ಕಾಡುಹಂದಿಯಿಂದ ಗಾಯಗೊಂಡವರಿಗೆ ರಾಜಣ್ಣ ಸಾಂತ್ವನ

KannadaprabhaNewsNetwork | Published : Dec 20, 2023 1:15 AM

ಸಾರಾಂಶ

ಹಾರಗೋಡನಹಳ್ಳಿ ಗ್ರಾಮದಲ್ಲಿ ಸೋಮವಾರ ಹಗಲಿನಲ್ಲೇ ಕಾಡುಹಂದಿ ದಾಳಿ ನಡೆಸಿ ರಾಜೇಗೌಡ(ಸಣ್ಣರಾಜಣ್ಣ) ಹಾಗೂ ಶಾಂತಮ್ಮ ದಂಪತಿ ಮನೆ ಹಿಂಭಾಗದ ಜಮೀನಿನಲ್ಲಿ ನೀರು ಹಾಯಿಸಲು ತೆರಳಿದ ಸಂದರ್ಭದಲ್ಲಿ ಕಾಡುಹಂದಿ ದಾಳಿ ನಡೆಸಿ ರಾಜೇಗೌಡರನ್ನು ಕೊಂದು ಹಾಕಿತ್ತು. ಮೃತರ ಕುಟುಂಬದವರಿಗೆ ಸಾಂತ್ವನ ನೀಡಿರುವ ಸಚಿವ ರಾಜಣ್ಣ, ರಾಜೇಗೌಡ ಕುಟುಂಬ ಸದಸ್ಯರಿಗೆ ೧೫ ಲಕ್ಷ ರು. ಚೆಕ್ ನೀಡಲಾಗಿದೆ ಮತ್ತು ರಾಜೇಗೌಡರ ಪತ್ನಿ ಶಾಂತಮ್ಮ ಅವರಿಗೆ ಐದು ವರ್ಷಗಳವರೆಗೆ ೫ ಸಾವಿರ ರು. ಪತ್ರಿ ತಿಂಗಳು ಮಾಶಾಸನ ನೀಡಲಾಗುತ್ತದೆ ಎಂದು ಘೋಷಿಸಿದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್. ರಾಜಣ್ಣ ಭೇಟಿ ನೀಡಿ, ಕಾಡುಹಂದಿ ದಾಳಿಗೆ ಸಿಲುಕಿ ಗಾಯಗೊಂಡ ರೈತರ ಯೋಗಕ್ಷೇಮವನ್ನು ವಿಚಾರಿಸಿ, ಸಾಂತ್ವನದ ಮಾತುಗಳನ್ನಾಡಿದರು.

ತಾಲೂಕಿನ ಹಾರಗೋಡನಹಳ್ಳಿ ಗ್ರಾಮದಲ್ಲಿ ಸೋಮವಾರ ಹಗಲಿನಲ್ಲೇ ಕಾಡುಹಂದಿ ದಾಳಿ ನಡೆಸಿ ರಾಜೇಗೌಡ(ಸಣ್ಣರಾಜಣ್ಣ) ಹಾಗೂ ಶಾಂತಮ್ಮ ದಂಪತಿ ಮನೆ ಹಿಂಭಾಗದ ಜಮೀನಿನಲ್ಲಿ ನೀರು ಹಾಯಿಸಲು ತೆರಳಿದ ಸಂದರ್ಭದಲ್ಲಿ ಕಾಡುಹಂದಿ ದಾಳಿ ನಡೆಸಿ ರಾಜೇಗೌಡರನ್ನು ಕೊಂದು ಹಾಕಿತ್ತು. ಜತೆಗೆ ಶಾಂತಮ್ಮನವರ ಕೈ ಹಾಗೂ ಕಾಲಿಗೆ ಗಂಭೀರವಾದ ಗಾಯಗಳಾಗಿದ್ದು, ಹಾಸನದ ಹಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ ಮತ್ತು ಕಾಡಂದಿ ದಾಳಿಯಿಂದ ಶಾಂತಮ್ಮ ಅವರನ್ನು ರಕ್ಷಿಸಲು ಹೋದ ನಂಜಮ್ಮ ಎಂಬ ಮಹಿಳೆಯನ್ನು ಗಾಯಗೊಳಿಸಿತ್ತು. ದುರ್ಘಟನೆಯಿಂದ ಆಕ್ರೋಶಗೊಂಡಿದ್ದ ರೈತರು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಜನರ ಕೂಗಾಟ ಹಾಗೂ ಗದ್ದಲ್ಲದಿಂದ ಭಯಭೀತಿಗೊಂಡ ಕಾಡಂದಿಯೂ ಪುನಃ ನಾಲ್ಕು ಜನರ ಮೇಲೆ ದಾಳಿ ನಡೆಸಿ ಗಾಯಗೊಳಿಸಿತ್ತು. ವೈದ್ಯಾಧಿಕಾರಿ ಡಾ. ಧನಶೇಖರ್ ಅವರು ಮಾತನಾಡಿ, ಯಾರಿಗೂ ಮೂಳೆ ಮುರಿದಿಲ್ಲ, ಹಂದಿಯ ಕೋರೆಯಿಂದ ತಿವಿದಿದ್ದು, ಮಾಂಸಖಂಡಗಳಿಗೆ ಹಾನಿಯಾಗಿದೆ, ಆದ್ದರಿಂದ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವಿವರಿಸಿದರು.ಎಸಿಎಫ್ ಮೋಹನ್‌ ಕುಮಾರ್‌ ಮಾತನಾಡಿ, ರಾಜೇಗೌಡ ಕುಟುಂಬ ಸದಸ್ಯರಿಗೆ ೧೫ ಲಕ್ಷ ರು. ಚೆಕ್ ನೀಡಲಾಗಿದೆ ಮತ್ತು ರಾಜೇಗೌಡರ ಪತ್ನಿ ಶಾಂತಮ್ಮ ಅವರಿಗೆ ಐದು ವರ್ಷಗಳವರೆಗೆ ೫ ಸಾವಿರ ರು. ಪತ್ರಿ ತಿಂಗಳು ಮಾಶಾಸನ ನೀಡಲಾಗುತ್ತದೆ. ಪೆಟ್ಟು ಇರುವವರಿಗೆ ಶಾಶ್ವತ ಊನವಾದರೇ ೭.೫ ಲಕ್ಷ ರು. ಪರಿಹಾರ ನೀಡಲು ಅವಕಾಶವಿದ್ದು, ಗಾಯದ ತೀವ್ರತೆ ಆಧರಿಸಿ ಪರಿಹಾರ ದೊರಕಿಸಿ ಕೊಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಸಾರ್ವಜನಿಕರ ಸಮಸ್ಯೆ ಆಲಿಸದ ಉಸ್ತುವಾರಿ ಸಚಿವರು :

