ಸಚಿವ ಮಧು ನಾಲಿಗೆ ಮೇಲೆ ಹಿಡಿತ ಇಟ್ಟುಕೊಳ್ಳಲಿ: ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ

KannadaprabhaNewsNetwork |  
Published : Mar 29, 2024, 12:45 AM IST
ಸಂಸದ ಬಿ. ವೈ. ರಾಘವೇಂದ್ರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಶಿವಮೊಗ್ಗ ಕ್ಷೇತ್ರದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸಾರ್ವಜನಿಕ ಸಭೆಗಳಲ್ಲಿ ಬಳಸುವ ಪದಗಳು ಅಸಹ್ಯ ಹುಟ್ಟಿಸುತ್ತವೆ. ಇದು ಬೇಸರ ತರಿಸುತ್ತಿದೆ. ಇಡೀ ವಿಶ್ವವೇ ಕೊಂಡಾಡುವ ಪ್ರಧಾನಿ ನರೇಂದ್ರ ಮೋದಿಯವರ ಕುರಿತು ಕೀಳು ಅಭಿರುಚಿಯ ಮಾತುಗಳ ಆಡುವುದು ಸರಿಯಲ್ಲ. ನಾವೇನು ಪುಕ್ಸಟೆ ಬಂದಿದ್ದೇವಾ ಎಂದು ಹಗುರವಾಗಿ ಮಾತನಾಡುವ ಪ್ರಯತ್ನ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಚುನಾವಣೆಯಲ್ಲಿ ಸಾಮಾನ್ಯವಾಗಿ ಅಭಿವೃದ್ಧಿ ವಿಷಯ ಇಟ್ಟುಕೊಂಡು ಚುನಾವಣಾ ಪ್ರಚಾರ ಮಾಡುವುದು ವಾಡಿಕೆ. ಆದರೆ ಶಿವಮೊಗ್ಗದಲ್ಲಿ ಈ ಬಾರಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ನಾಲಿಗೆ ಮೇಲೆ ಹಿಡಿತ ಇಲ್ಲದಂತೆ ಅಸಹ್ಯ ತರುವಂತಹ ಮಾತನಾಡುತ್ತಿದ್ದು, ಶಿಕ್ಷಣ ಸಚಿವರಾಗಿ ಇನ್ನು ಮುಂದಾದರೂ ತಮ್ಮ ಮಾತಿನ ಮೇಲೆ ಹಿಡಿತ ಇಟ್ಟುಕೊಳ್ಳಬೇಕು ಎಂದು ಸಂಸದ ಹಾಗೂ ಬಿಜೆಪಿ ಅಭ್ಯರ್ಥಿ ಬಿ. ವೈ.ರಾಘವೇಂದ್ರ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ನಾಲಿಗೆ ಅವರ ಸಂಸ್ಕೃತಿ ತೋರಿಸುತ್ತದೆ ಎನ್ನುತ್ತಾರೆ. ಇದು ನನ್ನ ಅನುಭವಕ್ಕೆ ಬರುತ್ತಿದೆ ಎಂದು ವ್ಯಂಗ್ಯವಾಡಿದರು. ನಾವು ರಾಷ್ಟ್ರದ ಹಿತ ಚಿಂತನೆ, ಅಭಿವೃದ್ಧಿ ಇಟ್ಟುಕೊಂಡು ಚುನಾವಣೆ ಮಾಡುತ್ತಿದ್ದೇವೆ. 400ಕ್ಕೂ ಹೆಚ್ಚು ಸೀಟುಗಳ ಗುರಿ ಹಿಡಿದು ಬಿಜೆಪಿ ಹೊರಟಿದೆ. ಇದಕ್ಕೆ ಪೂರಕ ಎನ್ನುವಂತೆ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ರಾಜ್ಯಸಭೆಯಲ್ಲಿ ಬಿಜೆಪಿ 400ಕ್ಕೂ ಅಧಿಕ ಸ್ಥಾನಗಳಿಸುತ್ತದೆ ಎಂಬ ಮಾತು ಆಡಿದ್ದು, ಇದನ್ನು ನಾವು ನಿಜ ಮಾಡಲಿದ್ದೇವೆ ಎಂದರು.

