ಸಚಿವರ ಭರವಸೆ ಒಪ್ಪದ ಆಶಾ ಕಾರ್ಯಕರ್ತೆಯರು - ಸಂಧಾನ ವಿಫಲ : ಮುಂದುವರಿದ ಪ್ರತಿಭಟನೆ

KannadaprabhaNewsNetwork | Updated : Jan 09 2025, 10:31 AM IST

ಸಾರಾಂಶ

ಸಚಿವ ದಿನೇಶ್ ಗುಂಡೂರಾವ್‌ ಅವರ ಭರವಸೆ ಒಪ್ಪದ ಆಶಾ ಕಾರ್ಯಕರ್ತೆಯರು ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ.

 ಬೆಂಗಳೂರು : ಮಾಸಿಕ ₹15 ಸಾವಿರ ಗೌರವಧನ ನೀಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ಅನಿರ್ಧಿಷ್ಟಾವಧಿ ಧರಣಿ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರ ಮನವೊಲಿಸಲು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಯತ್ನಿಸಿದರೂ ಫಲ ನೀಡಿಲ್ಲ.

ಮಂಗಳವಾರದಿಂದ ಆಶಾ ಕಾರ್ಯಕರ್ತೆಯರು ಅನಿರ್ಧಿಷ್ಟಾವಧಿ ಹೋರಾಟ ಆರಂಭಿಸಿದ್ದು, ಮೊದಲ ದಿನವೇ ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಬೇಡಿಕೆಗಳ ಮನವಿ ಸ್ವೀಕರಿಸಿದ್ದರು. ಆದರೂ ಹೋರಾಟ ಮುಂದುವರೆಸಲಾಗಿತ್ತು. ಬುಧವಾರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ದಿನೇಶ್‌ ಗುಂಡೂರಾವ್‌ ಅವರು ಕಾಲಾವಕಾಶ ಕೋರಿದ್ದರಿಂದ ಧರಣಿ ಮುಂದುವರೆಸಲು ತೀರ್ಮಾನಿಸಲಾಗಿದೆ.

‘ಇದು ರಾಜ್ಯ ಮತ್ತು ಕೇಂದ್ರ ಸರ್ಕಾರದ ಜಂಟಿ ಪ್ರಾಯೋಜಕತ್ವದ ಯೋಜನೆಯಾಗಿದೆ. ಸದ್ಯಕ್ಕೆ ₹9500 ಮುಂಗಡವಾಗಿ ನೀಡಲಾಗುವುದು. ಆದರೆ ಕೆಲಸ ಕಡಿಮೆಯಾದರೆ ಹಣ ಕಡಿತ ಮಾಡಲಾಗುವುದು. ಗೌರವಧನ ಹೆಚ್ಚಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಬಜೆಟ್ ಅಧಿವೇಶನದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಉಳಿದ ಬೇಡಿಕೆಗಳ ಕುರಿತು ಸಂಘದ ಜೊತೆ ಚರ್ಚಿಸಲಾಗುವುದು. ಪ್ರತಿಭಟನೆ ಕೈಬಿಟ್ಟು ಕೆಲಸಕ್ಕೆ ಹಿಂದಿರುಗಬೇಕು’ ಎಂದು ದಿನೇಶ್‌ ಗುಂಡೂರಾವ್‌ ಸೂಚಿಸಿದರು.

ಆದರೆ ಇದಕ್ಕೆ ಒಪ್ಪಿಗೆ ಸೂಚಿಸದ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಹಾಗೂ ಆಲ್‌ ಇಂಡಿಯಾ ಯುನೈಟೆಡ್‌ ಟ್ರೇಡ್‌ ಯೂನಿಯನ್‌ ಸೆಂಟರ್‌ ಸಂಘಟನೆಯ ಮುಖಂಡರು, ‘ಈಗಾಗಲೇ ಸಮಸ್ಯೆಗಳ ಕುರಿತು 16ಕ್ಕೂ ಅಧಿಕ ಸಭೆ ನಡೆದಿವೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ₹15 ಸಾವಿರ ಗೌರವಧನ ನಿಗದಿ ಮಾಡಬೇಕು. ಈ ಹಣದಲ್ಲಿ ಯಾವುದೇ ಕಡಿತ ಮಾಡಬಾರದು. ಇದನ್ನು ಒಪ್ಪುವವರೆಗೂ ಪ್ರತಿಭಟನೆ ಮುಂದುವರೆಯಲಿದೆ’ ಎಂದು ಸ್ಪಷ್ಟಪಡಿಸಿದರು.

