ಬೆಂಗಳೂರು : ಕನ್ನಡಿಗರ ವ್ಯಾಪಕ ವಿರೋಧಕ್ಕೆ ಕಾರಣವಾಗಿದ್ದ ನಮ್ಮ ಮೆಟ್ರೋವನ್ನು ತಮಿಳುನಾಡಿನ ಹೊಸೂರಿಗೆ ವಿಸ್ತರಣೆ ಮಾಡುವ ಯೋಜನೆ ಇದೀಗ ತಾಂತ್ರಿಕವಾಗಿ ಕಾರ್ಯಸಾಧುವಲ್ಲ ಎಂದು ಬಿಎಂಆರ್‌ಸಿಎಲ್ ರಾಜ್ಯ ಸರ್ಕಾರಕ್ಕೆ ವರದಿ ನೀಡಿದೆ.
ಮೂಲಗಳ ಪ್ರಕಾರ ಕರ್ನಾಟಕದ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ನಮ್ಮ ಮೆಟ್ರೋ ಹಾಗೂ ಚೆನ್ನೈ ಮೆಟ್ರೋ ರೈಲ್ ಲಿ. (ಸಿಎಂಆರ್‌ಎಲ್) ವ್ಯವಸ್ಥೆಗಳು ವಿಭಿನ್ನ ವಿದ್ಯುತ್ ಶಕ್ತಿ ಚಾಲಿತ ತಾಂತ್ರಿಕತೆಯನ್ನು ಬಳಸುತ್ತಿರುವುದರಿಂದ ಸಂಯೋಜಿಸಲು ಸಾಧ್ಯವಿಲ್ಲ ಎಂದು ಸರ್ಕಾರಕ್ಕೆ ವರದಿಯಲ್ಲಿ ಹೇಳಿರುವುದಾಗಿ ತಿಳಿದುಬಂದಿದೆ.
ಆರ್.ವಿ.ರಸ್ತೆ - ಬೊಮ್ಮಸಂದ್ರ ಸಂಪರ್ಕಿಸುವ ಮೆಟ್ರೋ ಹಳದಿ ಮಾರ್ಗವನ್ನು ಬೊಮ್ಮಸಂದ್ರದಿಂದ 23 ಕಿ.ಮೀ. ವಿಸ್ತರಿಸಿ ತಮಿಳುನಾಡಿನ ಹೊಸೂರು ಸಂಪರ್ಕಿಸುವ ಸಂಬಂಧ ಕಾರ್ಯಸಾಧ್ಯತಾ ಅಧ್ಯಯನ ಕೈಗೊಳ್ಳುವಂತೆ ತಮಿಳುನಾಡು ಕೋರಿತ್ತು. ಅಲ್ಲಿನ ಕೃಷ್ಣಗಿರಿ ಸಂಸದ ಎ.ಚೆಲ್ಲಕುಮಾರ್ ಈ ಕುರಿತು ಕೇಂದ್ರಕ್ಕೆ ವಿಶೇಷ ಮನವಿ ಮಾಡಿದ್ದರು.
ಬಳಿಕ ಎರಡೂ ಮೆಟ್ರೊ ಸಂಸ್ಥೆಗಳು ತಮ್ಮದೇ ಆದ ಅಧ್ಯಯನ ನಡೆಸಿದ್ದವು. ಬೊಮ್ಮಸಂದ್ರದಿಂದ ತಮಿಳುನಾಡಿನ ಕಡೆಗೆ ಕೊನೆಯ ಉಪನಗರವಾದ ಅತ್ತಿಬೆಲೆಗೆ ಮೆಟ್ರೊವನ್ನು ವಿಸ್ತರಿಸಲು ಬಿಎಂಆರ್‌ಸಿಎಲ್ ತನ್ನದೇ ಆದ ಅಧ್ಯಯನವನ್ನು ನಡೆಸಿತು.
ಪ್ರಸ್ತಾವಿತ ಯೋಜನೆ ಪ್ರಕಾರ ಎರಡೂ ರಾಜ್ಯಗಳ ಗಡಿಯಲ್ಲಿ 300 ಮೀಟರ್ ಅಂತರದಲ್ಲಿ ಎರಡು ನಿಲ್ದಾಣಗಳು ನಿರ್ಮಾಣಗೊಳ್ಳಬೇಕು. ಈ 300 ಮೀಟರ್ ಅನ್ನು ಪಾದಚಾರಿ ಮೇಲ್ಸೇತುವೆ ಮೂಲಕ ದಾಟಬೇಕು. ಇದು ಕಾರ್ಯಸಾಧುವಲ್ಲ ಎಂದು ಅಧಿಕಾರಿಗಳು ತಿಳಿಸಿದರು.
