ವಿಕಲಚೇತನರಿಗೆ ಸರ್ಕಾರದಿಂದ ಎಲ್ಲ ಸೌಲಭ್ಯಕ್ಕೆ ಕ್ರಮ: ಸಚಿವ ಈಶ್ವರ ಖಂಡ್ರೆ ಭರವಸೆ

KannadaprabhaNewsNetwork | Published : Dec 5, 2024 12:30 AM

ಸಾರಾಂಶ

ಬೀದರ್ ನಗರದ ಡಾ.ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾದ ವಿಶ್ವ ವಿಕಲಚೇತನರ ದಿನಾಚರಣೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಬೀದರ್ಜಿಲ್ಲೆಯ ಎಲ್ಲ ವಿಕಲಚೇತನರಿಗೆ ವಸತಿ, ಉದ್ಯೋಗ, ಮಾಸಾಶನ ಹಾಗೂ ವೈದ್ಯಕೀಯ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಸರ್ಕಾರದಿಂದ ಎಲ್ಲ ರೀತಿಯ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್‌ ಖಂಡ್ರೆ ಹೇಳಿದರು. ಜಿಲ್ಲಾಡಳಿತ, ಜಿ.ಪಂ, ಮಹಿಳಾ ಮತ್ತುಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ವಕೀಲರ ಸಂಘ (ರಿ) ಎಮ್.ಆರ್.ಡಬ್ಲ್ಯೂ,ವಿ.ಆರ್.ಡಬ್ಲೂ, ಯು.ಆರ್.ಡಬ್ಲೂ., ಸ್ವಯಂ ಸೇವಾ ಸಂಘ ಸಂಸ್ಥೆ ಗಳ ಬೀದರ್‌ ಇವರ ಸಂಯುಕ್ತಾಶ್ರಯದಲ್ಲಿ ನಗರದ ಡಾ.ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾದ ವಿಶ್ವ ವಿಕಲಚೇತನರ ದಿನಾಚರಣೆ ಅಂಗವಾಗಿ ಫಲಾನುಭವಿಗಳಿಗೆ ವಿವಿಧ ಸೌಲಭ್ಯಗಳನ್ನು ವಿತರಿಸಿ ಮಾತನಾಡಿ, ವಿಕಲಚೇತನರ ಅಭಿವೃದ್ಧಿಗಾಗಿ ಅಗತ್ಯ ಸೌಲಭ್ಯಗಳನ್ನು ದೊರಕಿಸಿಕೊಡಲು ಎಲ್ಲ ರೀತಿಯ ಪ್ರಯತ್ನ ಮಾಡುವುದಾಗಿ ತಿಳಿಸಿದರು.ಕೆಕೆಆರ್.ಡಿ.ಬಿ.ವತಿಯಿಂದ ವಿಶೇಷ ಚೇತನರ ಅಭಿವೃದ್ಧಿಗೆ ಒಟ್ಟು ಅನುದಾನದ ಶೇ.5ರಷ್ಟು ಅನುದಾನವನ್ನು ಮೀಸಲಿಡಲು ಪ್ರಸ್ತಾವನೆ ಸಿದ್ಧಪಡಿಸಲಾಗುವುದು. ಜಿಲ್ಲೆಯ ಎಲ್ಲ ವಿಶೇಷಚೇತನರಿಗೆ ವಸತಿ, ನಿವೇಶನಕ್ಕೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ಈಗಾಗಲೇ ಸರ್ಕಾರದಿಂದ ನೀಡುತ್ತಿರುವ ಮಾಶಾಸನವನ್ನು 800 ದಿಂದ 2 ಸಾವಿರಕ್ಕೆ ಹೆಚ್ಚಿಸಲು ಮುಖ್ಯಮಂತ್ರಿಗಳ ಜೊತೆ ಚರ್ಚಿಸ ಲಾಗುವುದು. ವಿಕಲಚೇತನರ ಅಭಿವೃದ್ಧಿಗಾಗಿ ಇರುವ ಎಲ್ಲ ಅನುದಾನವನ್ನು ಸರಿಯಾಗಿ ಬಳಸಿಕೊಳ್ಳಲು ವಿಕಲ ಚೇತನರ ಕೋಶ ಸ್ಥಾಪನೆಗೆ ಸಚಿವ ಸಂಪುಟದಲ್ಲಿ ಚರ್ಚಿಸಲಾಗುವುದೆಂದರು.