ವಿಬಿಜಿ ರಾಮ್ ಜಿ ವಿರುದ್ಧ ಸಚಿವ ಡಾ.ಎಂ.ಸಿ. ಸುಧಾಕರ್ ವಾಗ್ದಾಳಿ

KannadaprabhaNewsNetwork |  
Published : Jan 11, 2026, 01:15 AM IST
ಸಿಕೆಬಿ-1 ಸುದ್ದಿಗೋಷ್ಟಿಯಲ್ಲಿ ಸಚಿವ ಡಾ.ಎಂ.ಸಿ.ಸುಧಾಕರ್ ಮಾತನಾಡಿದರು | Kannada Prabha

ಸಾರಾಂಶ

ಪ್ರಧಾನಿ ಮೋದಿ ಸರ್ಕಾರ ಆರ್‌ಎಸ್ಎಸ್‌ನ ಅಣತಿಯಂತೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಹಿಂಪಡೆಯುವ ಮೂಲಕ ವಿಬಿ ಜಿ ರಾಮ್ ಜಿ ಹೆಸರಿನಲ್ಲಿ ಹೊಸ ಕಾಯ್ದೆ ಜಾರಿಗೆ ತರುವಾಗ, ರಾಜ್ಯ ಸರ್ಕಾರಗಳ ಅಭಿಪ್ರಾಯ ಕೇಳಿಲ್ಲ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಕೇಂದ್ರದಲ್ಲಿರುವ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಹಳ್ಳಿಗಳ ಅಧಿಕಾರ ಕಸಿದುಕೊಂಡು, ಗ್ರಾಮೀಣ ಆರ್ಥಿಕತೆಯನ್ನು ನಾಶಪಡಿಸಲು ಮುಂದಾಗಿದೆ ಎಂದು ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್ ಆಕ್ರೋಶ ವ್ಯಕ್ತಪಡಿಸಿದರು.‌ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನರೇಗಾ ಬಚಾವೋ ಸಂಗ್ರಾಮ ಕಾರ್ಯಕ್ರಮದ ಅಡಿಯಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಧಾನಿ ಮೋದಿ ಸರ್ಕಾರ ಆರ್‌ಎಸ್ಎಸ್‌ನ ಅಣತಿಯಂತೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಹಿಂಪಡೆಯುವ ಮೂಲಕ ವಿಬಿ ಜಿ ರಾಮ್ ಜಿ ಹೆಸರಿನಲ್ಲಿ ಹೊಸ ಕಾಯ್ದೆ ಜಾರಿಗೆ ತರುವಾಗ, ರಾಜ್ಯ ಸರ್ಕಾರಗಳ ಅಭಿಪ್ರಾಯ ಕೇಳಿಲ್ಲ. ಭಾರತೀಯರ ಅಭಿಪ್ರಾಯ ಪಡೆಯದೆ ನೇರವಾಗಿ ಹೊಸ ಕಾಯ್ದೆ ಜಾರಿಗೊಳಿಸುವ ಮೂಲಕ ಸರ್ವಾಧಿಕಾರಿ ಧೋರಣೆಯನ್ನು ಪ್ರದರ್ಶಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮನಮೋಹನ ಸಿಂಗ್ ಅವರ ನೇತೃತ್ವದ ಯುಪಿಎ ಸರ್ಕಾರ ಉದ್ಯೋಗದ ಹಕ್ಕು, ಮಾಹಿತಿ ಹಕ್ಕು, ಶೈಕ್ಷಣಿಕ ಹಕ್ಕು ಮೊದಲಾದ ಕ್ರಾಂತಿಕಾರಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಜನರಿಗೆ ಹೆಚ್ಚಿನ ಅಧಿಕಾರವನ್ನು ನೀಡುವ ಕಾರ್ಯವನ್ನು ಮಾಡಿತ್ತು. ಮೋದಿ ಸರ್ಕಾರ ಡಿ. 17ರಂದು ಕಾಯ್ದೆಯನ್ನು ಸಂಸತ್ತಿನಲ್ಲಿ ಮಂಡಿಸಿ ಡಿ. 18ರಂದು ಅಂಗೀಕಾರ ಪಡೆದಿದೆ. ಸುಮಾರು 12.16 ಕೋಟಿ ನರೇಗಾ ಕಾರ್ಮಿಕರು ದೇಶದಲ್ಲಿದ್ದಾರೆ. ಅದರಲ್ಲಿ 6.21 ಕೋಟಿ ಮಹಿಳೆಯರು ಇದ್ದಾರೆ. ಪ.ಜಾತಿಯವರು ಶೇ.17, ಪ.ವರ್ಗ ಶೇ. 11 ಇದ್ದಾರೆ ಎಂದರು.