ಕ್ಯಾಪ್ಷನ್‌:

ಆಶಾ ಕಾರ್ಯಕರ್ತೆಯರು ಅನಿರ್ಧಿಷ್ಟಾವಧಿ ಧರಣಿ ನಡೆಸುತ್ತಿರುವ ಸ್ವಾತಂತ್ರ್ಯ ಉದ್ಯಾನವನಕ್ಕೆ ಭೇಟಿ ನೀಡಿದ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಬೇಡಿಕೆಗಳ ಮನವಿ ಸ್ವೀಕರಿಸಿದರು.

ಕನಿಷ್ಠವೇತನ ನಿರಾಕರಣೆ ಮಾನವ  ಹಕ್ಕುಗಳ ಉಲ್ಲಂಘನೆ: ನ್ಯಾ.ಹೆಗ್ಡೆ

ಆಶಾ ಕಾರ್ಯಕರ್ತೆಯರಿಗೆ ಸರ್ಕಾರ ಕನಿಷ್ಠ ವೇತನವನ್ನೂ ನಿರಾಕರಿಸುತ್ತಿರುವುದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ನಿಮ್ಮಲ್ಲಿ ಒಗ್ಗಟ್ಟಿದ್ದು ಸರ್ಕಾರಕ್ಕೆ ಸಂದೇಶ ರವಾನಿಸಿ ಎಂದು ವಿಶ್ರಾಂತ ಲೋಕಾಯುಕ್ತ ನ್ಯಾ.ಸಂತೋಷ್‌ ಹೆಗ್ಡೆ ಅವರು ಕರೆ ನೀಡಿದರು.

ಸ್ವಾತಂತ್ರ್ಯ ಉದ್ಯಾನವನದ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಅವರು, ಜೀವನಕ್ಕೆ ಅವಶ್ಯಕವಾದ ವೇತನವನ್ನು ಪಡೆಯುವುದು ಮಾನವನ ಹಕ್ಕು. ಅದು ವೇತನ ಅಥವಾ ಇನ್ಯಾವುದೇ ರೂಪದಲ್ಲಿ ನೀಡಬೇಕಾಗಿದ್ದು ಸರ್ಕಾರದ ಕರ್ತವ್ಯವಾಗಿದೆ. ಇಲ್ಲದಿದ್ದರೆ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಬೇಡಿಕೆಗಳನ್ನು ಈಡೇರಿಸಲು ಖಜಾನೆಯಲ್ಲಿ ಹಣವಿಲ್ಲ ಎಂದು ಸರ್ಕಾರ ಹೇಳುತ್ತಿದೆ. ಆದರೆ ಸರ್ಕಾರ ಮಾಡುವ ದುಂದುವೆಚ್ಚಕ್ಕೆ ಕಡಿವಾಣ ಹಾಕಿದರೆ ಬೇಡಿಕೆಗಳನ್ನು ಈಡೇರಿಸುವುದು ಕಷ್ಟವಲ್ಲ. ನಿಮ್ಮಲ್ಲಿ ಒಗ್ಗಟ್ಟಿದ್ದು ಸರ್ಕಾರಗಳಿಗೆ ಸಂದೇಶ ರವಾನಿಸಿ ಎಂದು ಸಲಹೆ ನೀಡಿದರು.

