ಹಾಲಿನ ಬೆಲೆ ಏರಿಕೆ: ರೈತರ ಪರವಾಗಿ ಸಿಎಂಗೆ ಅಭಿನಂದನೆ

KannadaprabhaNewsNetwork | Published : Sep 15, 2024 1:57 AM

ಸಾರಾಂಶ

ಕನಕಪುರ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೊಟ್ಟ ಮಾತು ತಪ್ಪದೇ ನುಡಿದಂತೆ ನಡೆಯಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಸಂಚಾಲಕ ಚೀಲೂರು ಮುನಿರಾಜು ಆಗ್ರಹಿಸಿದರು.

ಕನಕಪುರ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೊಟ್ಟ ಮಾತು ತಪ್ಪದೇ ನುಡಿದಂತೆ ನಡೆಯಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಸಂಚಾಲಕ ಚೀಲೂರು ಮುನಿರಾಜು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶುಕ್ರವಾರ ಮಾಗಡಿಯಲ್ಲಿ ಏರ್ಪಡಿಸಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿಗಳು ನಂದಿನಿ ಹಾಲಿನ ಪಾಕೆಟ್ ದರವನ್ನು ಹೆಚ್ಚಿಸಿ ಅ ಹಣವನ್ನ ರಾಜ್ಯದ ಹಾಲು ಉತ್ಪಾದಕ ರೈತರಿಗೆ ಕೊಡುವುದಾಗಿ ಘೋಷಣೆ ಮಾಡಿರುವುದು ತುಂಬಾ ಸಂತೋಷದ ವಿಚಾರ. ರೈತರಿಗೆ ಅನುಕೂಲ ಮಾಡುವ ಈ ವಿಚಾರವಾಗಿ ರಾಜ್ಯ ರೈತರ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಭಿನಂದಿಸುತ್ತೇವೆ ಎಂದು ಹೇಳಿದರು.

ರಾಜ್ಯದ ರೈತರು ಲಕ್ಷಾಂತರ ರುಪಾಯಿ ನಷ್ಟ ಅನುಭವಿಸಿ ಸಂಕಷ್ಟದಲ್ಲಿರುವ ಇಂತಹ ಸಂದರ್ಭದಲ್ಲಿ ಪಕ್ಷಾತೀತವಾಗಿ ರೈತರಿಗೆ ಬೆಂಬಲ ನೀಡಿ ಮಾನವೀಯತೆ ತೋರುವುದು ಎಲ್ಲರ ಕರ್ತವ್ಯ. ಆದರೆ ಬಿಜೆಪಿ ಪಕ್ಷದ ವತಿಯಿಂದದೀ ವಿಚಾರದ ವಿರುದ್ಧ ಹೋರಾಟ ಮಾಡುವುದಾಗಿ ಹೇಳಿಕೆ ನೀಡಿರುವುದು ನೋವಿನ ಸಂಗತಿಯಾಗಿದೆ. ತಮ್ಮ ರೈತ ವಿರೋಧಿ ಧೋರಣೆಯನ್ನು ಕೈಬಿಟ್ಟು ಬಿಜೆಪಿ ಪಕ್ಷ ನಾಡಿನ ರೈತರ ಪರವಾಗಿ ನಿಲ್ಲಬೇಕು ಎಂದು ಮುನಿರಾಜು ಆಗ್ರಹಿಸಿದರು. ಅನೇಕ ರೈತ ಕುಟುಂಬಗಳು ಹೈನುಗಾರಿಕೆಯಿಂದಲೇ ಬದುಕು ಕಟ್ಟಿಕೊಂಡಿದ್ದು, ರೈತರ ಪರವಾಗಿ ಮುಖ್ಯಮಂತ್ರಿಗಳು ಉತ್ತಮ ನಿರ್ಧಾರ ತೆಗೆದುಕೊಂಡಿರುವುದು ಶ್ಲಾಘನೀಯ. ಸರ್ಕಾರದ ಈ ನಿರ್ಧಾರವನ್ನು ರಾಜ್ಯದ ಹಾಲು ಒಕ್ಕೂಟಗಳು ಆದಷ್ಟೂ ಬೇಗ ಕಾರ್ಯಗತಗೊಳಿಸುವಂತೆ ಕ್ರಮ ತೆಗೆದುಕೊಳ್ಳುವ ಮೂಲಕ ಮಾತಿಗೆ ತಪ್ಪದಂತೆ ನಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಜಯ ಕರ್ನಾಟಕ ಜನಪರ ವೇದಿಕೆ ರಾಜ್ಯ ಸಲಹೆಗಾರ ಕುಮಾರಸ್ವಾಮಿ ಮಾತನಾಡಿ, ಈಗಲಾದರೂ ಮುಖ್ಯಮಂತ್ರಿಗಳಿಗೆ ರೈತರ ಮೇಲೆ ಕಾಳಜಿ ಬಂದಿರುವುದಕ್ಕೆ ತುಂಬಾ ಸಂತೋಷ. ಹಾಲಿನ ಪ್ಯಾಕೆಟ್ ದರವನ್ನು ಹೆಚ್ಚಳ ಮಾಡಿ ಅ ಹಣವನ್ನು ರೈತರಿಗೆ ನೀಡುವ ಮುಖ್ಯಮಂತ್ರಿಗಳ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಆದರೆ ಹಿಂದೆ ಹಲವಾರು ಬಾರಿ ಇದೇ ರೀತಿ ಹೇಳಿಕೆ ನೀಡಿ ಮಾತು ತಪ್ಪಿದ್ದು ಈಗಲಾದರೂ ನುಡಿದಂತೆ ನಡೆದುಕೊಳ್ಳಬೇಕೆಂದು ಹೇಳಿದರು.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಹಾಲಿನ ಬೆಲೆ ಏರಿಕೆ ವಿರುದ್ಧ ಹೋರಾಟ ಮಾಡುವುದಾಗಿ ನೀಡಿರುವ ಹೇಳಿಕೆ ಸರಿಯಲ್ಲ. ಈ ವಿಚಾರದಲ್ಲಿ ವಿರೋಧ ಪಕ್ಷಗಳು ರಾಜಕೀಯ ಮಾಡದೆ ರಾಜ್ಯದ ರೈತರ ಪರವಾಗಿ ನಿಲ್ಲಬೇಕಾಗಿದೆ. ರೈತರು ಸಂಕಷ್ಟದಲ್ಲಿ ಇರುವ ಈ ಸಂದರ್ಭ ದಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಮುಖ್ಯಮಂತ್ರಿಗಳ ನಿರ್ಧಾರವನ್ನು ಸ್ವಾಗತಿಸುವಂತೆ ಮನವಿ ಮಾಡಿದರು. ರಾಜ್ಯ ಸರ್ಕಾರ ಹಿಂದಿನಂತೆ ಮಾತಿಗೆ ತಪ್ಪಿದರೆ ನಮ್ಮ ಸಂಘಟನೆಯ ಹೋರಾಟ ನಿರಂತರವಾಗಿರುತ್ತದೆ ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸ್ವತಂತ್ರ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಕನ್ನಡ ಭಾಸ್ಕರ್ ಸೇರಿದಂತೆ ರೈತ ಮುಖಂಡರು ಹಾಜರಿದ್ದರು.

ಕೆ ಕೆ ಪಿ ಸುದ್ದಿ 04:

ಕನಕಪುರದಲ್ಲಿ ರಾಜ್ಯ ರೈತ ಸಂಘ ಹಾಗೂ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

Share this article