ಕೀಳು ಅಭಿರುಚಿ ಮಾತುಗಳು ಸರಿಯಲ್ಲ:

ಶಿವಮೊಗ್ಗ ಕ್ಷೇತ್ರದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸಾರ್ವಜನಿಕ ಸಭೆಗಳಲ್ಲಿ ಬಳಸುವ ಪದಗಳು ಅಸಹ್ಯ ಹುಟ್ಟಿಸುತ್ತವೆ. ಇದು ಬೇಸರ ತರಿಸುತ್ತಿದೆ. ಇಡೀ ವಿಶ್ವವೇ ಕೊಂಡಾಡುವ ಪ್ರಧಾನಿ ನರೇಂದ್ರ ಮೋದಿಯವರ ಕುರಿತು ಕೀಳು ಅಭಿರುಚಿಯ ಮಾತುಗಳ ಆಡುವುದು ಸರಿಯಲ್ಲ. ನಾವೇನು ಪುಕ್ಸಟೆ ಬಂದಿದ್ದೇವಾ ಎಂದು ಹಗುರವಾಗಿ ಮಾತನಾಡುವ ಪ್ರಯತ್ನ ಮಾಡಿದ್ದಾರೆ ಎಂದರು. ಒಬ್ಬ ಶಿಕ್ಷಣ ಸಚಿವನಾಗಿ ಮಕ್ಕಳಿಗೆ, ಹಿರಿಯರಿಗೆ ಮಾದರಿಯಾಗಿ ಮಾತನಾಡಬೇಕು. ಬೌದ್ಧಿಕ ಶಕ್ತಿ ತುಂಬಬೇಕಾದ ನಾಲಿಗೆಯಿಂದ ತಮ್ಮ ಸಂಸ್ಕೃತಿ ಅನಾವರಣ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಸಂಸದರಾಗಿ ರಾಘವೇಂದ್ರ ಏನು ಸಾಧನೆ ಮಾಡಿದ್ದಾರೆ ಎಂದು ಪದೇ ಪದೇ ಕೇಳುತ್ತಾರೆ. ಸಂಸತ್‌ ನಲ್ಲಿ ಏನು ಮಾತನಾಡಿದ್ದೇನೆ ಎಂದು ಕೇಳುತ್ತಿದ್ದಾರೆ. ದಾಖಲೆ ಸಮೇತ ಎಲ್ಲವನ್ನೂ ಕೊಡುತ್ತಿದ್ದೇನೆ ಎಂದು ಪತ್ರಿಕಾಗೋಷ್ಠಿಯಲ್ಲಿ ದಾಖಲೆ ಪ್ರದರ್ಶಿಸಿದರು.

ಸಾಗುವಳಿ ಹಕ್ಕುಪತ್ರ ವಿತರಣೆಗೆ ಸಿದ್ಧತೆ:

ಸುಮಾರು 65 ವರ್ಷ ಅಧಿಕಾರದಲ್ಲಿದ್ದ ಕಾಂಗ್ರೆಸ್ ಶರಾವತಿ ಮುಳುಗಡೆ ಸಂತ್ರಸ್ತರಿಗಾಗಿ ಏನೂ ಮಾಡಲಿಲ್ಲ. ಆಗ ಅರಣ್ಯ ಸಂರಕ್ಷಣಾ ಕಾಯಿದೆ ಜಾರಿಯಲ್ಲಿ ಇರಲಿಲ್ಲ. ರಾಜ್ಯ ಸರ್ಕಾರವೇ ಹಕ್ಕುಪತ್ರ ನೀಡುವ ಅಧಿಕಾರ ಹೊಂದಿದ್ದರು. ಆಗ ಏನೂ ಮಾಡದ ಇವರು ಈಗ ಬಿಜೆಪಿ ಏನು ಮಾಡುತ್ತಿದೆ ಎಂದು ಪ್ರಶ್ನಿಸುತ್ತಿದ್ದಾರೆ. ಕಾನೂನಿನ ಚೌಕಟ್ಟಿನಲ್ಲಿ ಸಾಗುವಳಿ ಹಕ್ಕುಪತ್ರ ನೀಡಲು ಎಲ್ಲಾ ರೀತಿಯಿಂದಲೂ ಮುಂದುವರಿಯಲಾಗುತ್ತಿದೆ. ಬಗರ್‌ ಹುಕುಂ ಹಕ್ಕುಪತ್ರ ನೀಡುವ ವಿಚಾರದಲ್ಲಿಯೂ ಇದೇ ರೀತಿ ಕೆಲಸ ಮಾಡುತ್ತಿದ್ದೇವೆ. ವಿಐಎಸ್ಎಲ್ ಕಾರ್ಖಾನೆ ಉಳಿಸಲು ಏನು ಮಾಡಿದ್ದೇನೆ ಎಂಬುದಕ್ಕೆ ದಾಖಲೆಯಿದೆ. ವಿಐಎಸ್‌ಎಲ್ ಕಾರ್ಖಾನೆ ಕೇವಲ ಒಂದು ರುಪಾಯಿಗೆ ಕೇಂದ್ರಕ್ಕೆ ಬರೆದುಕೊಟ್ಟ ಇವರ ಪಕ್ಷ ಆಗ ಇದರ ಪುನರುಜ್ಜೀವನಕ್ಕೆ ಬೇಕಾದ ಪತ್ರ ಏಕೆ ತೆಗೆದುಕೊಳ್ಳಲಿಲ್ಲ ಎಂದು ಪ್ರಶ್ನಿಸಿದರು.

