ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಸಚಿವ ಎಂಬಿಪಾ ಆರ್ಥಿಕ ನೆರವು

KannadaprabhaNewsNetwork | Published : Oct 16, 2024 12:41 AM

ಸಾರಾಂಶ

ನೀಟ್ ಪಾಸಾಗಿ ಸರಕಾರಿ ಕೋಟಾದಡಿ ಎಂಬಿಬಿಎಸ್‌ ಸೀಟು ಪಡೆದರೂ ಶುಲ್ಕ ಭರಿಸಲಾಗದೇ ಹಣದ ಸಮಸ್ಯೆ ಎದುರಿಸುತ್ತಿದ್ದ ಐದು ಜನ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕೋರ್ಸ್‌ಗೆ ಅಗತ್ಯವಾಗಿರುವ ಸಂಪೂರ್ಣ ಹಣದ ನೆರವು ನೀಡುವ ಮೂಲಕ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಸಹಾಯ ಹಸ್ತ ಚಾಚಿದ್ದಾರೆ.

ಕನ್ನಡಪ್ರಭ ವಾರ್ತೆ ವಿಜಯಪುರ

ನೀಟ್ ಪಾಸಾಗಿ ಸರಕಾರಿ ಕೋಟಾದಡಿ ಎಂಬಿಬಿಎಸ್‌ ಸೀಟು ಪಡೆದರೂ ಶುಲ್ಕ ಭರಿಸಲಾಗದೇ ಹಣದ ಸಮಸ್ಯೆ ಎದುರಿಸುತ್ತಿದ್ದ ಐದು ಜನ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕೋರ್ಸ್‌ಗೆ ಅಗತ್ಯವಾಗಿರುವ ಸಂಪೂರ್ಣ ಹಣದ ನೆರವು ನೀಡುವ ಮೂಲಕ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಸಹಾಯ ಹಸ್ತ ಚಾಚಿದ್ದಾರೆ.

