ಬೆಂಗಳೂರು : ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದ ಸಂಬಂಧ ಹತ್ತು ದಿನಗಳ ಹಗ್ಗಜಗ್ಗಾಟದ ಬಳಿಕ ಕೊನೆಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಸಚಿವ ಬಿ.ನಾಗೇಂದ್ರ ಗುರುವಾರ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ತನ್ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಚಿವ ಸಂಪುಟದ ಮೊದಲ ವಿಕೆಟ್ ಪತನವಾಗಿದೆ.
ಬಳ್ಳಾರಿ ಉಸ್ತುವಾರಿ ಸಚಿವರೂ ಆಗಿದ್ದ ಪರಿಶಿಷ್ಟ ಪಂಗಡಗಳ ಕಲ್ಯಾಣ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ನಾಗೇಂದ್ರ ಅವರು, ‘ನನ್ನ ಸ್ವ-ಇಚ್ಛೆಯಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ’ ಎಂಬ ಒಂದೇ ಸಾಲಿನ ರಾಜೀನಾಮೆ ಸಲ್ಲಿಸಿದ್ದಾರೆ.
ವಾಲ್ಮೀಕಿ ನಿಗಮದಲ್ಲಿ 87 ಕೋಟಿ ರು. ಅವ್ಯವಹಾರ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಪ್ರಕರಣ ದಾಖಲಿಸಿಕೊಂಡ ಹಿನ್ನೆಲೆಯಲ್ಲಿ ಬುಧವಾರ ಹಿರಿಯ ಸಚಿವರೊಂದಿಗೆ ಸಭೆ ನಡೆಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಗೇಂದ್ರ ಅವರನ್ನು ಕರೆಸಿಕೊಂಡು ರಾಜೀನಾಮೆ ನೀಡುವಂತೆ ಸೂಚಿಸಿದ್ದರು ಎನ್ನಲಾಗಿತ್ತು.
ಅದರಂತೆ ನಾಗೇಂದ್ರ ಗುರುವಾರ ರಾಜೀನಾಮೆ ನೀಡುವ ನಿರೀಕ್ಷೆಯಿತ್ತು. ಆದರೆ ಮಧ್ಯಾಹ್ನದವರೆಗೂ ಅವರು ಮುಖ್ಯಮಂತ್ರಿಗಳ ನಿವಾಸದತ್ತ ಸುಳಿಯಲಿಲ್ಲ. ಈ ನಡುವೆ ಪತ್ರಿಕಾಗೋಷ್ಠಿ ನಡೆಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ನಾಗೇಂದ್ರ ರಾಜೀನಾಮೆ ನೀಡಿದ್ದಾರೆ ಎಂದು ಘೋಷಿಸಿದ್ದರು. ತಕ್ಷಣ ಶಿವಕುಮಾರ್ ಅವರಿಗೆ ನಾಗೇಂದ್ರ ಕರೆ ಮಾಡಿ, ತಾವು ಇನ್ನೂ ರಾಜೀನಾಮೆ ನೀಡಿಲ್ಲ. ಸಂಜೆ ನೀಡುವುದಾಗಿ ಸ್ಪಷ್ಟಪಡಿಸಿದ ಪ್ರಹಸನವೂ ನಡೆಯಿತು.
ಅಂತಿಮವಾಗಿ ಗುರುವಾರ ಸಂಜೆ 5.30ಕ್ಕೆ ಸುದ್ದಿಗೋಷ್ಠಿ ನಡೆಸಿದ ಅವರು ಸ್ವಯಂಪ್ರೇರಿತವಾಗಿ ಯಾವುದೇ ಒತ್ತಡವಿಲ್ಲದೆ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದರು. ಬಳಿಕ ಸಂಜೆ ಡಿ.ಕೆ.ಶಿವಕುಮಾರ್, ಸಚಿವ ಜಮೀರ್ ಅಹಮದ್ ಖಾನ್ ಜತೆಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದರು.
ಇದಕ್ಕೂ ಮೊದಲು ಗುರುವಾರ ಬೆಳಗ್ಗೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ವಿಧಾನಸೌಧದಿಂದ ರಾಜಭವನಕ್ಕೆ ತೆರಳಿದ ಬಿಜೆಪಿ ನಿಯೋಗವು ನಾಗೇಂದ್ರ ವಿರುದ್ಧ ದೂರು ನೀಡಿತ್ತು. ಈ ವೇಳೆ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ್ದ ಸಿದ್ದರಾಮಯ್ಯ ಅವರು ಬಿಜೆಪಿಯವರು ಪ್ರತಿಭಟನೆಯಾದರೂ ಮಾಡಲಿ ಏನಾದರೂ ಮಾಡಲಿ, ಎಸ್‌ಐಟಿ ವರದಿ ಬರಲಿ ನೋಡೋಣ ಎಂದಿದ್ದರಿಂದ ಗುರುವಾರ ಸಂಜೆವರೆಗೂ ರಾಜೀನಾಮೆ ಬಗ್ಗೆ ಕುತೂಹಲ ಮುಂದುವರೆದಿತ್ತು.
