ಮೈಕ್ರೋ ಫೈನಾನ್ಸ್‌ ಕಿರಿಕಿರಿ: 10 ದಿನದಲ್ಲಿ 19 ಪ್ರಕರಣ ದಾಖಲು

KannadaprabhaNewsNetwork |  
Published : Feb 14, 2025, 12:30 AM IST
13ಡಿಡಬ್ಲೂಡಿ4ಮೈಕ್ರೋ ಫೈನಾನ್ಸ್‌ ಕಂಪನಿಯಿಂದ ನೋಂದವರ ದೂರು ಸ್ವೀಕರಿಸಲು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸ್ಥಾಪನೆಯಾಗಿರುವ ಸಹಾಯವಾಣಿ ಕೇಂದ್ರದಲ್ಲಿ ದೂರು ಪರಿಶೀಲಿಸುತ್ತಿರುವ ಸಿಬ್ಬಂದಿ. | Kannada Prabha

ಸಾರಾಂಶ

ಫೆ. 1ರಿಂದ ಈ ಸಹಾಯವಾಣಿ ಶುರು ಮಾಡಿದ್ದು, ಇಲ್ಲಿಯ ವರೆಗೆ 25ಕ್ಕೂ ಹೆಚ್ಚು ದೂರುಗಳು ಮೈಕ್ರೋ ಫೈನಾನ್ಸ್‌ ಕಂಪನಿಗಳ ವಿರುದ್ಧ ದಾಖಲಾಗಿವೆ. ಸಹಾಯವಾಣಿ ಮೇಲುಸ್ತುವಾರಿ ಅಧಿಕಾರಿಯನ್ನಾಗಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ರಮೇಶ ಬಗಲಿ ನೇಮಕ ಮಾಡಿದ್ದು, ಫೆ. 1ರಿಂದ 10ರ ವರೆಗೆ 19 ಪ್ರಕರಣ ದಾಖಲಾಗಿವೆ.

ಧಾರವಾಡ:

ಸಾಲ ವಸೂಲಾತಿ ನೆಪದಲ್ಲಿ ಮೈಕ್ರೋ ಫೈನಾನ್ಸ್‌ ಕಂಪನಿಗಳು ಸಾಲಗಾರರಿಗೆ ಕಿರುಕುಳ ನೀಡುತ್ತಿರುವ ಪ್ರಕರಣಗಳು ಹೆಚ್ಚಾಗಿದ್ದರಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶುರು ಮಾಡಿರುವ ಸಹಾಯವಾಣಿ ಕೇಂದ್ರಕ್ಕೆ ನೋಂದವರಿಂದ ಕರೆಗಳು ಬರುತ್ತಿವೆ.

ಮೈಕ್ರೋ ಫೈನಾನ್ಸ್ ಕಂಪನಿಗಳಿಂದ ಆಗುತ್ತಿರುವ ಕಿರುಕುಳಕ್ಕೆ ಸಂಬಂಧಿಸಿದಂತೆ ಸಹಾಯವಾಣಿ ಕೇಂದ್ರಗಳಲ್ಲಿ ಕರೆಗಳನ್ನು ಸ್ವೀಕರಿಸಲು ವಾರದ ಏಳು ದಿನಗಳಲ್ಲಿ ಹಗಲು ರಾತ್ರಿ ಪಾಳಿಯಲ್ಲಿ (ಮೂರು ಶಿಫ್ಟ್‌ನಲ್ಲಿ) ಅಧಿಕಾರಿಗಳನ್ನು ನೇಮಿಸಿದ್ದು, ನಿತ್ಯವೂ ಸಿಬ್ಬಂದಿ ಕರೆಗಳನ್ನು ಸ್ವೀಕರಿಸಿ, ದೂರುಗಳನ್ನು ದಾಖಲಿಸುತ್ತಿದ್ದಾರೆ.

ಕಳೆದ ಫೆ. 1ರಿಂದ ಈ ಸಹಾಯವಾಣಿ ಶುರು ಮಾಡಿದ್ದು, ಇಲ್ಲಿಯ ವರೆಗೆ 25ಕ್ಕೂ ಹೆಚ್ಚು ದೂರುಗಳು ಮೈಕ್ರೋ ಫೈನಾನ್ಸ್‌ ಕಂಪನಿಗಳ ವಿರುದ್ಧ ದಾಖಲಾಗಿವೆ. ಸಹಾಯವಾಣಿ ಮೇಲುಸ್ತುವಾರಿ ಅಧಿಕಾರಿಯನ್ನಾಗಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ರಮೇಶ ಬಗಲಿ ನೇಮಕ ಮಾಡಿದ್ದು, ಫೆ. 1ರಿಂದ 10ರ ವರೆಗೆ 19 ಪ್ರಕರಣ ದಾಖಲಾಗಿವೆ ಎಂದು ''''ಕನ್ನಡಪ್ರಭ''''ಕ್ಕೆ ಮಾಹಿತಿ ನೀಡಿದರು.

