ಪ್ರವೀಣ ಹೆಗಡೆ ಕರ್ಜಗಿ
ಹಾಲಿನ ಫ್ಯಾಟ್ ಅಳೆಯುವ ಮಾಪಕ, ಡಿಜಿಟಲ್ ತೂಕದಯಂತ್ರ, ಕಂಪ್ಯೂಟರ್‌ನಂತಹ ಎಲೆಕ್ಟ್ರಾನಿಕ್ ಉಪಕರಣಗಳನ್ನು ಸರಿಯಾಗಿ ಇಟ್ಟುಕೊಳ್ಳಲು ಇಂತಹ ಸಂಘಗಳಲ್ಲಿ ಜಾಗದ ಸಮಸ್ಯೆಯಿದೆ. ಕೆಲವೆಡೆ ಕಾಗದ ಪತ್ರಗಳ ರಕ್ಷಣೆಯೂ ಸವಾಲಾಗಿದೆ. ಕ್ಯಾನ್, ಟೇಬಲ್, ಕುರ್ಚಿ ಸೇರಿದಂತೆ ಸಾಕಷ್ಟು ಸಾಮಗ್ರಿಗಳು ಹಾಗೂ ರೈತರಿಗೆ ವಿತರಿಸುವ ಪಶು ಆಹಾರಗಳನ್ನು ಕಚೇರಿಯಲ್ಲಿ ಸಂಗ್ರಹಿಸಬೇಕು. ಸ್ವಂತ ಕಟ್ಟಡವಲ್ಲದ ಕಾರಣ ವಿದ್ಯುತ್ ಸಂಪರ್ಕ ಪಡೆಯಲು ಸಮಸ್ಯೆ ಉಂಟಾಗುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಗೆ ಈ ಹಿಂದೆಯೇ ಮನವಿ ಮಾಡಿದ್ದು, ಅದಕ್ಕೆ ಉತ್ತರವಾಗಿ ಲಾಭ ಮಾಡುವ ಸಂಘಗಳಿಗೆ ಶಾಸಕ, ಸಂಸದರ ನಿಧಿ ಬಳಕೆಗೆ ಅವಕಾಶವಿಲ್ಲ ಎಂದು ಹಿಂಬರಹ ಕಳುಹಿಸಲಾಗಿದೆ ಎನ್ನುತ್ತಾರೆ ಸಂಘಗಳ ಪ್ರಮುಖರು.
ಸಂಘದಲ್ಲಿ ದುಡಿಯುವ ಸಿಬ್ಬಂದಿಗೆ ಯೋಗ್ಯ ಸಂಬಳ ನೀಡಿದರೆ ಜಿಲ್ಲೆಯ ಯಾವುದೇ ಸಂಘವೂ ಲಾಭ ಗಳಿಸುವುದು ಸಾಧ್ಯವಿಲ್ಲ. ಅವರಿಗೆ ಕಡಿಮೆ ಸಂಬಳ ನೀಡುವ ಕಾರಣ ಸಂಘದಲ್ಲಿ ಲಾಭ ಕಾಣುವಂತಾಗಿದೆ. ಸತತ ಮೂರು ವರ್ಷ ಲಾಭಾಂಶ ತೋರಿಸದಿದ್ದರೆ ಕಾನೂನಾತ್ಮಕವಾಗಿ ಆ ಸಂಘ ನಡೆಸುವುದು ಕಷ್ಟ. ಹಾಗಾಗಿ ಅನಿವಾರ್ಯವಾಗಿ ಲಾಭಾಂಶ ತೋರಿಸಬೇಕಿದೆ. ಆದರೆ ಇದೇ ಲಾಭಾಂಶ ಶಾಸಕ, ಸಂಸದರ ಅನುದಾನ ಪಡೆಯುವಲ್ಲಿ ತೊಡಕಾಗಿ ಮಾರ್ಪಟ್ಟಿದೆ ಎಂಬುದು ಸಂಘದ ಅಧ್ಯಕ್ಷರೊಬ್ಬರ ಮಾತು.ಈ ಹಿಂದೆ ಹಾಲು ಮಹಾಮಂಡಳದಿಂದ ಜಿಲ್ಲೆಯ ಪ್ರತಿ ನಿರ್ದೇಶಕರಿಗೆ ತಲಾ ಒಂದು ಸ್ವಂತ ಕಟ್ಟಡ ನಿರ್ಮಾಣಕ್ಕೆ ಅನುದಾನ ಸಿಗುತ್ತಿತ್ತು. ಎರಡು ವರ್ಷಗಳಿಂದ ಅದೂ ಸ್ಥಗಿತವಾಗಿದೆ. ಇಡೀ ಜಿಲ್ಲೆಗೆ ಕೇವಲ 1 ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಶಾಸಕ, ಸಂಸದರ ನಿಧಿಯಿಂದ ಹಾಲು ಉತ್ಪಾದಕ ಸಹಕಾರ ಸಂಘದ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ. ಜಿಲ್ಲಾಧಿಕಾರಿ ಈ ವಿಷಯವನ್ನು ಅವಲೋಕಿಸಿ, ಆದ್ಯತೆ ಮೇಲೆ ಇಲ್ಲಿಯೂ ಅನುದಾನ ಕೊಡಿಸಲು ಮುಂದಾಗಬೇಕು ಎಂಬುದು ಹೈನುಗಾರರ ಒತ್ತಾಯವಾಗಿದೆ.
ಸ್ವಂತ ಕಟ್ಟಡ ಇಲ್ಲದ ಹಾಲು ಉತ್ಪಾದಕ ಸಂಘಗಳು ಬಹುತೇಕ ಬಾಡಿಗೆ ಕಟ್ಟಡಗಳನ್ನೇ ಅವಲಂಬಿಸಿವೆ. ಕನಿಷ್ಠ ₹500ನಿಂದ ₹2,500ವರೆಗೆ ಬಾಡಿಗೆ ಪಾವತಿಸುತ್ತಿವೆ.ಜಿಲ್ಲೆಯಲ್ಲಿ ಬಾಡಿಗೆ ಕಟ್ಟಡದಲ್ಲಿರುವ ಸಂಘಗಳು ವಾರ್ಷಿಕ ₹40 ಲಕ್ಷ ಮೊತ್ತವನ್ನು ಬಾಡಿಗೆ ರೂಪದಲ್ಲಿ ಪಾವತಿಸುತ್ತಿವೆ. ಆದರೂ ಕೆಲವೆಡೆ ಬಾಡಿಗೆ ಕಟ್ಟಡಗಳು ಮಳೆಗಾಲದಲ್ಲಿ ಸೋರುತ್ತವೆ. ಹಾಲು ಹಾಕಲು ಬಂದವರಿಗೆ ನಿಲ್ಲಲಾಗದಂತಹ ಇಕ್ಕಟ್ಟಿನ ಸ್ಥಿತಿ ಇದೆ. ಈ ಎಲ್ಲ ಸಮಸ್ಯೆ ನಿವಾರಣೆಗೆ ಹಾಲು ಸಂಘಗಳಿಗೆ ಸ್ವಂತ ಕಟ್ಟಡ ಹೊಂದುವುದು ಅನಿವಾರ್ಯವಾಗಿದೆ.