ಜಿಲ್ಲೆಯಲ್ಲಿ ನೂತನ 10 ಸಾರಿಗೆ ಬಸ್‌ಗಳಿಗೆ ಸಚಿವ ಚಲುವರಾಯಸ್ವಾಮಿ ಚಾಲನೆ

KannadaprabhaNewsNetwork | Published : Mar 4, 2024 1:16 AM

ಸಾರಾಂಶ

ಜಿಲ್ಲೆಯಾದ್ಯಂತ ಹಾಗೂ ಹೊರ ಜಿಲ್ಲೆ, ರಾಜ್ಯಗಳಿಗೆ ಮಂಡ್ಯ ನಗರದಿಂದ ಸಂಚರಿಸಲು ಇನ್ನೂ 50ರಿಂದ 100 ಬಸ್‌ಗಳ ಅವಶ್ಯಕತೆ ಇದೆ. ಹೆಚ್ಚುವರಿ ಬಸ್‌ಗಳನ್ನು ಕಲ್ಪಿಸುವಂತೆ ಕೆಎಸ್ಆರ್‌ಸಿ ನಿಗಮಕ್ಕೆ ಮನವಿ ಮಾಡಲಾಗಿದೆ. ಎಲ್ಲೆಲ್ಲಿ ಜನರಿಗೆ ಬಸ್‌ಗಳ ಕೊರತೆ ಇದೆ. ಅಲ್ಲಿಗೆ ಹಂತ ಹಂತವಾಗಿ ಬಸ್‌ಗಳ ಸೇವೆ ಒದಗಿಸಲಾಗುವುದು. ಜಿಲ್ಲೆಯಲ್ಲಿ ಸಾರಿಗೆ ಬಸ್‌ಗಳು ಪ್ರತಿ ನಿತ್ಯ 1.65 ಲಕ್ಷ ಕಿ.ಮೀ ಕ್ರಮಿಸಿ 73.09 ಲಕ್ಷ ರು. ಆದಾಯ ಗಳಿಸುತ್ತಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಗ್ರಾಮೀಣ ಭಾಗದ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳ ಸಮಸ್ಯೆ ಗಮನದಲ್ಲಿಟ್ಟುಕೊಂಡು ಜಿಲ್ಲಾದ್ಯಂತ ಸಂಚರಿಸಲು 10 ನೂತನ ಬಸ್‌ಗಳಿಗೆ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಚಾಲನೆ ನೀಡಿದರು.

ನಗರದ ಸಾರಿಗೆ ಬಸ್ ನಿಲ್ದಾಣದಲ್ಲಿ ಭಾನುವಾರ ಸಂಜೆ ಸಾರಿಗೆ ಬಸ್‌ಗಳ ಸಂಚಾರಕ್ಕೆ ಹಸಿರು ನಿಶಾನೆ ತೋರಿ ಮಾತನಾಡಿ, ಜಿಲ್ಲೆಯಾದ್ಯಂತ ಹಾಗೂ ಹೊರ ಜಿಲ್ಲೆ, ರಾಜ್ಯಗಳಿಗೆ ಮಂಡ್ಯ ನಗರದಿಂದ ಸಂಚರಿಸಲು ಇನ್ನೂ 50ರಿಂದ 100 ಬಸ್‌ಗಳ ಅವಶ್ಯಕತೆ ಇದೆ. ಹೆಚ್ಚುವರಿ ಬಸ್‌ಗಳನ್ನು ಕಲ್ಪಿಸುವಂತೆ ಕೆಎಸ್ಆರ್‌ಸಿ ನಿಗಮಕ್ಕೆ ಮನವಿ ಮಾಡಲಾಗಿದೆ ಎಂದರು.

ಎಲ್ಲೆಲ್ಲಿ ಜನರಿಗೆ ಬಸ್‌ಗಳ ಕೊರತೆ ಇದೆ. ಅಲ್ಲಿಗೆ ಹಂತ ಹಂತವಾಗಿ ಬಸ್‌ಗಳ ಸೇವೆ ಒದಗಿಸಲಾಗುವುದು. ಜಿಲ್ಲೆಯಲ್ಲಿ ಸಾರಿಗೆ ಬಸ್‌ಗಳು ಪ್ರತಿ ನಿತ್ಯ 1.65 ಲಕ್ಷ ಕಿ.ಮೀ ಕ್ರಮಿಸಿ 73.09 ಲಕ್ಷ ರು. ಆದಾಯ ಗಳಿಸುತ್ತಿದೆ ಎಂದರು.

