ಲೋಕಸಭಾ ಚುನಾವಣೆ ವೇಳೆಗೆ ರಾಜ್ಯದಲ್ಲಿ ಬಿಜೆಪಿ- ಜೆಡಿಎಸ್ಸ್ ಖಾಲಿಯಾಗಲಿವೆ: ಸಚಿವ ಪ್ರಿಯಾಂಕ್ಕ್ ಖರ್ಗೆ
ಕನ್ನಡಪ್ರಭ ವಾರ್ತೆ ಮಂಗಳೂರು
ಲೋಕಸಭಾ ಚುನಾವಣೆ ವೇಳೆಗೆ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಪಕ್ಷ ಖಾಲಿ ಆಗಲಿದ್ದು, ಆಗ ಕಾರ್ಯಕರ್ತರ ರಕ್ಷಣೆಗೆ ಯಾರೇ ನಾಯಕರು ಇರುವುದಿಲ್ಲ. ನಮ್ಮ ತತ್ವ ಸಿದ್ಧಾಂತ ಒಪ್ಪಿಕೊಂಡು ಯಾರು ಬೇಕಾದರೂ ಕಾಂಗ್ರೆಸ್ ಸೇರ್ಪಡೆಯಾಗಬಹುದು. ಬಿಜೆಪಿಯಲ್ಲಿ ನಾಯಕರೇ ಇಲ್ಲ ಎಂದು ನಮ್ಮ ನಾಯಕತ್ವ ಹುಡುಕಿಕೊಂಡು ಪಕ್ಷಕ್ಕೆ ಬರಲಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯ್ತಿರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಮಂಗಳೂರಿನಲ್ಲಿ ಬುಧವಾರ ಸುದ್ದಿಗಾರರಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ವಿಜಯೇಂದ್ರ ಅವರಿಗೆ ಶುಭ ಹಾರೈಸುತ್ತೇನೆ. ಇದರಿಂದ ಕಾಂಗ್ರೆಸ್ ಮೇಲೆ ಎಫೆಕ್ಟ್ ಆಗುವುದು ನಿಜ, ಆದರೆ ಅದು ಒಳ್ಳೆಯ ಪರಿಣಾಮ ಎಂದರು. ವಿಜಯೇಂದ್ರ ಅಧಿಕಾರ ವೇಳೆ ಬಿಜೆಪಿ ಅಸಮಾಧಾನ ಬಹಿರಂಗವಾಗಿದೆ. ಸಿ.ಟಿ.ರವಿ, ಯತ್ನಾಳ್, ಸುನಿಲ್ ಕುಮಾರ್ ಸಮಾರಂಭಕ್ಕೆ ಗಾಯಬ್ ಆಗಿದ್ದಾರೆ. ಇನ್ನು ಕೂಡ ಯಡಿಯೂರಪ್ಪ ಅವರನ್ನು ಸಿಎಂ ಗಾದಿಯಿಂದ ಕಣ್ಣೀರು ಹಾಕಿಸಿ ಇಳಿಸಿದ್ದು ಯಾಕೆ ಎಂದು ಯಾರಿಗೂ ಗೊತ್ತಿಲ್ಲ. ಬಿಜೆಪಿಯಲ್ಲಿ ಹೊಂದಾಣಿಕೆ ಇಲ್ಲ, ನಾಯಕತ್ವದ ಕೊರತೆ ಕಾರಣಕ್ಕೆ ಬಿಜೆಪಿ ವರಿಷ್ಠರು ವಿಜಯೇಂದ್ರ ಆಯ್ಕೆ ಮಾಡಿದ್ದಾರೆ ಎಂದರು. ಕಾಂಗ್ರೆಸ್ ಅಧಿಕಾರಕ್ಕೆ ಬಿಜೆಪಿ ಕಾರಣ: ಲಿಂಗಾಯತ ಸಮುದಾಯಕ್ಕೆ ಬಿಜೆಪಿಯಿಂದ ಆದ ನಿರ್ಲಕ್ಷಕ್ಕೆ ಕಾಂಗ್ರೆಸ್ ಆಡಳಿತಕ್ಕೆ ಬಂದಿದೆ ಎನ್ನುವುದು ಸರಿಯಲ್ಲ. ಒಂದು ವೇಳೆ ನಿರ್ಲಕ್ಷ್ಯ ಮಾಡಿದರೆ ಯಾಕೆ ಎಂದು ಬಿಜೆಪಿಯವರೇ ಹೇಳಬೇಕು. ಅದಕ್ಕಿಂತ ಕಳೆದ ಬಿಜೆಪಿ ಸರ್ಕಾರದ ಅವಧಿಯ ಭ್ರಷ್ಟಾಚಾರ, ಬೆಲೆ ಏರಿಕೆ ಮುಂತಾದ ಕಾರಣಗಳಿಂದ ನಾವು ಅಧಿಕಾರಕ್ಕೆ ಬಂದಿದ್ದೇವೆ ಎಂದರು.ಕಾಂಗ್ರೆಸ್ ಅಧಿಕಾರಕ್ಕೆ ಬಂದು ಆರು ತಿಂಗಳು ಕಳೆದಿದೆ. ಮೇಲ್ಮನೆ, ಕೆಳಮನೆಯಲ್ಲಿ ವಿಪಕ್ಷ ನಾಯಕರಿಲ್ಲ, ರಾಜ್ಯಪಾಲರ ಭಾಷಣ, ಬಜೆಟ್ ಮಂಡನೆ, ಬಜೆಟ್ ಭಾಷಣ ನಡೆದರೂ ಬಿಜೆಪಿ ನಾಯಕನ ಆಯ್ಕೆ ಆಗಿಲ್ಲ. ಇನ್ನು 15 ದಿನದಲ್ಲಿ ಬೆಳಗಾವಿ ಅಧಿವೇಶನ ಆರಂಭವಾಗುತ್ತದೆ. ವಿರೋಧ ಪಕ್ಷದ ನಾಯಕರು ಯಾರು? ಅಂತಹ ಯಾವುದೇ ನಾಯಕ ಬಿಜೆಪಿಯಲ್ಲಿ ಇಲ್ಲ ಎಂದರು. ಜೆಡಿಎಸ್ ಕಚೇರಿ ಗೋಡೆ ಮೇಲೆ ವಿದ್ಯುತ್ ಕಳ್ಳ ಕುಮಾರಸ್ವಾಮಿ ಪೋಸ್ಟರ್‌ಗೂ ಕಾಂಗ್ರೆಸ್‌ಗೆ ಸಂಬಂಧ ಇಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ, ನಮಗೆ ಬೇರೆ ಕೆಲಸ ಇಲ್ವಾ? ನಾವು ಆಡಳಿತ ನಡೆಸುತ್ತಾ ಇದ್ದೇವೆ. ಹಾಗೆ ಮಾಡಬೇಕು ಎಂದಾದರೆ ಪೇ ಸಿಎಂ ಕ್ಯಾಂಪೇನ್ ಮಾಡಿದಂತೆ ಮಾಡುತ್ತೇವೆ. ಅದೇನು ರಾತ್ರೋ ರಾತ್ರಿ ಹಾಕಿದ್ದಾ? ಎದೆ ತಟ್ಟಿ ಮುಂದೆ ಬಂದು ಬಹಿರಂಗವಾಗಿಯೇ ಭ್ರಷ್ಟಾಚಾರ ಆರೋಪ ಮಾಡುತ್ತೇವೆ. ನಿರಾಧಾರವಾಗಿ ನಾವು ಯಾವುದನ್ನೂ ಮಾಡುವುದಿಲ್ಲ ಎಂದರು.
