ವಿಸಿ ಸಂಪರ್ಕ ಸುರಂಗ ನಾಲೆ ಬಳಿ ಗಣಿಗಾರಿಕೆ, ಬ್ಲಾಸ್ಟಿಂಗ್ ಆತಂಕ

KannadaprabhaNewsNetwork |  
Published : Oct 10, 2025, 01:00 AM IST
8ಕೆಎಂಎನ್ ಡಿ21 | Kannada Prabha

ಸಾರಾಂಶ

ಕೆಲ ದಿನಗಳ ಹಿಂದೆ ಇಲ್ಲಿನ ಹೋರಾಟಗಾರರು ನೀರಾವರಿ ನಿಗಮದ ಅಧಿಕಾರಿಗಳನ್ನು ಭೇಟಿ ಮಾಡಿ ವಿಸಿ ಸಂಪರ್ಕ ಸುರಂಗ ನಾಲೆ ಬಳಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಗಳ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದರು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ತಾಲೂಕಿನ ಚೆನ್ನನಕೆರೆ ಮತ್ತು ಆಲಗೂಡು ಗ್ರಾಮಗಳ ನಡುವಿನ ವಿಸಿ ಸಂಪರ್ಕ ಸುರಂಗ ನಾಲೆ ಬಳಿ ಅಕ್ರಮವಾಗಿ ತಲೆಯೆತ್ತಿರುವ ಗಣಿಗಾರಿಕೆಗಳ ಬ್ಲಾಸ್ಟಿಂಗ್‌ ಆತಂಕದಿಂದ ರೈತರು, ಹೋರಾಟಗಾರರು ನೀಡಿದ ದೂರಿನ ಮೇರೆಗೆ ಅಧಿಕಾರಗಳ ತಂಡ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದೆ.

ಕೆಲ ದಿನಗಳ ಹಿಂದೆ ಇಲ್ಲಿನ ಹೋರಾಟಗಾರರು ನೀರಾವರಿ ನಿಗಮದ ಅಧಿಕಾರಿಗಳನ್ನು ಭೇಟಿ ಮಾಡಿ ವಿಸಿ ಸಂಪರ್ಕ ಸುರಂಗ ನಾಲೆ ಬಳಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಗಳ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ನೀರಾವರಿ ನಿಗಮದ ಎಇ ವಾಸುದೇವ ಅವರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ದೂರು ರವಾನಿಸಿದ್ದರಿಂದ ಹಿರಿಯ ಅಧಿಕಾರಿ ಪುಷ್ಪ ನೇತೃತ್ವದ ತಂಡ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಸುರಂಗ ನಾಲೆಯ ಅಕ್ಕಪಕ್ಕದಲ್ಲಿ ನಡೆಯುತ್ತಿರುವ ಕ್ರಷರ್ ಮತ್ತು ಕ್ವಾರಿಗಳ ದಾಖಲಾತಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ಕ್ವಾರಿಗಳಲ್ಲಿ ಬ್ಲಾಸ್ಟಿಂಗ್ ನಡೆಸುತ್ತಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಪೊಲೀಸ್‌ ಇಲಾಖೆಗೆ ಸೂಚನೆ ನೀಡುವುದಾಗಿ ತಿಳಿಸಿದರು.

ನೀರಾವರಿ ನಿಗಮದ ಎಇ ವಾಸುದೇವ ಮಾತನಾಡಿ, ಈ ಭಾಗದಲ್ಲಿ ಸುಮಾರು 1.3 ಕಿಮೀ ವರೆಗೂ ಸುರಂಗದ ಮೂಲಕವೇ ಹಾದು ಹೋಗುವ ವಿಸಿ ಸಂಪರ್ಕ ನಾಲೆಯು ಸುಮಾರು 70 ಸಾವಿರ ಎಕ್ಕರೆ ಪ್ರದೇಶದ ಜಮೀನುಗಳ ಕೃಷಿ ಚಟುವಟಿಕೆಗಳಿಗೆ ಆಧಾರಸ್ತಂಬವಾಗಿದೆ.

