ಕುಂದಾಪುರ: ಕರ್ನಾಟಕದ ಪ್ರಥಮ, ವಂಡ್ಸೆ ಕ್ಲಸ್ಟರ್‌ನ 7 ಗ್ರಾ.ಪಂ.ಗಳ ವ್ಯಾಪ್ತಿಯ ‘ಸಮುದಾಯ ಉಪಶಮನ ಆರೈಕೆ ಕೇಂದ್ರ’ವನ್ನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಶುಕ್ರವಾರ ಉದ್ಘಾಟಿಸಿದರು.ಈ ಕೇಂದ್ರವನ್ನು ಆರಂಭಿಸಿರುವ ವಂಡ್ಸೆ ಗ್ರಾ.ಪಂ. ತನ್ನ ಸಾಮಾಜಿಕ ಬದ್ಧತೆಯಿಂದ ರಾಜ್ಯಕ್ಕೆ ಮಾದರಿ ಎಂದು ಸಚಿವ ಶ್ಲಾಘಿಸಿದರು.
ಅಧಿಕಾರ ಶಾಶ್ವತ ಅಲ್ಲ, ಆದರೆ ನಿರಾಮಯ ಸೊಸೈಟಿ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ ಅವರಂತಹವರು ಮಾಡುವ ಇಂತಹ ಸೇವೆಗಳು ಕಾರ್ಯಗಳು ಶಾಶ್ವತ ಎಂದು ಸಚಿವೆ ಹೇಳಿದರು. ವಂಡ್ಸೆ ಗ್ರಾ.ಪಂ. ಕಾರ್ಯವನ್ನು ಬೇರೆ ಗ್ರಾ.ಪಂ. ಬಂದು ನೋಡಬೇಕು. ನಮ್ಮ ಬೆಳಗಾವಿ ಗ್ರಾಮೀಣ ಕ್ಷೇತ್ರದ ಗ್ರಾ.ಪಂ. ಸದಸ್ಯರನ್ನು ಇಲ್ಲಿಗೆ ಕಳುಹಿಸುವೆ. ಈ ಮಾದರಿ ನಮ್ಮೂರಲ್ಲೂ ಆಗಬೇಕು ಎಂಬುದೆ ನನ್ನ ಆಶಯ ಎಂದರು.ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಜಿಲ್ಲಾಧಿಕಾರಿ ಟಿ.ಕೆ. ಸ್ವರೂಪ, ಜಿ.ಪಂ. ಸಿಇಒ ಪ್ರತೀಕ್ ಬಾಯಲ್, ನಿರಾಮಯ ಸೊಸೈಟಿ ಅಧ್ಯಕ್ಷ ಅಡಕೆಕೊಡ್ಲು ಉದಯ್ ಕುಮಾರ್ ಶೆಟ್ಟಿ, ವಂಡ್ಸೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಗೀತಾ ಅವಿನಾಶ್ ಸೇರಿದಂತೆ ಹಲವು ಮಂದಿ ಇದ್ದರು................
ಏನಿದು ಉಪಶಮನ ಆರೈಕೆ ಕೇಂದ್ರ ?ಉಡುಪಿ ಜಿಲ್ಲೆಯ ವಂಡ್ಸೆಯಲ್ಲಿ ರಾಜ್ಯದ ಮೊದಲ ನೂತನ ‘ಸಮುದಾಯ ಉಪಶಮನ ಆರೈಕೆ ಕೇಂದ್ರ’ ನಿರ್ಮಾಣಗೊಂಡಿದೆ. ಇಲ್ಲಿನ ದೀರ್ಘಕಾಲೀನ ಮತ್ತು ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವವರು, ವಯೋಸಹಜವಾಗಿ ಹಾಸಿಗೆ ಹಿಡಿದವರು, ತೀವ್ರತರದ ಮಾನಸಿಕ ಖಿನ್ನತೆಗೆ ಒಳಗಾದವರು ಮತ್ತು ಅಭದ್ರತೆಯಿಂದ ಬದುಕುತ್ತಿರುವ ಹಿರಿಯ ನಾಗರಿಕರಿಗೆ ಉಚಿತ ಆರೈಕೆ ಲಭ್ಯವಾಗಲಿದೆ.ವಂಡ್ಸೆ ಕ್ಲಸ್ಟರ್ ವ್ಯಾಪ್ತಿಯ ವಂಡ್ಸೆ, ಚಿತ್ತೂರು, ಇಡೂರು-ಕುಂಜ್ಞಾಡಿ, ಆಲೂರು, ಹಕ್ಲಾಡಿ, ಹೆಮ್ಮಾಡಿ ಮತ್ತು ಕೆರಾಡಿ ಗ್ರಾಪಂಗಳು ಸೇರಿ ‘ನಿರಾಮಯ ಸೊಸೈಟಿ’ಯನ್ನು ಸ್ಥಾಪಿಸಿ, ಅದರಡಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಅನುದಾನದಲ್ಲಿ ಈ ಕೇಂದ್ರವನ್ನು ನಿರ್ಮಿಸಲಾಗಿದೆ.ಇಲ್ಲಿ 4 ತಜ್ಞ ವೈದ್ಯರು, 2 ದಾದಿಯರು, 1 ಆ್ಯಂಬುಲೆನ್ಸ್ ಕಾರ್ಯಾಚರಿಸುತ್ತಿದೆ. ನಿರಾಮಯ ಸೊಸೈಟಿಯಿಂದ ಈಗಾಗಲೇ ಮನೆಯಿಂದ ಹೊರಬರಲಾಗದ 282 ರೋಗಿಗಳನ್ನು ಈಗಾಗಲೆ ಗುರುತಿಸಿ ಅವರ ಮನೆಯಲ್ಲಿ ಶುಶ್ರೂಷೆ ನೀಡಲಾಗುತ್ತಿದೆ ಎಂದು ಸೊಸೈಟಿಯ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ತಿಳಿಸಿದ್ದಾರೆ