ಪಂಚ ಗ್ಯಾರಂಟಿಗಳಿಂದ ಕೋಟ್ಯಂತರ ಕುಟುಂಬ ಬಡತನ ರೇಖೆಯಿಂದ ಮೇಲಕ್ಕೆ-ಸಚಿವ ಎಚ್.ಕೆ. ಪಾಟೀಲ

KannadaprabhaNewsNetwork |  
Published : Jan 27, 2024, 01:20 AM ISTUpdated : Jan 27, 2024, 01:21 AM IST
ಸಮಾರಂಭದಲ್ಲಿ ಸಚಿವ ಡಾ. ಎಚ್.ಕೆ.ಪಾಟೀಲ ಮಾತನಾಡಿದರು. | Kannada Prabha

ಸಾರಾಂಶ

ಶೋಷಣೆಗೆ ಒಳಗಾದವರ ಪರ ಗಟ್ಟಿಯಾಗಿ ನಿಂತು ಸಾಮಾಜಿಕ, ಆರ್ಥಿಕ, ನ್ಯಾಯ ನೀಡುವ, ನಾಡಿನ ಜನತೆಯ ದೈನಂದಿನ ಬವಣೆಗಳನ್ನು ನೀಗಿಸಲು ಪಂಚ ಗ್ಯಾರಂಟಿಗಳನ್ನು ಜನತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ನಮ್ಮ ಸರಕಾರ ಜನತೆಗೆ ಕೊಡುವುದರ ಮೂಲಕ ಬಡತನ ರೇಖೆಯಿಂದ ಮೇಲೆತ್ತುವ ದೃಢ ಹೆಜ್ಜೆ ಇಟ್ಟಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಗದಗ: ಬಡವರ, ಅವಕಾಶ ವಂಚಿತರ, ಶೋಷಣೆಗೆ ಒಳಗಾದವರ ಪರ ಗಟ್ಟಿಯಾಗಿ ನಿಂತು ಸಾಮಾಜಿಕ, ಆರ್ಥಿಕ, ನ್ಯಾಯ ನೀಡುವ, ನಾಡಿನ ಜನತೆಯ ದೈನಂದಿನ ಬವಣೆಗಳನ್ನು ನೀಗಿಸಲು ಪಂಚ ಗ್ಯಾರಂಟಿಗಳನ್ನು ಜನತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ನಮ್ಮ ಸರಕಾರ ಜನತೆಗೆ ಕೊಡುವುದರ ಮೂಲಕ ಬಡತನ ರೇಖೆಯಿಂದ ಮೇಲೆತ್ತುವ ದೃಢ ಹೆಜ್ಜೆ ಇಟ್ಟಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ಶುಕ್ರವಾರ ಜರುಗಿದ ಗಣರಾಜ್ಯೋತ್ಸವ ದಿನಾಚರಣೆ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿ, ಐದು ಗ್ಯಾರಂಟಿಗಳನ್ನು ನಮ್ಮ ಗದಗ ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ, ಸಮರ್ಪಕವಾಗಿ, ಸಮರ್ಥವಾಗಿ ಅನುಷ್ಠಾನಗೊಳಿಸಲಾಗಿದೆ. ವಾಸ್ತವಿಕವಾಗಿ ಮಾನವ ಹಕ್ಕುಗಳ ರೀತಿ ನೀಡಿದ ಅತ್ಯಂತ ಕ್ರಾಂತಿಕಾರಕ ಕ್ರಮಗಳಾಗಿವೆ. ಒಂದು ಕೋಟಿ ಕುಟುಂಬಗಳನ್ನು ಬಡತನ ರೇಖೆಯಿಂದ ಮೇಲೆತ್ತಿದ ಈ ಕಾರ್ಯಕ್ರಮಗಳು ಐತಿಹಾಸಿಕ ದಾಖಲೆಯಾಗಿವೆ ಎಂದರು.

