ಕನ್ನಡಪ್ರಭ ವಾರ್ತೆ ಮೈಸೂರುಪೊಲೀಸರ ಕ್ರಮಕ್ಕೆ ನನ್ನ ಸಹಮತವಿದೆ. ಅಮಾಯಕರನ್ನು ಯಾರು ಬಂಧಿಸಿಲ್ಲ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಸ್ಪಷ್ಟಪಡಿಸಿದರು.ನಗರದ ಉದಯಗಿರಿ ಪೊಲೀಸ್ ಠಾಣೆಯ ಮೇಲೆ ಕಲ್ಲು ತೂರಾಟ ಪ್ರಕರಣ ಹಿನ್ನೆಲೆಯಲ್ಲಿ ಗುರುವಾರ ಉದಯಗಿರಿ ಠಾಣೆಗೆ ಭೇಟಿ ನೀಡಿ, ಘಟನೆ ಸಂಬಂಧ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಚರ್ಚಿಸಿ ಮಾಹಿತಿ ಪಡೆದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.ಉದಯಗಿರಿ ಪ್ರಕರಣ ಸಂಬಂಧ ಸಿಸಿಟಿವಿ ಕ್ಯಾಮೆರಾ ದೃಶ್ಯ ಆಧರಿಸಿ ಕೆಲವರನ್ನು ಬಂಧಿಸಿದ್ದಾರೆ. ನಾವೆಲ್ಲರೂ ಕೂಡ ಕಾನೂನಿಗೆ ಗೌರವ ಕೊಡಬೇಕು. ನಮ್ಮ ಪೊಲೀಸರು ಅಶ್ರುವಾಯು ಸಿಡಿಸಿ ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ. ಪ್ರಕರಣದ ಹಿಂದೆ ಯಾರಿದ್ದಾರೆ ಎಂಬುದನ್ನ ಸಿಸಿಬಿ ಪೊಲೀಸರು ತನಿಖೆ ಮಾಡುತ್ತಾರೆ ಎಂದರು.ಕಾನೂನಿನ ಬಗ್ಗೆ ಈ ಭಾಗದ ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸ ಆಗುತ್ತದೆ. ಕ್ರೈಮ್ ರೇಟ್ ಆಧಾರದ ಮೇಲೆ ಪೊಲೀಸ್ ಠಾಣೆ ಬೇಕಾ ಬೇಡವಾ ಎಂಬ ಪ್ರಕ್ರಿಯೆ ನಡೆಯುತ್ತದೆ ಎಂದು ಅವರು ಹೇಳಿದರು.ಮೊಬೈಲ್ ನಿಂದ ಮೊಬೈಲ್ ಗೆ ಒಂದು ಪೋಸ್ಟ್ ಶೇರ್ ಆಗಿದೆ. ಈ ವಿಷಯ ಎಲ್ಲರಿಗೂ ಗೊತ್ತಾಗಿದೆ. ಎರಡು ಗುಂಪು ಠಾಣೆಗೆ ಬಂದು ಗೊಂದಲ, ಎರಡು ಗುಂಪು ಅಧಿಕೃತವಾಗಿ ದೂರು ನೀಡಿಲ್ಲ. ಹೀಗಾಗಿ, ಪೊಲೀಸರೇ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಪೊಲೀಸ್ ಕ್ರಮಕ್ಕೆ ಹಿರಿಯರು ಒಪ್ಪಿಗೆ ಸೂಚಿಸಿದ್ದರು. ಆದರೆ, ಕೆಲವರು ಕಲ್ಲು ತೂರಾಟ ಮಾಡಿದ್ದಾರೆ. ತಪ್ಪು ಮಾಡಿದವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇನ್ನು ಕೆಲವರ ಪತ್ತೆಗೆ ತನಿಖೆ ಮಾಡುತ್ತಿದ್ದಾರೆ ಎಂದರು.