
- ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ । ಸ್ವಚ್ಛ ಕಲಬುರಗಿ, ಶಾಶ್ವತ ಸಮೃದ್ಧಿ ಯೋಜನೆಯಡಿ ಗುರುತಿಸಲ್ಪಟ್ಟ ಐದು ವಲಯಗಳ ಅಭಿವೃದ್ಧಿಗೆ ಅನುದಾನ
ಕನ್ನಡಪ್ರಭ ವಾರ್ತೆ ಕಲಬುರಗಿ
ಸ್ವಚ್ಛ ಕಲಬುರಗಿ, ಶಾಶ್ವತ ಸಮೃದ್ಧಿ ಯೋಜನೆಯಡಿಯಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ₹ 296 ಕೋಟಿ ವೆಚ್ಚದ ನೀಲಿ ನಕ್ಷೆ ತಯಾರಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.ಜಿಲ್ಲಾಡಳಿತ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.
ರಸ್ತೆ ಅಭಿವೃದ್ಧಿಪಡಿಸುವ ಉದ್ದೇಶದಿಂದ ಈಗಾಗಲೇ ರಸ್ತೆಗಳ ಆಡಿಟ್ ಮಾಡಲಾಗಿದೆ ಎಂದು ಹೇಳಿದ ಸಚಿವರು ಸ್ವಚ್ಚ ಕಲಬುರಗಿ ನಿರ್ಮಾಣ ಮಾಡುವ ದೇಯೋದ್ಯೇಶದಿಂದ ಉದ್ಯಾನಗಳ ಅಭಿವೃದ್ಧಿ, ನೀರಿನ ಮೂಲಗಳ ಸಂರಕ್ಷಣೆ, ಉದ್ಯಾನವನ ಹಾಗೂ ವೃತ್ತಗಳ ಅಧುನೀಕರಣ ಹಾಗೂ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ ಎಂದರು.
ನಗರದ ವ್ಯಾಪ್ತಿಯ 33 ಉದ್ಯಾನವನಗಳ ಅಭಿವೃದ್ಧಿಗೆ ಒಟ್ಟು ₹ 22.4 ಕೋಟಿ, 25 ಸರ್ಕಲ್ ಗಳ ಅಭಿವೃದ್ಧಿಗೆ ₹ 13.4 ಕೋಟಿ, 4 ಕೆರೆಗಳ ಅಭಿವೃದ್ಧಿ ಹಾಗೂ ಜಲಮೂಲಗಳ ಸಂರಕ್ಷಣೆಗೆ ₹ 39.3 ಕೋಟಿ ಹಾಗೂ ಘನತ್ಯಾಜ್ಯ ಸಂಸ್ಕರಣೆ ಹಾಗೂ ವಿಲೇವಾರಿಗೆ ₹ 55.7 ಕೋಟಿ ಅನುದಾನ ಬಿಡುಗಡೆ ಮಾಡಿ ಅಭಿವೃದ್ಧಿ ಮಾಡಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ವಿವರಿಸಿದರು.
ನಗರದ ಸೌಂದರ್ಯಿಕರಣ, ಕೆರೆಗಳ ಅಭಿವೃದ್ಧಿ, ಕೋಟೆಗಳ ರಕ್ಷಣೆ, ಜಲ ಸಂಪನ್ಮೂಲಗಳ ಸಂರಕ್ಷಣೆ, ವೈಜ್ಞಾನಿಕ ಘನ ತ್ಯಾಜ್ಯ ನಿರ್ವಹಣೆ ಹಾಗೂ ವಿಲೇವಾರಿ, ಪ್ರಮುಖ ಸರ್ಕಲ್ ಗಳ ಅಭಿವೃದ್ಧಿ, ಪಾದಚಾರಿ ರಸ್ತೆಗಳ ನಿರ್ಮಾಣ, ರಸ್ತೆ ನಿರ್ಮಾಣ ಹಾಗೂ ತಗ್ಗುಗುಂಡಿ ಮುಚ್ಚುವುದು ಪ್ರಮುಖ ಅಭಿವೃದ್ಧಿ ಕೆಲಸ ಕೈಗೆತ್ತಿಕೊಳ್ಳಲಾಗುವುದು. ಇದಕ್ಕೆ ನಿಗದಿಪಡಿಸಿದ ಅನುದಾನ ಕೂಡಾ ನಗರಸಭೆ, ಕೆಕೆ ಆರ್ ಡಿಬಿ, ನಗರಾಭಿವೃದ್ಧಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಂದ ಬಳಸಿಕೊಳ್ಳಲಾಗುತ್ತಿದೆ.
ಈ ಯೋಜನೆ ಕುರಿತಂತೆ ಸಾರ್ವಜನಿಕರಲ್ಲಿ ಜಾಗೃತೆ ಮೂಡಿಸಲು ಬೀದಿ ನಾಟಕ, ವಸ್ತುಪ್ರದರ್ಶನ ಸೇರಿದಂತೆ ಹಲವಾರು ಅಭಿಯಾನಗಳನ್ನು ಆಯೋಜಿಸಲಾಗುವುದು ಎಂದು ಅವರು ಹೇಳಿದರು.
ಕಲಬುರಗಿ ಜಿಲ್ಲಾಡಳಿತ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿದರು.