ರೋಣ: ವಿದ್ಯಾರ್ಥಿಗಳಲ್ಲಿ ಜ್ಞಾಪಕ ಶಕ್ತಿ ವೃದ್ಧಿಗೆ, ಓದಿರುವ ವಿಷಯ ಸದಾ ಸ್ಮೃತಿ ಪಟಲದ ಸದಾ ಉಳಿಯುವಂತಾಗಲು ಪುನರ್ ಮನನ ಸೂತ್ರ ಅಗತ್ಯವಾಗಿದ್ದು, ವಿದ್ಯಾರ್ಥಿಗಳು ಈ ಸೂತ್ರ ಪಾಲಿಸಬೇಕು ಎಂದು ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಶಿವಕುಮಾರ ಕುರಿಯವರ ಹೇಳಿದರು.
ಅವರು ಸೋಮವಾರ ಪಟ್ಟಣದ ಎಂ.ಎಂ. ವಿದ್ಯಾ ಸಂಸ್ಥೆಯ ಶ್ರೀ ಶಾರದಾ ಬಾಲಕಿಯರ ಪ್ರೌಢಶಾಲೆಯಲ್ಲಿ ಜರುಗಿದ ವಿದ್ಯಾರ್ಥಿಗಳ ಜ್ಞಾಪಕ ಶಕ್ತಿ ಹಾಗೂ ಫಲಿತಾಂಶ ವೃದ್ಧಿಗೆ ಅನುಸರಿಸಬೇಕಾದ ಕ್ರಮಗಳ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.ಪ್ರತಿನಿತ್ಯ ಪುಸ್ತಕ ಓದುವುದರಿಂದ ಜ್ಞಾಪಕ ಶಕ್ತಿ ವೃದ್ಧಿಯಾಗುತ್ತದೆ. ವಿದ್ಯಾರ್ಥಿಗಳು ಶಿಕ್ಷಕರು ಬೋಧಿಸುವ ಪಠ್ಯ ವಿಷಯಗಳನ್ನು ಏಕಚಿತ್ತದಿಂದ ಆಲಿಸುವುದರ ಜೊತೆಗೆ, ಪಾಠ ಗೃಹಿಸಿಕೊಂಡು ನೆನಪಿನಲ್ಲಿಟ್ಟುಕೊಳ್ಳಬೇಕು. ಕಲಿತಿದ್ದು ದೀರ್ಘಕಾಲ ಉಳಿಯಬೇಕಾದಲ್ಲಿ ಪುನರ್ ಮನನ ಮಾಡಿಕೊಳ್ಳಬೇಕು. ಟಿ.ವಿ, ಸಿನಿಮಾ, ಧಾರಾವಾಹಿ ನೋಡಿ ಸಮಯ ವ್ಯರ್ಥ ಮಾಡಿಕೊಳ್ಳದೇ ವಿದ್ಯಾರ್ಜನೆಗೆ ಹೆಚ್ಚಿನ ಗಮನ ಹರಿಸಬೇಕು. ವಿದ್ಯಾರ್ಥಿ ಜೀವನ ಅತ್ಯಂತ ಅಮೂಲ್ಯವಾಗಿದ್ದು, ಶಿಸ್ತು, ಸಂಯಮ, ಸದ್ಗುಣಗಳನ್ನು ಬೆಳೆಸಿಕೊಳ್ಳಬೇಕು. ಉತ್ತಮ ಓದುವಿಕೆ ಪ್ರತಿನಿತ್ಯ ಅಳವಡಿಸಿಕೊಳ್ಳಬೇಕು. ಪರೀಕ್ಷೆ ಸಮೀಪವಿದ್ದಾಗ ಮಾತ್ರ ಓದಿನಲ್ಲಿ ತೊಡಗದೇ, ವರ್ಷಪೂರ್ತಿ ಓದಿನಲ್ಲಿನ ತೊಡಗುವದು ಅತೀ ಮುಖ್ಯವಾಗಿದೆ. ಇದರಿಂದ ಭಯ, ಉದ್ವೇಗವಿಲ್ಲದೇ ಆತಂಕರಹಿತವಾಗಿ ಪರೀಕ್ಷೆ ಬರೆಯಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಜೀವನ ಸಂದರವಾಗಿ ಕಟ್ಟಿಕೊಳ್ಳಲು ವಿದ್ಯಾರ್ಥಿ ದಿಶೆಯಿಂದಲೇ ಪ್ರಯತ್ನಶೀಲರಾಗಬೇಕು ಎಂದು ಸಲಹೆ ನೀಡಿದರು.
ಎಂ.ಎಂ.ವಿದ್ಯಾ ಸಂಸ್ಥೆ ಅಧ್ಯಕ್ಷ ಎಚ್.ಆರ್. ಹೊಸಮನಿ ಮಾತನಾಡಿ, ಕಲಿಸಿದ ಗುರುವಿನ ಶ್ರಮ ಮತ್ತು ಶಿಕ್ಷಣ ಸಂಸ್ಥೆಯ ಉದ್ದೇಶ ಸಾರ್ಥಕವಾಗುವದು ವಿದ್ಯಾರ್ಥಿ ಪರಿಶ್ರಮದ ಮೇಲಿದೆ. ನಾವು ಎಷ್ಟು ಕಲಿತೆವು ಎನ್ನುವದಕ್ಕಿಂತ ಏನನ್ನು ಕಲಿಯಬೇಕು, ಏನನ್ನು ಕಲಿತದ್ದೇವೆ ಎಂಬುದನ್ನು ತಿಳಿದುಕೊಳ್ಳಬೇಕು. ಶಾಲೆ ಕಲಿತಿದ್ದನ್ನು ಮನೆಯಲ್ಲಿಯೂ ಪುನರ್ ಅಭ್ಯಸಿಸಬೇಕು. ಅಂದಾಗ ಕಲಿತಿದ್ದು ಶಾಶ್ವತವಾಗಿ ನೆನಪಿನಲ್ಲಿರುತ್ತದೆ. ವಿದ್ಯಾರ್ಥಿಗಳು ಭವಿಷ್ಯದಲ್ಲಿ ಬದುಕನ್ನು ಸುಂದರವಾಗಿ ಕಟ್ಟಿಕೊಳ್ಳಬೇಕು, ಸಮಾಜಕ್ಕೆ ಸಂಪನ್ಮೂಲ ಹಾಗೂ ಮಾದರಿ ವ್ಯಕ್ತಿಯಾಗಬೇಕು ಎಂಬುದು ಶಿಕ್ಷಣದ ಮೂಲ ಉದ್ದೇಶವಾಗಿದೆ ಎಂದರು.ಈ ವೇಳೆ ಮುಖ್ಯೋಪಧ್ಯಾಯ ಆರ್.ಬಿ. ಮಡಿವಾಳರ, ಐ.ಆರ್. ಕುಲಕರ್ಣಿ, ವ್ಹಿ.ಎಂ. ಬಾವಿ, ಬಸವಣ್ಣೆವ್ವ ಹೊಸಮನಿ,ಎಸ್.ಎಂ. ಪಾಟೀಲ, ವ್ಹಿ.ಡಿ. ಮಾಳಗಿ, ಎಚ್.ಆರ್. ಓಲೇಕಾರ, ಎಂ.ಎಸ್. ಹೊಸಮನಿ, ಮಂಜುಳಾ ಮಡಿವಾಳರ, ಅನ್ನಪೂರ್ಣ ಹೊಸಮನಿ, ಎಸ್.ಡಿ. ಹುಲ್ಲೂರ, ಬಿ.ಎಚ್. ಕೊರ್ಲಹಳ್ಳಿ, ಎಸ್.ಟಿ. ವಾಲ್ಮೀಕಿ, ಎಂ.ಎ.ಬಡೇಖಾನ, ಎಸ್.ಐ.ನೀಲಪ್ಪಗೌಡ್ರ, ಆನಂದ ಹೆಬ್ಬಳ್ಳಿ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.