ಬೆಂಗಳೂರು : ಮಳೆ ಕೊರತೆ, ನೀರಿನ ಬರದ ಬಿಸಿ ರಾಜಧಾನಿಗೆ ತಟ್ಟುತ್ತಿದ್ದಂತೆ ಎಚ್ಚೆತ್ತಿರುವ ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್) ಮಳೆ ನೀರು ಕೊಯ್ಲು ಸಾಮರ್ಥ್ಯ ಹೆಚ್ಚಿಸಿಕೊಂಡು, ಅಂತರ್ಜಲ ಸಂರಕ್ಷಣೆಗೆ ಮುಂದಾಗಿದೆ.
ಸಿಲಿಕಾನ್ ಸಿಟಿಯಲ್ಲಿ ಮೆಟ್ರೋ ಆರಂಭವಾಗಿ ದಶಕ ಕಳೆದರೂ ಇನ್ನೂ ಎಲ್ಲ ನಿಲ್ದಾಣ, ಉದ್ದದ ವಯಡಕ್ಟ್‌ನಲ್ಲಿ ನೀರು ಇಂಗಿಸುವ ಈ ಪದ್ಧತಿ ಜಾರಿಯಾಗಿಲ್ಲ. ಇದೀಗ ಸದ್ಯ ಕಾರ್ಯಾಚರಣೆಯಲ್ಲಿರುವ ನೇರಳೆ ಮತ್ತು ಹಸಿರು ಕಾರಿಡಾರ್‌ನ ಎತ್ತರಿಸಿದ ಮಾರ್ಗದ ಕೆಳಗೆ ಹಾಗೂ ನಿಲ್ದಾಣಗಳಲ್ಲಿ ಮಳೆ ನೀರು ಕೊಯ್ಲು ಅನುಷ್ಠಾನಕ್ಕೆ ನಿಗಮ ₹65 ಲಕ್ಷ ಮೊತ್ತದ ಟೆಂಡರ್ ಅಹ್ವಾನಿಸಿದೆ.
ಪ್ರಸ್ತುತ 74 ಕಿಮೀ ಉದ್ದ ಸಂಚಾರ ನಡೆಸುತ್ತಿರುವ ಮೆಟ್ರೋ, 65 ನಿಲ್ದಾಣ ಹೊಂದಿದೆ. ಇದರಲ್ಲಿ ಆರಂಭದಲ್ಲಿ ಮಾಡಿಕೊಳ್ಳಲಾಗಿದ್ದ ಕೆಲವು ನಿಲ್ದಾಣಗಳಲ್ಲಿ ಮಾತ್ರ ಮಳೆ ನೀರು ಕೊಯ್ಲು ಪದ್ಧತಿ ಇದೆ. 2012ರಲ್ಲಿ ಬೈಯಪ್ಪನಹಳ್ಳಿ ಮತ್ತು ಮಹಾತ್ಮಾ ಗಾಂಧಿ ರಸ್ತೆ ನಡುವಿನ ಮಳೆನೀರು ಕೊಯ್ಲು ಪದ್ಧತಿ ಅಳವಡಿಕೆ ಆಗಿದೆ. ಮೆಟ್ರೊ ಮಾರ್ಗದ ಮೇಲೆ ಬೀಳುವ ನೀರು ಕಾಂಕ್ರೀಟ್ ಪಿಲ್ಲರ್‌ನೊಳಗೆ ಅಳವಡಿಕೆಯಾದ 200 ಮಿ.ಮೀ. ಸುತ್ತಳತೆಯ ಕೊಳವೆ ಮೂಲಕ ಇಂಗುಗುಂಡಿ ಸೇರುತ್ತಿದೆ. 5 ಮೀ. ಉದ್ದ ಹಾಗೂ 3ಮೀ. ಸುತ್ತಳತೆಯ ಇಂಗು ಗುಂಡಿಗಳನ್ನು ನಿರ್ಮಾಣ ಮಾಡಲಾಗಿದೆ. ಪ್ರತಿ ಟ್ಯಾಂಕ್ 3 ಸಾವಿರ ಲೀಟರ್ ಸಾಮರ್ಥ್ಯ ಹೊಂದಿದೆ. ಕೊಳವೆಯಿಂದ ಬಂದ ಮಳೆ ನೀರು ಮೊದಲು ಟ್ಯಾಂಕ್ ಸೇರುತ್ತದೆ ಬಳಿಕ ಹೆಚ್ಚುವರಿ ನೀರು ಇಂಗು ಗುಂಡಿಗೆ ಇಳಿಯುತ್ತದೆ.