ಸಿಬ್ಬಂದಿ ನಿಗದಿತ ಸಮಯದಲ್ಲಿ ಸಹಾಯವಾಣಿ ಕೇಂದ್ರದಲ್ಲಿದ್ದು, ದೂರವಾಣಿಯ ಮೂಲಕ ಸ್ವೀಕರಿಸುವ ಎಲ್ಲ ದೂರು ಮತ್ತು ಮಾಹಿತಿಗಳನ್ನು ಕಾರ್ಯಾಲಯದಲ್ಲಿ ನಿರ್ವಹಣೆ ಮಾಡಿದ ವಹಿಯಲ್ಲಿ ದಾಖಲಿಸಿ, ದೂರಿನ ಸಮಸ್ಯೆ ಅಂಶಗಳ ಬಗ್ಗೆ ಆಯಾ ತಾಲೂಕಿನ ತಹಸೀಲ್ದಾರರಿಗೆ ಮತ್ತು ಪೊಲೀಸ್‌ ಇಲಾಖೆಗೆ ತಕ್ಷಣ ಮಾಹಿತಿ ನೀಡಲಾಗುತ್ತದೆ. ದೂರಿನ ಬಗ್ಗೆ ಮುಂದಿನ ಕ್ರಮ ಪೊಲೀಸರದ್ದು ಎಂದವರು ತಿಳಿಸಿದರು.

ಈ ಮಧ್ಯೆ ಮೈಕ್ರೋ ಫೈನಾನ್ಸ್‌ ಕಂಪನಿಗಳ ಕಿರಿಕಿರಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನೀಡಿದ ಸುಗ್ರೀವಾಜ್ಞೆಯ ಪ್ರಸ್ತಾವನೆಗೆ ರಾಜ್ಯಪಾಲಕರು ಅಂಕಿತ ಹಾಕಿದ್ದು, ಇದರಿಂದ ಪೊಲೀಸರು ಕಾನೂನು ಪ್ರಕಾರವೇ ನೊಂದವರ ಪರವಾಗಿ ಕಾರ್ಯ ಮಾಡಲು ಇನ್ನಷ್ಟು ಅನುಕೂಲವಾಗಿದೆ.

ಈ ಕ್ಷಣದಿಂದ ಸುಗ್ರೀವಾಜ್ಞೆಯು ಕಾನೂನಾಗಿ ಜಾರಿಯಾಗಿದೆ. ಕಿರುಕುಳಕ್ಕೆ ಒಳಗಾದವರು ಪೊಲೀಸರಿಗೆ ನಿರಾತಂಕವಾಗಿ ದೂರು ನೀಡಬಹುದು. ಇನ್ನಾದರೂ ಮೈಕ್ರೋ ಫೈನಾನ್ಸ್‌ ಕಿರುಕುಳ ನಿಲ್ಲಲಿ ಎಂದು ಸಾಮಾಜಿಕ ಕಾರ್ಯಕರ್ತ ಶ್ರೀಶೈಲ ಕಮತರ ಹೇಳಿದರು.

ಮುಖ್ಯಮಂತ್ರಿಗಳ ಸೂಚನೆಯಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಹಾಯವಾಣಿ ಕೇಂದ್ರ ಸ್ಥಾಪಿಸಲಾಗಿದೆ. ನೊಂದವರು ದೂರವಾಣಿ ಸಂಖ್ಯೆ 0836-2445508 ಅಥವಾ ಟೋಲ್‌ ಫ್ರೀಂ ನಂ.: 1077ಗೆ ಕರೆ ಮಾಡಿ ಮಾಹಿತಿ ನೀಡಬಹುದು. ಮಾಹಿತಿದಾರರ ವಿವರಗಳನ್ನು ಗೌಪ್ಯವಾಗಿ ಇಡಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಇದೇ ಸಂದರ್ಭದಲ್ಲಿ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!