ಜಿದ್ದಾಜಿದ್ದಿನಿಂದ ರಂಗೇರಿದ ಹಾಲಿನ ರಾಜಕಾರಣ

KannadaprabhaNewsNetwork | Published : May 24, 2025 1:51 AM
ರಾಮನಗರ: ಬೆಂಗಳೂರು ಸಹಕಾರಿ ಹಾಲು ಒಕ್ಕೂಟ (ಬಮೂಲ್)ದ 2025-2030ರ ಅವಧಿಯ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಗಳಿಗೆ ಭಾನುವಾರ ಮತದಾನ ನಡೆಯಲಿದ್ದು, ಆಡಳಿತರೂಢ ಕಾಂಗ್ರೆಸ್ ಹಾಗೂ ಜೆಡಿಎಸ್-ಬಿಜೆಪಿ ಮೈತ್ರಿಕೂಟದ ನಡುವೆ ತೀವ್ರ ಪೈಪೋಟಿ ನಡೆಯುತ್ತಿರುವ ಕಾರಣ ಹಾಲಿನ ರಾಜಕಾರಣ ರಂಗೇರಿದೆ.
Follow Us

ರಾಮನಗರ: ಬೆಂಗಳೂರು ಸಹಕಾರಿ ಹಾಲು ಒಕ್ಕೂಟ (ಬಮೂಲ್)ದ 2025-2030ರ ಅವಧಿಯ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಗಳಿಗೆ ಭಾನುವಾರ ಮತದಾನ ನಡೆಯಲಿದ್ದು, ಆಡಳಿತರೂಢ ಕಾಂಗ್ರೆಸ್ ಹಾಗೂ ಜೆಡಿಎಸ್-ಬಿಜೆಪಿ ಮೈತ್ರಿಕೂಟದ ನಡುವೆ ತೀವ್ರ ಪೈಪೋಟಿ ನಡೆಯುತ್ತಿರುವ ಕಾರಣ ಹಾಲಿನ ರಾಜಕಾರಣ ರಂಗೇರಿದೆ.

ಬೆಂಗಳೂರು ನಗರ, ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳನ್ನು ಒಳಗೊಂಡಂತೆ ರಚನೆಯಾಗಿರುವ ಬೆಂಗಳೂರು ಸಹಕಾರ ಹಾಲು ಒಕ್ಕೂಟ (ಬಮೂಲ್ )ದ 2025-2030ರ ಅವಧಿಯ ಆಡಳಿತ ಮಂಡಳಿಯ ಒಟ್ಟು 14 ನಿರ್ದೇಶಕ ಸ್ಥಾನಗಳ ಪೈಕಿ 3 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು, ಉಳಿದ 11 ಕ್ಷೇತ್ರಗಳಿಗೆ ಚುನಾವಣೆ ನಿಗದಿಯಾಗಿದೆ.

ಕೈಗೆ ಮಿತ್ರ ಪಕ್ಷಗಳ ಸವಾಲು:

ಬಮೂಲ್ ನಿರ್ದೇಶಕ ಸ್ಥಾನದ ಚುನಾವಣೆಯಲ್ಲಿ ಗೆಲುವು ಸಾಧಿಸಬಹುದಾದ ನಿರ್ದೇಶಕ ಸ್ಥಾನಗಳಲ್ಲಿ ಬಿಜೆಪಿ - ಜೆಡಿಎಸ್ ಮೈತ್ರಿ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ. ಆ ಮೂಲಕ ಅಧಿಕ ನಿರ್ದೇಶಕ ಸ್ಥಾನಗಳನ್ನು ಗೆದ್ದು ಬಮೂಲ್ ಅನ್ನು ವಶಕ್ಕೆ ಪಡೆಯುವ ಲೆಕ್ಕಾಚಾರಗಳು ಉಭಯ ಪಕ್ಷಗಳದ್ದಾಗಿದೆ. ಇನ್ನು ಆಡಳಿತರೂಢ ಕಾಂಗ್ರೆಸ್ ಅಧಿಕ ಸ್ಥಾನಗಳಲ್ಲಿ ಗೆಲ್ಲುವ ಉಮೇದಿನಲ್ಲಿದೆ.