ಪ್ರಧಾನಿ ನರೇಂದ್ರ ಮೋದಿ ಜಿಲ್ಲೆಗೆ ಬಂದಾಗ ಅವರಿಗೆ ಈ ಸಮಸ್ಯೆಗಳ ಬಗ್ಗೆ ಮಾಹಿತಿ ಒದಗಿಸಲಾಗಿದೆ. ಮೋದಿಯವರು ಕೆಲಸ ಮಾಡುವ ಮೊದಲು ಯಾವುದೇ ಆಶ್ವಾಸನೆ ನೀಡುವವರಲ್ಲ ಎಂಬುದು ಇದುವರೆಗೆ ಸಾಬೀತಾಗಿದೆ. ಕೆಲಸ ಮಾಡಿ ತೋರಿಸುತ್ತಾರೆ. ಮೋದಿ ಬಂದು ಮಾತನಾಡಿ ಹೋಗಿರುವ ಮೈಕಿನ ಕರೆಂಟ್ ನಮ್ಮಪ್ಪ ಕೊಟ್ಟಿದ್ದು ಎಂದು ಮಧು ಬಂಗಾರಪ್ಪ ಉಡಾಫೆಯ ಮಾತನಾಡಿದ್ದಾರೆ. ಆದರೆ ಶರಾವತಿ ಮುಳುಗಡೆ ಸಂತ್ರಸ್ತರ ತ್ಯಾಗದಿಂದ ನಾಡಿಗೆ ವಿದ್ಯುತ್ ಸಿಕ್ಕಿದೆ ಎಂಬುದು ಸಚಿವರು ಮೊದಲು ತಿಳಿದುಕೊಳ್ಳಬೇಕು ಟಾಂಗ್‌ ನೀಡಿದರು.

ಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್‌, ವಿಧಾನಪರಿಷತ್‌ ಸದಸ್ಯರಾದ ಎಸ್. ರುದ್ರೇಗೌಡರು, ಡಿ. ಎಸ್‌. ಅರುಣ್‌, ಪಕ್ಷದ ನಾಯಕರಾದ ಆರ್‌. ಕೆ. ಸಿದ್ದರಾಮಣ್ಣ, ಹೆಚ್‌. ಟಿ. ಬಳಿಗಾರ್‌, ಎಸ್‌. ದತ್ತಾತ್ರಿ, ಎಸ್‌. ಎಸ್‌.ಜ್ಯೋತಿ ಪ್ರಕಾಶ್‌, ಶಿವರಾಜ್‌, ಹರೀಶ್‌, ಗಾಯತ್ರಿ ಮಲ್ಲಪ್ಪ, ಸುಧಾಕರ್‌, ಗಿರೀಶ್‌, ಮಾಲತೇಶ್‌ ಜಗದೀಶ್‌, ಎಸ್‌. ಚಂದ್ರಶೇಖರ್‌, ಅಣ್ಣಪ್ಪ ಮತ್ತಿತರರಿದ್ದರು.

ಬಂಗಾರಪ್ಪ ಚುನಾವಣೆಗೆ ಇದೇ ಚೇಲಾಗಳಿಂದ ಬೆಂಬಲ

ಶಿಕಾರಿಪುರದಲ್ಲಿ ಬಿಜೆಪಿ ಕಾರ್ಯಕರ್ತರ ಚೇಲಾಗಳೆಂದು ಉಲ್ಲೇಖಿಸಿದ್ದಾರೆ. ಇವರು ಬಿಜೆಪಿ ಕಾರ್ಯಕರ್ತರಿಗೆ ಚೇಲಾ ಎಂದು ಕರೆಯುವುದೇ ಹೌದಾದರೆ, ಇದೇ ಚೇಲಾಗಳೇ ನಿಮ್ಮ ತಂದೆಯವರಿಗೆ ಚುನಾವಣೆಯಲ್ಲಿ ಬೆಂಬಲಕ್ಕೆ ನಿಂತವರು ಎಂಬುದು ಮರೆಯಬಾರದು ಎಂದು ಟಾಂಗ್‌ ನೀಡಿದರು. ಜೊತೆಗೆ ಮಧು ಬಂಗಾರಪ್ಪನವರು ಪುಕ್ಸಟೆ ದುಡ್ಡು, ಹಡಬಿಟ್ಟಿ ದುಡ್ಡು ಇಂತಹ ಕೆಟ್ಟ ಭಾಷೆಗಳ ಬಳಸುತ್ತಿದ್ದಾರೆ. ಇವರ ಇಂತಹ ಮಾತುಗಳ ಬಗ್ಗೆ ಸ್ವತಃ ಕಾಂಗ್ರೆಸ್‌ ಪಕ್ಷದಲ್ಲಿಯೇ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ ಎಂದು ರಾಘವೇಂದ್ರ ಹೇಳಿದರು.