ವಯಡಕ್ಟ್‌ನಿಂದಲೂ ನೀರಿಳಿಸಿ
ಬಯೋಮ್ ಎನ್ವಿರಾನ್ಮೆಂಟಲ್ ಟ್ರಸ್ಟ್ ಈ ಬಗ್ಗೆ ಸಮೀಕ್ಷೆ ನಡೆಸಿದ್ದು, ಅದರಂತೆ, ಮೆಟ್ರೋದ 35 ಕಿಮೀ ಉದ್ದ ಮತ್ತು 10 ಮೀಟರ್ ಅಗಲದ ಎತ್ತರದ ಮಾರ್ಗದಲ್ಲಿ 30 ಮಿಮೀ ಮಳೆಯಾದರೆ 9,450 ಕಿಲೋ ಲೀಟರ್ ನೀರನ್ನು ಸಂಗ್ರಹ ಮಾಡಬಹುದು. ಮೂರು ಪಿಲ್ಲರ್‌ಗಳ ನಡುವಿನ ಅಂತರದಲ್ಲಿ 30 ಮಿಮೀ. ಮಳೆಯಾದರೆ 15 ಕಿಲೋ ಲೀಟರ್ ನೀರನ್ನು ಭೂಮಿಗೆ ಇಳಿಸಬಹುದು. ವಾರ್ಷಿಕ ವಾಡಿಕೆ ಮಳೆಯ ಪ್ರಮಾಣ 970 ಮಿ.ಮೀ ಮಳೆಯಾದರೆ 3.05 ಲಕ್ಷ ಲೀಟರ್ ಮಳೆ ನೀರು ಸಂಗ್ರಹಿಸಬಹುದು ಎಂದು ಅಧ್ಯಯನ ಮಾಡಿದೆ.
ಹೀಗಾಗಿ ರೈಲ್ವೇ ನಿಲ್ದಾಣ ಬಿಟ್ಟು, ಎತ್ತರಿಸಿದ ಮಾರ್ಗವೂ ಕೂಡ ಮಳೆ ನೀರನ್ನು ಸಂಗ್ರಹಿಸುವ ಸಾಮರ್ಥ್ಯ ಹೊಂದಿವೆ. ಮೆಟ್ರೊ ಮಾರ್ಗಗಳ ಮೂಲಕ ನಗರದಲ್ಲಿ ಅಂತರ್ಜಲ ವೃದ್ಧಿಪಡಿಸಿಕೊಳ್ಳಬಹುದು. ಆದರೆ ಇಂದಿಗೂ ಈ ಸಂಬಂಧ ಪರಿಣಾಮಕಾರಿ ಕೆಲಸವಾಗಿಲ್ಲ. ಇನ್ನಾದರೂ ಬಿಎಂಆರ್‌ಸಿಎಲ್ ಈ ಬಗ್ಗೆ ಎಚ್ಚೆತ್ತು ಅಂತರ್ಜಲ ವೃದ್ಧಿಸಲು ಮುತುವರ್ಜಿ ವಹಿಸಬೇಕು ಎಂದು ಮಳೆನೀರು ಕೊಯ್ಲು ತಜ್ಞರು ಆಗ್ರಹಿಸಿದ್ದಾರೆ.