ಪ್ರವಾಸೋದ್ಯಮ, ಕೈಗಾರಿಕೆಗಳ ಅಭಿವೃದ್ಧಿ : ಚಿಕ್ಕಮಗಳೂರು, ಧರ್ಮಸ್ಥಳ, ಕೊಡಗಲ್ಲಿ ಮಿನಿ ಏರ್‌ಪೋರ್ಟ್‌

KannadaprabhaNewsNetwork |  
Published : Dec 26, 2024, 01:45 AM ISTUpdated : Dec 26, 2024, 04:48 AM IST
ಏರ್‌ಸ್ಟ್ರಿಪ್‌ | Kannada Prabha

ಸಾರಾಂಶ

  ವಿಮಾನ ನಿಲ್ದಾಣಗಳು ಇಲ್ಲದಂತಹ ರಾಜ್ಯದ ಜಿಲ್ಲೆಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯು ಏರ್‌ಸ್ಟ್ರಿಪ್‌ ನಿರ್ಮಾಣಕ್ಕೆ ಮುಂದಾಗಿದೆ. ರಾಜ್ಯದ 3 ಕಡೆ ಏರ್‌ಸ್ಟ್ರಿಪ್‌ ಅಭಿವೃದ್ಧಿಪಡಿಸಲು ಯೋಜನೆ  

 ಬೆಂಗಳೂರು : ಪ್ರವಾಸೋದ್ಯಮ, ಕೈಗಾರಿಕೆಗಳ ಅಭಿವೃದ್ಧಿ ಮತ್ತು ನೈಸರ್ಗಿಕ ವಿಕೋಪ ಸಂದರ್ಭದಲ್ಲಿ ಶೀಘ್ರದಲ್ಲಿ ಪ್ರತಿಕ್ರಿಯಿಸುವ ಸಲುವಾಗಿ ವಿಮಾನ ನಿಲ್ದಾಣಗಳು ಇಲ್ಲದಂತಹ ರಾಜ್ಯದ ಜಿಲ್ಲೆಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯು ಏರ್‌ಸ್ಟ್ರಿಪ್‌ ನಿರ್ಮಾಣಕ್ಕೆ ಮುಂದಾಗಿದೆ. ರಾಜ್ಯದ 3 ಕಡೆ ಏರ್‌ಸ್ಟ್ರಿಪ್‌ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿದ್ದು, ಎರಡು ಜಿಲ್ಲೆಗಳಲ್ಲಿ ಜಾಗವನ್ನೂ ಗುರುತಿಸಿದೆ.

ಸಾರ್ವಜನಿಕ ವಾಯು ಸೇವೆ ನೀಡುವುದಕ್ಕೆ ಬಳಸದೆ ಖಾಸಗಿ ಅಥವಾ ಸರ್ಕಾರಿ ಕಾರ್ಯದ ವಿಮಾನಗಳ ಇಳಿಸುವಿಕೆ ಮತ್ತು ಹಾರಾಟಕ್ಕೆ ಮಾತ್ರ ಬಳಕೆಯಾಗುವಂತೆ ರಾಜ್ಯದ ಮೂರು ಕಡೆ ಏರ್‌ಸ್ಟ್ರಿಪ್‌ ನಿರ್ಮಾಣ ಮಾಡುವ ಕುರಿತು 2023-24ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಅದಕ್ಕೆ ಸಂಬಂಧಿಸಿದಂತೆ ಕೊಡಗು, ಚಿಕ್ಕಮಗಳೂರು ಮತ್ತು ಧರ್ಮಸ್ಥಳದಲ್ಲಿ ಏರ್‌ಸ್ಟ್ರಿಪ್‌ ನಿರ್ಮಾಣಕ್ಕೆ ನಿರ್ಧರಿಸಿ, ಅದಕ್ಕೆ ಅಗತ್ಯವಿರುವ ಭೂಮಿ ಗುರುತು ಸೇರಿದಂತೆ ಇನ್ನಿತರ ಪೂರ್ವಸಿದ್ಧತಾ ಕಾರ್ಯಗಳನ್ನು ಮಾಡಲಾಗುತ್ತಿದೆ.

ಮೂಲಸೌಕರ್ಯ ಇಲಾಖೆ ನೀಡಿರುವ ಮಾಹಿತಿಯಂತೆ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆ ವ್ಯಾಪ್ತಿಯಲ್ಲಿ ಈಗಾಗಲೇ ಅಗತ್ಯ ಭೂಮಿ ಗುರುತಿಸಲಾಗಿದ್ದು, ಧರ್ಮಸ್ಥಳ ಸಮೀಪದಲ್ಲಿ ಸೂಕ್ತ ಜಾಗ ಸಿಗದೆ ಹುಡುಕಾಟ ನಡೆಸಲಾಗುತ್ತಿದೆ.