ನಗರದಲ್ಲಿರುವ ಗೃಹ ಕಚೇರಿಯಲ್ಲಿ ತಿಕೋಟಾ ತಾಲೂಕಿನ ಬಾಬಾನಗರದ ವಿಶಾಲ ರಾಯಗೊಂಡ ಕೋರೆಗಾಂವ, ಅರಕೇರಿಯ ಕರಣ ಪಂಡಿತ ಸಿಂಧೆ ಮತ್ತು ಯಶವಂತ ಮಾರುತಿ ಮೋಹಿತೆ, ಬಬಲೇಶ್ವರ ತಾಲೂಕಿನ ಕಾರಜೋಳ ತಾಂಡಾದ ಅಜೀತ ಪರಶುರಾಮ ರಾಠೋಡ ಹಾಗೂ ಕಂಬಾಗಿಯ ರಾಜಶ್ರೀ ಮಲ್ಲಿಕಾರ್ಜುನ ಮಠ ಅವರಿಗೆ ಸಚಿವರು ಎಂ.ಬಿ.ಬಿ.ಎಸ್. ಕೋರ್ಸ್‌ನ ಮೊದಲ ವರ್ಷದ ಬೋಧನೆ ಶುಲ್ಕ, ಹಾಸ್ಟೆಲ್ ಶುಲ್ಕ ಮತ್ತು ಊಟದ ಶುಲ್ಕಕ್ಕೆ ಅಗತ್ಯವಾಗಿರುವ ಹಣದ ಚೆಕ್ ವಿತರಿಸಿದರು.ಈ ಸಂದರ್ಭದಲ್ಲಿ ಬಿಎಲ್‌ಡಿಇ ಸಂಸ್ಥೆಯ ಮುಖ್ಯ ಸಲಹೆಗಾರ ಮತ್ತು ಡೀಮ್ಡ್ ವಿಶ್ವವಿದ್ಯಾಲಯದ ರಜಿಸ್ಟ್ರಾರ್ ಡಾ.ಆರ್.ವಿ.ಕುಲಕರ್ಣಿ, ಬಿ.ಎಲ್.ಡಿ.ಇ ಸಂಸ್ಥೆಯ ಆಡಳಿತ ಕಚೇರಿಯ ಅಧೀಕ್ಷಕ ಎಸ್.ಎ.ಬಿರಾದಾರ(ಕನ್ನಾಳ) ಹಾಗೂ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.ಬಾಬಾನಗರದ ವಿದ್ಯಾರ್ಥಿ ವಿಶಾಲ ಕೋರೆಗಾಂವ ನೀಟ್ ಪರೀಕ್ಷೆಯಲ್ಲಿ ೭೨೩೫೭ನೇ ರ್‍ಯಾಂಕ್ ಪಡೆದಿದ್ದು, ಚಿತ್ರದುರ್ಗ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಪಡೆದಿದ್ದಾನೆ. ಈ ವಿದ್ಯಾರ್ಥಿಯ ತಂದೆ ರಾಯಗೊಂಡ ಮತ್ತು ತಾಯಿ ವಿಲಾಸಮತಿ ರೈತರಾಗಿದ್ದು, ಬಡಕುಟುಂಬಕ್ಕೆ ಸೇರಿದ್ದಾರೆ. ಈ ವಿದ್ಯಾರ್ಥಿಯ ಕೋರ್ಸ್‌ನ ಪ್ರಥಮ ವರ್ಷದ ಬೋಧನೆ, ಹಾಸ್ಟೆಲ್‌ ಮತ್ತು ಊಟದ ವೆಚ್ಚ ಸೇರಿ ಮೊದಲ ಕಂತಿನ ₹೧ ಲಕ್ಷ ೫೪ ಸಾವಿರದ ೬೫೦ ಚೆಕ್‌ನ್ನು ಸಚಿವರು ವಿತರಿಸಿದರು.ಇದೇ ವೇಳೆ ಅರಕೇರಿಯ ವಿದ್ಯಾರ್ಥಿ ಕರಣ ಸಿಂಧೆ ನೀಟ್ ಪರೀಕ್ಷೆಯಲ್ಲಿ ೭೫೦೭೫ನೇ ರ್‍ಯಾಂಕ್ ಪಡೆದಿದ್ದು, ಹಾವೇರಿ ಮೆಡಿಕಲ್ ಕಾಲೇಜಿನಲ್ಲಿ ಸೀಟು ಪಡೆದಿದ್ದಾನೆ. ಈ ವಿದ್ಯಾರ್ಥಿಯ ತಂದೆ ಪಂಡಿತ ಮತ್ತು ಬಾನಾಬಾಯಿ ಕೂಲಿ ಕಾರ್ಮಿಕರಾಗಿದ್ದಾರೆ. ಈ ವಿದ್ಯಾರ್ಥಿಯ ಕಾಲೇಜು, ಹಾಸ್ಟೆಲ್‌ ಹಾಗೂ ಊಟದ ಶುಲ್ಕ ಸೇರಿ ಒಟ್ಟು ₹೧ ಲಕ್ಷ ೧೯ ಸಾವಿರದ ೨೫೦ ಚೆಕ್‌ನ್ನು ಸಚಿವರು ವಿತರಿಸಿದರು.