ಕನ್ನಡಪ್ರಭ ವಾರ್ತೆ ಹೊಸಪೇಟೆ
ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಜೈ ಭೀಮ್ ಘೋಷಣೆ ಮೂಲಕ ಭಾಷಣ ಆರಂಭಿಸಿ ವಿಜಯನಗರ ಜಿಲ್ಲೆಗೆ ಸಂಬಂಧಪಟ್ಟಂತೆ ಕೆಲವೊಂದು ಬೇಡಿಕೆ ಮುಖ್ಯಮಂತ್ರಿಗಳ ಎದುರು ಇಟ್ಟರು.ಇದೇ ವೇಳೆ ಅಂಬೇಡ್ಕರ್ ಸಂವಿಧಾನದಿಂದ ನಾವು ಈ ಸ್ಥಾನಕ್ಕೆ ಬಂದಿದ್ದೇವೆ ಎಂದು ಹೆಮ್ಮೆಯಿಂದ ಹೇಳಿಕೊಂಡರು.ತುಂಗಭದ್ರಾ ಡ್ಯಾಂಗೆ ಕ್ರಸ್ಟ್‌ಗೇಟ್ ತುಂಡಾದಾಗ ತಾತ್ಕಾಲಿಕವಾಗಿ ಗೇಟ್ ಅಳವಡಿಸಲಾಗಿತ್ತು, ಆದ್ದರಿಂದ ಕಾಯಂ ಗೇಟ್ ಅಳವಡಿಸಬೇಕು. ಇಲ್ಲಿಯ ಜಿಲ್ಲಾಸ್ಪತ್ರೆಯನ್ನು 250 ಹಾಸಿಗೆ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಬೇಕು. ಜಿಲ್ಲಾಧಿಕಾರಿ ಹಾಗೂ ಜಿಪಂ ಕಚೇರಿಗಳ ನೂತನ ಕಟ್ಟಡ ನಿರ್ಮಿಸಬೇಕು ಎಂದು ಬೇಡಿಕೆ ಇಟ್ಟರು.
ಸಕ್ಕರೆ ಕಾರ್ಖಾನೆ ಆರಂಭಿಸಲು ಮುಖ್ಯಮಂತ್ರಿ ಒಪ್ಪಿದ್ದಾರೆ. ಮುಂದಿನ 2 ತಿಂಗಳೊಳಗೆ ಕಟ್ಟಡಕ್ಕೆ ಭೂಮಿಪೂಜೆ ಮಾಡುವುದಾಗಿ ಸಿಎಂ ಹೇಳಿದ್ದಾರೆ ಎಂದು ತಿಳಿಸಿದರು.2 ವರ್ಷದಲ್ಲಿ ರಾಜ್ಯ ಸರ್ಕಾರದ ಕ್ರಾಂತಿಕಾರಕ ಹೆಜ್ಜೆ- ಎಚ್.ಕೆ. ಪಾಟೀಲ:
ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡಿ, ಕೊಟ್ಟ ಮಾತಿನಂತೆ ಕಾಂಗ್ರೆಸ್ ನಡೆದುಕೊಂಡಿದೆ. ರಾಜ್ಯದ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು, ಬಡ ಜನರ ಹಿತ ಕಾಯುವ ಮೂಲಕ ಎರಡು ವರ್ಷದಲ್ಲಿ ಸರ್ಕಾರ ಕ್ರಾಂತಿಕಾರಕ ಹೆಜ್ಜೆ ಇಟ್ಟಿದೆ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಹೇಳಿದರು.ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಕಾಂಗ್ರೆಸ್ ಸರ್ಕಾರ 2 ವರ್ಷಗಳ ಸಮರ್ಪಣೆ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದರು. ಕಾಂಗ್ರೆಸ್ ಸರ್ಕಾರ ಬಡತನವನ್ನು ಬೇರು ಸಮೇತ ಕಿತ್ತು ಹಾಕಿದೆ. ಪ್ರತಿ ಕುಟುಂಬಕ್ಕೂ ವರ್ಷಕ್ಕೆ ₹60 ಸಾವಿರ ಆದಾಯ ಬರುವಂತೆ ಮಾಡಿರುವ ಈ ಸರ್ಕಾರದ್ದು ಬಹುದೊಡ್ಡ ಸಾಧನೆ. ಅಲ್ಲದೇ ಅತಿ ಕಡಿಮೆ ಅವಧಿಯಲ್ಲೇ ಬಡತನ ರೇಖೆಗಿಂತ ಕೆಳಸ್ತರದಲ್ಲಿದ್ದ 1.25 ಕೋಟಿ ಜನರ ಜೀವನ ಸುಧಾರಣೆ ಮಾಡುವ ಕೆಲಸ ಮಾಡಿದೆ ಎಂದರು.ರಾಜ್ಯದಲ್ಲಿ ನ್ಯಾಯದಾನ ವ್ಯವಸ್ಥೆಯಲ್ಲಿ ಬಹುದೊಡ್ಡ ಸುಧಾರಣೆ ತರಲಾಗಿದೆ. ಬಡವರು ಮತ್ತು ಶ್ರೀಮಂತರಿಗೆ ನಡುವೆ ನ್ಯಾಯದಾನ ವಿಚಾರದಲ್ಲಿ ಅನ್ಯಾಯವಾಗುತ್ತಿತ್ತು. ಬಡವರು ಒಂದು ವ್ಯಾಜ್ಯಕ್ಕೆ 8ರಿಂದ 10 ವರ್ಷ ಅಲೆದಾಡುತ್ತಿದ್ದರು. ನ್ಯಾಯದಾನ ವಿಳಂಬ ಆಗಬಾರದೆಂಬ ಕಾರಣಕ್ಕಾಗಿ, ಕಾನೂನುಗಳಲ್ಲಿ ಬದಲಾವಣೆ ತಂದು ಬಡವರಿಗೆ ಆಗುತ್ತಿದ್ದ ಅನ್ಯಾಯ ಸರಿಪಡಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಅವರು, ಸಣ್ಣ, ಅತಿ ಸಣ್ಣ ರೈತರ ಪ್ರಕರಣಗಳನ್ನು 6 ತಿಂಗಳೊಳಗೆ ಇತ್ಯರ್ಥಗೊಳಿಸುವಂತಹ ಕಾನೂನು ಜಾರಿಗೆ ತಂದಿದ್ದೇವೆ ಎಂದು ಹೇಳಿದರು.