ಶಿಲುಬೆ ಬೆಟ್ಟದ ಗಣಿಗಾರಿಕೆಯಿಂದ ಕಾಡಾನೆಗಳ ನೆಮ್ಮದಿಗೆ ಹಾನಿ

KannadaprabhaNewsNetwork |  
Published : Oct 15, 2025, 02:06 AM IST
14ಎಚ್ಎಸ್ಎನ್15 :  | Kannada Prabha

ಸಾರಾಂಶ

ಜನವಸತಿ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ನಡೆಸುತ್ತಿರುವುದನ್ನು ನಿಲ್ಲಿಸಿ ಸಾರ್ವಜನಿಕರಿಗೆ ಹಾಗೂ ಕಾಡು ಪ್ರಾಣಿಗಳಿಗೆ ತೊಂದರೆಯಾಗುವುದನ್ನು ತಪ್ಪಿಸುವಂತೆ ಅರಣ್ಯ ಹಾಗೂ ಕಂದಾಯ ಸಚಿವರನ್ನು ಭೇಟಿ ಮಾಡಿ ಒತ್ತಾಯಿಸಲಾಗುವುದು ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು. ಸಹ ಸಂಬಂಧ ಪಟ್ಟ ಅಧಿಕಾರಿಗಳಾಗಲಿ, ಪೊಲೀಸರಾಗಲಿ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿವೆ. ಇಲ್ಲಿರುವವರೆಲ್ಲರೂ ರೈತಾಪಿ ವರ್ಗದವರಾಗಿದ್ದು, ಈಗಾಗಲೇ ಕಾಡಾನೆ ಸಮಸ್ಯೆಗೆ ಸಿಲುಕಿ ನಲುಗಿ ಹೋಗಿದ್ದಾರೆ. ಈಗ ಇವರ ಜಮೀನಿನಲ್ಲಿ ಗಣಿಗಾರಿಕೆಯ ಪರಿಣಾಮ ಧೂಳು ಹಾಗೂ ತ್ಯಾಜ್ಯ ತುಂಬಿಕೊಂಡು ಬೆಳೆ ಬೆಳೆಯಲಾಗದೆ ಜಮೀನನ್ನು ಹಾಗೆ ಬಿಡಬೇಕಾಗಿದೆ.

ಕನ್ನಡಪ್ರಭ ವಾರ್ತೆ ಆಲೂರು

ಜನವಸತಿ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ನಡೆಸುತ್ತಿರುವುದನ್ನು ನಿಲ್ಲಿಸಿ ಸಾರ್ವಜನಿಕರಿಗೆ ಹಾಗೂ ಕಾಡು ಪ್ರಾಣಿಗಳಿಗೆ ತೊಂದರೆಯಾಗುವುದನ್ನು ತಪ್ಪಿಸುವಂತೆ ಅರಣ್ಯ ಹಾಗೂ ಕಂದಾಯ ಸಚಿವರನ್ನು ಭೇಟಿ ಮಾಡಿ ಒತ್ತಾಯಿಸಲಾಗುವುದು ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.

ತಾಲೂಕಿನ ಕೆಂಚಮ್ಮ ಹೊಸಕೋಟೆ ಹೋಬಳಿಯ ಹೊಸಮಠ ಗ್ರಾಮದಲ್ಲಿರುವ ಶಿಲುಬೆಟ್ಟದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿರುವುದನ್ನು ವಿರೋಧಿಸಿ ಅಕ್ಕಪಕ್ಕದ ಗ್ರಾಮಸ್ಥರು ಕಳೆದ ಹಲವು ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಿದ್ದು, ಈ ಸಂಬಂಧವಾಗಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ನಂತರ ಪತ್ರಿಕೆಯೊಂದಿಗೆ ಮಾತನಾಡಿದರು. ಕಾಡಾನೆಗಳು ವಾಸಿಸುತ್ತಿರುವ ಅತ್ಯಂತ ಸೂಕ್ಷ್ಮ ಪ್ರದೇಶದಲ್ಲಿ ಡೈನಮೈಟ್ ಬಳಸಿ ಕಲ್ಲುಗಣಿಗಾರಿಕೆ ಮಾಡಲು ಅಧಿಕಾರಿಗಳು ಅವಕಾಶ ನೀಡಿದ್ದಾರೆ. ಈ ಕಲ್ಲು ಕ್ವಾರಿ ಪಕ್ಕದಲ್ಲಿ ಜನರು ವಾಸಿಸುತ್ತಿದ್ದ ಹಲವಾರು ಮನೆಗಳಿವೆ. ಡೈನಮೈಟ್ ಸ್ಫೋಟದಿಂದಾಗಿ ಇಲ್ಲಿನ ಮನೆಗಳು ಬಿರುಕು ಬಿಟ್ಟಿದ್ದು, ಈ ಸಂಬಂಧವಾಗಿ ಗ್ರಾಮಸ್ಥರು ಹಲವಾರು ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗದ ಕಾರಣ, ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ. ಅಷ್ಟಾದರೂ ಸಹ ಸಂಬಂಧ ಪಟ್ಟ ಅಧಿಕಾರಿಗಳಾಗಲಿ, ಪೊಲೀಸರಾಗಲಿ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿವೆ. ಇಲ್ಲಿರುವವರೆಲ್ಲರೂ ರೈತಾಪಿ ವರ್ಗದವರಾಗಿದ್ದು, ಈಗಾಗಲೇ ಕಾಡಾನೆ ಸಮಸ್ಯೆಗೆ ಸಿಲುಕಿ ನಲುಗಿ ಹೋಗಿದ್ದಾರೆ. ಈಗ ಇವರ ಜಮೀನಿನಲ್ಲಿ ಗಣಿಗಾರಿಕೆಯ ಪರಿಣಾಮ ಧೂಳು ಹಾಗೂ ತ್ಯಾಜ್ಯ ತುಂಬಿಕೊಂಡು ಬೆಳೆ ಬೆಳೆಯಲಾಗದೆ ಜಮೀನನ್ನು ಹಾಗೆ ಬಿಡಬೇಕಾಗಿದೆ.

ಗ್ರಾಮಸ್ಥರು ಹಾಗೂ ಕಾಡುಪ್ರಾಣಿಗಳಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಪರ್ಯಾಯ ಜಾಗದಲ್ಲಿ ಅವರಿಗೆ ಗಣಿಗಾರಿಕೆ ನೀಡಿದರೆ ನಮ್ಮದೇನೂ ತಕರಾರಿಲ್ಲ. ಆದರೆ ಇಲ್ಲಿ ಪುನಃ ಗಣಿಗಾರಿಕೆಗೆ ಅವಕಾಶ ನೀಡಬಾರದು. ಈಗ ನಾವು ಎಚ್ಚರಿಕೆ ನೀಡುತ್ತಿದ್ದೇವೆ. ಇಲ್ಲಿನ ಸಮಸ್ಯೆಗೆ ಪರಿಹಾರ ಕಲ್ಪಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದೆಂದು ಎಚ್ಚರಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಬಾಬು ಮಾತನಾಡಿ, ಈ ಭಾಗದಲ್ಲಿ ಅಕ್ರಮ ಗಣಿಗಾರಿಕೆಯಿಂದಾಗಿ ಹಲವಾರು ಮನೆಗಳಿಗೆ ಹಾನಿ ಉಂಟಾಗಿದೆ. ಕಾಡುಪ್ರಾಣಿಗಳು ಸ್ಫೋಟಕಗಳ ಶಬ್ಧಕ್ಕೆ ಹೆದರಿ ಗ್ರಾಮಗಳಿಗೆ ನುಗ್ಗುತ್ತಿವೆ. ಇಲ್ಲಿಯ ಗಣಿಗಾರಿಕೆಯನ್ನು ನಿಲ್ಲಿಸಬೇಕೆಂದು ಒತ್ತಾಯಿಸಿ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ನಾವು ಹೋರಾಟದ ಹಾದಿ ಹಿಡಿಯಬೇಕಾಗಿದೆ. ರಾಜ್ಯಾಧ್ಯಕ್ಷರು ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಶೀಘ್ರ ಸಂಬಂಧಪಟ್ಟ ಸಚಿವರನ್ನು ಭೇಟಿ ಮಾಡಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಸೂಚಿಸುವುದಾಗಿ ತಿಳಿಸಿದ್ದಾರೆ. ಸಂಬಂಧಪಟ್ಟ ಸಚಿವರು ಏನು ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡುತ್ತೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯ ಸಂಚಾಲಕ ಮಹಮ್ಮದ್ ಸಾದಿಕ್, ಕರವೇ ಜಿಲ್ಲಾ ಉಪಾಧ್ಯಕ್ಷ ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಅರುಣ ಭಾಸ್ಕರ್‌, ಆಲೂರು ತಾಲೂಕು ಅಧ್ಯಕ್ಷ ರಾಘವೇಂದ್ರ, ಸಕಲೇಶಪುರ ತಾಲೂಕ್ ಅಧ್ಯಕ್ಷ ರಮೇಶ್ ಪೂಜಾರಿ, ದುದ್ದ ರೇವಣ್ಣ, ಸತೀಶ್ ದುದ್ದ, ಮಂಜೇಗೌಡ, ಸಂಜು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

PREV

Recommended Stories

ಮರಳು ದಂಧೆ ತಡೆದ ಎಎಸ್‌ಐಗೆ ಹಲ್ಲೆ: ರಾಜೂಗೌಡ
ನಟ ದರ್ಶನ್‌ ಸೆಲ್‌ ಪರಿಶೀಲನೆ ನಡೆಸಿದ ಕಾನೂನು ಪ್ರಾಧಿಕಾರ