ಇದೇ ಗ್ರಾಮದ ಮತ್ತೋರ್ವ ವಿದ್ಯಾರ್ಥಿ ಯಶವಂತ ಮೋಹಿತೆ ನೀಟ್ ಪರೀಕ್ಷೆಯಲ್ಲಿ ೯೨೬೧೮ನೇ ರ್‍ಯಾಂಕ್ ಪಡೆದಿದ್ದು ಶಿವಮೊಗ್ಗ ಮೆಡಿಕಲ್ ಕಾಲೇಜಿಗೆ ಆಯ್ಜೆಯಾಗಿದ್ದಾನೆ. ಈತನ ತಂದೆ ಮಾರುತಿ ದರ್ಜಿ(ಟೇಲರ್) ಆಗಿದ್ದು, ತಾಯಿ ವಂದನಾ ಗೃಹಿಣಿಯಾಗಿದ್ದಾರೆ. ಈ ವಿದ್ಯಾರ್ಥಿಯ ಕಾಲೇಜು, ಹಾಸ್ಟೆಲ್‌ ಹಾಗೂ ಊಟದ ಶುಲ್ಕ ₹೩ ಲಕ್ಷ ೯ ಸಾವಿರದ ೩೨೧ ಚೆಕ್‌ನ್ನು ಸಚಿವರು ವಿತರಿಸಿದರು.ಬಬಲೇಶ್ವರ ತಾಲೂಕಿನ ಕಾರಜೊಳ ತಾಂಡಾದ ಅಜೀತ ರಾಠೋಡ ನೀಟ್ ಪರೀಕ್ಷೆಯಲ್ಲಿ ೧೩೯೬೧೨ ರ್‍ಯಾಂಕ್ ಪಡೆದಿದ್ದು, ಕಾರವಾರ ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಪಡೆದಿದ್ದಾನೆ. ಈತನ ತಂದೆ ಪರಶುರಾಮ ಮತ್ತು ತಾಯಿ ಪ್ರೇಮಾ ಕೃಷಿ ಕಾರ್ಮಿಕರಾಗಿದ್ದು, ಉದ್ಯೋಗ ಅರಸಿ ಮಹಾರಾಷ್ಟ್ರಕ್ಕೆ ಗುಳೆ ಹೋಗುತ್ತಿರುತ್ತಾರೆ. ಈತನ ಕಾಲೇಜು ಮತ್ತು ಹಾಸ್ಟೇಲ್ ಶುಲ್ಕಕ್ಕೆ ಅಗತ್ಯವಾದ ₹೧ ಲಕ್ಷ ೩೫ ಸಾವಿರ ಹಣದ ಚೆಕ್‌ನ್ನು ಸಚಿವರು ವಿತರಿಸಿದರು.ಬಬಲೇಶ್ವರ ತಾಲೂಕಿನ ಕಂಬಾಗಿ ಗ್ರಾಮದ ವಿದ್ಯಾರ್ಥಿನಿ ರಾಜಶ್ರೀ ಮಠ ನೀಟ್ ಪರೀಕ್ಷೆಯಲ್ಲಿ ೫೬೨೬೨ನೇ ರ್‍ಯಾಂಕ್ ಪಡೆದಿದ್ದು, ಚಿಕ್ಕಬಳ್ಳಾಪುರ ಮೆಡಿಕಲ್ ಕಾಲೇಜಿನಲ್ಲಿ ಸೀಟು ಪಡೆದಿದ್ದಾಳೆ. ಈಕೆಯ ತಂದೆ ಮಲ್ಲಿಕಾರ್ಜುನ ಮತ್ತು ತಾಯಿ ಜಯಶ್ರೀ ರೈತರಾಗಿದ್ದಾರೆ.

ಈ ವಿದ್ಯಾರ್ಥಿನಿಯ ಕಾಲೇಜು, ಹಾಸ್ಟೆಲ್‌ ಹಾಗೂ ಊಟದ ಶುಲ್ಕ ₹೧ ಲಕ್ಷ ೫೭ ಸಾವಿರ ಚೆಕ್‌ನ್ನು ಸಚಿವರು ವಿತರಿಸಿದರು.ಬಿ.ಎಲ್.ಡಿ.ಇ ಸಂಸ್ಥೆಯ ಮುಖ್ಯ ಸಲಹೆಗಾರ ಡಾ.ಆರ್.ವಿ.ಕುಲಕರ್ಣಿ, ಆಡಳಿತ ಕಚೇರಿಯ ಅಧೀಕ್ಷಕ ಎಸ್.ಎ.ಬಿರಾದಾರ(ಕನ್ನಾಳ) ಉಪಸ್ಥಿತರಿದ್ದರು.

Share this article