ಕನ್ನಡಪ್ರಭ ವಾರ್ತೆ ನಾಗಮಂಗಲ
ಚುನಾವಣೆಗೋಸ್ಕರ ಜಾತಿ ಧರ್ಮಗಳನ್ನು ಎತ್ತಿ ಕಟ್ಟುವುದು ಬಿಜೆಪಿ ಮತ್ತು ಜೆಡಿಎಸ್ ಪಕ್ಷದವರ ಕೆಲಸ. ಎಲ್ಲ ಜಾತಿ ಧರ್ಮಗಳ ಸೇವೆ ಮಾಡುವುದು ಕಾಂಗ್ರೆಸ್ ಪಕ್ಷ ಮಾತ್ರ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.
ತಾಲೂಕಿನ ಬೆಳ್ಳೂರು ಪಟ್ಟಣದಲ್ಲಿ 1.5 ಕೋಟಿ ರು. ವೆಚ್ಚದ ಮೂಲಸಿದ್ದೇಶ್ವರಸ್ವಾಮಿ ದೇವಸ್ಥಾನ ಮತ್ತು ಆದಿಮಾಧವರಾಯ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿ ಹಾಗೂ ಉಮ್ಮರ್‌ನಗರದಲ್ಲಿ 3 ಕೋಟಿ ರು. ವೆಚ್ಚದ ಕಾಂಕ್ರಿಟ್ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಕಾಂಗ್ರೆಸ್ ಸರ್ಕಾರ ನೀಡುತ್ತಿರುವ 5 ಗ್ಯಾರಂಟಿ ಯೋಜನೆಗಳು ರಾಜ್ಯದ ಎಲ್ಲ ಜಾತಿ ವರ್ಗಗಳ ಜನರಿಗೆ ತಲುಪುತ್ತಿವೆ. ಆದರೆ ವಿಪಕ್ಷದವರು ಒಂದು ಜಾತಿ ಹೆಸರು ಹೇಳಿದರೆ ಹಿಂದೂಗಳು ಹತ್ತಿರವಾಗುತ್ತಾರೆ ಎಂದುಕೊಂಡಿದ್ದಾರೆ ಎಂದರು.
ಹಿಂದೂ ಮುಸ್ಲಿಂ ಕ್ರೈಸ್ತ ಸೇರಿದಂತೆ ಎಲ್ಲಾ ಸಮುದಾಯ ಒಂದೇ ಎಂದು ಕುವೆಂಪು ಮಹಾತ್ಮ ಗಾಂಧಿ ಅವರು ಹೇಳಿರುವಂತೆ ಕಾಂಗ್ರೆಸ್ ಪಕ್ಷ ಯಾವುದೇ ಜಾತಿ ಅಥವಾ ಸಮಾಜವನ್ನು ವಿಂಗಡಿಸದೆ ಎಲ್ಲರ ಸೇವೆ ಮಾಡುವುದು ನಮ್ಮ ಕರ್ತವ್ಯ ಎಂದು ಭಾವಿಸಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ನಾಗಮಂಗಲ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರದ ವತಿಯಿಂದ 150 ಕೋಟಿ ರು. ಹಣ ಮಂಜೂರಾಗಿದೆ.
3 ಕೋಟಿ ರು. ವೆಚ್ಚದಲ್ಲಿ ಬೆಳ್ಳೂರು ಪಟ್ಟಣದ ಉಮ್ಮರ್‌ನಗರದ ರಸ್ತೆ ಮತ್ತು ಚರಂಡಿ ಅಭಿವೃದ್ಧಿಗೆ ಪ್ರಥಮವಾಗಿ ಭೂಮಿ ಪೂಜೆ ಮಾಡಲಾಗಿದೆ ಎಂದು ತಿಳಿಸಿದರು.
ಬೆಳ್ಳೂರು ಪಟ್ಟಣ ಹಾಗೂ ಪಪಂ ವ್ಯಾಪ್ತಿಯ ಎಲ್ಲಾ ಹಳ್ಳಿಗಳ ರಸ್ತೆ, ಚರಂಡಿ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಮುಂದಿನ ಎರಡು ತಿಂಗಳ ನಂತರ 10 ಕೋಟಿ ರು. ವಿಶೇಷ ಅನುದಾನವನ್ನು ಬಿಡುಗಡೆ ಮಾಡಿಸಲಾಗುವುದು ಎಂದು ಹೇಳಿದರು.
ಬಳಿಕ ಬೆಳ್ಳೂರು ಪಪಂ ಆವರಣದಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಆಯ್ದ ರೈತ ಫಲಾನುಭವಿಗಳಿಗೆ ರಸಗೊಬ್ಬರ ಸೇರಿದಂತೆ ವಿವಿಧ ಸವಲತ್ತುಗಳನ್ನು ಸಚಿವರು ವಿತರಿಸಿದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಚ್.ಟಿ. ಕೃಷ್ಣೇಗೌಡ, ತಾಪಂ ಮಾಜಿ ಅಧ್ಯಕ್ಷ ಮೂಡ್ಲೀಗೌಡ, ಮಾಜಿ ಸದಸ್ಯ ವೆಂಕಟೇಶ್, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ವಿ.ದಿನೇಶ್, ಪಪಂ ಸದಸ್ಯರಾದ ಲ್ಯಾಬ್ ಮಂಜು, ಯಾಸಿನ್, ಮನ್‌ಮುಲ್ ನಿರ್ದೇಶಕರಾದ ಲಕ್ಷ್ಮೀನಾರಾಯಣ, ಮರಿಸ್ವಾಮಿ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ತಟ್ಟಹಳ್ಳಿ ನರಸಿಂಹಮೂರ್ತಿ, ಮುಖಂಡರಾದ ಪಾಪಣ್ಣ, ಶಿವಣ್ಣ, ವಿಜಯ್, ಸಮರ್ಥ್, ನರೇಶ್, ದೇವಲಾಪುರ ಸುರೇಶ್, ಸುನಿಲ್ ಸೇರಿದಂತೆ ಪಟ್ಟಣ ಪಂಚಾಯ್ತಿ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.