ವಿಘ್ನೇಶ್ ಎಂ. ಭೂತನಕಾಡು
ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅಧಿಕಾರ ಸ್ವೀಕರಿಸಲಿದ್ದು, 2028ರ ಚುನಾವಣೆ ದೃಷ್ಟಿಯಿಂದ ಕೊಡಗಿಗೆ ಒಂದು ಸಚಿವ ಸ್ಥಾನ ದೊರಕುವ ಸಾಧ್ಯತೆಯಿದೆ. ಶಾಸಕ ಎ.ಎಸ್. ಪೊನ್ನಣ್ಣ ಅಥವಾ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರಿಗೆ ಸ್ಥಾನ ಸಿಗಲಿದೆ ಎಂದು ಹೇಳಲಾಗುತ್ತಿದೆ. ಸಿದ್ದರಾಮಯ್ಯ ದೆಹಲಿಗೆ ತೆರಳಿದ್ದ ಸಂದರ್ಭ ಅವರೊಂದಿಗೆ ಶಾಸಕರಾದ ಎ.ಎಸ್. ಪೊನ್ನಣ್ಣ, ಇದ್ದರು. ಇದೀಗ ಸಿದ್ದರಾಮಯ್ಯ ಅವರ ತಂಡ ದೆಹಲಿಯಿಂದ ಹಿಂತಿರುಗಿದ್ದು, ಈಗಲೂ ಸಿದ್ದರಾಮಯ್ಯ ಅವರೊಂದಿಗೆ ಪೊನ್ನಣ್ಣ ಇದ್ದಾರೆ. ಪೊನ್ನಣ್ಣ ಅವರು ಸರ್ಕಾರ ಸಂಕಷ್ಟಕ್ಕೆ ಸಿಲುಕಿದ ಅನೇಕ ಸಂದರ್ಭದಲ್ಲಿ ಕಾನೂನು ಸಲಹೆಗಳನ್ನು ನೀಡುವ ಮೂಲಕ ಮೆಚ್ಚುಗೆ ಗಳಿಸಿದ್ದರು. ಸಿದ್ದರಾಮಯ್ಯ ಅವರ ಮೇಲೆ ಮೂಡಾ ಹಗರಣ ಆರೋಪ ಬಂದ ಸಂದರ್ಭ ಕಾನೂನು ಸಮಸ್ಯೆ ಬಗೆಹಸುವಲ್ಲಿ ಪೊನ್ನಣ್ಣ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೆ ಸಿದ್ದರಾಮಯ್ಯ ಅವರ ಪ್ರಮುಖ ಆಪ್ತರಲ್ಲಿ ಪೊನ್ನಣ್ಣ ಕೂಡ ಒಬ್ಬರಾಗಿದ್ದು, ಪೊನ್ನಣ್ಣ ಅವರನ್ನು ಸಚಿವರಾಗಿ ಮಾಡುವಂತೆ ಸಿದ್ದರಾಮಯ್ಯ ಅವರ ಸೂಚಿಸುವ ಸಾಧ್ಯತೆಗಳಿದೆ ಎನ್ನಲಾಗಿದೆ.
ಡಿ.ಕೆ. ಶಿವಕುಮಾರ್ ಅವರ ಆಪ್ತ ಬಳಗದಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಗುರುತಿಸಿಕೊಂಡಿದ್ದಾರೆ. ಚುನಾವಣೆ ಸಂದರ್ಭ ಮಂತರ್ ಅವರಿಗೆ ಶಿವಕುಮಾರ್ ಟಿಕೆಟ್ ನೀಡಿದ್ದರು. ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಹಾಸನದಲ್ಲಿ ಸಂಘಟಿಸುವ ಸಲುವಾಗಿ ಡಾ. ಮಂತರ್ ಗೌಡ ಅವರಿಗೆ ಸಚಿವ ಸ್ಥಾನ ನೀಡಬಹುದೆಂಬ ಮಾತು ಕೇಳಿ ಬರುತ್ತಿದೆ.ಕೊಡಗಿನಲ್ಲಿ ಎರಡು ದಶಕಗಳ ಬಳಿಕ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಎಲ್ಲ ಸರ್ಕಾರಗಳು ಸಚಿವ ಸ್ಥಾನ ನೀಡದೆ ಕೊಡಗನ್ನು ಕಡೆಗಣಿಸಿದೆ. ಆದ್ದರಿಂದ ಕೊಡಗಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡುವಂತೆ ಜಿಲ್ಲೆಯ ಶಾಸಕರು ಸೇರಿದಂತೆ ಕಾಂಗ್ರೆಸ್ ಪಕ್ಷದ ಪ್ರಮುಖರು ಸರ್ಕಾರವನ್ನು, ಜಿಲ್ಲೆಗೆ ಆಗಮಿಸುವ ಸಚಿವರು ಮತ್ತು ಪಕ್ಷದ ಪ್ರಮುಖ ನಾಯಕರ ಎದುರು, ಸ್ಥಳೀಯ ಕಾರ್ಯಕರ್ತರು ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಕೊಡಗಿನ ಶಾಸಕರನ್ನು ಪರಿಗಣಿಸುವಂತೆ ಮನವಿಗಳನ್ನು ಸಲ್ಲಿಸಿದ್ದರು. ಕರ್ನಾಟಕದ ಹೊಸ ಸಂಪುಟ ವಿಸ್ತರಣೆಯಲ್ಲಿ ಕೊಡಗು ಜಿಲ್ಲೆಗೆ ಪ್ರಾತಿನಿಧ್ಯ ಸಿಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ, ಇದರಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ಶಾಸಕರಾದ ಪೊನ್ನಣ್ಣ ಅವರ ಹೆಸರು ಕೂಡ ಕೇಳಿಬಂದಿದೆ. ಇದರಿಂದ ಹಲವಾರು ವರ್ಷಗಳ ನಂತರ ಕೊಡಗು ಜಿಲ್ಲೆಯ ಜನರಿಗೆ ಒಂದು ಪ್ರಾತಿನಿಧ್ಯ ಸಿಕ್ಕಂತೆ ಆಗಲಿದೆ.- ಪ್ರತೀಕ್ ಪೊನ್ನಣ್ಣ, ಸಾಮಾಜಿಕ ಹೋರಾಟಗಾರ
ನೂತನ ಮುಖ್ಯ ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಅವರು ಅಧಿಕಾರ ವಹಿಸಲಿದ್ದು, ಅಭಿವೃದ್ಧಿಯ ಹರಿಕಾರ ಯುವಕರ ಆಶಾಕಿರಣ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ ಮಂತರ್ ಗೌಡರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು. -ವಿ.ಜಿ ಮೋಹನ್, ಅಧ್ಯಕ್ಷ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