ಯಶಸ್ವಿ ಮತದಾನಕ್ಕೆ ಮಹಾನಗರ ಪಾಲಿಕೆ ಸಿದ್ಧತೆ

KannadaprabhaNewsNetwork | Published : Apr 5, 2024 1:03 AM

ಸಾರಾಂಶ

ಲೋಕಸಭೆ ಚುನಾವಣೆ ಹಿನ್ನೆಲೆ ಹು-ಧಾ ಮಹಾನಗರ ಪಾಲಿಕೆ ಶೇ. 100ರಷ್ಟು ಮತದಾನಕ್ಕೆ ಈಗಾಗಲೇ ಹಲವು ಸಿದ್ಧತೆ ಕೈಗೊಂಡಿದೆ. ಈ ವಿಶೇಷ ಜಾಗೃತಿ ಕಾರ್ಯಕ್ರಮಗಳು ಈಗ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ:

ಲೋಕಸಭೆ ಚುನಾವಣೆ ಹಿನ್ನೆಲೆ ಹು-ಧಾ ಮಹಾನಗರ ಪಾಲಿಕೆ ಶೇ. 100ರಷ್ಟು ಮತದಾನಕ್ಕೆ ಈಗಾಗಲೇ ಹಲವು ಸಿದ್ಧತೆ ಕೈಗೊಂಡಿದೆ. ಈ ವಿಶೇಷ ಜಾಗೃತಿ ಕಾರ್ಯಕ್ರಮಗಳು ಈಗ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.ಜಿಲ್ಲಾಡಳಿತ ಮತ್ತು SVEEP(ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಚುನಾವಣಾ ಭಾಗವಹಿಸುವಿಕೆ) ಸಮಿತಿಯ ನಿರ್ದೇಶನಗಳ ಅಡಿ ಪಾಲಿಕೆ ಯುವ ಮತದಾರರ ಗಮನ ಸೆಳೆಯುವ ನಿಟ್ಟಿನಲ್ಲಿ ವಿಶೇಷ ಜಾಗೃತಿಗೆ ಮುಂದಾಗಿದೆ. ಲಕ್ಷ್ಮಿ ಮಾಲ್, ಓಯಸಿಸ್ ಮಾಲ್, ಸ್ಟೆಲ್ಲರ್‌, ಯು ಮಾಲ್‌ ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ಸೆಲ್ಫಿ ಸ್ಟ್ಯಾಂಡ್‌ಗಳನ್ನಿರಿಸಿ ಯುವ ಮತದಾರರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಆಸಕ್ತಿ ಹೆಚ್ಚಿಸುವಂತೆ ಮಾಡಿದೆ. ಮಾಲ್‌ಗಳಿಗೆ ಬರುವ ಗ್ರಾಹಕರು ಈ ಸೆಲ್ಫಿ ಸ್ಟ್ಯಾಂಡ್‌ ಎದುರು ನಿಂತು ತಮ್ಮ ಭಾವಚಿತ್ರ ಕ್ಲಿಕ್ಕಿಸಿಕೊಂಡು ಫೇಸ್‌ಬುಕ್‌, ಇನ್‌ಸ್ಟಾ ಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ.

ವಿಶೇಷ ಜಾಗೃತಿ ಕಾರ್ಯ:

ಇನ್ನು ಚುನಾವಣಾ ಪ್ರಚಾರಕ್ಕಾಗಿ ಸ್ಮಾರ್ಟ್‌ಸಿಟಿ ಯೋಜನೆಯ 36 ಡಿಜಿಟಲ್ ಡಿಸ್‌ಪ್ಲೇ ಬೋರ್ಡ್‌ಗಳಲ್ಲಿ ಮತದಾನ ಜಾಗೃತಿ ಕುರಿತು ವಿಡಿಯೋ ಪ್ರಸಾರ ಮಾಡಲಾಗುತ್ತಿದೆ. ವಿವಿಧೆಡೆ 15 ಹೋಲ್ಡಿಂಗ್‌ ಅಳವಡಿಸಿದ್ದು, ಪ್ರತಿದಿನ ಮನೆ-ಮನೆಗೆ ಕಸ ಸಾಗಿಸುವ ಪಾಲಿಕೆ ವಾಹನಗಳಿಂದ ಮತದಾರನ ಕುರಿತು ಜಾಗೃತಿ ಮೂಡಿಸುವ ಕಾರ್ಯ ಕೈಗೊಳ್ಳಲಾಗಿದೆ.