ಕಾನೂನು ಭಂಗ ಉಂಟು ಮಾಡಿದವರು ಯಾಕೆ ಮಾಡಿದರು? ಏನು ಅಂತ ಪೊಲೀಸರು ತನಿಖೆ ಮಾಡುತ್ತಾರೆ. ಜನರು ಶಾಂತಿ ಕಾಪಾಡಿ, ಕಾನೂನು ಕೈಗೆ ತೆಗೆದುಕೊಳ್ಳಬೇಡಿ. ಕಾನೂನು ಪ್ರಕಾರ ಕ್ರಮ ಕೈಗೊಳ್ಳಿ ಅಂತ ನಾನು ಹೇಳಿದ್ದೇನೆ. ಯಾರೇ ಆದರೂ ತಪ್ಪು ಮಾಡಿದ್ದರೆ ಶಿಕ್ಷೆ ಆಗುತ್ತದೆ ಎಂದು ಅವರು ಹೇಳಿದರು.ಘಟನೆ ಹಿಂದೆ ಆರ್ ಎಸ್ಎಸ್ ಕೈವಾಡ ಎಂಬ ಕೆಲವರ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಿಸಿಬಿ ಪೊಲೀಸರು ನಿಜ ಸತ್ಯ ಹೊರ ತರುವ ನಿರೀಕ್ಷೆಯಿದೆ ಎಂದರು.ರೌಡಿಶೀಟರ್ ಒಬ್ಬ ಪ್ರತಾಪ್ ಸಿಂಹ ಹಿಂದೆ ಬಂದು ಪೊಲೀಸ್ ಠಾಣೆಯಲ್ಲಿ ಕೂತಿದ್ದ ಎಂಬ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಏನೇ ಇದ್ದರೂ ಪೊಲೀಸರು ಪರಿಶೀಲನೆ ಮಾಡುತ್ತಾರೆ. ಅಮಾಯಕರಿಗೆ ಶಿಕ್ಷೆ ಆಗಲ್ಲ, ತಪ್ಪು ಮಾಡಿದರಿಗೇ ಶಿಕ್ಷೆ ಆಗತ್ತದೆ ಎಂದರು.ಶುಕ್ರವಾರ ಸಿಎಂ ಕೂಡ ಉದಯಗಿರಿ ಗಲಾಟೆ ವಿಚಾರವಾಗಿ ಅಧಿಕಾರಿಗಳ ಜೊತೆ ಬೆಂಗಳೂರಿನಲ್ಲಿ ಸಭೆ ಮಾಡುತ್ತಾರೆ. ಘಟನೆ ಮಾಹಿತಿಯನ್ನು ಸಿಎಂ ಪಡೆಯುತ್ತಾರೆ ಎಂದು ಅವರು ಹೇಳಿದರು.ಈ ವೇಳೆ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಡಿಸಿಪಿಗಳಾದ ಎಂ. ಮುತ್ತುರಾಜು, ಎಸ್. ಜಾಹ್ನವಿ, ಎಸಿಪಿ ಶಾಂತಮಲ್ಲಪ್ಪ ಮೊದಲಾದವರು ಇದ್ದರು.----ಕೋಟ್...ಸಿಎಂ ಗಟ್ಟಿಯಾಗಿ ಕುರ್ಚಿಯಲ್ಲಿ ಕೂತಿದ್ದಾರೆ. ಬದಲಾವಣೆ ವಿಚಾರವೇ ಇಲ್ಲ. ಸತೀಶ್ ಜಾರಕಿಹೊಳಿ ಮನೆ, ನಮ್ಮ ಮನೆ ಅಕ್ಕಪಕ್ಕದಲ್ಲೆ ಇದೆ. ಹೀಗಾಗಿ ಭೇಟಿ ಮಾಡುತ್ತೇವೆ ಅಷ್ಟೇ. - ಡಾ.ಎಚ್.ಸಿ. ಮಹದೇವಪ್ಪ, ಸಮಾಜ ಕಲ್ಯಾಣ ಸಚಿವರು--------------------eom/mys/shekar/