ಗಿರಿ ಪ್ರದೇಶದಲ್ಲಿ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್‌ ಪರಿಶೀಲನೆ

KannadaprabhaNewsNetwork | Published : Nov 2, 2024 1:28 AM

ಸಾರಾಂಶ

ಚಿಕ್ಕಮಗಳೂರು, ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಾದ ಮುಳ್ಳಯ್ಯನಗಿರಿ ಹಾಗೂ ದತ್ತಪೀಠ ಭಾಗದಲ್ಲಿ ಭೂ ಕುಸಿತದ ಆತಂಕ ಉಂಟಾಗಿತ್ತು. ಕಳೆದ ಮುಂಗಾರಿನ ಸಂದರ್ಭದಲ್ಲಿ ಅಲ್ಲಲ್ಲಿ ಭೂ ಕುಸಿತ ಪ್ರಕರಣಗಳು ಕಂಡು ಬಂದಿದ್ದವು. ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಶುಕ್ರವಾರ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಗಿರಿ ಶ್ರೇಣಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

- ಮುಳ್ಳಯ್ಯನಗಿರಿ, ದತ್ತಪೀಠ ರಸ್ತೆಗಳು ಹಾಗೂ ಸ್ಥಳ ಪರಿಶೀಲನೆ । ಪ್ರವಾಸಿ ವಾಹನಗಳು ಹೆಚ್ಚಿದ ಹಿನ್ನಲೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಾದ ಮುಳ್ಳಯ್ಯನಗಿರಿ ಹಾಗೂ ದತ್ತಪೀಠ ಭಾಗದಲ್ಲಿ ಭೂ ಕುಸಿತದ ಆತಂಕ ಉಂಟಾಗಿತ್ತು. ಕಳೆದ ಮುಂಗಾರಿನ ಸಂದರ್ಭದಲ್ಲಿ ಅಲ್ಲಲ್ಲಿ ಭೂ ಕುಸಿತ ಪ್ರಕರಣಗಳು ಕಂಡು ಬಂದಿದ್ದವು. ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಶುಕ್ರವಾರ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಗಿರಿ ಶ್ರೇಣಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಳೆದ ಮುಂಗಾರಿನ ಸಂದರ್ಭದಲ್ಲಿ ದತ್ತಪೀಠಕ್ಕೆ ತೆರಳುವ ಮಾರ್ಗದ ಕವಿಗಂಡಿ ಬಳಿ ಭೂಕುಸಿತ ಉಂಟಾಗಿತ್ತು. ಅಲ್ಲದೆ ಮುಳ್ಳಯ್ಯನಗಿರಿ ಹಾಗೂ ದತ್ತಪೀಠ ಭಾಗದಲ್ಲಿ ಹಲವೆಡೆ ಸಣ್ಣ ಸಣ್ಣ ಪ್ರಮಾಣದಲ್ಲಿ ಧರೆ ಕುಸಿತ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಜಿಯಾಲಜಿಕಲ್ ಸರ್ವೆ ಆಫ್ ಇಂಡಿಯಾದ ತಜ್ಞರ ತಂಡ ಇಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಮಗ್ರ ವರದಿಯನ್ನು ಜಿಲ್ಲಾಧಿಕಾರಿಗೆ ನೀಡಿತ್ತು. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಖುದ್ದು ಗಿರಿ ಶ್ರೇಣಿಗೆ ತೆರಳಿ ಅಲ್ಲಿನ ಪರಿಸ್ಥಿತಿಯ ಅವಲೋಕನ ನಡೆಸಿದರು.

ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ತಾಣಗಳಲ್ಲಿ ಮುಳ್ಳಯ್ಯನಗಿರಿ ಹಾಗೂ ದತ್ತಪೀಠ ಪ್ರಮುಖವಾಗಿವೆ. ವಾರಾಂತ್ಯದಲ್ಲಿ ಕಾಲಿಡಲು ಜಾಗವಿಲ್ಲದ ಪರಿಸ್ಥಿತಿ ಇಲ್ಲಿರುತ್ತದೆ. ಸಾವಿರಾರು ವಾಹನಗಳು ಪ್ರತಿದಿನ ಈ ಭಾಗದಲ್ಲಿ ಸಂಚರಿಸುವುದರಿಂದ ಪರ್ವತ ಶ್ರೇಣಿಗಳ ಮೇಲೆ ಅಧಿಕ ಒತ್ತಡ ಬೀಳುತ್ತಿದೆ. ಇದೆ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಭೂಕುಸಿತ ಸಾಧ್ಯತೆಯೂ ಇದೆ. ಜೊತೆಗೆ ಇಲ್ಲಿನ ಅಪರೂಪದ ವನ್ಯಜೀವಿಗಳ ಮುಕ್ತ ಸಂಚಾರಕ್ಕೂ ಅಡಚಣೆ ಉಂಟಾಗುತ್ತಿದೆ ಎಂಬ ದೂರುಗಳು ಕೇಳಿ ಬಂದಿದ್ದವು. ಈ ಎಲ್ಲಾ ಅಂಶಗಳ ಕುರಿತು ಸಚಿವರು ಅಧಿಕಾರಿಗಳಿಂದ ಮಾಹಿತಿ ಪಡೆದರು.

ಮುಳ್ಳಯ್ಯನಗಿರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಕೆ.ಜೆ.ಜಾರ್ಜ್, ಮುಳ್ಳಯ್ಯನಗಿರಿ ಹಾಗೂ ದತ್ತಪೀಠಕ್ಕೆ ಹೆಚ್ಚಿನ ವಾಹನಗಳು ಸಂಚಾರ ನಡೆಸಿದಾಗ ಅಲ್ಲಿ ವೈಬ್ರೇಷನ್ ಉಂಟಾಗಿ ಒತ್ತಡ ಹೆಚ್ಚಾಗುತ್ತದೆ. ಆಗ ಭೂಕುಸಿತ ಉಂಟಾಗುವ ಸಾಧ್ಯತೆ ಇದೆ ಎಂದು ತಜ್ಞರು ಜಿಲ್ಲಾಧಿಕಾರಿಗೆ ವರದಿ ನೀಡಿದ್ದಾರೆ. ಹೀಗಾಗಿ ತಾವೇ ಖುದ್ದಾಗಿ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸುತ್ತಿರುವುದಾಗಿ ತಿಳಿಸಿದರು.

ಮುಳ್ಳಯ್ಯನಗಿರಿ ಹಾಗೂ ದತ್ತಪೀಠಕ್ಕೆ ಒಂದು ಬಾರಿಗೆ 600 ವಾಹನಗಳಿಗೆ ಮಾತ್ರ ಅವಕಾಶ ನೀಡಲು ತೀರ್ಮಾನಿಸಲಾಗುವುದು. ಈ ಕುರಿತು ಅಧಿಕಾರಿಗಳ ಜತೆ ಚರ್ಚೆ ನಡೆಸುತ್ತೇವೆ. ಬಳಿಕ ಆನ್‌ಲೈನ್‌ ನೋಂದಣಿ ಮಾಡಿಕೊಂಡು ಪ್ರವಾಸಕ್ಕೆ ಬರುವ ಯೋಜನೆ ಜಾರಿಗೊಳಿಸ ಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಚಿಕ್ಕಮಗಳೂರು ಶಾಸಕ ಎಚ್.ಡಿ. ತಮ್ಮಯ್ಯ, ಡಿಸಿ ಮೀನಾ ನಾಗರಾಜ್, ಜಿಪಂ ಸಿಇಒ ಎಚ್.ಎಸ್. ಕೀರ್ತನಾ, ಪ್ರಮುಖರಾದ ಬಿ.ಎಚ್.ಹರೀಶ್, ಡಾ. ಕೆ.ಪಿ. ಅಂಶುಮಂತ್, ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಲೋಹಿತ್ ಇದ್ದರು.-- ಬಾಕ್ಸ್‌ ---ಬೇಸ್ ಕ್ಯಾಂಪ್ ನಿರ್ಮಾಣಕ್ಕೆ ಚಿಂತನೆಚಂದ್ರದ್ರೋಣ ಪರ್ವತ ಶ್ರೇಣಿಗೆ ತೆರಳುವ ವಾಹನಗಳ ಸಂಖ್ಯೆ ನಿಯಂತ್ರಿಸಲು ಗಿರಿ ಶ್ರೇಣಿ ತಳಭಾಗದಲ್ಲಿಯೇ ಬೇಸ್ ಕ್ಯಾಂಪ್ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.

ಯಾವುದೇ ವಾಹನಗಳಾದರೂ ಗಿರಿ ಪ್ರದೇಶಕ್ಕೆ ತೆರಳುವ ರಸ್ತೆ ಪಕ್ಕದಲ್ಲೇ ಇರುವ ಬೇಸ್ ಕ್ಯಾಂಪ್ ಗೆ ಬರಬೇಕಾಗುತ್ತದೆ. ಬೇಸ್ ಕ್ಯಾಂಪ್ ಗೆ ವಾಹನ ಬಂದಾಗ ನಿಗದಿಯಷ್ಟೇ ವಾಹನಗಳನ್ನು ಬೆಳಗಿನ ಅವಧಿಯಲ್ಲಿ ಹಾಗೂ ಅಷ್ಟೇ ವಾಹನಗಳನ್ನು ಮಧ್ಯಾಹ್ನದ ಅವಧಿಯಲ್ಲಿ ಗಿರಿ ಪ್ರದೇಶಕ್ಕೆ ತೆರಳಲು ಅನುವು ಮಾಡಿಕೊಡಲಾಗುವುದು ಎಂದರು.

ಪ್ರತಿದಿನ ಸ್ಥಳೀಯ ಹಾಗೂ ಹೊರಗಿನಿಂದ ಬಂದ ಎಷ್ಟು ಪ್ರವಾಸಿಗರಿಗೆ ಅವಕಾಶ ನೀಡಬೇಕು ಎಂಬ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ತೀರ್ಮಾನಿಸಲಾಗುವುದು. ಸ್ಥಳೀಯವಾಗಿ ಪ್ರವಾಸಿಗರನ್ನು ಕರೆದುಕೊಂಡು ಹೋಗುವ ವಾಹನಗಳಿದ್ದು ಅವರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಮುಳ್ಳಯ್ಯನಗಿರಿಯಲ್ಲಿ ಶೌಚಗೃಹದ ವ್ಯವಸ್ಥೆ ಇಲ್ಲ. ಇಲ್ಲಿ ಶಾಶ್ವತ ಶೌಚಗೃಹ ನಿರ್ಮಾಣ ಅಷ್ಟು ಸುಲಭವಿಲ್ಲ. ಜೊತೆಗೆ ಸ್ವಚ್ಛತೆ ಕಷ್ಟವಾಗುತ್ತದೆ. ಹೀಗಾಗಿ ಮೊಬೈಲ್ ಟಾಯ್ಲೆಟ್ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು.

ಪಿಪಿಪಿ ನಿಯಮದಡಿ ಮೊಬೈಲ್ ಟಾಯ್ಲೆಟ್ ಆರಂಭಿಸಿದರೆ ಖಾಸಗಿ ಸಂಸ್ಥೆಯವರು ಶೌಚಗೃಹ ಸ್ವಚ್ಛತೆ ನೋಡಿಕೊಳ್ಳುತ್ತಾರೆ. ಆಗ ಬಂದ ಪ್ರವಾಸಿಗರಿಗೂ ಅನುಕೂಲವಾಗುತ್ತದೆ. ಈ ಕುರಿತು ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.