ನಾವು ನಮ್ಮ ಅಭಿಪ್ರಾಯವನ್ನು ರಾಜ್ಯ ಸರ್ಕಾರದೊಂದಿಗೆ ಹಂಚಿಕೊಂಡಿದ್ದೇವೆ. ಅಂತಿಮ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಾರಣವೇನು?:
ಚೆನ್ನೈ ಮೆಟ್ರೊ ರೈಲು ಲಿಮಿಟೆಡ್ (ಸಿಎಂಆರ್‌ಎಲ್) 25 ಕೆ.ವಿ. ಎಸಿ ಓವರ್‌ಹೆಡ್ ಶಕ್ತಿ ಬಳಸುತ್ತಿದೆ. ನಮ್ಮ ಮೆಟ್ರೊ ಜಾಲದ ಉಳಿದ ಭಾಗಗಳಂತೆ 750 ಕೆವಿ ಡಿಸಿ ವಿದ್ಯುತ್ ಶಕ್ತಿ ಬಳಸಲಿದೆ. ಹೀಗೆ ಎರಡೂ ರಾಜ್ಯಗಳ ಮೆಟ್ರೊ ವ್ಯವಸ್ಥೆಗಳು ವಿಭಿನ್ನ ವಿದ್ಯುತ್ ಶಕ್ತಿ ಚಾಲಿತ ತಾಂತ್ರಿಕತೆ ಬಳಸುತ್ತಿರುವ ಕಾರಣ ಎರಡೂ ಮೆಟ್ರೋವನ್ನು ಸಂಯೋಜಿಸಲು ಸಾಧ್ಯವಿಲ್ಲ. ಈ ಬಗ್ಗೆ ಬಿಎಂಆರ್‌ಸಿಎಲ್ ರಾಜ್ಯ ಸರ್ಕಾರಕ್ಕೆ ಹೇಳಿದೆ ಎಂದು ಮೂಲಗಳು ತಿಳಿಸಿವೆ.
ಕನ್ನಡಿಗರ ತೀವ್ರ ವಿರೋಧ:
ಹೊಸೂರು ಕೈಗಾರಿಕಾ ಪಟ್ಟಣವನ್ನು ಬಲಪಡಿಸಲು ಹೊಸೂರು-ಬೊಮ್ಮಸಂದ ಮೆಟ್ರೋ ಯೋಜನೆ ಕೈಗೊಳ್ಳುವ ಬಗ್ಗೆ ನೆರೆರಾಜ್ಯ ಉತ್ಸುಕವಾಗಿತ್ತು. ಹೊಸೂರಿಗೆ ಮೆಟ್ರೋ ವಿಸ್ತರಿಸುವುದರಿಂದ ಕನ್ನಡಿಗರಿಗೆ ನಯಾಪೈಸೆ ಪ್ರಯೋಜನವಿಲ್ಲ. ಬದಲಾಗಿ ಇದರಿಂದ ನಮ್ಮ ರಾಜ್ಯದ ಕೈಗಾರಿಕೆಗಳು, ಬಂಡವಾಳ ಹೂಡಿಕೆ ಅಲ್ಲಿಗೆ ಹೋಗಬಹುದು. ಅಲ್ಲಿನ ಕಾರ್ಮಿಕರಿಗೆ ಇದು ಹೆಚ್ಚಿನ ಪ್ರಯೋಜನ ಆಗಲಿದೆ. ಇದರಿಂದ ರಾಜ್ಯಕ್ಕೆ ಲಾಭದ ಹೊರತಾಗಿ ನಷ್ಟವಾಗಲಿದೆ ಎಂದು ಕನ್ನಡಿಗರು ವಿರೋಧಿಸಿದ್ದರು. ಯಾವುದೇ ಕಾರಣಕ್ಕೂ ಮೆಟ್ರೋವನ್ನು ತಮಿಳುನಾಡಿಗೆ ಸಂಪರ್ಕಿಸಬಾರದು ಎಂಬ ಅಭಿಯಾನವನ್ನೂ ಕೈಗೊಂಡಿದ್ದರು.