ಶಿವಮೊಗ್ಗ ದೇಶದ ಯುವಕರ ಭವಿಷ್ಯದ ಜೊತೆ ಬಿಜೆಪಿ ಸರ್ಕಾರ ಚೆಲ್ಲಾಟವಾಡುತ್ತಿದೆ. ಯಾವುದೇ ನಿಯಮಗಳನ್ನು ಪಾಲಿಸದೆ ಅಮಾಯಕರ ಮೇಲೆ ಲಾಠಿಚಾರ್ಜ್ ನಡೆಸಲಾಗಿದೆ. ಈ ಘಟನೆಯಲ್ಲಿ 30ಕ್ಕೂ ಹೆಚ್ಚು ಅಮಾಯಕ ವಿದ್ಯಾರ್ಥಿಗಳ ಸಾವಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ನೇರ ಹೊಣೆ ಎಂದು ಮಾಜಿ ಸಚಿವ ಮಧು ಬಂಗಾರಪ್ಪ ಗಂಭೀರ ಆರೋಪ ಮಾಡಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ದೇಶದ ಯುವಕರ ಭವಿಷ್ಯದ ಜೊತೆ ಬಿಜೆಪಿ ಸರ್ಕಾರ ಚೆಲ್ಲಾಟವಾಡುತ್ತಿದೆ. ಯಾವುದೇ ನಿಯಮಗಳನ್ನು ಪಾಲಿಸದೆ ಅಮಾಯಕರ ಮೇಲೆ ಲಾಠಿಚಾರ್ಜ್ ನಡೆಸಲಾಗಿದೆ. ಈ ಘಟನೆಯಲ್ಲಿ 30ಕ್ಕೂ ಹೆಚ್ಚು ಅಮಾಯಕ ವಿದ್ಯಾರ್ಥಿಗಳ ಸಾವಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ನೇರ ಹೊಣೆ ಎಂದು ಮಾಜಿ ಸಚಿವ ಮಧು ಬಂಗಾರಪ್ಪ ಗಂಭೀರ ಆರೋಪ ಮಾಡಿದರು.
ಶಿವಮೊಗ್ಗದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಶಿಯಲ್ ಮೀಡಿಯಾದ ಮೂಲಕ ಅಧಿಕಾರಕ್ಕೆ ಬಂದ ಬಿಜೆಪಿ ವಿರುದ್ಧವೇ ಈಗ ಸೋಶಿಯಲ್ ಮೀಡಿಯಾ ತಿರುಗಿಬಿದ್ದಿದೆ. ಯುವಕರು ಬೀದಿಗಿಳಿದು ಹೋರಾಟ ನಡೆಸಿದ್ದು, ಅವರ ಹೋರಾಟಕ್ಕೆ ದೊಡ್ಡ ಜಯ ಸಿಕ್ಕಿದೆ ಎಂದರು.
ಯುವಕರ ಭವಿಷ್ಯದೊಂದಿಗೆ ಆಟವಾಡುವ ಹಕ್ಕು ಯಾವುದೇ ಸರ್ಕಾರಕ್ಕೂ ಇಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಯುವಕರ ವಿಚಾರದಲ್ಲಿ ಅತ್ಯಂತ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು. ಈ ವಿಷಯವನ್ನು ಸಂಸತ್ತಿನಲ್ಲಿ ವಿರೋಧ ಪಕ್ಷಗಳು ಪ್ರಸ್ತಾಪಿಸಲಿವೆ ಎಂದು ತಿಳಿಸಿದರು.
ಕೆಪಿಎಸ್‌ಸಿ ಪರೀಕ್ಷಾ ಅಕ್ರಮ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಮಧು ಬಂಗಾರಪ್ಪ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.
ಸಾವಿರಾರು ನಿರುದ್ಯೋಗಿ ಯುವಕರ ಭವಿಷ್ಯದ ಜೊತೆ ಆಟವಾಡುವುದನ್ನು ಸಹಿಸಲು ಸಾಧ್ಯವಿಲ್ಲ. ಪ್ರಕರಣದ ಕುರಿತು ನಿಷ್ಪಕ್ಷಪಾತ ಹಾಗೂ ಕಠಿಣ ತನಿಖೆ ನಡೆಯಬೇಕು. ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಇಲ್ಲದಿದ್ದರೆ ಸಾರ್ವಜನಿಕರ ನಂಬಿಕೆ ಕಳೆದುಹೋಗುತ್ತದೆ ಎಂದು ಹೇಳಿದರು.
