ಕನ್ನಡಪ್ರಭ ವಾರ್ತೆ, ಬೆಂಗಳೂರು
ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳ ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲೇ ಸಚಿವರಿಬ್ಬರು ಏಕ ವಚನದಲ್ಲಿ ವಾಗ್ವಾದ ನಡೆಸಿದ ಘಟನೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ನಡೆದಿದೆ.ಸಭೆಯಲ್ಲಿ ಅಧಿಕಾರಿಗಳ ವರ್ಗಾವಣೆ ವಿಚಾರ ಪ್ರಸ್ತಾಪಿಸಿದ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಅವರು, ಈ ಹಿಂದೆ ಅಧಿಕಾರಿಗಳ ವರ್ಗಾವಣೆ ಶಾಸಕರ ಶಿಫಾರಸಿನ ಮೇಲೆ ಆಗುತ್ತಿತ್ತು. ಆ ರೀತಿ ನಡೆಯುತ್ತಿಲ್ಲ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ನಾವು ಆಡಳಿತದ ಮೇಲೆ ನಿಯಂತ್ರಣ ಸಾಧಿಸುವುದಾದರೂ ಹೇಗೆ ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಒಟ್ಟಾಗಿ ಬಂದು ಯಾವ ಅಧಿಕಾರಿಯನ್ನು ಹಾಕಬೇಕೆಂದು ಹೇಳಿದರೆ ಅದೇ ಅಧಿಕಾರಿಯನ್ನು ನೇಮಕ ಮಾಡಬಹುದು. ಆದರೆ, ಅವರೊಂದು, ನೀವೊಂದು ಹೇಳಿದರೆ ನಾವು ಇನ್ಯಾವುದೋ ಮಾಡಬೇಕಾಗುತ್ತದೆ. ಒಟ್ಟಾಗಿ ಬಂದರೆ ನೀವು ಹೇಳಿದ್ದು ಮಾಡಬಹುದು ಎಂದರು.ಜತೆಗೆ, ಉದಾಹರಣೆಗೆ ರಾಯಚೂರು ವಿಚಾರವನ್ನೇ ನೋಡಿ. ಅಲ್ಲಿ ಅಧಿಕಾರಿಗಳ ವರ್ಗಾವಣೆಗೆ ಸಂಬಂಧಿಸಿದಂತೆ ಸದಾ ರಂಪಾಟ ಎಂದರು.
ಈ ಸಂದರ್ಭದಲ್ಲಿ ಎದ್ದು ನಿಂತ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು, ಜಿಲ್ಲೆಯಲ್ಲಿ ನಮ್ಮ ಮಾತಿಗೆ ಬೆಲೆ ಕೊಡುತ್ತಿಲ್ಲ. ರಾಯಚೂರಿನಲ್ಲಿ ಬಿಜೆಪಿಗೆ ಅನುಕೂಲವಾಗುವಂತಹ ರಾಜಕಾರಣ ನಡೆಯುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದರು.ಇದರಿಂದ ಕೆರಳಿದ ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ್ ಪಾಟೀಲ ಅವರು, ಶಾಸಕರ ಬೇಡಿಕೆಗಳಿಗೆ ಸ್ಪಂದಿಸುವುದು ನನ್ನ ಕೆಲಸ. ನಾನು ಯಾರನ್ನೂ ನಿರ್ಲಕ್ಷಿಸಿಲ್ಲ ಎಂದು ಬಲವಾಗಿ ಸಮರ್ಥಿಸಿಕೊಂಡರಲ್ಲದೆ, ಬೋಸರಾಜು ವಿರುದ್ಧ ಕಿಡಿಕಾರಿದರು. ಆಗ ಬೋಸರಾಜು ಕೂಡ ಉದ್ವೇಗದಲ್ಲಿ ಮಾತನಾಡಿದಾಗ ಸಚಿವ ಶರಣ್ ಪ್ರಕಾಶ್ ಕೂಡ ಧ್ವನಿಯೇರಿಸಿದ್ದಾರೆ. ಈ ಹಂತದಲ್ಲಿ ಉಭಯ ಸಚಿವರ ನಡುವೆ ಏಕ ವಚನದಲ್ಲಿ ವಾಗ್ವಾದ ನಡೆದಿದೆ ಎನ್ನಲಾಗಿದೆ. ಈ ಹಂತದಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗುವುದನ್ನು ಗಮನಿಸಿದ ಮುಖ್ಯಮಂತ್ರಿಯವರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು ಎನ್ನಲಾಗಿದೆ.