ನ್ಯಾಯಾಲಯದಲ್ಲಿನ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ವಿಳಂಬ - ದುಡ್ಡು ಮಾಡಲು ಚುನಾವಣೆ ಅಡ್ಡಿ ಆಗಲ್ಲವೆ?: ಕೃಷ್ಣ ಬೈರೇಗೌಡ

KannadaprabhaNewsNetwork |  
Published : Aug 24, 2024, 02:03 AM ISTUpdated : Aug 24, 2024, 06:20 AM IST
Krishna Byregoiwda 4 | Kannada Prabha

ಸಾರಾಂಶ

 ಪ್ರಕರಣಗಳನ್ನು ಇತ್ಯರ್ಥಗೊಳಿಸಲು ವಿಳಂಬವಾಗಿದ್ದಕ್ಕೆ ಲೋಕಸಭಾ ಚುನಾವಣೆ ನೆಪ ಹೇಳಿದ ಎಸಿಗಳನ್ನು ತರಾಟೆಗೆ ತೆಗೆದುಕೊಂಡ ಕಂದಾಯ ಸಚಿವ ಕೃಷ್ಣ ಬೈರೇಗೌಡ, ‘ದುಡ್ಡು ಮಾಡಲು ಚುನಾವಣೆ ಅಡ್ಡ ಬರುವುದಿಲ್ಲ. ಆದರೆ, ಜನರ ಕೆಲಸ ಮಾಡಲು ಚುನಾವಣೆ ಅಡ್ಡ ಬರುತ್ತದೆಯೇ’ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

 ಬೆಂಗಳೂರು : ಉಪವಿಭಾಗಾಧಿಕಾರಿ (ಎಸಿ)ಗಳ ನ್ಯಾಯಾಲಯದಲ್ಲಿನ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ವಿಳಂಬವಾಗಿದ್ದಕ್ಕೆ ಲೋಕಸಭಾ ಚುನಾವಣೆ ನೆಪ ಹೇಳಿದ ಎಸಿಗಳನ್ನು ತರಾಟೆಗೆ ತೆಗೆದುಕೊಂಡ ಕಂದಾಯ ಸಚಿವ ಕೃಷ್ಣ ಬೈರೇಗೌಡ, ‘ದುಡ್ಡು ಮಾಡಲು ಚುನಾವಣೆ ಅಡ್ಡ ಬರುವುದಿಲ್ಲ. ಆದರೆ, ಜನರ ಕೆಲಸ ಮಾಡಲು ಚುನಾವಣೆ ಅಡ್ಡ ಬರುತ್ತದೆಯೇ’ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಎ.ಸಿ. ನ್ಯಾಯಾಲಯಗಳಲ್ಲಿನ ತಕರಾರು ಪ್ರಕರಣಗಳನ್ನು ಇತ್ಯರ್ಥಗೊಳಿಸದೆ ಬಾಕಿ ಉಳಿಸಿಕೊಂಡಿರುವ ಮಂಡ್ಯ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ತುಮಕೂರು, ಕೊಪ್ಪಳ, ಮೈಸೂರು, ಮಂಗಳೂರು ಹಾಗೂ ಬೆಳಗಾವಿ ಜಿಲ್ಲೆಗಳ ಆಯ್ದೆ 30 ಉಪ ವಿಭಾಗಾಧಿಕಾರಿಗಳು ಹಾಗೂ ವಲಯ ಆಯುಕ್ತರೊಂದಿಗೆ ಶುಕ್ರವಾರ ವಿಕಾಸಸೌಧದಲ್ಲಿ ವೀಡಿಯೋ ಕಾನ್ಫರೆನ್ಸ್‌ ಮೂಲಕ ಸಭೆ ನಡೆಸಿ ಕೃಷ್ಣ ಬೈರೇಗೌಡ, ಸಮರ್ಪಕವಾಗಿ ಕೆಲಸ ಮಾಡದ ಅಧಿಕಾರಿಗಳಿಗೆ ನೋಟಿಸ್‌ ಜಾರಿ ಮಾಡಿ ಕಠಿಣ ಕ್ರಮ ಕೈಗೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು.

ಹಲವು ವರ್ಷಗಳಿಂದ ಎಸಿ ನ್ಯಾಯಾಲಯಗಳಿಗೆ ಜನರು ಅಲೆದಾಡಿ ಬೇಸತ್ತಿದ್ದಾರೆ. ಬಾಕಿ ಇರುವ ಎಲ್ಲ ಪ್ರಕರಣಗಳನ್ನು ಶೀಘ್ರದಲ್ಲಿ ಇತ್ಯರ್ಥಗೊಳಿಸಬೇಕು ಎಂಬ ಕಾರಣಕ್ಕಾಗಿ ಕಳೆದೊಂದು ವರ್ಷದಿಂದ ನಾನೇ ರಾಜ್ಯಾದ್ಯಂತ ಪ್ರವಾಸ ಮಾಡಿ, ಸಭೆ ನಡೆಸಿ ಅಧಿಕಾರಿಗಳಿಗೆ ಗುರಿ ನಿಗದಿ ಮಾಡಿದ್ದೆ. ಆದರೆ, ಕಳೆದ ಮಾರ್ಚ್‌ನಿಂದ ಪ್ರಕರಣಗಳ ವಿಲೇವಾರಿ ನಿಂತು ಹೋಗಿದೆ. ಚುನಾವಣೆ ನೆಪವೊಡ್ಡಿ ಹಳೇ ವರ್ತನೆಯನ್ನು ಪುನರಾವರ್ತಿಸಿದ್ದಾರೆ. ಇವರಿಗೆ ದುಡ್ಡು ಮಾಡುವುದಕ್ಕೆ ಚುನಾವಣೆ ಅಡ್ಡಿಯಾಗುವುದಿಲ್ಲ? ಅದೇ ಜನಪರ ಕೆಲಸ ಮಾಡಲು ಚುನಾವಣೆ ಅಡ್ಡಿ ಬರುತ್ತದೆಯೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಷ್ಟು ಹಣ ತೆಗೆದುಕೊಂಡಿದ್ದೀರಿ?:

