ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನ ಗ್ರಾಮೀಣ ಪ್ರದೇಶದಿಂದ ಖರೀದಿ ಕೇಂದ್ರಕ್ಕೆ ರಾಗಿ ಮಾರಾಟ ಮಾಡಲು ಬರುವ ರೈತರಿಗೆ ಬಹಳಷ್ಟು ತೊಂದರೆಯಾಗುತ್ತಿದ್ದರೂ ಖರೀದಿ ಕೇಂದ್ರದ ಅಧಿಕಾರಿಗಳು ಮಧ್ಯವರ್ತಿಗಳೊಂದಿಗೆ ಶಾಮೀಲಾಗಿ ಇಬ್ಬಗೆಯ ನೀತಿ ಅನುಸರಿಸುತ್ತಿದ್ದಾರೆ ಎಂದು ರೈತರು ದೂರಿದ್ದಾರೆ.
ರೈತರಿಂದ ರಾಗಿ ಖರೀದಿಸುವ ಸಮಯ ನಿಗಧಿಪಡಿಸಿ ಗುಣಮಟ್ಟದ ಪರೀಕ್ಷೆ ನಡೆಸಲಾಗುತ್ತದೆ. ಆದರೆ, ದಲ್ಲಾಳಿಗಳು ಕಲ್ಲು ಮಣ್ಣುಗಳಿಂದ ಕೂಡಿದ ಚೀಕಲು ರಾಗಿ ತಂದರೂ ಕೂಡ ಯಾವುದೇ ಪರೀಕ್ಷೆ ನಡೆಸದೆ ಚೀಲ ಬದಲಾಯಿಸಿಕೊಂಡು ರೈತರಿಂದ ಪಡೆದ ಗುಣಮಟ್ಟದರಾಗಿ ಚೀಲಗಳ ಜೊತೆಗೆ ಸೇರಿಸಿ ಕಳಪೆ ಗುಣ ಮಟ್ಟದ ರಾಗಿಯನ್ನೂ ಕೂಡ ದಾಸ್ತಾನು ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.ಖರೀದಿ ಕೇಂದ್ರಕ್ಕೆ ರಾಗಿ ಪೂರೈಸಲು ಮೊದಲೇ ನೋಂದಣಿ ಮಾಡಿಸಿಕೊಂಡಿರುವ ರೈತರು ತಮಗೆ ನಿಗಧಿಯಾಗಿರುವ ದಿನಾಂಕದಂದು ಮಾತ್ರ ಖರೀದಿ ಕೇಂದ್ರಕ್ಕೆ ಟ್ರ್ಯಾಕ್ಟರ್ ಅಥವಾ ಗೂಡ್ಸ್ ವಾಹನಗಳಲ್ಲಿ ರಾಗಿ ತುಂಬಿದ ಚೀಲಗಳನ್ನು ತರುತ್ತಾರೆ. ಆದರೆ, ಕೆಲ ಮಧ್ಯವರ್ತಿಗಳು ರೈತರ ಸೋಗಿನಲ್ಲಿ ಪ್ರತಿನಿತ್ಯ ಖರೀದಿ ಕೇಂದ್ರದ ಬಳಿಯೇ ಇದ್ದು ತಾವು ತಂದಿರುವ ರಾಗಿಯನ್ನು ಮಾರಾಟ ಮಾಡುತ್ತಿದ್ದಾರೆ. ಕೂಡಲೇ ಎರಡೂ ರಾಗಿಖರೀದಿ ಕೇಂದ್ರಗಳಿಗೆ ಸಿಸಿ ಕ್ಯಾಮೆರಾ ಅಳವಡಿಸಿ ಮಧ್ಯವರ್ತಿಗಳ ಹಾವಳಿ ತಪ್ಪಿಸಬೇಕು ಎಂದು ರೈತರು ತಾಲೂಕು ಮತ್ತು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಖರೀದಿ ಕೇಂದ್ರಕ್ಕೆ ಸಿಸಿ ಕ್ಯಾಮೆರಾ ಅಳವಡಿಸಬೇಕಿರುವುದು ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಜವಾಬ್ದಾರಿ. ರಾಗಿ ಖರೀದಿಸಲು ನೋಂದಣಿ ಮಾಡುವ ಮತ್ತು ರಾಗಿ ಪಡೆಯುವ ಸಮಯದಲ್ಲಿ ರೈತರಿಂದ ಬಯೋಮೆಟ್ರಿಕ್ ಪಡೆಯುವುದರಿಂದ ಮಧ್ಯವರ್ತಿಗಳು ಯಾರೆಂದು ನಮಗೆ ಗೊತ್ತಾಗುವುದಿಲ್ಲ. ರಾಗಿಯ ಗುಣಮಟ್ಟ ಪರೀಕ್ಷೆ ನಡೆಸುವ ಕುರಿತು ಲೋಪವಿದ್ದಲ್ಲಿ ಸರಿಪಡಿಸಲಾಗುವುದು ಎಂದು ಹೇಳಿದ್ದಾರೆ.
-ಯೋಗೇಶ್, ರಾಗಿ ಖರೀದಿ ಕೇಂದ್ರದ ಗ್ರೇಡರ್.