ಕೀರ್ಥನೆಗಳ ಮೂಲಕ ಸಮಾಜಕ್ಕೆ ಸಮಾನತೆ ಸಂದೇಶ ಕನಕದಾಸರು

KannadaprabhaNewsNetwork |  
Published : Dec 01, 2023, 12:45 AM IST
ಚಿತ್ರದುರ್ಗ ಎರಡನೇ ಪುಟದ ಲೀಡ್   | Kannada Prabha

ಸಾರಾಂಶ

ಸಂತ ಶ್ರೇಷ್ಠ ಭಕ್ತ ಕನಕದಾಸರು ಕುಲ,ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಎನ್ನುವ ಕೀರ್ತನೆ ಹಾಡುವ ಮೂಲಕ ಸಮಾಜಕ್ಕೆ ಸಮಾನತೆಯ ಸಂದೇಶ ಸಾರಿದ್ದಾರೆ ಎಂದು ಮಾಜಿ ಸಂಸದ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಎನ್.ಚಂದ್ರಪ್ಪ ಹೇಳಿದರು.ಕರ್ನಾಟಕ ಮುಸ್ಲಿಂ ಕಲ್ಚರಲ್ ಅಕಾಡೆಮಿ ವತಿಯಿಂದ ಪತ್ರಕರ್ತರ ಭವನದಲ್ಲಿ ಗುರುವಾರ ನಡೆದ ದೇಶದ ಪ್ರಥಮ ಶಿಕ್ಷಣ ಮಂತ್ರಿ ಡಾ.ಮೌಲಾನ ಅಬ್ದುಲ್‌ ಕಲಾಂ ಆಜಾದ್ ಮತ್ತು ಪ್ರಸ್ತುತ ಶಿಕ್ಷಣ ವ್ಯವಸ್ಥೆ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಭಾರತ ಸರ್ವ ಜನಾಂಗದ ಶಾಂತಿಯ ತೋಟ ಎಂದು ಬಾಯಲ್ಲಿ ಹೇಳುವವರು ಜಾತಿ ಧರ್ಮಗಳ ಬಗ್ಗೆ ಮಾತನಾಡುವುದರಲ್ಲಿ ಅರ್ಥವಿಲ್ಲ. ಗಾಳಿ, ನೀರು, ಬೆಳಕು, ದೀಪಕ್ಕೆ ಯಾವ ಜಾತಿಯಿದೆ ಎಂದು ಪ್ರಶ್ನಿಸಿದರು.

ಡಾ.ಮೌಲಾನ ಅಬ್ದುಲ್ ಕಲಾಂ ಆಜಾದ್, ಪ್ರಸ್ತುತ ಶಿಕ್ಷಣ ವ್ಯವಸ್ಥೆ ಕುರಿತ ವಿಚಾರ ಸಂಕಿರಣದಲ್ಲಿ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಸಂತ ಶ್ರೇಷ್ಠ ಭಕ್ತ ಕನಕದಾಸರು ಕುಲ,ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಎನ್ನುವ ಕೀರ್ತನೆ ಹಾಡುವ ಮೂಲಕ ಸಮಾಜಕ್ಕೆ ಸಮಾನತೆಯ ಸಂದೇಶ ಸಾರಿದ್ದಾರೆ ಎಂದು ಮಾಜಿ ಸಂಸದ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಎನ್.ಚಂದ್ರಪ್ಪ ಹೇಳಿದರು.