ಮಂಡ್ಯ ಬಸ್ ನಿಲ್ದಾಣಕ್ಕೆ ಬೇಕಿರುವ ಬದಲಾವಣೆಗಳ ಬಗ್ಗೆ ಡಿ.ಪಿ‌.ಆರ್ ಮಾಡಿ ಸಾರಿಗೆ ಸಚಿವರಿಗೆ ಬಸ್ ನಿಲ್ದಾಣದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಸಿಕೊಡುವಂತೆ ಮನವಿ ಮಾಡಲಾಗುವುದು. ಲೋಕಸಭಾ ಚುನಾವಣೆಯ ನಂತರ ಕ್ರಮ ವಹಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಚಾಮುಂಡೇಶ್ವರಿ ವಿದ್ಯುತ್ ನಿಗಮದ ಅಧ್ಯಕ್ಷ, ಶಾಸಕ ರಮೇಶ ಬಂಡಿಸಿದ್ದೇಗೌಡ, ಶಾಸಕರಾದ ಪಿ.ರವಿಕುಮಾರ್, ನರೇಂದ್ರಸ್ವಾಮಿ, ಕೆ.ಎಂ.ಉದಯ್, ದರ್ಶನ್ ಪುಟ್ಟಣ್ಣಯ್ಯ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಎಸ್ಪಿ ಎನ್.ಯತೀಶ್, ಅಪರ ಜಿಲ್ಲಾಧಿಕಾರಿ ಡಾ.ಹೆಚ್ ಎಲ್ ನಾಗರಾಜು, ಕೆ ಎಸ್ ಆರ್ ಟಿ ಸಿ ವ್ಯವಸ್ಥಾಪಕ ನಿರ್ದೇಶಕ ನಾಗರಾಜು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಗ್ಯಾರಂಟಿ ಯೋಜನೆಗಳ ವಸ್ತು ಪ್ರದರ್ಶನಕ್ಕೆ ಸಚಿವರಿಂದ ಚಾಲನೆ

ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾಹಿತಿ ನೀಡಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಮೂರು ದಿನಗಳ ಕಾಲ ಆಯೋಜಿಸಿರುವ ವಸ್ತು ಪ್ರದರ್ಶನ ಮಳಿಗೆಯನ್ನು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಉದ್ಘಾಟಿಸಿದರು.ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿದ ಸಚಿವರು, ಸಾರ್ವಜನಿಕರಿಗೆ ಸರ್ಕಾರದ ಯೋಜನೆಗಳ ಮಾಹಿತಿ ನೀಡುವ ಕೆಲಸ ನಿರಂತರವಾಗಿ ನಡೆಯುತ್ತಿರಬೇಕು. ಮಾಹಿತಿ ಪಡೆದುಕೊಂಡರೆ ಸಾರ್ವಜನಿಕರು ಸರ್ಕಾರದ ಯೋಜನೆ ಸದುಪಯೋಗ ಪಡಿಸಿಕೊಳ್ಳಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.ವಸ್ತು ಪ್ರದರ್ಶನ ಮಳಿಗೆಯಲ್ಲಿ ಗೃಹಲಕ್ಷಿ, ಶಕ್ತಿ, ಮನೆ- ಮನ ಬೆಳಗುವ ಭಾಗ್ಯದ ಬೆಳಕು- ಗೃಹ ಜ್ಯೋತಿ, ಯುವ ನಿಧಿ, ಅನ್ನಭಾಗ್ಯ ಸೇರಿದಂತೆ ವಿವಿಧ ಯೋಜನೆಗಳ ಮಾಹಿತಿ ಅನಾವರಣಗೊಳಿಸಲಾಗಿದೆ. ವಸ್ತುಪ್ರದರ್ಶನ ಮಳಿಗೆ ಸಾರ್ವಜನಿಕರಿಗೆ ಮಾಹಿತಿ ನೀಡಲು ಮಾಚ್೯ 6 ರವರೆಗೆ ತೆರೆದಿರುತ್ತದೆ ಎಂದರು.ಕಾರ್ಯಕ್ರಮದಲ್ಲಿ ಶ್ರೀರಂಗಪಟ್ಟಣ ಶಾಸಕ ಹಾಗೂ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಅಧ್ಯಕ್ಷ ರಮೇಶ ಬಂಡಿಸಿದ್ದೇಗೌಡ, ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ, ಮದ್ದೂರು ಶಾಸಕ ಉದಯ್, ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣಯ್ಯ, ವಾರ್ತಾಧಿಕಾರಿ ನಿರ್ಮಲಾ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.

Share this article