ಕನ್ನಡಪ್ರಭ ವಾರ್ತೆ ಪಿರಿಯಾಪಟ್ಟಣರೈತರ ಜೀವನಾಡಿಯಾದ ಕರ್ನಾಟಕ ಹಾಲು ಮಹಾ ಮಂಡಲದಲ್ಲಿ ಪ್ರತಿದಿನ ಒಂದು ಕೋಟಿ ಲೀಟರ್ ಹಾಲು ಉತ್ಪಾದನೆಯಾಗುವ ಮೂಲಕ ಕೆಎಂಎಫ್ ಇತಿಹಾಸದಲ್ಲಿಯೇ ಹೊಸ ಮೈಲಿಗಲ್ಲು ಸೃಷ್ಟಿಯಾಗಿದೆ ಎಂದು ಪಶುಸಂಗೋಪನಾ ಮತ್ತು ರೇಷ್ಮೆ ಖಾತೆ ಸಚಿವ ಕೆ. ವೆಂಕಟೇಶ್ ಮೆಚ್ಚುಗೆ ವ್ಯಕ್ತಪಡಿಸಿದರು.ತಾಲೂಕಿನ ಮರದೂರು ಗೇಟ್, ಮರದೂರು ಮೂಡಲ ಕೊಪ್ಪಲು, ಮಾಕೋಡು ಗ್ರಾಮಗಳಲ್ಲಿ ಬಿಎಂಸಿ ಕೇಂದ್ರ ಉದ್ಘಾಟನೆ ಕೆ. ಬಸವನಹಳ್ಳಿ ಗ್ರಾಮದಲ್ಲಿ ದೊಡ್ಡಮ್ಮ ಚಿಕ್ಕಮ್ಮ ದೇವಾಲಯದ ಉದ್ಘಾಟನೆ ಹಾಗೂ ಹಡಗನಹಳ್ಳಿ ಗ್ರಾಮದ ಗ್ರಾಪಂ ಮೇಲಂತಸ್ತಿನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.ಕರ್ನಾಟಕದಲ್ಲಿ ಹಾಲಿನ ಉತ್ಪಾದನೆ ಕಳೆದ ವರ್ಷ ಜೂನ್ ಮಾಹೆಯಲ್ಲಿ ದಿನವೊಂದಕ್ಕೆ 90 ಲಕ್ಷ ಲೀ.ಇತ್ತು. ಈಗ ಒಂದು ಕೋಟಿಗೆ ಹೆಚ್ಚಳವಾಗಿದೆ ಇದಕ್ಕೆ ಕಾರಣ ಹಿಂದೆ ನಷ್ಟದಲ್ಲಿದ್ದ ಒಕ್ಕೂಟಗಳನ್ನು ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಅವುಗಳ ಪುನಶ್ಚೇತನ ಕೆಲಸ ಆರಂಭಿಸಿ, ರಾಜ್ಯ ಹಾಲು ಮಹಾ ಮಂಡಲದಲ್ಲಿ ರೈತರಿಗಾಗಿ ಎರಡು ಬಾರಿ ರೂ. 7 ನೆರವು ನೀಡಿದರು, ರಾಜ್ಯದಲ್ಲಿ ಸುಮಾರು 16 ಸಾವಿರ ಹಾಲು ಉತ್ಪಾದಕರ ಸಹಕಾರ ಸಂಘಗಳಿದ್ದು, 15 ಹಾಲು ಒಕ್ಕೂಟಗಳಿವೆ. ಕೆಲವೆಡೆ ಎರಡು ಮೂರು ಜಿಲ್ಲೆ ಸೇರಿ ಒಕ್ಕೂಟ ಮಾಡಿಕೊಂಡಿದ್ದಾರೆ. 15 ಮದರ್ ಡೈರಿಗಳಿವೆ. ಒಂದು ಕೋಟಿ ಹಾಲು ಉತ್ಪಾದನೆಯಾಗುತ್ತಿರುವುದರಿಂದ ಅರ್ಧ ಲೀ ಹಾಲಿನ ಪ್ಯಾಕೆಟ್ ನಲ್ಲಿ 50 ಮೀ.ಲೀ ಹಾಲು ಹೆಚ್ಚು ಮಾಡಲಾಗಿದೆ. ಇಷ್ಟು ಹಾಲನ್ನು ಮಾರಾಟ ಮಾಡಬೇಕಿದೆ ಎಂದು ಅವರು ಮಾಹಿತಿ ನೀಡಿದರು.ನಾವು ರೈತರಿಗೆ ಹಾಗೂ ಹಾಲು ಬೇಡ ಎನ್ನಲಾಗುವುದಿಲ್ಲ ರೈತರು ಎಷ್ಟು ಹಾಲು ಉತ್ಪಾದನೆ ಮಾಡಿದರೂ ಒಕ್ಕೂಟ ಅದನ್ನು ಖರೀದಿಸುತ್ತದೆ. ರೈತರಿಗೆ ಸಹಾಯ ಮಾಡಲು ನಂದಿನಿ ಹಾಲಿನ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಹೆಚ್ಚಾಗಿರುವ ಪ್ರಮಾಣಕ್ಕೆ 2 ರೂಪಾಯಿ ಹೆಚ್ಚಿಸಲಾಗಿದೆ. ಒಂದು ಕೋಟಿ ಲೀ. ಉತ್ಪಾದನೆಯಾದರೆ ಒಂದು ದಿನಕ್ಕೆ 5 ಕೋಟಿ ಪ್ರೋತ್ಸಾಹ ಧನವನ್ನು ಸರ್ಕಾರ ಕೊಡುತ್ತದೆ. ಒಂದು ತಿಂಗಳಿಗೆ 150 ಕೋಟಿ, ವರ್ಷಕ್ಕೆ 1800ಕೋಟಿ ರೂ.