ಸಂಡೂರು: ಸಂಡೂರಿನ ಇತಿಹಾಸ ಹಾಗೂ ಪುರಾಣ ಪ್ರಸಿದ್ಧ ಹಾಗೂ ಕೇಂದ್ರ ಪುರಾತತ್ವ ಇಲಾಖೆಯಿಂದ ಸಂರಕ್ಷಿತ ಸ್ಮಾರಕ ಎಂದು ಘೋಷಿಸಲ್ಪಟ್ಟಿರುವ ಶ್ರೀಕುಮಾರಸ್ವಾಮಿ ದೇವಸ್ಥಾನದ ಸನಿಹದಲ್ಲಿ ಗಣಿಗಾರಿಕೆಗೆ ಅನುಮತಿ ನೀಡುವ ಪ್ರಸ್ತಾವಕ್ಕೆ ಸಂಬಂಧಿಸಿದಂತೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಈ ಕುರಿತಂತೆ ವಿವರಣೆ ಕೇಳಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ, ರಾಜ್ಯ ಗಣಿ ಮತ್ತು ಭೂವಿಜ್ಞಾನ ಇಲಾಖೆ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ರಾಜ್ಯ ಪರಿಸರ ಮತ್ತು ಅರಣ್ಯ ಸಚಿವಾಲಯ, ಆರ್ಕಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ ಮತ್ತು ಜಿಲ್ಲಾಧಿಕಾರಿಗಳಿಗೆ ನೋಟಿಸ್ ನೀಡಿದೆ.
ಶ್ರೀ ಕುಮಾರಸ್ವಾಮಿ ದೇವಸ್ಥಾನದ ಬಳಿಯಲ್ಲಿ ೨೮,೨೯೯ ಹೆಕ್ಟೇರ್ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ತಾತ್ವಿಕ ಅನುಮೋದನೆ ನೀಡುವಂತೆ ರಾಜ್ಯ ಅರಣ್ಯ ಇಲಾಖೆ ಕೇಂದ್ರ ಪರಿಸರ ಸಚಿವಾಲಯಕ್ಕೆ ಮೇ ೧೭ರಂದು ಪ್ರಸ್ತಾವ ಸಲ್ಲಿಸಿತ್ತು.ಈ ದೇವಸ್ಥಾನದ ೨ ಕಿಮೀ ಸುತ್ತ ಗಣಿಗಾರಿಕೆಗೆ ಅನುಮತಿ ನೀಡಬಾರದು. ಅನುಮತಿ ನೀಡಿದರೆ, ಗಣಿಗಾರಿಕೆಯಿಂದ ದೇವಸ್ಥಾನಕ್ಕೆ ಮತ್ತು ಸುತ್ತಲಿನ ಪರಿಸರ ಹಾಗೂ ಜೀವ ವೈವಿಧ್ಯಕ್ಕೆ ತೊಂದರೆಯಾಗಲಿದೆ ಎಂದು ಆರೋಪಿಸಿ ಜನ ಸಂಗ್ರಾಮ ಪರಿಷತ್ ಸಂಘಟನೆ ಮುಖಂಡರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಕೊಟ್ಟೂರಿನ ಪರಿಸರವಾದಿಗಳಾದ ಡಾ. ಸದಾನಂದ ಹೆಗ್ಡಾಳಮಠ ಅವರು ಆ. ೨೮ರಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಅಧ್ಯಕ್ಷರು ಹಾಗೂ ಸದಸ್ಯರಿಗೂ ಪತ್ರ ಬರೆದು, ಸ್ವಯಂ ಪ್ರೇರಿತ ದೂರನ್ನು ದಾಖಲಿಸಿಕೊಂಡು, ಸಂಡೂರು ಭಾಗದಲ್ಲಿನ ಪರಿಸರ ನಾಶವನ್ನು ತಪ್ಪಿಸಲು ಹಾಗೂ ಇಲ್ಲಿನ ವರ್ಜಿನ್ ಅರಣ್ಯ ಸಂರಕ್ಷಣೆಗೆ ಸೂಕ್ತ ಕ್ರಮಕೈಗೊಳ್ಳುವಂತೆ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ.ಸಂಡೂರಿನ ಶ್ರೀಕುಮಾರಸ್ವಾಮಿ ದೇವಸ್ಥಾನ ಹಾಗೂ ಅದರ ಸುತ್ತಲಿನ ಜೀವ ವೈವಿಧ್ಯ ಮತ್ತು ಪರಿಸರ ಸಂರಕ್ಷಣೆಯ ವಿಷಯ ಇದೀಗ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ, ಹೈಕೋರ್ಟ್ ಹಂತಕ್ಕೆ ತಲುಪಿದ್ದರಿಂದ, ದೇವಸ್ಥಾನ ಮತ್ತು ಅದರ ಸುತ್ತಲಿನ ಪರಿಸರ ಸಂರಕ್ಷಣೆಗಾಗಿ ನಡೆಯುತ್ತಿರುವ ಹೋರಾಟ ಮಹತ್ವದ ಘಟ್ಟವನ್ನು ತಲುಪಿದಂತಾಗಿದೆ. ಇದಕ್ಕೊಂದು ತಾರ್ಕಿಕ ಅಂತ್ಯ ಹಾಗೂ ಪರಿಸರ ಸಂರಕ್ಷಣೆಗೆ ಪೂರಕವಾದ ಆದೇಶ ಹೊರಬೀಳಬಹುದೆಂಬ ಆಶಯ ಇಲ್ಲಿನ ಪರಿಸರ ಹೋರಾಟಗಾರರಲ್ಲಿ ಮೂಡಿದೆ.