ಬೃಹತ್‌ ಮಾದರಿ ಬ್ಯಾಲೆಟ್‌ ಯೂನಿಟ್‌:

ಪಾಲಿಕೆ ವ್ಯಾಪ್ತಿಯ 82 ವಾರ್ಡ್‌ಗಳಲ್ಲಿ ಟ್ಯಾಬ್ಲೋ ವಾಹನ ಸಂಚರಿಸಲಿದೆ. ಪಾಲಿಕೆಯ ಟಿಪ್ಪರ್‌ನ್ನೇ ಈ ಟ್ಯಾಬ್ಲೋ ಆಗಿ ಪರಿವರ್ತಿಸಿದ್ದು, ಇದರೊಂದಿಗೆ ಎಲ್‌ಇಡಿ ವಾಹನವೂ ಸಂಚರಿಸಲಿದೆ. ಈ ಟ್ಯಾಬ್ಲೋ ವಾಹನದಲ್ಲಿ ದೊಡ್ಡ ಮಾದರಿಯ ಬ್ಯಾಲೆಟ್ ಯೂನಿಟ್ ರಚಿಸಲಾಗಿದೆ. ಮುಂಚೂಣಿಯ ಚುನಾವಣಾ ಘೋಷವಾಕ್ಯ "ಚುನಾವಣೆ ಪರ್ವ ದೇಶದ ಗರ್ವ ", "ನಿಮ್ಮ ಮತ ನಿಮ್ಮ ಧ್ವನಿ ಸ್ವೀಕರಿಸದಿರಿ ಯಾವುದೇ ಮನಿ " ಎಂದು ದೊಡ್ಡ ಬೋರ್ಡ್‌ನಲ್ಲಿ ಬರೆಯಲಾಗಿದೆ. ಈ ವಾಹನವು ಪಾಲಿಕೆಯ ಎಲ್ಲ ವಾರ್ಡ್‌ಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸುವ ಕಾರ್ಯ ಕೈಗೊಳ್ಳಲಿದೆ.

ವಿಶೇಷ ಒತ್ತು:

ಕಳೆದ ಚುನಾವಣೆಯಲ್ಲಿ ಕಡಿಮೆ ಮತದಾನ ಆಗಿರುವ ಕೇಂದ್ರಗಳಲ್ಲಿ ವಿಶೇಷ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಈಗಾಗಲೇ ಶೇ. 10ಕ್ಕಿಂತ ಕಡಿಮೆ ಮತದಾನವಾಗಿರುವ 21 ಮತಗಟ್ಟೆ ಗುರುತಿಸಿದ್ದು ಅವುಗಳು 72ನೇ ವಿಧಾನಸಭಾ ಮತಕ್ಷೇತ್ರದಲ್ಲಿ 5, 73ರಲ್ಲಿ 10 ಹಾಗೂ 74ನೇ ವಿಧಾನಸಭಾ ಮತಕ್ಷೇತ್ರದಲ್ಲಿ 6 ಸೇರಿ ಒಟ್ಟು 21 ಬೂತ್‌ಗಳಿವೆ. ಹಾಗೆಯೇ ಶೇ. 20ರಷ್ಟು ಮತದಾನವಾಗಿರುವ 73ನೇ ವಿಧಾನಸಭಾ ಮತಕ್ಷೇತ್ರದಲ್ಲಿ 2 ಹಾಗೂ 74ನೇ ವಿಧಾನಸಭಾ ಮತಕ್ಷೇತ್ರದಲ್ಲಿ 4 ಬೂತ್‌ಗಳನ್ನು ಈಗಾಗಲೇ ಗುರುತಿಸಲಾಗಿದೆ.

ಈ ಭಾಗಗಳಲ್ಲಿ ಹೆಚ್ಚಾಗಿ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರು, ದುಡಿಯಲು ಬೇರೆ ಊರುಗಳಿಗೆ ವಲಸೆ ಹೋದವರು. ಇಂತಹ ಪ್ರದೇಶಗಳ ಪ್ರತಿ ಮನೆ-ಮನೆಗೆ ತೆರಳಿ ಮತದಾನ ಜಾಗೃತಿ ಕುರಿತು ಕರಪತ್ರ ಹಂಚಲಾಗುತ್ತಿದೆ. ವಿಶೇಷ ಕಾರ್ಯಾಗಾರ ಹಮ್ಮಿಕೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರತಿಯೊಬ್ಬರೂ ಮತದಾನದಲ್ಲಿ ಪಾಲ್ಗೊಳ್ಳಲು ಪಾಲಿಕೆಯಿಂದ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಮಾಲ್‌ಗಳಲ್ಲಿ ಸೆಲ್ಫಿ ಸ್ಟ್ಯಾಂಡ್‌, ಡಿಜಿಟಲ್ ಡಿಸ್‌ಪ್ಲೆ ಬೋರ್ಡ್‌ಗಳಲ್ಲಿ ಮತದಾನ ಜಾಗೃತಿ, ಮನೆ-ಮನೆಗೆ ತೆರಳಿ ಕರಪತ್ರಗಳ ವಿತರಣೆ, ಜಾಗೃತಿ, ಮ್ಯಾರಾಥಾನ್‌, ವಾಕ್‌ಥಾನ್‌ ಸೇರಿದಂತೆ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲು ಯೋಜಿಸಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಹೇಳಿದರು.

Share this article