ್ರಮ ಮಾಡಿಕೊಳ್ಳುವವರು 1193 ರೈತರಿದ್ದಾರೆ. ಕೆಲ ರೈತರು ಅಧಿಕೃತಗೊಳಿಸಿಕೊಳ್ಳಲು ಹಣ ಕಟ್ಟಿದ್ದಾರೆ. ಟೆಂಡರ್ ಕರೆದಿದ್ದು ಶೀಘ್ರ ದಲ್ಲೇ ಸಕ್ರಮವಾಗುತ್ತವೆ. ಅನಧಿಕೃತ ರೈತರ ಮನವೊಲಿಸಿ ಅಧಿಕಾರಿಗಳ ಗಮನಕ್ಕೆ ತನ್ನಿ ಎಂದು ಹೇಳಿದರು.ಗ್ರಾಹಕ ಬಾವಿಮನೆ ಮಧು ಮಾತನಾಡಿ, ಬೀರೂರು ಪುರಸಭೆ ವ್ಯಾಪ್ತಿಯಲ್ಲಿ ಖಾಲಿ ನಿವೇಶನಗಳಲ್ಲಿ ಇಲಾಖೆ ವಿದ್ಯುತ್ ಲೈನ್ ಹಾದು ಹೋದ ಪರಿಣಾಮ ಮನೆ ನಿರ್ಮಾಣಕ್ಕೆ ತೊಂದರೆಯಾಗುತ್ತಿದೆ. ಶೀಘ್ರ ಸ್ಥಳಾಂತರಿಸಿ, ಕಂಬಗಳಿಗೆ ಹಬ್ಬಿರುವ ಬಳ್ಳಿ ಗಳನ್ನು ತೆರವು ಗೊಳಿಸಿ ಎಂದರು. ಸಭೆಯಲ್ಲಿ ಕೆಲವು ರೈತರು ಸಮಸ್ಯೆಗಳ ಬಗ್ಗೆ ದೂರು ನೀಡಿದರು.ಸಭೆಯಲ್ಲಿ ಮೆಸ್ಕಾಂ ಎಇ ಕೆ.ವಿಜಯಕುಮಾರ್, ಎಇಟಿ ಎನ್.ಸಿ.ಯತೀಶ್, ಹಿರೇನಲ್ಲೂರು ಜೆಇ ಕಿಶೋರ್ ರಾಜ್, ಸುರೇಶ್, ರೈತ ಸಂಘದ ಸೋಮಶೇಖರ್, ರೈತರಾದ ಲೋಹಿತ್, ಹಾಲಪ್ಪ, ಶೇಖರಪ್ಪ, ಅಜ್ಜಯಪ್ಪ ನರಸಿಂಹ ಮೂರ್ತಿ ಸೇರಿದಂತೆ ಗ್ರಾಹಕರು, ಮೆಸ್ಕಾಂ ಸಿಬ್ಬಂದಿ ಉಪಸ್ಥಿತರಿದ್ದರು.30 ಬೀರೂರು 2ಬೀರೂರಿನ ಮೆಸ್ಕಾಂ ಕಚೇರಿಯಲ್ಲಿ ಶನಿವಾರ ಚಿಕ್ಕಮಗಳೂರು ಮೆಸ್ಕಾಂ ಎಸ್.ಸಿ ಮಂಜುನಾಥ್ ಅಧ್ಯಕ್ಷತೆ ಯಲ್ಲಿ ಉಪವಿಭಾಗ ವ್ಯಾಪ್ತಿಯ ಜನಸಂಪರ್ಕ ಸಭೆ ನಡೆಯಿತು. ಮೆಸ್ಕಾಂ ಎಇಇ ಕೆ.ಎಸ್. ವೀಣಾ ಎಇಟಿ ಎನ್.ಸಿ.ಯತೀಶ್, ಹಿರೇನಲ್ಲೂರು ಜೆಇ ಕಿಶೋರ್ ರಾಜ್ ಮತ್ತಿತರಿದ್ದರು.