ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ: ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಸುರೇಶ್‌ ಭರವಸೆ

KannadaprabhaNewsNetwork | Published : Dec 19, 2023 1:45 AM

ಸಾರಾಂಶ

ಮಕ್ಕಳನ್ನು ಮಲಗುಂಡಿಗೆ ಇಳಿಸಿದ ಮೊರಾರ್ಜಿ ಶಾಲೆಗೆ ಭೇಟಿ ನೀಡಿ ಸಚಿವ ಭೈರತಿ ಸುರೇಶ್‌ ಪರಿಶೀಲನೆ, ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಖಚಿತ: ಭರವಸೆ

ಕನ್ನಡಪ್ರಭ ವಾರ್ತೆ ಮಾಲೂರು

ಮಕ್ಕಳನ್ನು ಮಲಗುಂಡಿಗೆ ಇಳಿಸಿರುವ ಇಲ್ಲಿನ ಅಧಿಕಾರಿಗಳ ವರ್ತನೆ ಖಂಡನೀಯ. ದುಡ್ಡು ಉಳಿಸಲು ಹೋಗಿ ಮಕ್ಕಳನ್ನು ದುರ್ಬಳಕೆ ಮಾಡಿಕೊಂಡ ಆರೋಪಿಗಳ ವಿರುದ್ಧ ರಾಜ್ಯದಲ್ಲೇ ಮಾದರಿಯಾಗುವಂತಹ ಶಿಕ್ಷೆ ನೀಡಲಾಗುವುದು ಎಂದು ಉಸ್ತುವಾರಿ ಸಚಿವ ಭೈರತಿ ಸುರೇಶ್ ಹೇಳಿದರು.

ಅವರು ತಾಲೂಕಿನ ಯಲುವಹಳ್ಳಿ ಗ್ರಾಮದಲ್ಲಿರುವ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ದಲಿತ ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣ ಸಂಬಂಧಿಸಿದಂತೆ ಸ್ಥಳ ಪರಿಶೀಲನೆ ನಡೆಸಿದ ಸಚಿವರು, ಪತ್ರಕರ್ತರೂಡನೆ ಮಾತನಾಡಿ, ಮುಖ್ಯಮಂತ್ರಿಗಳು ಈಗಾಗಲೇ ಈ ಘಟನೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ ಎಂದರು.

ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ

ಈಗಾಗಲೇ ಪ್ರಿನ್ಸಿಪಾಲ್ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ಡಿ.೧ ರಂದು ನೆಡೆದಿದ್ದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಈ ಬಗ್ಗೆ ತನಿಖೆ ನಡೆಸಲಾಗುವುದು. ಈ ಪ್ರಕರಣ ವೈರಲ್ ಆಗಿ ಗಮನಕ್ಕೆ ಬಂದ ತಕ್ಷಣ ಇಲ್ಲಿನ ಶಾಸಕ ನಂಜೇಗೌಡ ಅವರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ ಎಂದ ಉಸ್ತುವಾರಿ ಸಚಿವರು ಇಲ್ಲಿ ಯಾವುದೇ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಇಲ್ಲಿನ ಶಿಕ್ಷಕ ವರ್ಗದಲ್ಲಿ ಎರಡು ಗುಂಪುಗಳಾಗಿದ್ದು, ಅಡುಗೆ ಡಿ.ಗ್ರೊಪ್ ನೌಕರರು ಸೇರಿದಂತೆ ಎಲ್ಲರನ್ನೂ ವರ್ಗಾವಣೆ ಮಾಡಲಾಗುವುದು ಎಂದರು.

ಶಾಸಕ ನಂಜೇಗೌಡ ಹೇಳಿಕೆ

ಶಾಸಕ ನಂಜೇಗೌಡ ಮಾತನಾಡಿ, ಮೊಬೈಲ್ ಗಳಲ್ಲಿ ಪ್ರಕರಣ ವೈರಲ್ ಆದ ತಕ್ಷಣ ವಸತಿ ಶಾಲೆಗೆ ಬಂದು ಮಕ್ಕಳ ಹಾಗೂ ಪ್ರಾಂಶುಪಾಲೆ ಜತೆ ಪ್ರತ್ಯೇಕವಾಗಿ ಸಭೆ ನಡೆಸಿದ್ದೇನೆ. ಅಂದಿನ ಸಭೆಯಲ್ಲಿ ಮಕ್ಕಳು ಯಾವುದೇ ಆರೋಪ ಮಾಡಲಿಲ್ಲ. ಆಗ ಪ್ರಿನ್ಸಿಪಾಲ್ ಹೇಳಿಕೆಯನ್ನು ಮಾತ್ರ ಪಡೆದಿದ್ದೆ. ಬಳಿಕ ತಾವು ಹೇಳಿದ ಮೇಲೆ ಶಿಕ್ಷಕರನ್ನು ಅಮಾನತು ಮಾಡಲಾಗಿದ್ದು, ಪ್ರಕರಣ ಮುಚ್ಚಿಹಾಕುವ ಯಾವ ಪ್ರಯತ್ನ ಮಾಡಿಲ್ಲ ಎಂದರು.ಶಿರ್ಷಿಕೆ-೧೮ಕೆ.ಎಂ.ಎಲ್.ಅರ್.೨------ ಯಲುವಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಸುರೇಶ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

Share this article