ಭದ್ರಾ ನಾಲೆ ಕೊನೆ ಭಾಗಕ್ಕೆ ನೀರು ಕೊಡುವಲ್ಲಿಯೂ ಎಡವಿದ ಸಚಿವ: ಬಿ.ಪಿ.ಹರೀಶ ಗೌಡ

KannadaprabhaNewsNetwork | Published : Mar 3, 2024 1:30 AM

ಸಾರಾಂಶ

ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು ಎದುರಿಸುತ್ತಿರುವ ಸಂಕಷ್ಟಕ್ಕೆ ಉಸ್ತುವಾರಿ ಸಚಿವರೇ ನೇರಹೊಣೆ ಎಂದು ಹರಿಹರದ ಬಿಜೆಪಿ ಶಾಸಕ ಬಿ.ಪಿ.ಹರೀಶಗೌಡ ದೂರಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಭದ್ರಾ ಜಲಾಶಯದಿಂದ ಕಾಲುವೆಗೆ ನೀರು ಹರಿಸಿದರೂ ಜಿಲ್ಲೆಯ ಕೊನೆಯ ಭಾಗದ ರೈತರ ಜಮೀನುಗಳಿಗೆ ನೀರು ತಲುಪಿಸುವಲ್ಲಿ ಜಿಲ್ಲಾ ಮಂತ್ರಿ ಎಸ್.ಎಸ್.ಮಲ್ಲಿಕಾರ್ಜುನ ಎಡವಿದ್ದು, ಕಾಡಾ ಉಸ್ತುವಾರಿಯನ್ನು ಸರ್ಕಾರದ ಮೇಲೆ ಒತ್ತಡ ಹೇರಿ ತಾವೇ ವಹಿಸಿಕೊಳ್ಳದಿದ್ದುದೇ ಇಂದಿನ ಸಮಸ್ಯೆಗೂ ಕಾರಣ ಎಂದು ಹರಿಹರದ ಬಿಜೆಪಿ ಶಾಸಕ ಬಿ.ಪಿ.ಹರೀಶಗೌಡ ಆರೋಪಿಸಿದ್ದಾರೆ. ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು ಎದುರಿಸುತ್ತಿರುವ ಸಂಕಷ್ಟಕ್ಕೆ ಉಸ್ತುವಾರಿ ಸಚಿವರೇ ನೇರ ಹೊಣೆ ಯಾಗಿದ್ದು, ಭದ್ರಾ ಯೋಜನೆ ವ್ಯಾಪ್ತಿಗೊಳಪಡದ ಸೊರಬ ಕ್ಷೇತ್ರದ ಮಧು ಬಂಗಾರಪ್ಪಗೆ ಕಾಡಾ ಉಸ್ತುವಾರಿ ವಹಿಸಿದಾಗ ದಾವಣಗೆರೆ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಸರ್ಕಾರದ ಮೇಲೆ ಒತ್ತಡ ಹೇರಿ, ತಾವೇ ಕಾಡಾ ಜವಾಬ್ದಾರಿ ವಹಿಸಿಕೊಳ್ಳಬೇಕಿತ್ತು ಎಂದರು. ನಿಗಮ-ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ನೇಮಕಾತಿ ಸಂದರ್ಭದಲ್ಲಾದರೂ ದಾವಣಗೆರೆ ಜಿಲ್ಲೆಯ ಭದ್ರಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಗೊಳಪಡುವವರೇ ಕಾಡಾ ಅಧ್ಯಕ್ಷರಾಗ ಬಹುದೆಂಬ ನಿರೀಕ್ಷೆಯೂ ಹುಸಿಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ವ್ಯಕ್ತಿಗೆ ಕಾಡಾ ಅಧ್ಯಕ್ಷರಾಗಿ ಮಾಡಲಾಗಿದೆ. ನಮ್ಮ ಜಿಲ್ಲೆಗೆ ಕಾಡಾ ಅಧ್ಯಕ್ಷ ಸ್ಥಾನ ತರುವಲ್ಲಿ, ಕೊಡಿಸುವಲ್ಲಿ ಸರ್ಕಾರದ ಮೇಲೆ ಒತ್ತಡ ಹೇರುವಲ್ಲಿ ಸಚಿವರು ವಿಫಲವಾಗಿದ್ದಾರೆ ಎಂದು ಅವರು ದೂರಿದರು. ದಾವಣಗೆರೆ ಜಿಲ್ಲೆಯ ಜೀವನಾಡಿ ಭದ್ರಾ ಅಣೆಕಟ್ಟೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಅ‍ವೈಜ್ಞಾನಿಕ ವೇಳಾಪಟ್ಟಿಯನ್ನು ಶಿವಮೊಗ್ಗ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮಾಡಿದ್ದಾರೆ. ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳ ತೋಟಗಳು ಉಳಿಯಲು ಭದ್ರಾ ಜಲಾಶಯದಲ್ಲಿ ಬೇಸಿಗೆಯಲ್ಲೂ ಹೆಚ್ಚು ನೀರಿರಬೇಕು. ಹಾಗಾಗಿ ಇಂತಹ ಅವೈಜ್ಞಾನಿಕ ವೇಳಾಪಟ್ಟಿ ತಂದು, ದಾವಣಗೆರೆ ರೈತರ ಬದುಕನ್ನೇ ಹಾಳು ಮಾಡುವ ಕೆಲಸ ಮಾಡಲಾಗಿದೆ. ದಾವಣಗೆರೆ ಉಸ್ತುವಾರಿ ಸಚಿವರು ರೈತರ ಹಿತ ಕಾಯಲಿಲ್ಲ. ಡ್ಯಾಂನಿಂದ 12-13 ದಿನ ನೀರು ಹರಿಸಿದರೂ ಜಿಲ್ಲೆಯ ಅಚ್ಚುಕಟ್ಟು ಕೊನೆಯ ಭಾಗಕ್ಕೆ ನೀರು ತಲುಪುವುದಿಲ್ಲ. ಮೇಲ್ಭಾಗದ ರೈತರಿಗಷ್ಟೇ ಭದ್ರಾ ನೀರಿನ ಅನುಕೂಲವಾಗಿದೆ ಎಂದು ಅವರು ಹೇಳಿದರು. ಅಣೆಕಟ್ಟೆಯಿಂದ ಇನ್ನೊಂದು ನೀರಾದರೂ ನಮ್ಮ ಜಿಲ್ಲೆಯ ಅಡಿಕೆ, ತೆಂಗು ತೋಟಗಳಿಗೆ ಸಿಗಲೇಬೇಕಾದ ಅನಿವಾರ್ಯತೆ ಇದೆ. ಇಲ್ಲವಾದರೆ ಇಡೀ ತೋಟಗಳು ಸಂಪೂರ್ಣ ಹಾಳಾಗಿ, ತೋಟದ ಬೆಳೆಗಾರರೂ ಬೀದಿ ಪಾಲಾಗುತ್ತಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದ ಅವರು, ಜನ, ಜಾನುವಾರುಗಳ ಜೀವ ಉಳಿಸಬೇಕಾದ ಕಾಂಗ್ರೆಸ್ ಸರ್ಕಾರ ವು ಕೇಂದ್ರದ ಮೇಲೆ ಗೂಬೆ ಕೂರಿಸಲು ಯತ್ನಿಸುತ್ತಿದೆ. ಬಜೆಟ್‌ನಲ್ಲೂ ಮಧ್ಯ ಕರ್ನಾಟಕಕ್ಕೆ ಯಾವುದೇ ಕೊಡುಗೆಯೂ ಇಲ್ಲ. ಅಭಿವೃದ್ಧಿ ಶೂನ್ಯ ಬಜೆಟ್ ಮಂಡಿಸಲಾಗಿದೆ. ಪರಿಶಿಷ್ಟರ ಕಲ್ಯಾಣಕ್ಕೆ ಮೀಸಲಾದ ಹಣವನ್ನೇ ಗ್ಯಾರಂಟಿಗೆ ಕಾಂಗ್ರೆಸ್ ಸರ್ಕಾರ ಬಳಸಲು ಮುಂದಾಗಿದೆ. ಸಮಾಜ ಕಲ್ಯಾಣ ಇಲಾಖೆ ಸಾಲ, ಸಹಾಯಧನ ಸೌಲಭ್ಯಕ್ಕೆ ಕತ್ತರಿ ಪ್ರಯೋಗವಾಗುತ್ತಿದೆ ಎಂದು ಅವರು ತಿಳಿಸಿದರು.