ಇಲ್ಲಿನ ಕ್ವಾರಿ ಮತ್ತು ಕ್ರಷರ್‌ಗಳಲ್ಲಿ ನಡೆಯುತ್ತಿರುವ ಬ್ಲಾಸ್ಟ್ ನಿಂದಾಗಿ ಸುರಂಗ ಕುಸಿಯುವ ಸಾಧ್ಯತೆಯಿದೆ. ಹಾಗಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ದೂರು ನೀಡಲಾಗಿದೆ. ನಾಲೆ ರಕ್ಷಣೆಗಾಗಿ ಅಗತ್ಯ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜೇಶ್‌ಗೌಡ ಮಾತನಾಡಿ, ಜಿಲ್ಲೆ ಹಾಗೂ ಹೊರ ಜಿಲ್ಲೆಯ ಮಳವಳ್ಳಿ ಹಾಗೂ ತಿ.ನರಸಿಪುರ ಸೇರಿದಂತೆ ಇತರೆ ಭಾಗದ ಸುಮಾರು 70 ಸಾವಿರ ಎಕರೆ ಪ್ರದೇಶದ ರೈತರ ಜಮೀನುಗಳಿಗೆ ನೀರಿಣುಸುವ ನಾಲೆ ಇದಾಗಿದೆ.

ಈ ಭಾಗದಲ್ಲಿ ಪ್ರಭಾವಿಗಳು ಹಾಗೂ ರಾಜಕೀಯ ನಾಯಕರು ಹಾಗೂ ಅವರ ಹಿಂಬಾಲಕರು ಕ್ರಷರ್ ಮತ್ತು ಕ್ವಾರಿಗಳನ್ನು ನಡೆಸುತ್ತಿದ್ದಾರೆ. ಎಗ್ಗಿಲ್ಲದೆ ಬ್ಲಾಸ್ಟಿಂಗ್ ಮಾಡುವ ಮೂಲಕ ಸುರಂಗದ ನಾಲೆಗೆ ಕಂಟಕವಾಗಿದ್ದಾರೆ. ಅಧಿಕಾರಿಗಳು ಸ್ಥಳ ಪರಿಶೀಲನೆಗೆ ಬರುವ ಮಾಹಿತಿ ಮೊದಲೇ ತಿಳಿದು ರಸ್ತೆಗೆ ಮಣ್ಣು ಸುರಿದು ಒಳಹೋಗದಂತೆ ಮಾಡಿದ್ದಾರೆ.

ಅಲ್ಲದೇ, ಸ್ಥಳೀಯ ಗ್ರಾಮಲೆಕ್ಕಿಗರನ್ನು ಕೇಳಿದರೆ ನಮಗೆ ಮಾಹಿತಿಯೇ ಇಲ್ಲ ಎನ್ನುವ ಮೂಲಕ ಅಧಿಕಾರಿಗಳು ಪ್ರಭಾವಿಗಳ ಒತ್ತಡಕ್ಕೆ ಮಣಿಯದೆ ನಾಲೆ ಸಂರಕ್ಷಣೆಗೆ ಮುಂದಾಗುವುದರ ಜೊತೆಗೆ ಅಕ್ರಮ ಗಣಿಗಾರಿಕೆಯನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಕಾರ್ಯಾಚರಣೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಜೊತೆಯಲ್ಲಿದ್ದರು. ಈ ವೇಳೆ ಸ್ಥಳೀಯರಾದ ಗಂಜಾಂ ರವಿಚಂದ್ರ, ಕಾಳೇನಹಳ್ಳಿ ಮಹೇಶ್, ಕೋಡಿಶೆಟ್ಟಿಪುರ ತೇಜಸ್, ಅಲ್ಲಾಪಟ್ಟಣ ಸಿದ್ದೇಗೌಡ ಸೇರಿದಂತೆ ಇತರರು ಇದ್ದರು.

------------

8ಕೆಎಂಎನ್ ಡಿ21

ಶ್ರೀರಂಗಪಟ್ಟಣ ತಾಲೂಕಿನ ಚೆನ್ನನಕೆರೆ ಮತ್ತು ಆಲಗೂಡು ಗ್ರಾಮಗಳ ನಡುವಿನ ವಿಸಿ ಸಂಪರ್ಕ ಸುರಂಗ ನಾಲೆ ಬಳಿ ಅಕ್ರಮ ಗಣಿಗಾರಿಕೆಗಳ ಸ್ಥಳಕ್ಕೆ ಅಧಿಕಾರಗಳ ತಂಡ ತೆರಳಿ ಪರಿಶೀಲನೆ ನಡೆಸಿದರು.

PREV

Recommended Stories

ಸಂಪುಟ ಪುನರ್‌ ರಚನೆ ಸುಳಿವು : ದಲಿತ ಸಚಿವರ ಸಭೆ!
ಶೂದ್ರ ಶ್ರೀನಿವಾಸ್‌ ಸೇರಿ ಐವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