ಈಶ್ವರಪ್ಪ ವಿಚಾರದಲ್ಲಿ ತಾಳ್ಮೆಯಿಂದ ಕಾಯುತ್ತಿದ್ದೇವೆ:

* ನಾವು ಆಶಾವಾದಿಗಳು, ಒಳ್ಳೆಯದಾಗುತ್ತೆ ಎನ್ನುವ ವಿಶ್ವಾಸವಿದೆ

ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಬಂಡಾಯ ವಿಚಾರ ಕುರಿತು ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಬಿಜೆಪಿ ಅಭ್ಯರ್ಥಿ, ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ಎಲ್ಲವೂ ಸರಿ ಹೋಗಲಿದೆ. ನಾವು ಇನ್ನೂ ತಾಳ್ಮೆಯಿಂದ ಕಾಯುತ್ತಿದ್ದೇವೆ. ಈಶ್ವರಪ್ಪನವರು ದೊಡ್ಡವರು. ಪಕ್ಷದ ನಾಯಕರು ಈ ಬಗ್ಗೆ ಕ್ರಮ ಕೈಗೊಳ್ಳುತ್ತಾರೆ ಎಂದರು. ನಮ್ಮ ಕುಟುಂಬದ ಬಗ್ಗೆ ಮಾತನಾಡಿದ್ದರಿಂದ ಮಾತ್ರ ಆ ಬಗ್ಗೆ ಪ್ರತಿಕ್ರಿಯೆ ನೀಡುತ್ತೇನೆ. ನಾವು ಜಿಲ್ಲೆಗೆ ಏನೇನು ಮಾಡಿದ್ದೇವೆ ಎಂಬುದು ಎಲ್ಲರಿಗೂ ಗೊತ್ತಿದೆ. ನಾವು ಈ ಜಿಲ್ಲೆಯ ಜನರಿಗೆ ಭಾರವಾಗಿದ್ದೇವಾ ಅಥವಾ ಜಿಲ್ಲೆಯ ಅಭಿವೃದ್ಧಿ ಮಾಡಿದ್ದೇವಾ? ಎಂಬುದಕ್ಕೆ ಇಲ್ಲಿನ ಮತದಾರರು ಉತ್ತರ ನೀಡುತ್ತಲೇ ಇದ್ದಾರೆ. ಮುಂದೆ ಕೂಡ ಉತ್ತರ ನೀಡಲಿದ್ದಾರೆ ಎಂದರು.

ಹಿಂದುತ್ವದ ಬಗ್ಗೆ ಈಶ್ವರಪ್ಪನವರು ಮಾತನಾಡುತ್ತಿದ್ದಾರೆ. ನಾನು ಓದಿದ್ದು ಕೂಡ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಾಲೆಯಲ್ಲಿ. ಆ ಸಂಸ್ಕಾರ ನಮಗೂ ಕೂಡ ಇದೆ. ಹಿಂದುತ್ವದ ಬಗ್ಗೆ ಹೇಳಿ ಪ್ರಚಾರ ತಗೊಳೋ ಅವಶ್ಯಕತೆ ನಮಗಿಲ್ಲ ಎಂದರು. ಹಿಂದುತ್ವ, ನಮ್ಮ ಕುಟುಂಬದ ಬಗ್ಗೆ ಮಾತಾಡಿದಕ್ಕೆ ನೋವಾಗಿದೆ. ಬರುವಂತಹ ದಿನಗಳಲ್ಲಿ ಒಳ್ಳೆಯದಾಗಲಿದೆ. ನಾವು ಆಶಾವಾದಿಗಳು, ಒಳ್ಳೆಯದಾಗುತ್ತೆ ಎನ್ನುವ ವಿಶ್ವಾಸ ಇದೆ ಎಂದರು

ನಾವು ಯಾರಿಗೂ ಬೆದರಿಕೆ ಹಾಕಿಲ್ಲ. ಆ ಪರಿಸ್ಥಿತಿ ಇನ್ನೂ ನಮ್ಮ ನಡುವೆ ಬಂದಿಲ್ಲ. ಎಲ್ಲರೂ ನಮ್ಮವರೇ ಎಂದರು.

-

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!