ನಮ್ಮ ರಾಜ್ಯದಲ್ಲಿ 71.18 ಲಕ್ಷ ನರೇಗಾ ಕಾರ್ಮಿಕರಿದ್ದಾರೆ. ಇದರಲ್ಲಿ 36.75 ಲಕ್ಷ ಮಹಿಳೆಯರು, ಅಂದರೆ ಶೇ. 51.6 ಮಹಿಳೆಯರಿದ್ದಾರೆ ಎಂದು ವಿವರಿಸಿದರು.ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್ತಾ ಮಾತನಾಡಿ, ಹೊಸ ಬಿಲ್ ಮೂಲಕ ಗ್ರಾಮೀಣ ಜನರ ಜೀವನೋಪಾಯ ಕಸಿಯಲಾಗುತ್ತಿದೆ. ರಾಜ್ಯ ಸರ್ಕಾರದ ಜೊತೆ ಚರ್ಚೆ ಮಾಡದೆ, ರಾಜ್ಯಗಳ ಆಯವ್ಯಯದ ಮೇಲೆ ಹೆಚ್ಚಿನ ಹೊರೆಯನ್ನು ಸಂವಿಧಾನ ಬಾಹಿರವಾಗಿ ಹೇರಲಾಗುತ್ತಿದೆ ಎಂದರು.

ಶಾಸಕ ಪ್ರದೀಪ್ ಈಶ್ವರ್ ಮಾತನಾಡಿ, ಕಳೆದ 11 ವರ್ಷಗಳ ಕೇಂದ್ರ ಸರ್ಕಾರದ ಸಾಧನೆ ಅಂದರೆ ಯೋಜನೆಗಳ ಹೆಸರು ಬದಲಾಯಿಸಿರುವುದು ಮಾತ್ರ. ಹಿಂದೆ ಜಾರಿಯಲ್ಲಿದ್ದ ಸುಮಾರು 30 ಯೋಜನೆಗಳ ಹೆಸರು ಬದಲಾವಣೆ ಅಥವಾ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವ ಕಾರ್ಯವನ್ನು ಮೋದಿ ಸರ್ಕಾರ ಮಾಡಿದೆ. ಉದ್ಯೋಗ ದೊರೆಯುವ ಬಗ್ಗೆ ಯಾವುದೇ ಗ್ರಾಮ ಪಂಚಾಯತ್ ಗಳಿಗೂ ಖಾತ್ರಿಯಿರುವುದಿಲ್ಲ‌ ಎಂದರು.

ಶಾಸಕ ಕೆ.ಪಿ.ಪುಟ್ಟಸ್ವಾಮಿ ಗೌಡ ಮಾತನಾಡಿ, 20 ವರ್ಷಗಳ ಗ್ರಾಮೀಣ ಬದುಕಿನ ಜೀವನಾಡಿಯಾಗಿದ್ದ ಮನರೇಗಾ ಯೋಜನೆಯನ್ನುಈಗ ರದ್ದುಪಡಿಸಲಾಗಿದೆ. ಈ ಮೂಲಕ ಉದ್ಯೋಗದ ಹಕ್ಕನ್ನು ಕಸಿದುಕೊಳ್ಳಲಾಗಿದೆ. ಸ್ಥಳೀಯ ಪಂಚಾಯತಿಗಳ ಅಧಿಕಾರ ಮೊಟಕುಗೊಳಿಸಲಾಗಿದೆ. ಜತೆಗೆ ರಾಜ್ಯಗಳ ಮೇಲೆ ಹೆಚ್ಚುವರಿ ಹಣಕಾಸಿನ ಹೊರೆ ಬೀಳಲಿದೆ ಎಂದು ವಿವರಿಸಿದರು.

ಸುದ್ದಿಗೋಷ್ಟಿಯಲ್ಲಿ ಮಾಜಿ ಶಾಸಕರಾದ ಕೆ.ಪಿ.ಬಚ್ಚೇಗೌಡ, ಡಾ.ಎಂ.ಶಿವಾನಂದ್, ಅನಸೂಯಮ್ಮ, ನಿಗಮ ಮಂಡಳಿಗಳ ಅಧ್ಯಕ್ಷರಾದ ಎನ್.ಹೆಚ್.ಶಿವಶಂಕರರೆಡ್ಡಿ, ಎಂ.ಆಂಜಿನಪ್ಪ, ಎನ್.ಸಂಪೆಂಗಿ, ಮುದ್ದುಗಂಗಾಧರ್, ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಕೆ.ಎನ್.ಕೇಸವರೆಡ್ಡಿ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನಾಗಭೂಷಣ್,ರಕ್ಷಿತ್ ರೆಡ್ಡಿ, ಮುಖಂಡರಾದ ಎಸ್.ಎಂ.ರಫೀಕ್, ಕೋನಪಲ್ಲಿ ಕೋದಂಡ, ಸುರೇಶ್, ಜಾತವಾರ ರಾಮಕೃಷ್ಣಪ್ಪ, ಪಟ್ರೇನಹಳ್ಳಿ ಕೃಷ್ಣ, ಮತ್ತಿತರರು ಇದ್ದರು.

ಸಿಕೆಬಿ-1 ಸುದ್ದಿಗೋಷ್ಟಿಯಲ್ಲಿ ಸಚಿವ ಡಾ.ಎಂ.ಸಿ.ಸುಧಾಕರ್ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಯಣ್ಣನ ವೀರಭೂಮಿ ಶೀಘ್ರ ಲೋಕಾರ್ಪಣೆ
ಅಕ್ರಮ ಬಾಂಗ್ಲಾ ವಲಸಿಗರನ್ನು ಹೊರಗಟ್ಟಿ