ಮಕ್ಕಳಿಗೆ ಸಾಹಿತ್ಯದ ಮೂಲಕ ಕನ್ನಡ ಕಲಿಸಿ

KannadaprabhaNewsNetwork |  
Published : Dec 10, 2025, 12:15 AM IST
     ಸಿಕೆಬಿ-1 ಎಸ್‌ ಜೆಸಿ ತಾಂತ್ರಿಕ ಮಹಾವಿಧ್ಯಾಲಯ ಎರ್ಪಡಿಸಿದ್ದ ಕನ್ನಡರಾಜ್ಯೋತ್ಸವ ಹಾಗೂ ಕುವೆಂಪು ರವರ 121 ಜನ್ಮ ದಿನಾಚರಣೆಯನ್ನು ಗಣ್ಯರು ಉಧ್ಘಾಟಿಸಿದರು | Kannada Prabha

ಸಾರಾಂಶ

ಭಾಷೆ ಎನ್ನುವುದು ಕೇವಲ ಸಂವಹನ ಮಾತ್ರವಲ್ಲ ಅದು ಒಂದು ಅಸ್ಮಿತೆ. ವ್ಯಕ್ತಿತ್ವ, ಪ್ರಪಂಚದ ಅತ್ಯಂತ ಶಕ್ತಿಯುತ ಹಾಗೂ ಅದ್ಭುತ ಅರಿವಿನ ಭಾಷೆ ಎಂದರೆ ಅದು ಕನ್ನಡ. ಬದುಕು ಇಲ್ಲದಿದ್ದರೆ, ಬರೀ ಭಾಷೆಗೆ ಅರ್ಥ ಇರುವುದಿಲ್ಲ. ಅದಕ್ಕೆ ಅರ್ಥವನ್ನು ಕೊಟ್ಟಿದ್ದು ನಾವು. ಹಿಂದೆ ಬದುಕಿದ್ದ ಕೋಟ್ಯಂತರ ಜನ ಕನ್ನಡದಲ್ಲೇ ಬಾಳಿದ್ದಾರೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಕಲಿತ ಭಾಷೆ ಇಂಗ್ಲಿಷ್ ಆದರೂ ಹೃದಯದ ಭಾಷೆ ಕನ್ನಡವಾಗಿರಬೇಕು. ಇಂಗ್ಲಿಷ್‌ ಎಂಬುದು ಮೆದುಳಿನ ಭಾಷೆ, ಕನ್ನಡ ಹೃದಯದ ಭಾಷೆ. ಮಕ್ಕಳಿಗೆ ಸಾಹಿತ್ಯದ ಮೂಲಕ ಭಾಷೆಯನ್ನು ಕಲಿಸಬೇಕು ಎಂದು ಹಾಸ್ಯ ಸಾಹಿತಿ ಪ್ರೊ. ಕೃಷ್ಣೇಗೌಡ ತಿಳಿಸಿದರು.

ನಗರ ಹೊರವಲಯದ ಎಸ್‌ಜೆಸಿ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿನ ಬಿಜಿಎಸ್ ಸಭಾಂಗಣದಲ್ಲಿ ಎಸ್ ಜೆಸಿ ತಾಂತ್ರಿಕ ಮಹಾವಿದ್ಯಾಲಯದ ಚಿರವಿನೂತನ ಕನ್ನಡ ಸಂಘದಿಂದ ಮಂಗಳವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಮತ್ತು ಕುವೆಂಪು ರವರ 121 ನೇ ಜನ್ಮದಿನೋತ್ಸವ ಆಚರಣೆ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದರು.