ಬುದ್ಧಿಮಾಂದ್ಯರು ಸಾಕಷ್ಟು ಒತ್ತಡದಲ್ಲಿದ್ದು, ವಿಶೇಷ ಶಾಲೆಯನ್ನು ಸ್ಥಾಪಿಸಲಾಗುವುದು. ಈಗಾಗಲೇ ಚಾಲ್ತಿಯಲ್ಲಿರುವ ಅಂಧ ಶಾಲೆಗಳಿಗೆ ಹೆಚ್ಚಿನ ಅನುದಾನ ಕೆ.ಕೆ.ಆರ್.ಡಿ.ಬಿ ಯಿಂದ ನೀಡುವಂತೆ ಕ್ರಮಕೈಗೊಳ್ಳಲಾಗುವುದು ಎಂದರು.ಎಲ್ಲ ವಿಕಲಚೇತನರು ಖುದ್ದಾಗಿ ಬಂದು ಅರ್ಜಿ ಹಾಕಲು ಆಗುವುದಿಲ್ಲ. ಅಧಿಕಾರಿಗಳು ಮನೆ ಮನೆಗೆ ತೆರಳಿ ಮಾಶಾಸನ ಹಾಗೂ ಇತರೇ ಸೌಲಭ್ಯ ವಿತರಿಸಲು ಕ್ರಮಕೈಗೊಳ್ಳು ವಂತೆ ಅಧಿಕಾರಿಗಳಿಗೆ ಸೂಚಿಸಿದರು. ತಮ್ಮ ಅನುದಾನದಡಿ 25 ಲಕ್ಷ ರು. ಹಾಗೂ ಸಂಸದರಾದ ಸಾಗರ ಖಂಡ್ರೆ ಅವರ ಅನುದಾನದಡಿ 50 ಲಕ್ಷ ರು. ಖರ್ಚಿನಲ್ಲಿ ವಿಚಲ ಚೇತನರಿಗೆ ವಿಶೇಷ ಸಲಕರಣೆಗಳನ್ನು ವಿತರಿಸಲಾಗುವುದು ಎಂದು ಹೇಳಿದರು.ಪೌರಾಡಳಿತ ಮತ್ತು ಹಜ್ ಖಾತೆ ಸಚಿವ ರಹೀಂ ಖಾನ್ ಮಾತನಾಡಿ, ವಿಶೇಷ ಚೇತನ ಮಕ್ಕಳು ಸಾಮಾನ್ಯ ಮಕ್ಕಳಿಗಿಂತ ಯಾವುದೇ ವಿಭಾಗದಲ್ಲಿ ಕಡಿಮೆ ಇರುವುದಿಲ್ಲ ಅವರ ಪ್ರತಿಭೆಯನ್ನು ಪ್ರೋತ್ಸಾಹಿಸಿ ಹೊರ ತರಲು ಅವರನ್ನು ಪೋಷಕರು ಹಾಗೂ ಶಿಕ್ಷಕರು ಸಹಾನುಭೂತಿಯಿಂದ ಸಹಕರಿಸಬೇಕು ಹಾಗೂ ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯ ಗಳನ್ನು ಪಡೆದುಕೊಳ್ಳಬೇಕೆಂದರು. ಇದೇ ಸಂದರ್ಭದಲ್ಲಿ ವಿಕಲಚೇತನರಿಗೆ ಅಲಿಮಕೋ ಸಂಸ್ಥೆಯಿಂದ ಸಾಧನ ಸಲಕರಣೆ ಹಾಗೂ ಇಲಾಖೆಯಿಂದ ತ್ರಿಚಕ್ರ ವಾಹನ ನೀಡಲಾಯಿತು. ನಗರಸಭೆ ಅಧ್ಯಕ್ಷ ಮಹ್ಮದ ಗೌಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀಧರ ಎಂ.,ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಬಲೀಕರಣ ಅಧಿಕಾರಿ ರತ್ನಸುಭಾಷ, ವಿಕಲಚೇತನರ ಸಂಘ ಸಂಸ್ಥೆಗಳ ಅನೀಲ ಬೆಲ್ದಾರ, ರಾಜು ಕಡ್ಯಾಳ ಸೇರಿದಂತೆ ಸಂಘ ಸಂಸ್ಥೆಯ ಪದಾಧಿಕಾರಿಗಳು, ವಿಶೇಷಚೇತನರು ಉಪಸ್ಥಿತರಿದ್ದರು.

Share this article