ಬೆಂಗಳೂರು ಹಾಲು ಒಕ್ಕೂಟದ ವ್ಯಾಪ್ತಿಗೆ ರಾಮನಗರ, ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ನಗರ ಜಿಲ್ಲೆಗಳು ಬರುತ್ತವೆ. ಈ ಮೊದಲು 13 ನಿರ್ದೇಶಕರು ಆಯ್ಕೆಯಾಗುತ್ತಿದ್ದರು. ಆದರೆ, ಈ ಬಾರಿ ಕ್ಷೇತ್ರ ಪುನರ್ ವಿಂಗಡಣೆಯ ಪರಿಣಾಮ ರಾಮನಗರ ಜಿಲ್ಲೆಯಲ್ಲಿ ಹಾರೋಹಳ್ಳಿ ಕ್ಷೇತ್ರ ಅಸ್ತಿತ್ವಕ್ಕೆ ಬಂದಿದೆ. ಹೀಗಾಗಿ ರಾಮನಗರ ಜಿಲ್ಲೆಯಲ್ಲಿ 6 ನಿರ್ದೇಶಕರು ಸೇರಿದಂತೆ ಬಮೂಲ್ ಗೆ ಒಟ್ಟು 14 ನಿರ್ದೇಶಕರ ಆಯ್ಕೆಯಾಗಬೇಕಿದೆ.

3 ಕ್ಷೇತ್ರಗಳಿಗೆ ಅವಿರೋಧ ಆಯ್ಕೆ:

ಈಗಾಗಲೇ ರಾಮನಗರ ಜಿಲ್ಲೆಯ ಕನಕಪುರ ಕ್ಷೇತ್ರದಿಂದ ಮಾಜಿ ಸಂಸದ ಡಿ.ಕೆ.ಸುರೇಶ್, ಕುದೂರು ಕ್ಷೇತ್ರದಿಂದ ರಾಜಣ್ಣ ಹಾಗೂ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ಕ್ಷೇತ್ರದಲ್ಲಿ ಕಾಂಗ್ರೆಸ್‌ ಬೆಂಬಲಿತ ಆರ್.ಕೆ.ರಮೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇನ್ನುಳಿದ 11 ನಿರ್ದೇಶಕ ಸ್ಥಾನಗಳಿಗೆ ತೀವ್ರ ಪೈಪೋಟಿ ನಡೆದಿದ್ದು, ಅಭ್ಯರ್ಥಿಗಳು ಪ್ರತಿಸ್ಪರ್ಧಿಯ ಸಂಪರ್ಕಕ್ಕೆ ಸಿಗದಂತೆ ಮತದಾರರನ್ನು ಪ್ರವಾಸಕ್ಕೆ ಕರೆದೊಯ್ದಿದ್ದಾರೆ. ಅವರೆಲ್ಲರು ಮತದಾನದ ದಿನವಾದ ಭಾನುವಾರ ನೇರವಾಗಿ ಮತಗಟ್ಟೆಗೆ ಆಗಮಿಸಲಿದ್ದಾರೆ.

ರಾಮನಗರ ಜಿಲ್ಲೆಯಲ್ಲಿ 4 ಕ್ಷೇತ್ರಗಳಿಗೆ ಚುನಾವಣೆ:

ರಾಮನಗರ ಜಿಲ್ಲೆಯ ರಾಮನಗರ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಪಿ.ನಾಗರಾಜು, ಜೆಡಿಎಸ್ - ಬಿಜೆಪಿ ಬೆಂಬಲಿತರಾಗಿ ರೇಣುಕಮ್ಮ, ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಲಿಂಗೇಶ್ ಕುಮಾರ್ , ಜೆಡಿಎಸ್ - ಬಿಜೆಪಿ ಬೆಂಬಲದಿಂದ ಜಯಮುತ್ತು, ಹಾರೋಹಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಹರೀಶ್ ಕುಮಾರ್ , ಜೆಡಿಎಸ್ - ಬಿಜೆಪಿ ಬೆಂಬಲಿತರಾಗಿ ಎಂ. ಬಸವರಾಜು , ಮಾಗಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಎಚ್.ಎನ್.ಅಶೋಕ್ (ತಮ್ಮಾಜಿ), ಜೆಡಿಎಸ್ - ಬಿಜೆಪಿ ಬೆಂಬಲಿತರಾಗಿ ಚಂದ್ರಮ್ಮ ಕೆಂಪೇಗೌಡ ಸ್ಪರ್ಧೆ ಮಾಡಿದ್ದಾರೆ.