ಪ್ರತಿಭಟನಾ ನಿರತ 500 ಆಶಾ ನೌಕರರಿಗೆ ಕೆಮ್ಮು, ಜ್ವರ, ನೆಗಡಿ

ಕನ್ನಡಪ್ರಭ ವಾರ್ತೆ ಬೆಂಗಳೂರುಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಮಂಗಳವಾರದಿಂದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಅನಿರ್ಧಿಷ್ಟಾವಧಿ ಧರಣಿ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರು ಅನಾರೋಗ್ಯಕ್ಕೆ ಈಡಾಗಿದ್ದಾರೆ. 500ಕ್ಕೂ ಅಧಿಕ ಮಂದಿಗೆ ಉಚಿತ ಔಷಧೋಪಚಾರ ನೀಡಲಾಗಿದೆ.

ಪ್ರತಿಭಟನೆಗೆ ರಾಜ್ಯದ ಹಲವೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಸೋಮವಾರ ರಾತ್ರಿಯೇ ಮಹಿಳೆಯರು ಆಗಮಿಸಿದ್ದು, ಕೆಲವರು ನೂರಾರು ಕಿ.ಮೀ. ಕ್ರಮಿಸಿ ಸ್ವಾತಂತ್ರ್ಯ ಉದ್ಯಾನವನ ತಲುಪಿದ್ದರು. ಮಂಗಳವಾರ ದಿನವಿಡೀ ಪ್ರತಿಭಟನೆ ನಡೆಸಿ, ಘೋಷಣೆಗಳನ್ನು ಕೂಗಿದ್ದರು. ರಾತ್ರಿ ಕೊರೆಯ ಚಳಿಯಲ್ಲೇ ಪ್ರತಿಭಟನಾನಿರತ ಸ್ಥಳದಲ್ಲೇ ನಿದ್ರೆಗೆ ಶರಣಾಗಿದ್ದರು.ಇದರಿಂದಾಗಿ ಬಹಳಷ್ಟು ಮಹಿಳೆಯರು ಕೆಮ್ಮು, ನೆಗಡಿ, ಗಂಟಲು ನೋವು, ತಲೆ ನೋವು, ಜ್ವರ, ಮೈಕೈನೋವು, ಸೊಂಟ ನೋವಿಗೆ ತುತ್ತಾಗಿ ಅನಾರೋಗ್ಯದಿಂದ ಬಳಲುತ್ತಿದ್ದರು. ಆಲ್‌ ಇಂಡಿಯಾ ಯುನೈಟೆಡ್‌ ಟ್ರೇಡ್‌ ಯೂನಿಯನ್‌ ಸೆಂಟರ್‌(ಎಐಯುಟಿಯುಸಿ) ಸಂಘಟನೆಯ ಮನವಿಯ ಮೇರೆಗೆ ‘ಮೆಡಿಕಲ್‌ ಸರ್ವೀಸ್‌ ಸೆಂಟರ್‌’ ಸಂಘಟನೆಯವರು ಸ್ವಾತಂತ್ರ್ಯ ಉದ್ಯಾನವನದಲ್ಲಿ ಟೆಂಟ್‌ ನಿರ್ಮಿಸಿ ಉಚಿತ ಚಿಕಿತ್ಸೆ ನೀಡಿದ್ದಾರೆ.ತಜ್ಞ ವೈದ್ಯರ ತಂಡ

ವೈದ್ಯರಾದ ಟಿ.ಎಸ್‌.ಸುನೀತ್‌ಕುಮಾರ್‌, ಅಪೂರ್ವ, ಸೀಮಾ, ರಾಜಶೇಖರ್‌, ಗಂಗಾಧರ್‌ ಸೇರಿದಂತೆ ಹಲವು ವೈದ್ಯರ ತಂಡ ದಿನದ 24 ಗಂಟೆಯೂ ಕಾರ್ಯೋನ್ಮುಖವಾಗಿದ್ದು ಅಗತ್ಯ ಚಿಕಿತ್ಸೆ ನೀಡುತ್ತಿದ್ದಾರೆ. ಔಷಧಿ ವ್ಯವಸ್ಥೆ ಮಾಡಿರುವ ಬಗ್ಗೆ ಆಶಾ ಕಾರ್ಯಕರ್ತೆಯರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ದೂರದಿಂದ ಆಗಮಿಸಿರುವುದು, ಕೊರೆವ ಚಳಿ, ಘೋಷಣೆ ಕೂಗುವುದು ಮತ್ತಿತರ ಕಾರಣಗಳಿಂದಾಗಿ ಮಹಿಳೆಯರು ಅನಾರೋಗ್ಯಕ್ಕೆ ಒಳಗಾಗುತ್ತಿದ್ದು ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ.