140 ಎಕರೆ ಭೂಮಿ ಅಗತ್ಯ:

ಏರ್‌ಸ್ಟ್ರಿಪ್‌ ಸಾಮಾನ್ಯವಾಗಿ ದೊಡ್ಡ ಪ್ರಮಾಣದ ಏರ್‌ಪೋರ್ಟ್‌ ರೀತಿ ಇರದೆ, ಕೇವಲ ಒಂದು ರನ್‌ವೇ ಮತ್ತು ಏರ್‌ ಟ್ರಾಫಿಕ್‌ ಕಂಟ್ರೋಲ್‌ ಯುನಿಟ್‌ ಹೊಂದಿರಲಿದೆ. ಹೀಗಾಗಿ ಏರ್‌ಸ್ಟ್ರಿಪ್‌ ನಿರ್ಮಾಣಕ್ಕೆ ಕೇವಲ 140 ಎಕರೆ ಭೂಮಿಯ ಅಗತ್ಯವಿದೆ. ಸದ್ಯದ ಮಾಹಿತಿಯಂತೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಈಗಾಗಲೇ 140 ಎಕರೆ ಭೂಮಿ ಗುರುತಿಸಲಾಗಿದ್ದು, ಅದರಲ್ಲಿ 120.22 ಎಕರೆ ಸರ್ಕಾರಿ ಭೂಮಿ ಮತ್ತು 17.01 ಎಕರೆ ಖಾಸಗಿ ಒಡೆತನದ್ದಾಗಿದೆ. ಅಲ್ಲದೆ, ಖಾಸಗಿ ಒಡೆತನದ ಭೂಮಿ ಸ್ವಾಧೀನಕ್ಕಾಗಿ ಈಗಾಗಲೇ 7 ಕೋಟಿ ರು.ಗಳನ್ನು ಜಿಲ್ಲಾಡಳಿತಕ್ಕೆ ಬಿಡುಗಡೆ ಮಾಡಲಾಗಿದ್ದು, ಇನ್ನೂ 17.06 ಕೋಟಿ ರು. ಅವಶ್ಯಕತೆಯಿದೆ.

ಅದೇ ರೀತಿ ಕೊಡಗು ಜಿಲ್ಲೆಯಲ್ಲಿ ನಿರ್ಮಾಣವಾಗಬೇಕಿರುವ ಏರ್‌ಸ್ಟ್ರಿಪ್‌ಗಾಗಿ ಕುಶಾಲನಗರ, ಅಂದಾನಿಪುರ, ತೊರೆನೂರು ಮತ್ತು 6ನೇ ಹೊಸಕೋಟೆಯಲ್ಲಿ 161 ಎಕರೆ ಭೂಮಿಯನ್ನು ಗುರುತಿಸಲಾಗಿದೆ. ಆ ಭೂಮಿ ಏರ್‌ಸ್ಟ್ರಿಪ್‌ ನಿರ್ಮಾಣಕ್ಕೆ ಸೂಕ್ತವಾಗಿದೆಯೇ ಎಂಬುದನ್ನು ತಿಳಿಯಲು ರಾಜ್ಯ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಎಸ್‌ಐಐಡಿಸಿ)ದ ತಾಂತ್ರಿಕ ತಂಡ ಪರಿಶೀಲನಾ ಕಾರ್ಯ ಕೈಗೊಂಡಿದೆ.

ಉಳಿದಂತೆ ಧರ್ಮಸ್ಥಳದ ಸಮೀಪದಲ್ಲಿ ಏರ್‌ಸ್ಟ್ರಿಪ್‌ ನಿರ್ಮಿಸಲು ಕಲ್ಮಂಜ ಮತ್ತು ಲೈಲಾ ಗ್ರಾಮಗಳ ಬಳಿ ಈ ಹಿಂದೆ ಜಾಗ ಗುರುತಿಸಲಾಗಿತ್ತು. ಆದರೆ, ಕೆಎಸ್‌ಐಐಡಿಸಿಯ ತಾಂತ್ರಿಕ ತಂಡ ಸ್ಥಳ ಪರಿಶೀಲಿಸಿ ಏರ್‌ಸ್ಟ್ರಿಪ್‌ ನಿರ್ಮಾಣಕ್ಕೆ ಅಗತ್ಯವಿರುಷ್ಟು ಜಾಗವಿಲ್ಲ ಎಂದು ವರದಿ ನೀಡಿತ್ತು. ಹೀಗಾಗಿ ಹೊಸದಾಗಿ ಜಾಗ ಗುರುತಿಸುವಂತೆ ಕೆಎಸ್‌ಐಐಡಿಸಿ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ
ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