ಸಾರ್ವಜನಿಕ ಆಸ್ಪತ್ರೆಗೆ ಸಚಿವರ ಆಗಮನ ವಿಷಯ ತಿಳಿದು, ಸಮಸ್ಯೆ ನಿವೇದಿಸಿಕೊಳ್ಳಲು ಅರ್ಜಿ ಹಿಡಿದು ನಾಗರೀಕರು ಕಾಯುತ್ತಿದ್ದರು. ಆದರೆ ಅರ್ಜಿ ಹಿಡಿದು ಕಾಯುತ್ತಿದ್ದ ಜನರ ಸಮಸ್ಯೆ ಆಲಿಸದೇ ಸಚಿವರು ತೆರಳಿದ್ದು, ಜನರಲ್ಲಿ ಬೇಸರದ ಜತೆಗೆ ಅಸಹನೆ ಉಂಟುಮಾಡಿತು.

ದಲಿತ ಸಂಘರ್ಷ ಸಮಿತಿಯ ಸೋಮಶೇಖರ್ ಅವರು ಬೆಟ್ಟದಸಾತೇನಹಳ್ಳಿ ಗ್ರಾಮದ ಬಾರೆಯಲ್ಲಿ ವಾಸವಿರುವ ೧೫ ಕುಟುಂಬಗಳ ಜನರು ೨ ಕಿ.ಮೀ. ದೂರದಿಂದ ಕುಡಿಯಲು ನೀರನ್ನು ಹೊತ್ತು ತರಬೇಕು, ಸಮಸ್ಯೆ ಕುರಿತಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಏನು ಪ್ರಯೋಜನವಾಗಿಲ್ಲವೆಂದು ಆರೋಪಿಸಿ, ದಯವಿಟ್ಟು ಬಡ ಕೂಲಿಕಾರ್ಮಿಕರ ಸಮಸ್ಯೆಗೆ ಪರಿಹಾರ ಒದಗಿಸಿಕೊಡಿ ಎಂದು ವಿನಂತಿಸಿದರು, ಆಗ ಸಚಿವರು ಜಿಲ್ಲಾಧಿಕಾರಿಗಳಿಗೆ ಕ್ರಮಕೈಗೊಳ್ಳಿ ಎಂದರು.

ಕಾಂಗ್ರೆಸ್‌ ಮುಖಂಡರಾದ ಶ್ರೇಯಸ್ ಎಂ.ಪಟೇಲ್, ಎಚ್.ವಿ.ಪುಟ್ಟರಾಜು, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಚ್.ಟಿ.ಲಕ್ಷ್ಮಣ್‌, ತಹಸೀಲ್ದಾರ್‌ ಕೆ.ಕೆ.ಕೃಷ್ಣಮೂರ್ತಿ, ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

Share this article