ಕಾರವಾರ: ಹೊನ್ನಾವರ ತಾಲೂಕಿನ ಸಚಿವರ ಕಚೇರಿಯಲ್ಲಿ ಶನಿವಾರ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಗ್ರಾಮಗಳ ಜನತೆಯ ಸಮಸ್ಯೆಗಳನ್ನು ಆಲಿಸಿದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್ ವೈದ್ಯಸಾರ್ವಜನಿಕರ ಎಲ್ಲ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿದರು.ಜನತಾ ದರ್ಶನ ಕಾರ್ಯಕ್ರಮದಲ್ಲಿ 100ಕ್ಕೂ ಅಧಿಕ ಮನವಿಗಳನ್ನು ಆಲಿಸಿದ ಸಚಿವರು ಹಲವು ಸಮಸ್ಯೆಗಳ ಕುರಿತಂತೆ ಸಂಬಂದಪಟ್ಟ ಅಧಿಕಾರಿಗಳೊಂದಿಗೆ ದೂರವಾಣಿಯಲ್ಲಿ ಸೂಕ್ತ ನಿರ್ದೇಶನ ನೀಡಿ ಶೀಘ್ರದಲ್ಲಿ ಅವುಗಳಿಗೆ ಪರಿಹಾರ ಒದಗಿಸುವಂತೆ ಸೂಚಿಸಿದ್ದು ಮಾತ್ರವಲ್ಲದೇ ಕೆಲವು ಸಮಸ್ಯೆಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ನಿರ್ದೇಶನ ನೀಡಿದರು.
ವಸತಿ ಸಮಸ್ಯೆಯ ಬಗ್ಗೆ ತಿಳಿಸಿದ ಸಾರ್ವಜನಿಕರ ಮನವಿಗಳನ್ನು ಆಲಿಸಿದ ಸಚಿವರು, ಈ ಪ್ರದೇಶಗಳಿಗೆ ಖುದ್ದು ಭೇಟಿ ನೀಡುವಂತೆ ಆಪ್ತ ಸಹಾಯಕರಿಗೆ ಸೂಚಿಸಿದರು. ಮನೆಯ ಬಗ್ಗೆ ಮನವಿ ಸಲ್ಲಿಸಿದ ಮೀನುಗಾರರಿಗೆ ಆದ್ಯತೆಯಲ್ಲಿ ಮನೆ ಒದಗಿಸುವುದಾಗಿ ತಿಳಿಸಿದರು.