ಎಚ್‌ಡಿಕೆ ಅಚಾತುರ್ಯ ಗೊತ್ತಿಲ್ಲ:
ಸಿಬ್ಬಂದಿಯಿಂದ ಕುಮಾರಸ್ವಾಮಿ ಮನೆಯಲ್ಲಿ ಏನು ಅಚಾತುರ್ಯ ನಡೆದಿದೆ ಎಂದು ನನಗೆ ಗೊತ್ತಿಲ್ಲ. ಕಾನೂನಾತ್ಮಕ ಕ್ರಮ ಕೈಗೊಳ್ಳಿ ಎಂದು ಅವರೇ ಹೇಳಿದ್ದಾರೆ. ಆದರೆ ಕಾಂಗ್ರೆಸ್‌ನ ಗ್ಯಾರಂಟಿಗಳ ಬಗ್ಗೆ ಕುಮಾರಸ್ವಾಮಿ ಟೀಕೆ ಮಾಡಿದ್ದರು. ಎಲ್ಲರನ್ನೂ ಕತ್ತಲಲ್ಲಿ ಇರಿಸುತ್ತೀರಿ ಎಂದು ಅವರು ಹೆಚ್ಚು ಬೆಳಕು ತಗಳೋದು ಎಷ್ಟು ಸರಿ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.ಬಾಕ್ಸ್---ಬಿಜೆಪಿ ಮುಳುಗಿದ ಹಡಗು: ಪ್ರಿಯಾಂಕ್ ಖರ್ಗೆ ಪಂಚಾಯ್ತಿರಾಜ್ ಪ್ರತಿನಿಧಿಗಳ ಸಮಾವೇಶದಲ್ಲಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ರಾಜ್ಯದಲ್ಲಿ ಬಿಜೆಪಿ ಮುಳುಗಿದ ಹಡಗು, ನಾಲ್ಕೈದು ಮಂದಿ ಮ್ಯಾಟ್ ಹಾಕಿಕೊಂಡು ತೇಲುತ್ತಿದ್ದಾರೆ ಅಷ್ಟೆ. ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಿದ್ದಾರೆ. ಅವರ ವಿರುದ್ಧ ಲೋಕಾಯುಕ್ತ ಕೇಸ್ ಇದೆ. ಪಿಎಸ್ಐ ನೇಮಕಾತಿ ಹಗರಣದ ಪಾಲು ಇದೆ. ಅವರ ತಂದೆ ಯಡಿಯೂರಪ್ಪ ಎರಡು ಬಾರಿ ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡಲು ಕಾರಣವಾದ್ದು ಭ್ರಷ್ಟಾಚಾರ. ಇದನ್ನು ಅವರದೇ ಪಕ್ಷದ ಯತ್ನಾಳ್ ಹೇಳಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಪುತ್ರ ನನಗೆ ಟಿಕೆಟ್ ನೀಡಿದರೆ ವಂಶಪಾರಂಪರ್ಯ ಎನ್ನುತ್ತಾರೆ, ಈಗ ಬಿಎಸ್‌ವೈ ಪುತ್ರನಿಗೆ ರಾಜ್ಯಾಧ್ಯಕ್ಷ ಪಟ್ಟ ನೀಡಿದರೆ, ಸಮರ್ಥ ನಾಯಕತ್ವ ಎಂದು ಬಿಜೆಪಿಗರು ಹೇಳುತ್ತಾರೆ. ಇದು ಯಾವ ನ್ಯಾಯ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು. ಹೆಚ್ಚಿನ ಗ್ಯಾರಂಟಿಗಳಿಗೆ ಬಿಜೆಪಿ ನೋಂದಣಿ: ರಾಜ್ಯ ಸರ್ಕಾರ ಜಾರಿಗೆ ತಂದ ಗ್ಯಾರಂಟಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿಯಾದ್ದು ಬಿಜೆಪಿಗರೇ. ಆ ಮೇಲೆ ಬಿಜೆಪಿಗರು ಗ್ಯಾರಂಟಿ ಯೋಜನೆಗಳ ಬಗ್ಗೆ ಆರೋಪಿಸುತ್ತಿದ್ದಾರೆ. ಇದು ಎಷ್ಟು ಸರಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.