ಗಳನ್ನು ನೀಡಿ ರೈತರಿಗೆ ಸಹಾಯ ಮಾಡಲಾಗುತ್ತಿದೆ. 2 ರೂ.ಇದ್ದ ಪ್ರೋತ್ಸಾಹಧನವನ್ನು 5 ರೂ. ಗೆಹೆಚ್ಚಿಸಲಾಗಿದೆ ಎಂದರು. ಪಕ್ಷದ ಅಪಪ್ರಚಾರಕ್ಕೆ ಕಿವಿಗೊಡಬೇಡಿ:ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಬಡವರಿಗಾಗಿ, ದೀನ ದಲಿತರಿಗಾಗಿ ಗ್ಯಾರಂಟಿ ಯೋಜನೆ ಸೇರಿದಂತೆ ಅನೇಕ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಅಭಿವೃದ್ದಿಯತ್ತ ಮುನ್ನಡೆಯುತ್ತಿದೆ, ಆದರೆ ಅಭಿವೃದ್ಧಿ ಸಹಿಸದ ಪ್ರತಿಪಕ್ಷದ ಮುಖಂಡರು ಸುಖಸುಮ್ಮನೆ ಅಪಪ್ರಚಾರ ಮಾಡುತ್ತಿದ್ದಾರೆ, ಇವರು ಅಭಿವೃದ್ದಿಯ ವಿರೋಧಿಗಳು ಇವರ ಮಾತಿಗೆ ಸೊಪ್ಪು ಹಾಕಬೇಡಿ. ಬಿಜೆಪಿ, ಜೆಡಿಎಸ್ ನವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ ಎಂದರು.ಜಿಲ್ಲಾ ಮೈಮುಲ್ ನಿರ್ದೇಶಕ ಬಿ.ಎ. ಪ್ರಕಾಶ್, ತಹಸೀಲ್ದಾರ್ ನಿಸರ್ಗ ಪ್ರಿಯಾ, ತಾಪಂ ಇಒ ಸುನಿಲ್ ಕುಮಾರ್, ಎಇಇಗಳಾದ ವೆಂಕಟೇಶ್, ದಿನೇಶ್, ಮಲ್ಲಿಕಾರ್ಜುನ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಕುಸುಮಾ, ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಸೋಮಯ್ಯ, ವಲಯ ಅರಣ್ಯಾಧಿಕಾರಿ ಪದ್ಮಶ್ರೀ, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಈಚೂರು ಲೋಕೇಶ್, ವ್ಯವಸ್ಥಾಪಕ ಕರಿಬಸವರಾಜ್, ವಿಸ್ತರಣಾಧಿಕಾರಿ ಬಿ.ಎನ್. ನಿಶ್ಚಿತ್, ಅವಿನಾಶ್, ಸಹಕಾರ ಅಭಿವೃದ್ದಿ ಅಧಿಕಾರಿ ಹಿತೇಂದ್ರ, ಮರದೂರು ಗೇಟ್ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕಾಳಮರಿಗೌಡ, ಕಾರ್ಯದರ್ಶಿ ಯೋಗೀಶ್, ಮಾಕೋಡು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷೆ ಜಯಮ್ಮ, ಕಾರ್ಯದರ್ಶಿ ಛಾಯದೇವಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಟಿ. ಸ್ವಾಮಿ, ರಹಮತ್ ಜಾನ್ ಬಾಬು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಪರಮೇಶ್, ರಾಜಶೇಖರ್, ಮನು ಉಪಸ್ಥಿತರಿದ್ದರು.