ಸಭೆಯಲ್ಲಿದ್ದ ಹಿರಿಯ ಅಧಿಕಾರಿಗಳು, ‘ರಾಜ್ಯಾದ್ಯಂತ ಎ.ಸಿ. ನ್ಯಾಯಾಲಯಗಳಲ್ಲಿ ಒಟ್ಟು 36,430 ಪ್ರಕರಣಗಳು ಬಾಕಿಯಿವೆ. ಆ ಪೈಕಿ ಬೆಂಗಳೂರು ಉತ್ತರ ವಲಯದಲ್ಲಿ 5,419 ಹಾಗೂ ಬೆಂಗಳೂರು ದಕ್ಷಿಣ ವಲಯದಲ್ಲಿಯೇ 4,351 ಪ್ರಕರಣಗಳು ಬಾಕಿಯಿವೆ. ಈ ಎರಡೂ ವಿಭಾಗದಲ್ಲಿ ಅಧಿಕಾರಿಗಳು ತಮ್ಮ ಕಾರ್ಯಕ್ಷೇತ್ರಕ್ಕಿಂತ ಹೊರಗಿನ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ’ ಎಂದು ಸಚಿವರ ಗಮನಕ್ಕೆ ತಂದರು.

ಅದರಿಂದ ಸಿಟ್ಟಾದ ಕೃಷ್ಣ ಬೈರೇಗೌಡ, ‘ನಿಮ್ಮ ಕಾರ್ಯಕ್ಷೇತ್ರವಲ್ಲದ ಕಡೆಯಲ್ಲಿನ ಪ್ರಕರಣಗಳನ್ನು ಕಾನೂನು ಬಾಹಿರವಾಗಿ ದಾಖಲಿಸಿಕೊಂಡಿದ್ದೀರಿ. ಹೀಗೆ ಮಾಡಲು ಎಷ್ಟು ಹಣ ಪಡೆದಿದ್ದೀರಿ’ ಎಂದು ಎ.ಸಿ.ಗಳಾದ ಪ್ರಮೋದ್‌ ಪಾಟೀಲ್‌ ಮತ್ತು ರಜನೀಕಾಂತ್‌ ಚೌವ್ಹಾಣ್‌ ತರಾಟೆಗೆ ತೆಗೆದುಕೊಂಡರು.

ತುಮಕೂರು ಜಿಲ್ಲೆಯ ಎ.ಸಿ. ನ್ಯಾಯಾಲಯದಲ್ಲಿ ಕಳೆದ ಮಾರ್ಷ್‌ನಿಂದ 1,373 ಪ್ರಕರಣಗಳು ಹಾಗೂ ಮಧುಗಿರಿಯಲ್ಲಿ 898 ಪ್ರಕರಣಗಳು ದಾಖಲಾಗಿವೆ. ಕಳೆದ ಐದು ತಿಂಗಳಿನಿಂದ ಮಧುಗುರಿ ಎ.ಸಿ. ಶಿವಪ್ಪ ಹಾಗೂ ತುಮಕೂರು ಎ.ಸಿ. ಗೌರವ್‌ ಶೆಟ್ಟಿ ಒಂದೂ ಪ್ರಕರಣವನ್ನು ಇತ್ಯರ್ಥಗೊಳಿಸದೇ ಇರುವುದನ್ನು ಗಮನಕ್ಕೆ ಬರುತ್ತಿದ್ದಂತೆ, ಇಬ್ಬರ ಮೇಲೂ ಕೃಷ್ಣ ಬೈರೇಗೌಡ ಅಸಮಧಾನ ವ್ಯಕ್ತಪಡಿಸಿದರು. ಅಲ್ಲದೆ, ಎ.ಸಿ. ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳ ಇತ್ಯರ್ಥಕ್ಕೆ ಮುಂದಾಗದ ಅಧಿಕಾರಿಗಳಿಗೆ ನೋಟೀಸ್‌ ಜಾರಿಗೊಳಿಸಿ ಕಠಿಣ ಕ್ರಮ ಜರುಗಿಸುವಂತೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ್‌ ಕಟಾರಿಯಾ ಅವರಿಗೆ ಸೂಚಿಸಿದರು. ಕಂದಾಯ ಇಲಾಖೆ ಆಯುಕ್ತ ಸುನೀಲ್‌ ಕುಮಾರ್‌, ಪ್ರಾದೇಶಿಕ ಆಯುಕ್ತ ಆದಿತ್ಯ ಬಿಸ್ವಾಸ್‌ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಗಳಿಂದ ಮಕ್ಕಳ ಶಿಕ್ಷಣ ಕಸಿಯುವ ಹುನ್ನಾರ
ಭಾರತದ ಭವಿಷ್ಯ ವರ್ಗ ಕೋಣೆಯಲ್ಲಿದೆ