-ಟಿ.ಎಸ್‌.ಸುನೀತ್‌ಕುಮಾರ್‌, ವೈದ್ಯ.

9500 ರು. ಮುಂಗಡ ನೀಡಲು ಸಿದ್ಧ: ಸಚಿವಕನ್ನಡಪ್ರಭ ವಾರ್ತೆ ಬೆಂಗಳೂರುಆಶಾ ಕಾರ್ಯಕರ್ತೆಯರಿಗೆ ಪ್ರಸ್ತುತ ನೀಡುತ್ತಿರುವ ಮಾಸಿಕ ₹8 ಸಾವಿರ ಖಚಿತ ಗೌರವಧನದ ಬದಲಿಗೆ ₹9500 ಮುಂಗಡವಾಗಿ ನೀಡಲು ಸರ್ಕಾರ ಸಿದ್ಧವಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಸ್ವಾತಂತ್ರ್ಯ ಉದ್ಯಾನದ ಪ್ರತಿಭಟನಾ ಸ್ಥಳದಲ್ಲಿ ಮಾತನಾಡಿದ ಅವರು, ಆಶಾ ಕಾರ್ಯಕರ್ತೆಯರಿಗೆ ಪ್ರಸ್ತುತ ₹8 ಸಾವಿರ ಗೌರವಧನ ಖಚಿತವಾಗಿ ಸಿಗುತ್ತಿದೆ. ಆರ್‌ಸಿಎಚ್‌ ಪೋರ್ಟಲ್‌ನಲ್ಲಿ ಕಾರ್ಯಕರ್ತೆಯರ ಕಾರ್ಯಚಟುವಟಿಕೆ ಆಧಾರದಲ್ಲಿ ಪ್ರೋತ್ಸಾಹಧನ ಲಭ್ಯವಾಗುತ್ತದೆ. ಪ್ರಸ್ತುತ ಗೌರವಧನ ಹಾಗೂ ಪ್ರೋತ್ಸಾಹಧನ ಸೇರಿ ಸರಾಸರಿ ಮಾಸಿಕ ₹9500 ಪಾವತಿ ಮಾಡಲಾಗುತ್ತಿದೆ. ಇದನ್ನು ಮುಂಗಡವಾಗಿ ಆಶಾ ಕಾರ್ಯಕರ್ತೆಯರಿಗೆ ಒದಗಿಸಲಾಗುವುದು. ಗೌರವಧನದ ಹೊರತಾಗಿ ಪ್ರೋತ್ಸಾಹಧನವನ್ನೂ ಮಾಸಿಕ ವೇತನದ ರೂಪದಲ್ಲಿ ನಿಗದಿಪಡಿಸುವುದು ಸದ್ಯದ ಪರಿಸ್ಥಿತಿಯಲ್ಲಿ ಕಷ್ಟ ಎಂದು ತಿಳಿಸಿದರು.ರಜೆ ನಿಗದಿ ಮಾಡುವ ಬೇಡಿಕೆ ಕುರಿತು ಸಕಾರಾತ್ಮಕವಾಗಿ ಸ್ಪಂದಿಸಿದ ಅವರು, ರಜೆಗಳನ್ನು ಕೇಳುವುದು ಆಶಾ ಕಾರ್ಯಕರ್ತೆಯರ ಹಕ್ಕು. ಈ ನಿಟ್ಟಿನಲ್ಲಿ ಚರ್ಚಿಸಿ ಕ್ರ‌ಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.

Share this article