ಶಿಕ್ಷಣ ಸಚಿವರಾಗಿದ್ದ ಸಂದರ್ಭದಲ್ಲಿ ಶಿಕ್ಷಕರ ನೇಮಕಾತಿಯಲ್ಲಿ ಪಾರದರ್ಶಕ ವ್ಯವಸ್ಥೆಯನ್ನು ಜಾರಿಗೆ ತಂದಿದ್ದೇವೆ ಎಂದು ತಿಳಿಸಿದರು.
ಹೈಕಮಾಂಡ್ ತೀರ್ಮಾನ ಅಂತಿಮ:
ಸಚಿವ ಸಂಪುಟ ವಿಸ್ತರಣೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಹೈಕಮಾಂಡ್ ಭೇಟಿಗಾಗಿ ಹಿರಿಯ ನಾಯಕರು ದೆಹಲಿಗೆ ತೆರಳಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ದೆಹಲಿಗೆ ತೆರಳಲಿದ್ದು, ಹೈಕಮಾಂಡ್ ತೀರ್ಮಾನವೇ ಅಂತಿಮವಾಗಿದೆ ಎಂದರು.
ದೆಹಲಿ ವರಿಷ್ಠರು ಸೂಕ್ತ ಹಾಗೂ ಉತ್ತಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬ ವಿಶ್ವಾಸವಿದೆ. ವರಿಷ್ಠರು ಏನೇ ತೀರ್ಮಾನ ಕೈಗೊಂಡರೂ ಅದಕ್ಕೆ ನಾವು ಸಂಪೂರ್ಣ ಬದ್ಧರಾಗಿರುತ್ತೇವೆ ಎಂದು ಹೇಳಿದರು.
-----------------
ಬಾಕ್ಸ್...
ಎಚ್.ಎಂ.ಸಿ ನಿಧನಕ್ಕೆ ಸಂತಾಪ
ಹಿರಿಯ ನಾಯಕ ಹೆಚ್.ಎಂ. ಚಂದ್ರಶೇಖರ್ ಅವರ ನಿಧನಕ್ಕೆ ಮಧು ಬಂಗಾರಪ್ಪ ಸಂತಾಪ ಸೂಚಿಸಿದರು.
ಚಂದ್ರಶೇಖರ್ ಅವರು ನಮ್ಮ ಕುಟುಂಬಕ್ಕೆ ಅತ್ಯಂತ ಆತ್ಮೀಯರಾಗಿದ್ದರು. ನನ್ನ ತಂದೆ ಎಸ್. ಬಂಗಾರಪ್ಪ ಅವರನ್ನು ಬಿಟ್ಟರೆ ನಾನು ಮೊದಲ ಬಾರಿಗೆ ಮತ ಕೇಳಿದ್ದು ಚಂದ್ರಶೇಖರ್ ಅವರ ಪರವಾಗಿಯೇ. 1999ರಲ್ಲಿ ಶಿವಮೊಗ್ಗದಲ್ಲಿ ಅವರ ಪರ ಸುಮಾರು ಮೂರುವರೆ ದಿನ ಪ್ರಚಾರ ನಡೆಸಿದ್ದೆ ಎಂದು ಸ್ಮರಿಸಿದರು.
ನಮ್ಮ ತಂದೆ ಬಂಗಾರಪ್ಪ ಅವರಂತೆ ಚಂದ್ರಶೇಖರ್ ಅವರೂ ನೇರ ನುಡಿಯ ನಾಯಕರಾಗಿದ್ದರು. ಬೆಂಗಳೂರಿಗೆ ಬಂದಾಗಲೆಲ್ಲ ಮನೆಗೆ ಬಂದು ಧೈರ್ಯ ತುಂಬುತ್ತಿದ್ದರು ಹಾಗೂ ಮಾರ್ಗದರ್ಶನ ನೀಡುತ್ತಿದ್ದರು. ಅವರ ಪುತ್ರರಾದ ಯೋಗೇಶ್ ಹಾಗೂ ಶರಣ್ ಅವರೊಂದಿಗೆ ಸದಾ ನಾವಿರುತ್ತೇವೆ. ಪಕ್ಷಾತೀತವಾಗಿ ಅವರ ಕುಟುಂಬಕ್ಕೆ ಬೆಂಬಲವಾಗಿ ನಿಲ್ಲುತ್ತೇವೆ ಎಂದು ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.