ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಬಿಜೆಪಿಯ ಹಿರಿಯ ಶಾಸಕ, ಮಾಜಿ ಸಚಿವ ಆರಗ ಜ್ಞಾನೇಂದ್ರ ಬಗ್ಗೆ ಶಾಲಾ ಶಿಕ್ಷಣ, ಉಸ್ತುವಾರಿ ಸಚಿವ ಎಸ್. ಮಧುಬಂಗಾರಪ್ಪ ಅವರು, ಇತ್ತೀಚೆಗೆ ತೀರ್ಥಹಳ್ಳಿಯಲ್ಲಿ ಉಪಯೋಗಿಸಿದ ಪದಬಳಕೆ ಸರಿಯಲ್ಲ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಕೆ. ಜಗದೀಶ್ ವಾಗ್ದಾಳಿ ನಡೆಸಿದರು.ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಶಿಕ್ಷಣ ಸಚಿವರು ಇನ್ನೊಬ್ಬರ ಬಗ್ಗೆ ಕೀಳುಶಬ್ಧ ಪ್ರಯೋಗಿಸಿ ಮಾತನಾಡುವುದನ್ನು ಬಿಟ್ಟು ರಾಜಕೀಯ ಪ್ರಜ್ಞೆ ತೋರಿಸಬೇಕು. ಈಗ ಅವರು ತಾವು ಅಪ್ರಭುದ್ಧರು. ಶಿಕ್ಷಣ ಇಲ್ಲದ ಶಿಕ್ಷಣ ಸಚಿವರು ಎಂಬುದಾಗಿ ರುಜುವಾತು ಪಡಿಸಿದ್ದಾರೆ. ಈ ಹಿಂದೆ ವಿಶ್ವೇಶ್ವರ ಹೆಗಡೆ ಕಾಗೇರಿ, ಸುರೇಶ್ ಕುಮಾರ್, ಕಾಂಗ್ರೆಸ್‌ನವರೇ ಆದ ತನ್ವೀರ್ ಸೇಟ್ ಮೊದಲಾದವರೂ ಶಿಕ್ಷಣ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ವಿರೋಧ ಪಕ್ಷದವರ ಬಗ್ಗೆ ಈ ತರಹದ ಭಾಷೆ ಬಳಕೆ ಮಾಡಿರಲಿಲ್ಲ. ಆದರೆ ಸಚಿವ ಮಧುಬಂಗಾರಪ್ಪ ಅವರು ರಾಜಕೀಯ ರೇಖೆಗಳನ್ನು ದಾಟಿ ಮಾತನಾಡಿದ್ದಾರೆ. ಬಿಜೆಪಿಯವರ ಬಗ್ಗೆ ಇನ್ನು ಮುಂದೆ ಮಾತನಾಡಿದರೆ ‘ಹುಷಾರ್’ ಎಂದು ಎಚ್ಚರಿಕೆ ನೀಡಿದರು.
ಸಚಿವ ಮಧು ಅವರು ಜಿಎಸ್‌ಟಿ ಯಾವುದೇ ತಿಳುವಳಿಕೆ ಹೊಂದಿಲ್ಲ. 2024-25, 2025-26ರಲ್ಲಿ ರಾಜ್ಯಕ್ಕೆ ಏನು ಅನುದಾನ ತಂದಿದ್ದೀರಿ ಎಂಬುದರ ಬಗ್ಗೆ ಉತ್ತರಿಸಬೇಕು. ಜಿಎಎಸ್‌ಟಿ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿರುವ ಸಚಿವ ಮಧು ಅವರು ಸಚಿವ ಕೃಷ್ಣೇಭೈರೇಗೌಡರಿಂದ ಟ್ಯೂಷನ್ ತೆಗೆದುಕೊಳ್ಳಲಿ ಎಂದು ವ್ಯಂಗ್ಯವಾಡಿದರು.ಮಧು ಅವರು ಆರಗ ಜ್ಞಾನೇಂದ್ರ 420 ಸಚಿವರು ಎಂದು ಮೂದಲಿಸಿದ್ದಾರೆ. ನಾವು ಮಧು ಅವರಿಗೆ ಈ ಭಾಷೆ ಬಳಸಿದರೆ ಹೇಗಿರುತ್ತದೆ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್‌ನವರು ಕೇವಲ ಗ್ಯಾರೆಂಟಿಗಳ ಬಗ್ಗೆ ಮಾತನಾಡುತ್ತಾ, ಅಭಿವೃದ್ಧಿ ಕಾರ್ಯವನ್ನೇ ಮರೆತ್ತಿದ್ದಾರೆ. ಶಕ್ತಿಯೋಜನೆಯನ್ನು ಜಾರಿಗೊಳಿಸಿ ಪುರುಷರಿಗೆ ಮೋಸ ಮಾಡುತ್ತಿದ್ದಾರೆ. ಅನ್ಯಭಾಗ್ಯದಲ್ಲೂ ಮೋಸ ನಡೆಯುತ್ತಿದೆ. ಸಾರ್ವಜನಿಕರ ತೆರಿಗೆ ಹಣವನ್ನು ಗ್ಯಾರೆಂಟಿ ಸಮಿತಿಯವರ ವೇತನಕ್ಕೆ ಉಪಯೋಗಿಸಲಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಮೊದಲು ರೈತರ ಬಗ್ಗೆ, ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯುವ ಬಗ್ಗೆ ಗಮನಹರಿಸಬೇಕು ಎಂದು ಸಲಹೆ ನೀಡಿದರು.
ಗೋಷ್ಠಿಯಲ್ಲಿ ಎಂಎಲ್‌ಸಿ ಡಿ.ಎಸ್. ಅರುಣ್, ಸಿ.ಎಚ್. ಮಾಲತೇಶ್, ಕೆ.ವಿ. ಅಣ್ಣಪ್ಪ, ಚಂದ್ರಶೇಖರ್ ಮತ್ತಿತರರು ಇದ್ದರು.