ವರ್ಷಕ್ಕೆ ಸರಿಯಾಗಿ ರಾಜೀನಾಮೆ: 2023ರ ಮೇ 27 ರಂದು ಬಿ.ನಾಗೇಂದ್ರ ಸೇರಿ 24 ಮಂದಿ ಸಚಿವರು ಪ್ರಮಾಣವಚನ ಸ್ವೀಕರಿಸಿ ಸಿದ್ದರಾಮಯ್ಯ ಅವರ ಸಂಪುಟ ಸೇರ್ಪಡೆಯಾಗಿದ್ದರು. ಬರೋಬ್ಬರಿ ಒಂದು ವರ್ಷಕ್ಕೆ ಸರಿಯಾಗಿ ನಿಗಮದಲ್ಲಿ ನಡೆದಿದ್ದ 87 ಕೋಟಿ ರು. ಅಕ್ರಮ ವರ್ಗಾವಣೆ ಪ್ರಕರಣ ಬೆಳಕಿಗೆ ಬಂದಿತ್ತು. ಅದರ ಬೆನ್ನಲ್ಲೇ ನಾಗೇಂದ್ರ ರಾಜೀನಾಮೆಗೆ ಹತ್ತು ದಿನಗಳಿಂದ ಪ್ರತಿಪಕ್ಷಗಳು ತೀವ್ರ ಒತ್ತಡ ನಿರ್ಮಾಣ ಮಾಡಿದ್ದವು. ಸಿಬಿಐ ತನಿಖೆ ಚುರುಕುಗೊಳಿಸಿರುವ ಹಿನ್ನೆಲೆಯಲ್ಲಿ ದೋಷಿಯಲ್ಲ ಎಂಬುದು ಸಾಬೀತಾದರೆ ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವ ಭರವಸೆಯೊಂದಿಗೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.
ಯಾರ ಒತ್ತಡವೂ ಇಲ್ಲ- ನಾಗೇಂದ್ರ:
ರಾಜೀನಾಮೆಗೆ ಮೊದಲು ಸುದ್ದಿಗೋಷ್ಠಿ ನಡೆಸಿದ ಬಿ.ನಾಗೇಂದ್ರ, ಕಾಂಗ್ರೆಸ್ ಪಕ್ಷ ಹಾಗೂ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳಿಗೆ ಮುಜುಗರವಾಗಬಾರದು. ಹೀಗಾಗಿ ಯಾರ ಒತ್ತಡವೂ ಇಲ್ಲದೆ ಸ್ವಇಚ್ಛೆಯಿಂದ ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದರು.
ಮುಖ್ಯಮಂತ್ರಿಗಳು ಅದ್ಭುತವಾಗಿ ಆಡಳಿತ ನಡೆಸುತ್ತಿದ್ದಾರೆ. ಪ್ರಕರಣದ ವಿಚಾರವಾಗಿ ಎಸ್ಐಟಿ ತನಿಖೆ ನಡೆಸುತ್ತಿದೆ. ತನಿಖೆ ನಡೆಯುವಾಗ ನಾನು ಸಚಿವ ಸ್ಥಾನದಲ್ಲಿದ್ದರೆ ಸಮಸ್ಯೆಯಾಗಲಿದೆ ಎಂಬ ಕಾರಣಕ್ಕೆ ರಾಜೀನಾಮೆ ಕೊಡುತ್ತಿದ್ದೇನೆ. ರಾಜೀನಾಮೆ ವಿಚಾರದಲ್ಲಿ ಯಾರ ಒತ್ತಡವೂ ಇಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರತಿಪಕ್ಷದವರು ಕಾಂಗ್ರೆಸ್ ಮೇಲೆ ಕೆಸರೆರಚಾಟ ಮಾಡುತ್ತಿದ್ದಾರೆ. ಆತ್ಮಹತ್ಯೆಗೆ ಶರಣಾದ ವಾಲ್ಮಿಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರನ್ ಡೆತ್‌ನೋಟ್‌ನಲ್ಲಿ ನನ್ನ ಹೆಸರನ್ನು ಉಲ್ಲೇಖ ಮಾಡಿಲ್ಲ. ಎಸ್ಐಟಿ ತನಿಖೆಯಲ್ಲಿ ಸತ್ಯಾಂಶ ಹೊರಬಂದ ಮೇಲೆ ಮತ್ತೆ ಸಚಿವನಾಗುತ್ತೇನೆ ಎಂಬ ಭರವಸೆ ಇದೆ. ನಿರ್ದೋಷಿಯಾದ ಬಳಿಕ ಸಚಿವ ಸ್ಥಾನ ನೀಡುವುದು, ಬಿಡುವುದು ಮುಖ್ಯಮಂತ್ರಿಗೆ ಬಿಟ್ಟ ವಿಚಾರ ಎಂದರು.ಏನಿದು ಪ್ರಕರಣ?:
ವಾಲ್ಮೀಕಿ ನಿಗಮದಲ್ಲಿ ಅನುದಾನದ ಹಣ ಅಕ್ರಮ ವರ್ಗಾವಣೆ ಮತ್ತು ದುರುಪಯೋಗವಾಗಿದೆ ಎಂದು ಆರೋಪಿಸಿ ನಿಗಮದ ಅಧೀಕ್ಷಕ ಚಂದ್ರಶೇಖರನ್ ಡೆತ್‌ನೋಟ್ ಬರೆದಿಟ್ಟು ಮೇ 26ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಡೆತ್‌ನೋಟ್‌ನಲ್ಲಿ ಸಚಿವರ ಮೌಖಿಕ ಸೂಚನೆ ಮೇರೆಗೆ ಹಣ ವರ್ಗಾವಣೆ ಮಾಡಿರುವುದಾಗಿ ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ಚಂದ್ರಶೇಖರನ್ ಅವರ ಪತ್ನಿಯ ದೂರಿನ ಅನ್ವಯ ಶಿವಮೊಗ್ಗದ ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ವೇಳೆ ನಿಗಮದ ಪ್ರಧಾನ ವ್ಯವಸ್ಥಾಪಕರು ಬ್ಯಾಂಕ್‌ಗೆ ನೀಡಿದ ದೂರಿನ ಅನ್ವಯ ನಿಗಮದ 87 ಕೋಟಿ ರು. ಅನಾಮಧೇಯ ಖಾತೆಗಳಿಗೆ ವರ್ಗಾವಣೆಯಾಗಿರುವುದಾಗಿ ಬಹಿರಂಗಗೊಂಡಿತ್ತು. ಆದರೆ ತನಿಖೆ ವೇಳೆ 94.73 ಕೋಟಿ ರು. ಅನಾಮಧೇಯ ವ್ಯಕ್ತಿಗಳ ಪಾಲಾಗಿರುವುದು ಬೆಳಕಿಗೆ ಬಂದಿತ್ತು.
ಈ ಸಂಬಂಧ ಸಮಗ್ರ ತನಿಖೆಗೆ ಮೇ 31 ರಂದು ರಾಜ್ಯ ಸರ್ಕಾರ ಸಿಐಡಿ ಅಡಿ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಿ ಆದೇಶ ಹೊರಡಿಸಿತ್ತು. ಇದೇ ವೇಳೆ ಯೂನಿಯನ್ ಬ್ಯಾಂಕ್ ಸಿಬಿಐಗೆ ದೂರು ನೀಡಿದ್ದು, ಇತ್ತೀಚೆಗೆ ಸಿಬಿಐ ಕೂಡ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಮೇಲೆ ಒತ್ತಡ ನಿರ್ಮಾಣವಾಗಿತ್ತು.
ಮುಜುಗರ ತಪ್ಪಿಸಲು ರಾಜೀನಾಮೆ ನೀಡಿದೆಕಾಂಗ್ರೆಸ್ ಪಕ್ಷ ಹಾಗೂ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳಿಗೆ ಮುಜುಗರವಾಗಬಾರದು ಎಂಬ ಕಾರಣಕ್ಕೆ ಸ್ವಇಚ್ಛೆಯಿಂದ ರಾಜೀನಾಮೆ ನೀಡುತ್ತಿದ್ದೇನೆ. ಯಾರ ಒತ್ತಡವೂ ಇಲ್ಲ. ಎಸ್ಐಟಿ ತನಿಖೆಯಲ್ಲಿ ಸತ್ಯಾಂಶ ಹೊರಬಂದ ಮೇಲೆ ಮತ್ತೆ ಸಚಿವನಾಗುತ್ತೇನೆ ಎಂಬ ಭರವಸೆ ಇದೆ ಎಂದು ನಾಗೇಂದ್ರ ತಿಳಿಸಿದ್ದಾರೆ. ಸಚಿವ ರಾಜೀನಾಮೆ ಪಡೆದರೆ ಸಾಲದು18ಕ್ಕೂ ಹೆಚ್ಚು ನಕಲಿ ಖಾತೆ ತೆರೆದು ನಿಗಮದ ಹಣವನ್ನು ಅಕ್ರಮವಾಗಿ ವರ್ಗಾಯಿಸಲಾಗಿದೆ. ಹಣಕಾಸು ಇಲಾಖೆ ಅನುಮತಿ ಇಲ್ಲದೆ ಇದು ನಡೆಯಲು ಸಾಧ್ಯವಿಲ್ಲ. ಸಿಎಂ ಗಮನಕ್ಕೆ ಬಾರದೆ ಈ ಹಗರಣ ನಡೆದಿರಲು ಸಾಧ್ಯವಿಲ್ಲ. ಕೇವಲ ಸಚಿವರ ರಾಜೀನಾಮೆ ಪಡೆದರೆ ಸಾಲದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.