ಕರ್ನಾಟಕ ಮುಸ್ಲಿಂ ಕಲ್ಚರಲ್ ಅಕಾಡೆಮಿ ವತಿಯಿಂದ ಪತ್ರಕರ್ತರ ಭವನದಲ್ಲಿ ಗುರುವಾರ ನಡೆದ ದೇಶದ ಪ್ರಥಮ ಶಿಕ್ಷಣ ಮಂತ್ರಿ ಡಾ.ಮೌಲಾನ ಅಬ್ದುಲ್‌ ಕಲಾಂ ಆಜಾದ್ ಮತ್ತು ಪ್ರಸ್ತುತ ಶಿಕ್ಷಣ ವ್ಯವಸ್ಥೆ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಭಾರತ ಸರ್ವ ಜನಾಂಗದ ಶಾಂತಿಯ ತೋಟ ಎಂದು ಬಾಯಲ್ಲಿ ಹೇಳುವವರು ಜಾತಿ ಧರ್ಮಗಳ ಬಗ್ಗೆ ಮಾತನಾಡುವುದರಲ್ಲಿ ಅರ್ಥವಿಲ್ಲ. ಗಾಳಿ, ನೀರು, ಬೆಳಕು, ದೀಪಕ್ಕೆ ಯಾವ ಜಾತಿಯಿದೆ ಎಂದು ಪ್ರಶ್ನಿಸಿದರು.

ನಿವೃತ್ತ ಪ್ರಾಚಾರ್ಯ ಜೆ.ಯಾದವರೆಡ್ಡಿ ಮಾತನಾಡಿ, ವಿಜ್ಞಾನ-ತಂತ್ರಜ್ಞಾನ ಸಾಕಷ್ಟು ಮುಂದುವರೆದಿದ್ದು, ಹೊಸ ಹೊಸ ಸವಾಲುಗಳನ್ನು ಒಡ್ಡುತ್ತಿರುವ ಇಂದಿನ ದಿನಮಾನಗಳಲ್ಲಿ ಮುಸಲ್ಮಾನ ಸಮುದಾಯ ಶಿಕ್ಷಣದಿಂದ ವಂಚಿತರಾಗುತ್ತಿರುವುದು ನೋವಿನ ಸಂಗತಿ. ಜನಸಂಖ್ಯೆ ಗನುಗುಣವಾಗಿ ಮುಸಲ್ಮಾನರಿಗೆ ಮೀಸಲಾತಿ ಸಿಗಬೇಕು. ಬಡತನದ ಕಾರಣಕ್ಕಾಗಿ ಶಿಕ್ಷಣದಿಂದ ಹಿಂದೆ ಸರಿದರೆ ಸಮಾಜದ ಮುಖ್ಯವಾಹಿನಿಗೆ ಬರುವುದು ಕಷ್ಟವಾಗುತ್ತದೆ ಎಂದು ಹೇಳಿದರು.

ಸಾಚಾರ್ ಕಮಿಟಿ ವರದಿ ಪ್ರಕಾರ ಮುಸ್ಲಿಂಮರು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳಿಗಿಂತ ಹಿಂದುಳಿದಿದ್ದಾರೆ. ಕಾನೂನು ಹೋರಾಟದ ಮೂಲಕ ಸರ್ಕಾರದಿಂದ ಸಿಗುವ ಪ್ರಾತಿನಿಧ್ಯ ಪಡೆದುಕೊಳ್ಳಬೇಕು. ಧಾರ್ಮಿಕ ಶ್ರದ್ಧೆ ಜೊತೆ ಶಿಕ್ಷಣದ ಕಡೆ ಗಮನ ಕೊಡಬೇಕು. ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಸಬಲೀಕರಣಗೊಳ್ಳಬೇಕಾಗಿರುವುದರಿಂದ ಮುಸಲ್ಮಾನರಿಗೆ ಸರ್ಕಾರದ ಸೌಲಭ್ಯಗಳು ಸಿಗಬೇಕು.