ಗ್ಯಾರಂಟಿ ಯೋಜನೆಗಳು ರದ್ದಾಗುವುದಿಲ್ಲ: ಕೆ.ಜೆ. ಜಾರ್ಜ್‌

ಚಿಕ್ಕಮಗಳೂರು: ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆಗಳು ಯಾವುದೇ ಕಾರಣಕ್ಕೂ ರದ್ದಾಗುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟೀಕರಿಸಿದ್ದಾರೆ. ಇದನ್ನೇ ಡಿಸಿಎಂ ಡಿ.ಕೆ.ಶಿವಕುಮಾರ್ ಅವರೂ ಹೇಳಿದ್ದಾರೆ. ಹೀಗಿರುವಾಗ ರಾಜ್ಯದಲ್ಲಿ ಯಾವುದೇ ಯೋಜನೆಗಳು ರದ್ದಾಗುವ ಸಾಧ್ಯತೆಯೇ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರ ಬಗ್ಗೆ ನಾನು ಮಾತನಾಡುವುದಿಲ್ಲ. ಅವರು ವಿರೋಧ ಪಕ್ಷದ ಒಬ್ಬ ನಾಯಕ. ಹೀಗಿರುವಾಗ ಆರೋಪ ಮಾಡುವುದನ್ನು ಬಿಟ್ಟು ಬೇರೆ ಏನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.

ವಿರೋಧ ಪಕ್ಷದ ಒಬ್ಬ ನಾಯಕರಾಗಿ ಸಿ.ಟಿ.ರವಿ ಯಾವುದಾದರೂ ಸಂದರ್ಭದಲ್ಲಿ ಆಡಳಿತ ಪಕ್ಷದವರು ಒಳ್ಳೆಯ ಕೆಲಸ ಮಾಡುತ್ತಾರೆ ಎಂದು ಹೇಳುತ್ತಾರೆಯೇ ಎಂದ ಅವರು, ಹಿಂದೆ ಗ್ಯಾರಂಟಿ ಯೋಜನೆ ಜಾರಿ ಸಾಧ್ಯವೇ ಇಲ್ಲ ಎಂದು ಹೇಳಿದ್ದರು. ಪಂಚ ಗ್ಯಾರಂಟಿ ಜಾರಿ ಬಳಿಕ ಯೋಜನೆಗಳು ಸರಿಯಾಗಿ ಅನುಷ್ಠಾನವಾಗಿಲ್ಲ ಎನ್ನುತ್ತಿದ್ದಾರೆ. ವಾಸ್ತವವಾಗಿ ಗ್ಯಾರಂಟಿ ಯೋಜನೆಗಳಿಂದ ಜನರಿಗೆ ಅನುಕೂಲವಾಗಿದೆ ಎಂದು ಹೇಳಿದರು.ವಕ್ಫ್ ಬೋರ್ಡ್ ಹೆಸರಿನಲ್ಲಿ ರೈತರ ಜಮೀನುಗಳ ದಾಖಲಾಗುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಕೆಲ ತಪ್ಪುಗಳಿಂದಾಗಿ ಈ ರೀತಿಯ ಗೊಂದಲ ಉಂಟಾಗಿತ್ತು. ಸಿಎಂ ಸಿದ್ದರಾಮಯ್ಯ, ಕಂದಾಯ ಮತ್ತು ವಕ್ಫ್ ಸಚಿವರು ಸ್ಪಷ್ಟನೆ ನೀಡಿದ್ದಾರೆ. ರೈತರ ಯಾವುದೇ ಭೂಮಿಗಳನ್ನು ರದ್ದು ಮಾಡುವುದಿಲ್ಲ ಎಂದು ಭರವಸೆ ನೀಡಿದರು. 1 ಕೆಸಿಕೆಎಂ 3ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಮುಳ್ಳಯ್ಯನಗಿರಿ ಹಾಗೂ ದತ್ತಪೀಠ ಭಾಗಕ್ಕೆ ತೆರಳಿ ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಪರಿಶೀಲನೆ ನಡೆಸಿದರು. ಶಾಸಕ ಎಚ್.ಡಿ. ತಮ್ಮಯ್ಯ, ಡಿಸಿ ಮೀನಾ ನಾಗರಾಜ್, ಜಿಪಂ ಸಿಇಒ ಎಚ್.ಎಸ್.ಕೀರ್ತನಾ, ಪ್ರವಾಸೋದ್ಯಮ ಇಲಾಖೆಯ ಲೋಹಿತ್, ಪ್ರಮುಖರಾದ ಬಿ.ಎಚ್.ಹರೀಶ್, ಡಾ.ಅಂಶುಮಂತ್ ಇದ್ದರು.

Share this article