ಶಕ್ತಿಯುತ ಅರಿವಿನ ಭಾಷೆ

ಭಾಷೆ ಎನ್ನುವುದು ಕೇವಲ ಸಂವಹನ ಮಾತ್ರವಲ್ಲ ಅದು ಒಂದು ಅಸ್ಮಿತೆ. ವ್ಯಕ್ತಿತ್ವ, ಪ್ರಪಂಚದ ಅತ್ಯಂತ ಶಕ್ತಿಯುತ ಹಾಗೂ ಅದ್ಭುತ ಅರಿವಿನ ಭಾಷೆ ಎಂದರೆ ಅದು ಕನ್ನಡ. ಬದುಕು ಇಲ್ಲದಿದ್ದರೆ, ಬರೀ ಭಾಷೆಗೆ ಅರ್ಥ ಇರುವುದಿಲ್ಲ. ಅದಕ್ಕೆ ಅರ್ಥವನ್ನು ಕೊಟ್ಟಿದ್ದು ನಾವು. ಹಿಂದೆ ಬದುಕಿದ್ದ ಕೋಟ್ಯಂತರ ಜನ ಕನ್ನಡದಲ್ಲೇ ಬಾಳಿದ್ದಾರೆ. ಈಗಲೂ ಬದುಕುತ್ತಿದ್ದಾರೆ. ನನಗೂ ಅನ್ನ, ಗೌರವ ನೀಡಿದ ಭಾಷೆ ಕನ್ನಡ ಎಂದರು.

ಒಂದು ವೇಳೆ, ಕನ್ನಡಕ್ಕೆ ಆತಂಕ ಇದೆ ಎಂದಾದರೆ ಅದು ಭಾಷೆಗೆ ಮಾತ್ರ ಅಲ್ಲ, ಇಡೀ ರಾಜ್ಯಕ್ಕೆ ಹಾಗೂ ಜನರ ಅಸ್ತಿತ್ವಕ್ಕೆ ಬಂದ ಆತಂಕ, ಸಂಸ್ಕೃತಿ ಹಾಗೂ ಭಾಷಾ ಸೊಗಡಿನ ಬಗ್ಗೆ ವಿಶೇಷವಾಗಿ ಪ್ರಸ್ತಾಪಿಸಿದ ಅವರು, ಮಣ್ಣಿನಲ್ಲಿ ತಾಕತ್ತಿದ್ದರೆ, ಅಲ್ಲಿ ಘನವಾದ ವ್ಯಕ್ತಿಗಳು ಜನಿಸುತ್ತಾರೆ. ಕನ್ನಡ ಮಣ್ಣಿನಲ್ಲಿ ಅಂತಹ ತಾಕತ್ತಿದೆ. ಸರ್ವಜ್ಞ, ಪಂಪ, ರನ್ನ, ಕುವೆಂಪು, ಬಸವಣ್ಣ, ಅಕ್ಕ ಮಹಾದೇವಿ, ಡಾ.ರಾಜ್ ಕುಮಾರ್, ಸೇರಿದಂತೆ ನೂರಾರು ಪುಣ್ಯ ಪುರುಷರು, ಕವಿಗಳು ಸಾಹಿತಿಗಳು, ಕಲಾವಿದರು ಹುಟ್ಟಿರುವುದೇ ಸಾಕ್ಷಿ ಎಂದರು.

