ವಿಶ್ವನಾಥ ಮಲೇಬೆನ್ನೂರು
ರಾಜಧಾನಿಯಲ್ಲಿರುವ 2.79 ಲಕ್ಷ ಬೀದಿ ನಾಯಿಗಳಿಗೆ ತಲಾ ₹170 ವೆಚ್ಚದಲ್ಲಿ ಬಿಬಿಎಂಪಿಯು ಮೈಕ್ರೋ ಚಿಪ್ ಅಳವಡಿಕೆಗೆ ಯೋಜನೆ ರೂಪಿಸಿದ್ದು, 2025-26ನೇ ಸಾಲಿನಲ್ಲಿ ಮೊದಲ ಹಂತವಾಗಿ 60 ಸಾವಿರ ಬೀದಿ ನಾಯಿಗಳಿಗೆ ಅಳವಡಿಕೆ ಮಾಡುವ ಗುರಿ ಹಾಕಿಕೊಂಡಿದೆ.
ಬೀದಿ ನಾಯಿಯ ವಾಸ ಸ್ಥಳ, ಲಸಿಕೆ ನೀಡಿದ ದಿನಾಂಕ, ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸಾ ದಿನಾಂಕ ಹಾಗೂ ಇನ್ನಿತರ ಅಂಶಗಳನ್ನು ಶಾಶ್ವತವಾಗಿ ದಾಖಲಿಸುವ ಉದ್ದೇಶದಿಂದ ಬಿಬಿಎಂಪಿಯ ಪಶುಪಾಲನೆ ವಿಭಾಗವು ನಗರದಲ್ಲಿರುವ ಪ್ರತಿ ಬೀದಿ ನಾಯಿಗೆ ಮೈಕ್ರೋ ಚಿಪ್ ಅಳವಡಿಸಲು ತೀರ್ಮಾನಿಸಿದೆ. ಕಳೆದ ಸೆಪ್ಟಂಬರ್‌ನಲ್ಲಿ ನಗರದ ಮಲ್ಲೇಶ್ವರ ಹಾಗೂ ಮತ್ತಿಕೆರೆ ವಾರ್ಡ್‌ನಲ್ಲಿ ಪ್ರಾಯೋಗಿಕವಾಗಿ ನಡೆಸಿದ ಮೈಕ್ರೋ ಚಿಪ್ ಅಳವಡಿಕೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಇದೀಗ ನಗರದ ಎಲ್ಲಾ ಬೀದಿ ನಾಯಿಗಳಿಗೆ ಅಳವಡಿಕೆ ಮಾಡುವುದಕ್ಕೆ ಯೋಜನೆ ರೂಪಿಸಲಾಗಿದೆ.ಒಟ್ಟು ₹94 ಲಕ್ಷ ವೆಚ್ಚ:
ತಂತ್ರಜ್ಞಾನ, ಚಿಪ್ ಮಾತ್ರ ಖರೀದಿ:
ಮೈಕ್ರೋ ಚಿಪ್ ಅಕ್ಕಿಯ ಕಾಳಿನಷ್ಟು ಗಾತ್ರದಲ್ಲಿ ಇರಲಿದೆ. ಅದನ್ನು ನಾಯಿಯ ಭುಜದ ಭಾಗದ ಚರ್ಮದ ಒಳಗೆ ಇಂಜಕ್ಷನ್ ಮೂಲಕ ಅಳವಡಿಕೆ ಮಾಡಲಾಗುತ್ತದೆ. ಚಿಪ್ ಅಳವಡಿಕೆಗೆ ಯಾವುದೇ ವಯಸ್ಸಿನ ಮಿತಿ ಇಲ್ಲ. ಎಲ್ಲಾ ನಾಯಿಗಳಿಗೂ ಅಳವಡಿಕೆ ಮಾಡಬಹುದಾಗಿದ್ದು, ಯಾವುದೇ ಅಡ್ಡ ಪರಿಣಾಮ ಇರುವುದಿಲ್ಲ. ಈಗಾಗಲೇ ದೇಶದ ವಿವಿಧ ನಗರಗಳಾದ ಗೋವಾ, ರಾಜ್ ಕೋಟ್, ಅಹಮದಾಬಾದ್ ಸೇರಿದಂತೆ ಮೊದಲಾದ ಕಡೆ ಅಳವಡಿಕೆ ಮಾಡಲಾಗಿದೆ.ಚಿಪ್‌ನಲ್ಲಿ ಹಲವು ಮಾಹಿತಿ ಸಂಗ್ರಹ
ಪ್ರಸ್ತುತ ಲಸಿಕೆ ಹಾಕಿದ ಬೀದಿನಾಯಿಗಳಿಗೆ ಬಣ್ಣ ಹಚ್ಚಿ ಗುರುತಿಸಲಾಗುತ್ತಿದ್ದು, ಒಂದು ವಾರ ಮಾತ್ರ ಗುರು ಬಣ್ಣದ ಗುರುತು ಪತ್ತೆ ಮಾಡಬಹುದಾಗಿದೆ. ನಂತರ ಬಣ್ಣ ಮಾಸಿ ಹೋಗಲಿದೆ. ಇದರಿಂದ ಯಾವ ಬೀದಿನಾಯಿಗಳಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ ಎಂದು ಪತ್ತೆ ಮಾಡುವುದು ಕಷ್ಟವಾಗಿದೆ. ಇದರಿಂದ ಪದೇ ಪದೆ ಲಸಿಕೆ ಹಾಕುವ ಸಾಧ್ಯತೆ ಇದೆ. ಈ ರೀತಿ ಲಸಿಕೆ ಮತ್ತು ಶಸ್ತ್ರ ಚಿಕಿತ್ಸೆ ಆಗುವ ವೆಚ್ಚ ಕಡಿಮೆ ಮಾಡಬಹುದಾಗಿದೆ.ಪ್ರಾಯೋಗಿಕವಾಗಿ ಮೈಕ್ರೋ ಚಿಪ್ ಅಳವಡಿಕೆ ಕಾರ್ಯ ಯಶಸ್ವಿಯಾಗಿದೆ. ಇದೀಗ ಎಲ್ಲಾ ಬೀದಿ ನಾಯಿಗಳಿಗೆ ಮೈಕ್ರೋ ಚಿಕ್ ಅಳವಡಿಸಲು ತಯಾರಿ ಮಾಡಿಕೊಳ್ಳಲಾಗುತ್ತಿದೆ. ಮೊದಲ ಹಂತದಲ್ಲಿ 50 ರಿಂದ 60 ಸಾವಿರ ಬೀದಿ ನಾಯಿಗಳಿಗೆ ಅಳವಡಿಕೆ ಮಾಡಲಾಗುವುದು.