ಶಕ್ತಿ ಯೋಜನೆಯುಡಿ ಜಿಲ್ಲೆಯಲ್ಲಿ ಈವರೆಗೆ ಅಂದಾಜು ೩ಕೋಟಿ ೧೨ ಲಕ್ಷ ಮಹಿಳೆಯರು ಯೋಜನೆ ಲಾಭ ಪಡೆದಿರುತ್ತಾರೆ. ಹಸಿವು ಮುಕ್ತ ಕರ್ನಾಟಕ ಮಾಡುವ ದೃಢ ಸಂಕಲ್ಪದೊಂದಿಗೆ ಅನ್ನ ಭಾಗ್ಯ ಯೋಜನೆ ಜಾರಿಗೊಳಿಸಲಾಗಿದೆ. ಜಿಲ್ಲೆಯಲ್ಲಿ ಡಿಸೆಂಬರ್-೨೦೨೩ರ ಮಾಹೆಯಲ್ಲಿ ಜಿಲ್ಲೆಯ ನೋಂದಾಯಿತ ಅರ್ಹ ಒಟ್ಟು ೨,೧೮,೨೭೩ ಅಂತ್ಯೋದಯ ಹಾಗೂ ಬಿ.ಪಿ.ಎಲ್ ಪಡಿತರ ಕುಟುಂಬಗಳ ೭,೪೦,೬೧೪ ಪಡಿತರ ಫಲಾನುಭವಿ ಸದಸ್ಯರುಗಳಿಗೆ ಒಟ್ಟು ರು.೧೧,೯೬,೧೯,೧೪೦ ಗಳನ್ನು ನೇರವಾಗಿ ನಗದು ವರ್ಗಾವಣೆ ಮೂಲಕ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ. ಜಿಲ್ಲೆಯಲ್ಲಿ ಡಿಸೆಂಬರ್-೨೦೨೩ರ ಅಂತ್ಯದ ವರೆಗೆ ಪಡಿತರ ಫಲಾನುಭವಿಗಳ ಖಾತೆಗೆ ಒಟ್ಟು ೬೮,೨೧,೬೭,೬೭೦ ರು. ಗಳನ್ನು ನೇರ ನಗದು ಹಣ ವರ್ಗಾವಣೆ ಮಾಡಲಾಗಿದೆ. ಗೃಹಜ್ಯೋತಿ ಯೋಜನೆಯಡಿ ಜಿಲ್ಲೆಯಲ್ಲಿ ೨,೮೭,೪೭೯ ಗೃಹ ಬಳಕೆ ಸಂಪರ್ಕಗಳಿದ್ದು, ಡಿಸೆಂಬರ್-೨೦೨೩ರ ವರೆಗೆ ೨,೫೭,೬೭೮ ನೋಂದಣಿಯಾಗಿ ಉಚಿತ ವಿದ್ಯುತ್ ಸೌಲಭ್ಯವನ್ನು ಪಡೆದಿದ್ದು ಜಿಲ್ಲೆಯಲ್ಲಿ ಶೇ.೯೬.೪೯ರಷ್ಟು ನೋಂದಣಿ ಆಗಿರುತ್ತದೆ. ಗೃಹಲಕ್ಷ್ಮೀ ಯೋಜನೆಯಡಿ ಜಿಲ್ಲೆಯಲ್ಲಿ ಇಲ್ಲಿಯವರೆಗೆ ೨,೨೧,೪೧೦ ಫಲಾನುಭವಿಗಳು ಗೃಹಲಕ್ಷ್ಮೀ ಯೋಜನೆಯಡಿ ನೋಂದಣಿ ಮಾಡಿಕೊಂಡಿದ್ದು ಪ್ರತಿಶತ ೯೯.೬೪ರಷ್ಟು ಪ್ರಗತಿ ಸಾಧಿಸಲಾಗಿದೆ. ಈವರೆಗೆ ಪ್ರತಿ ತಿಂಗಳು ಅಂದಾಜು ೪೨ ಕೋಟಿ ರು.ಗಳನ್ನು ನೋಂದಾಯಿತ ಕುಟುಂಬದ ಯಜಮಾನಿಯರ ಖಾತೆಗೆ ಜಮೆ ಮಾಡಲಾಗಿದೆ. ಯುವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ ಈ ವರೆಗೆ ೧,೭೭೩ ಅಭ್ಯರ್ಥಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿರುತ್ತಾರೆ ಎಂದರು.