ಭದ್ರಾ ಡ್ಯಾಂನಿಂದ ಇನ್ನೊಂದು ಬಾರಿ ನೀರು ಹರಿಸಲಾಗುತ್ತದೆ. ಆಗಲಾದರೂ ಭದ್ರಾ ನಾಲೆಗಳ ಕೊನೆಯ ಭಾಗಕ್ಕೆ ಸಮರ್ಪಕವಾಗಿ ನೀರು ಹರಿಸುವಂತೆ ಕ್ರಮಕೈಗೊಳ್ಳ ಬೇಕು. ದಾವಣಗೆರೆ ಜಿಲ್ಲೆಯ ಅಚ್ಚುಕಟ್ಟು ರೈತರು ನೀರಿಲ್ಲದೇ ಸಂಕಷ್ಟ ಅನುಭವಿಸುತ್ತಿದ್ದು, ರೈತರ ಹಿತ ಕಾಯುವ ಕೆಲಸವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್‌ರವರು ಮಾಡಲಿ ಎಂದು ಹೇಳಿದರು.

ಸರ್ಕಾರದ ಬೇಜವಾಬ್ದಾರಿತನ: ರಾಜ್ಯಸಭೆ‌ ಚುನಾವಣೆ ಗೆದ್ದ ಕಾಂಗ್ರೆಸ್ಸಿನ ನಾಸೀರ್‌ ಹುಸೇನ್ ಬೆಂಬಲಿಗರು ಪಾಕಿಸ್ತಾನ್ ಜಿಂದಾಬಾದ್ ಎನ್ನುತ್ತಾರೆ. ಅದನ್ನು ಪತ್ರಕರ್ತರು ಪ್ರಶ್ನೆ ಮಾಡಿದರೆ ಅದೇ ನಾಸೀರ್ ಹೆದರಿಸುತ್ತಾರೆ. ಆಳುವ ಸರ್ಕಾರ ಘೋಷಣೆ ಬಗ್ಗೆ ವರದಿ ಪಡೆಯುವುದಾಗಿ ಹೇಳುತ್ತದೆ. ಆದರೆ, ಬ್ಯಾಡಗಿಯಲ್ಲಿ ಆ ವ್ಯಕ್ತಿಯನ್ನು ಬಂಧಿಸಲಾಗಿದೆ. ಕಾಂಗ್ರೆಸ್ ನವರು ದುಷ್ಟಶಕ್ತಿ ಗಳಿಗೆ ಪ್ರೋತ್ಸಾಹ ‌ನೀಡುತ್ತಿದ್ದಾರೆ. ಇನ್ನು, ಬೆಂಗಳೂರಿನ‌ ರಾಮೇಶ್ವರ ಕೆಫೆ‌ನಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣ ಸರ್ಕಾರದ ಬೇಜವಾಬ್ದಾರಿತನದಿಂದ ಆಗಿದೆ. ಈ ಎಲ್ಲಾ ವಿಚಾರ ಖಂಡಿಸುತ್ತೇವೆ ಎಂದು ಬಿ.ಪಿ.ಹರೀಶ ಗೌಡ ಹರಿಹಾಯ್ದರು.

ಪಕ್ಷದ ರೈತ ಮೋರ್ಚಾ ಮುಖಂಡ ಬಿ.ಎಂ.ಸತೀಶ ಕೊಳೇನಹಳ್ಳಿ, ಎಚ್.ಪಿ.ವಿಶ್ವಾಸ, ಕೊಟ್ರೇಶ ಗೌಡ ಇತರರು ಇದ್ದರು.

Share this article