ಮಕ್ಕಳು ಅನಿಕೇತನರಾಗಬೇಕು

ಆದಿ ಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಕಾರ್ಯದರ್ಶಿ ಮಂಗಳನಾಥ ಸ್ವಾಮೀಜಿ ಮಾತನಾಡಿ, ಕುವೆಂಪುರವರು ತಿಳಿಸಿರುವಂತೆ ಹುಟ್ಟುವಾಗ ವಿಶ್ವಮಾನವನಾಗಿಯೇ ಹುಟ್ಟಿದ ಮಗುವನ್ನು ನಾವು ದೇಶ, ಭಾಷೆ, ಜಾತಿ, ಮತ, ಜನಾಂಗ, ವರ್ಣ ಇತ್ಯಾದಿ ಉಪಾಧಿಗಳಿಂದ ಬದ್ಧನನ್ನಾಗಿ ಮಾಡುತ್ತೇವೆ. ಅವೆಲ್ಲವುಗಳಿಂದ ಪಾರಾಗಿ ಅವನನ್ನು ಬುದ್ಧನನ್ನಾಗಿ, ಅಂದರೆ ವಿಶ್ವಮಾನವನನ್ನಾಗಿ, ಪರಿವರ್ತಿಸುವುದೆ ನಮ್ಮ ವಿದ್ಯೆ, ಸಂಸ್ಕೃತಿ, ನಾಗರಿಕತೆ ಎಲ್ಲದರ ಆದ್ಯ ಕರ್ತವ್ಯವಾಗಬೇಕು. ಲೋಕ ಉಳಿದು, ಬಾಳಿ ಬದುಕಬೇಕಾದರೆ, ಪ್ರಪಂಚದ ಮಕ್ಕಳೆಲ್ಲ ಅನಿಕೇತನರಾಗಬೇಕು ಎಂದರು.

ಸಾಂಸ್ಕೃತಿಕ ಕಾರ್ಯಕ್ರಮ

ಸಮಾರಂಭದಲ್ಲಿ ವಿದ್ಯಾರ್ಥಿಗಳಿಂದ ಕನ್ನಡ ನಾಡಿನ ಸಾಂಸ್ಕೃತಿಕ ಉಡುಗೆಯೊಂದಿಗೆ ವೇಷಭೂಷಣ ಸ್ಪರ್ಧೆ, ಕವನ, ಹಾಸ್ಯ, ನಾಟಕ, ಏಕಪಾತ್ರ ಅಭಿನಯ, ಇನ್ನೂ ಮುಂತಾದ ಕಾರ್ಯಕ್ರಮಗಳನ್ನೊಳಗೊಂಡ ಕನ್ನಡ ನಾಡು ನುಡಿಯ ವೈವಿದ್ಯತೆಯ ಚಿತ್ರಣಕ್ಕೆ ಸಾಕ್ಷಿಯಾಯಿತು. ಕಾರ್ಯಕ್ರಮಕ್ಕೂ ಮುನ್ನ ಅತಿಥಿಗಳನ್ನು ಕಾಲೇಜಿನ ಮುಖ್ಯದ್ವಾರದಿಂದ ಡೊಳ್ಳು ಕುಣಿತ, ತಮಟೆ ವಾದ್ಯ, ವೀರಗಾಸೆ, ಗಣ್ಯರೊಂದಿಗೆ ಕನ್ನಡ ರಥ ಮೆರವಣಿಗೆ ಹಾಗೂ ವಿದ್ಯಾರ್ಥಿಗಳ ನೃತ್ಯದೊಂದಿಗೆ ಕಲಾ ವೈಭವದಲ್ಲಿ ವಿಜೃಂಭಣೆಯಿಂದ ವೇದಿಕೆಗೆ ಬರಮಾಡಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ.ಜಿ.ಟಿ.ರಾಜು,ಚಿರವಿನೂತನ ಕನ್ನಡ ಸಂಘದ ಅಧ್ಯಕ್ಷ ಲೋಹಿತ್ ಜಿ.ಎನ್, ಕಾರ್ಯದರ್ಶಿ ಚೌಡಪ್ಪ ಎಂ.ಆರ್, ಕಾಲೇಜಿನ ಭೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಸಿದ ಕರ್ನಾಟಕ ಕ್ರಿಕೆಟ್‌ ಗುಣಮಟ್ಟ - ಈ ಸಲ 7 ಟಿ20ಯಲ್ಲಿ ಗೆದ್ದಿದ್ದು ಕೇವಲ 2
ಬುರುಡೆ ಕೇಸ್‌ ಹಿಂದೆ ಅರ್ಬನ್‌ ನಕ್ಸಲ್‌ : ಬಿಜೆಪಿ