ನವೆಂಬರ್ ೧ರಂದು ನಗರದ ೧೪೫ ಬೀದಿ ಬದಿ ವ್ಯಾಪಾರಸ್ಥರಿಗೆ ಹೈ-ಟೆಕ್ ತಳ್ಳುಗಾಡಿಗಳನ್ನು ವಿತರಿಸಲಾಗಿರುತ್ತದೆ. ಗದಗ ಜಿಲ್ಲೆಯಲ್ಲಿ ಭೀಕರ ಬರಗಾಲದಿಂದ ಉದ್ಯೋಗ ಅರಸಿ ಜನರು ಗುಳೆ ಹೋಗುವುದನ್ನು ತಡೆಯಲು ಮನರೇಗಾ ಯೋಜನೆಯಡಿ ಜಿಲ್ಲೆ ಪ್ರಸಕ್ತ ಸಾಲಿನಲ್ಲಿ ೩೬,೮೧,೦೪೪ ಮಾನವ ದಿನಗಳ ಸೃಜನೆ ಮಾಡಿ ಶೇ.೧೧೫ರಷ್ಟು ಗುರಿ ಸಾಧನೆ ಮಾಡಲಾಗಿದೆ. ಜಲಾನಯನ ಪ್ರದೇಶ ಅಭಿವೃದ್ಧಿ ಬೆಟ್ಟದಿಂದ ಕಣಿವೆಗೆ ತತ್ವದಡಿ ಬದು ನಿರ್ಮಾಣ ಕೃಷಿ ಹೊಂಡ ನಿರ್ಮಾಣ ಹಳ್ಳ ಮತ್ತು ಕೆರೆಗಳ ಅಭಿವೃದ್ಧಿ ಪಡಿಸುವ ಕಾಮಗಾರಿಗಳನ್ನು ಕೈಗೊಳಲಾಗಿದೆ. ಬೇಸಿಗೆಯಲ್ಲಿ ಕೂಲಿಕಾರರಿಗೆ ಕೆಲಸ ನೀಡಲು ಈಗಾಗಲೇ ೧೨೨ ಗ್ರಾಮ ಪಂಚಾಯತಗಳಲ್ಲಿ ಜಲಾನಯನ ತತ್ವದಡಿ ಕ್ರಿಯಾ ಯೋಜನೆಯನ್ನು ತಯಾರಿಸಲಾಗಿದೆ.

ಗದಗ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿ ಆಧುನಿಕ ತಂತ್ರಜ್ಞಾನದ ಮೂಲಕ ಹೃದ್ರೋಗ ಪರೀಕ್ಷೆ ಒದಗಿಸುವ ಕ್ಯಾತ್‌ಲ್ಯಾಬ್ ಘಟಕ ಮಾರ್ಚ್ ಮಧ್ಯಭಾಗದಲ್ಲಿ ಪ್ರಾರಂಭವಾಗಲಿದೆ. ಗದಗ-ಬೆಟಗೇರಿ ಮಧ್ಯಭಾಗದಲ್ಲಿರುವ ಸುಮಾರು ೩೪.೩೨ ಎಕರೆ ವಿಸ್ತೀರ್ಣದ ಭೂಮಿಯಲ್ಲಿ ವ್ಯಾಪಾರ, ಸಂಸ್ಕೃತಿ ಮತ್ತು ವಸ್ತು ಪ್ರದರ್ಶನ ಕೇಂದ್ರ ಸ್ಥಾಪಿಸುವ ಉದ್ದೇಶದಿಂದ ಒಂದು ಶಾಸನಬದ್ಧ ಪ್ರಾಧಿಕಾರವನ್ನು ರಚಿಸಲು ರಾಜ್ಯ ಸಚಿವ ಸಂಪುಟ ಅಂಗೀಕರಿಸಿದೆ ಎಂದರು.