ಮುಸಲ್ಮಾನರು ಭಾರತದ ಪ್ರಜೆಗಳು. ಎಲ್ಲಿಯೂ ಹೋಗಬೇಕಾಗಿಲ್ಲ. ಸಂವಿಧಾನದಡಿ ಜೀವಿಸುವ ಹಕ್ಕಿದೆ. ಆತಂಕಪಡುವ ಅಗತ್ಯವಿಲ್ಲ. ಸಾಮರಸ್ಯ, ಸಹಭಾಳ್ವೆ ಮೂಲಕ ಕೋಮುಸೌಹಾರ್ಧತೆಯನ್ನು ಕಾಪಾಡಬೇಕಿದೆ. ಜಗತ್ತಿನಲ್ಲಿರುವ 25 ಮುಸಲ್ಮಾನ್ ರಾಷ್ಟ್ರಗಳಲ್ಲಿ ಏಳೆಂಟು ದೇಶಗಳು ಸಂಪೂರ್ಣ ಸಾಕ್ಷರತೆಯನ್ನು ಸಾಧಿಸಿವೆ ಎಂದರು.

ಕರ್ನಾಟಕ ಮುಸ್ಲಿಂ ಕಲ್ಚರಲ್ ಅಕಾಡೆಮಿ ಗೌರವಾಧ್ಯಕ್ಷ ಬಿ.ಕೆ.ರಹಮತ್‍ವುಲ್ಲಾ ಮಾತನಾಡಿ, ಸರ್ಕಾರ ಅನೇಕ ರೀತಿಯ ಸೌಲಭ್ಯಗಳನ್ನು ನೀಡುತ್ತಿದೆ. ಮಧ್ಯಾಹ್ನದ ಬಿಸಿಯೂಟ, ವಿದ್ಯಾರ್ಥಿವೇತನ, ಉಚಿತ ಸಮವಸ್ತ್ರ, ಬೈಸಿಕಲ್, ಪಠ್ಯಪುಸ್ತಕ ಪೂರೈಸುತ್ತಿದೆ. ಇವೆಲ್ಲವನ್ನು ಸದುಪಯೋ ಗಪಡಿಸಿಕೊಂಡು ಮುಸ್ಲಿಂ ಜನಾಂಗದ ಮಕ್ಕಳು ಶಿಕ್ಷಣವಂತರಾಗಬೇಕು. ಬಡತನ ಎನ್ನುವ ಕಾರಣಕ್ಕಾಗಿ ಮಕ್ಕಳ ಶಿಕ್ಷಣ ಬಿಡಿಸಿ ಕೆಲಸಕ್ಕೆ ಕಳಿಸಬಾರದು ಎಂದು ವಿನಂತಿಸಿದರು.

ಅರುಣ್‍ಕುಮಾರ್ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಕಾರ್ಯಾಧ್ಯಕ್ಷ ಕೆ.ಎಂ.ಹಾಲಸ್ವಾಮಿ, ತಾಲೂಕು ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಸಿದ್ದೇಶ್ ಎಸ್.ಕಾಂಗ್ರೆಸ್ ಮುಖಂಡ ಎಚ್.ಆರ್.ಮಹಮದ್, ಬಡಗಿ ಕೆಲಸಗಾರರ ಸಂಘದ ಅಧ್ಯಕ್ಷ ಎ.ಜಾಕೀರ ಹುಸೇನ್, ಕಾರ್ಮಿಕ ವಿಭಾಗದ ಅಧ್ಯಕ್ಷ ಚೋಟು, ಕೆ.ಯಕ್ಬಾಲ್, ಕರ್ನಾಟಕ ಮುಸ್ಲಿಂ ಕಲ್ಚರಲ್ ಅಕಾಡೆಮಿ ಅಧ್ಯಕ್ಷ ಎಂ.ಹನೀಫ್, ಕಾರ್ಯಾಧ್ಯಕ್ಷ ಎ.ಎಚ್.ಅಬ್ದುಲ್ಲಾ, ಉಪಾಧ್ಯಕ್ಷ ನಿಸಾರ್ ಅಹಮದ್ ವೇದಿಕೆಯಲ್ಲಿದ್ದರು.ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಿ.ಕುಮಾರ್ ನಿರೂಪಿಸಿದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