ಬೆಂ.ಗ್ರಾಮಾಂತರದ 4 ಕ್ಷೇತ್ರಗಳಲ್ಲಿ ಹಣಾಹಣಿ :

ನೆಲಮಂಗಲ ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿತ ಭಾಸ್ಕರ್, ಜೆಡಿಎಸ್ - ಬಿಜೆಪಿಯಿಂದ ಭವಾನಿ ಶಂಕರ್ ಬೈರೇಗೌಡ ನಡುವೆ ಸ್ಪರ್ಧೆ ಏರ್ಪಟ್ಟಿದೆ. ದೊಡ್ಡಬಳ್ಳಾಪುರ ಕ್ಷೇತ್ರದಲ್ಲಿ ಜೆಡಿಎಸ್- ಬಿಜೆಪಿ ಪಕ್ಷಗಳ ಮೈತ್ರಿ ಕೆಲಸ ಮಾಡಿಲ್ಲ. ಇಲ್ಲಿ ಕಾಂಗ್ರೆಸ್ ಪಕ್ಷ ಜೆಡಿಎಸ್ ನ ಹುಸ್ಕೂರು ಆನಂದ್ ಅವರಿಗೆ ಬೆಂಬಲ ಸೂಚಿಸಿದ್ದು, ಬಿಜೆಪಿಯಿಂದ ಬಿ.ಸಿ.ಆನಂದ್ ಕುಮಾರ್ ಸ್ಪರ್ಧೆ ಮಾಡಿದ್ದಾರೆ.

ದೇವನಹಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಎಸ್ .ಪಿ.ಮುನಿರಾಜು, ಜೆಡಿಎಸ್ - ಬಿಜೆಪಿಯಿಂದ ಬಿ.ಶ್ರೀನಿವಾಸ್ ಸ್ಪರ್ಧಿಸಿದರೆ, ಹೊಸಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಬಿ.ವಿ.ಸತೀಶ್ ಗೌಡ, ಬಿಜೆಪಿ - ಜೆಡಿಎಸ್ ನಿಂದ ಎಂ.ನರೇಂದ್ರ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಬೆಂ.ನಗರ ಜಿಲ್ಲೆಯ 3 ಕ್ಷೇತ್ರಗಳಲ್ಲಿ ಜಿದ್ದಾಜಿದ್ದಿ :

ಬೆಂಗಳೂರು ಉತ್ತರ ಕ್ಷೇತ್ರ - ಕಾಂಗ್ರೆಸ್ ಬೆಂಬಲಿತ ಕೆ.ಎಸ್.ಕೇಶವಮೂರ್ತಿ, ಬಿಜೆಪಿ - ಜೆಡಿಎಸ್ ಬೆಂಬಲಿತ ಸತೀಶ್ ಕೆ.ಆರ್. ಕಡತನಮಲೆ , ಎಂ.ಸತೀಶ್ ನಡುವೆ ಸ್ಪರ್ಧೆ ನಡೆದರೆ, ಬೆಂಗಳೂರು ಪೂರ್ವ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಬಿ.ಡಿ.ನಾಗಪ್ಪ ವಿರುದ್ಧ ಬಿಜೆಪಿ - ಜೆಡಿಎಸ್ ಬೆಂಬಲಿತ ಎಂ.ಮಂಜುನಾಥ ಕಣದಲ್ಲಿದ್ದಾರೆ.

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕೆ.ಎಂ.ಕೃಷ್ಣಯ್ಯ ಮತ್ತು ಡಿ.ಹನುಮಂತಯ್ಯ ನಡುವೆ ಪೈಪೋಟಿ ನಡೆದಿದೆ.

---------------------------------

23ಕೆಆರ್ ಎಂಎನ್ 2.ಜೆಪಿಜಿ

ಬುಮೂಲ್ ಆಡಳಿತ ಮಂಡಳಿ ಕಚೇರಿ

-------------------------------