ಗ್ರಾಮ ನ್ಯಾಯಾಲಯ: ಕಾನೂನು ವ್ಯವಸ್ಥೆಯ ನಿರ್ವಹಣೆಯನ್ನು ಸುನಿಶ್ಚಿತಗೊಳಿಸಲು ಬಡವರ, ಗ್ರಾಮೀಣ ಜನತೆಯ ಮನೆಬಾಗಿಲಿಗೆ ನ್ಯಾಯದಾನ ವ್ಯವಸ್ಥೆಯನ್ನು ಕೊಂಡೊಯ್ಯುವ ಉಪಕ್ರಮವಾಗಿ ರಾಜ್ಯದಲ್ಲಿ ೧೦೦ ಹೊಸ ಗ್ರಾಮ ನ್ಯಾಯಾಲಯಗಳನ್ನು ಸ್ಥಾಪಿಸಲು ನಮ್ಮ ಸರ್ಕಾರ ತಾತ್ವಿಕವಾಗಿ ನಿರ್ಧರಿಸಿದೆ. ಈ ಗ್ರಾಮ ನ್ಯಾಯಾಲಯಗಳ ಸ್ಥಾಪನೆಗೆ ಅಗತ್ಯವಿರುವ ವಿವರಗಳನ್ನು ಕರ್ನಾಟಕ ಉಚ್ಚ ನ್ಯಾಯಾಲಯದಿಂದ ಪಡೆದು ೧೦೦ ಗ್ರಾಮ ನ್ಯಾಯಾಲಯಗಳ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಗದಗ ಜಿಲ್ಲೆಯ ೧೦೦ ಗ್ರಾಮಗಳನ್ನು ವ್ಯಾಜ್ಯಮುಕ್ತಗೊಳಿಸಲು ಪ್ರಯತ್ನವನ್ನು ಸಮಾಜದ ಎಲ್ಲಾ ಜವಾಬ್ದಾರಿಯುತ ವ್ಯಕ್ತಿಗಳ ವಿಶೇಷ ಸಹಕಾರದಿಂದ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

ಈ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ೨೦೧೭-೧೮ನೇ ಸಾಲಿನಲ್ಲಿ ಅನುಮೋದನೆಗೊಂಡಂತಹ ಪ.ಜಾ/ಪ.ಪಂಗಡದ ೧೨೭ ಫಲಾನುಭವಿಗಳಿಗೆ ಅಮೃತ ನಗರೋತ್ಥಾನ ಹಂತ-೪ರಲ್ಲಿ ಫಲಾನುಭವಿಗಳ ವಂತಿಕೆ ರು.೬೫,೦೦೦ಗಳನ್ನ ಸಚಿವರು ವಿತರಿಸಿದರು.

ಸಮಾರಂಭದಲ್ಲಿ ವಿಪ ಸದಸ್ಯ ಎಸ್.ವಿ. ಸಂಕನೂರ, ನಗರಸಭೆ ಅಧ್ಯಕ್ಷೆ ಉಷಾ ದಾಸರ, ಉಪಾಧ್ಯಕ್ಷೆ ಸುನಂದಾ ಬಾಕಳೆ, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡರ, ಉಪಅರಣ್ಯ ಸಂರಕ್ಷಣಾಧಿಕಾರಿ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ, ಉಪವಿಭಾಗಾಧಿಕಾರಿ ಡಾ. ವೆಂಕಟೇಶ ನಾಯ್ಕ, ತಹಸೀಲ್ದಾರ ಶ್ರೀನಿವಾಸಮೂರ್ತಿ ಕುಲಕರ್ಣಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು, ಗಣ್ಯರು, ಸಾರ್ವಜನಿಕರು, ವಿದ್ಯಾರ್ಥಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಿಕೆಪಿಎಸ್‌ ಚುನಾವಣೆ: ಮೃತರ ಹೆಸರಲ್ಲಿ ಮತ ಚಲಾವಣೆ
ರೈತರು ಸಾವಯವ ಕೃಷಿಗೆ ಆದ್ಯತೆ ಕೊಡಬೇಕು