ಸಚಿವ ರಾಮಲಿಂಗರೆಡ್ಡಿಯಿಂದ ರಥಬೀದಿಯ ಕಾಮಗಾರಿ ವೀಕ್ಷಣೆ

KannadaprabhaNewsNetwork | Published : Jun 7, 2024 12:32 AM

ಸಾರಾಂಶ

ಚಿಕ್ಕತಿರುಪತಿ ಗ್ರಾಮ ಒಂದು ಪ್ರಸಿದ್ಧ ಯಾತ್ರಾಸ್ಥಳವಾಗಿದ್ದು, ಇಲ್ಲಿ ಪ್ರತಿವರ್ಷವೂ ಜಾತ್ರಾ ಮಹೋತ್ಸವ ನಡೆಯುತ್ತದೆ. ಬ್ರಹ್ಮರಥೋತ್ಸವವು ಸಹ ವಿಶೇಷವಾಗಿದ್ದು, ರಥ ಸಾಗುವ ಮಾರ್ಗಕ್ಕೆ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಬೇಕು ಎಂಬುದು ಸ್ಥಳೀಯರು, ಮುಖಂಡರು ಮನವಿ ಮಾಡಿದ್ದರು.

ಕನ್ನಡಪ್ರಭ ವಾರ್ತೆ ಮಾಲೂರು

ತಾಲೂಕಿನ ಚಿಕ್ಕತಿರುಪತಿಯ ಶ್ರೀ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ಸಚಿವ ರಾಮಲಿಂಗಾರೆಡ್ಡಿ, ರಥಬೀದಿಯಲ್ಲಿ ನಡೆಯುತ್ತಿರುವ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಯನ್ನು ವೀಕ್ಷಿಸಿದರು.ಚಿಕ್ಕತಿರುಪತಿ ಗ್ರಾಮದ ಓಂಕಾರೇಶ್ವರ ಸ್ವಾಮಿ ಮತ್ತು ಶನೈಶ್ಚರಸ್ವಾಮಿ ದೇವಾಲಯದಲ್ಲಿ ನಡೆಯುತ್ತಿರುವ ಶನೈಶ್ಚರಸ್ವಾಮಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗರೆಡ್ಡಿ ಅವರು ಶ್ರೀ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ನಂತರ ಮಾತನಾಡಿ, ಸ್ಥಳೀಯ ಶಾಸಕ ನಂಜೇಗೌಡ ಅವರು ಚಿಕ್ಕತಿರುಪತಿಯ ರಥಬೀದಿಯಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡುವಂತೆ ಮನವಿ ಮಾಡಿದ್ದರು. ಅದರಂತೆ ಕಾಮಗಾರಿ ಅನುಮೋದನೆ ನೀಡಲಾಗಿದೆ. ಈಗಾಗಲೇ ಈ ರಸ್ತೆಯ ಕಾಮಗಾರಿ ಶೇ ೯೦ ರಷ್ಟು ಮುಗಿದಿದೆ. ತಿಂಗಳೊಳಗಾಗಿ ಕಾಮಗಾರಿಯು ಪೂರ್ಣಗೊಳ್ಳಲಿದೆ ಎಂದರು.

ಶಾಸಕ ಕೆ.ವೈ. ನಂಜೇಗೌಡ ಮಾತನಾಡಿ, ಚಿಕ್ಕತಿರುಪತಿ ಗ್ರಾಮ ಒಂದು ಪ್ರಸಿದ್ಧ ಯಾತ್ರಾಸ್ಥಳವಾಗಿದ್ದು, ಇಲ್ಲಿ ಪ್ರತಿವರ್ಷವೂ ಜಾತ್ರಾ ಮಹೋತ್ಸವ ನಡೆಯುತ್ತದೆ. ಬ್ರಹ್ಮರಥೋತ್ಸವವು ಸಹ ವಿಶೇಷವಾಗಿದ್ದು, ರಥ ಸಾಗುವ ಮಾರ್ಗಕ್ಕೆ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಬೇಕು ಎಂಬುದು ಸ್ಥಳೀಯರು, ಮುಖಂಡರು ಮನವಿ ಮಾಡಿದ್ದರು. ಸುಮಾರು ೩ ಕೋಟಿ ರು. ವೆಚ್ಚದಲ್ಲಿ ದೇವಸ್ಥಾನದ ರಥ ಬೀದಿಯ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಸಚಿವ ರಾಮಲಿಂಗರೆಡ್ಡಿ ಅವರು ಅನುಮೋದನೆ ಮಾಡಿಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ದೇವಸ್ಥಾನ ಕಾಂಪೌಂಡ್ ಸೇರಿ ದೇವಸ್ಥಾನಕ್ಕೆ ಆಗಬೇಕಿರುವ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುವುದು ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮೀನಾರಾಯಣ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಧುಸೂದನ್, ಚಿಕ್ಕತಿರುಪತಿ ಗ್ರಾಪಂ ಅಧ್ಯಕ್ಷ ರಾಮಪ್ರಸಾದ್, ಕೆ.ಜಿ.ಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಸತೀಶ್ ರಾಜಣ್ಣ, ಚಿಕ್ಕತಿರುಪತಿ ಗ್ರಾಪಂ ಪಿಡಿಒ ಹರೀಂದ್ರ ಗೋಪಾಲ್, ದರಖಾಸ್ತು ಸಮಿತಿ ಅಧ್ಯಕ್ಷ ಆನೇಪುರ ಹನುಮಂತಪ್ಪ, ಸದಸ್ಯ ವೀರಭದ್ರಪ್ಪ, ಗ್ರಾಪಂ ಸದಸ್ಯ ಜಿ.ವಿ.ಮಂಜುನಾಥ್, ರಾಘವೇಂದ್ರ ಪ್ರಸಾದ್, ಎ.ಎಂ.ನಾರಾಯಣಪ್ಪ, ಗೊಲ್ಲಹಳ್ಳಿ ವೆಂಕಟೇಶ್, ಮುಖಂಡರಾದ ಬಾಳಿಗಾನಹಳ್ಳಿ ಶ್ರೀನಿವಾಸ್ ಸೇರಿ ಮತ್ತಿತರರು ಉಪಸ್ಥಿತರಿದ್ದರು.

Share this article